varthabharthi

ನಿಮ್ಮ ಅಂಕಣ

ಮದ್ಯಕ್ಕಿಂತ, ಬಡವರ ರಕ್ತ ಮತ್ತು ಕಣ್ಣೀರು ಮುಖ್ಯ

ವಾರ್ತಾ ಭಾರತಿ : 5 May, 2020
ರೂಪಾ ಹಾಸನ, ಶಾರದಾ ಗೋಪಾಲ, ಧಾರವಾಡ

ಮಾನ್ಯರೇ,
ಮಹಾಮಾರಿಯಂತೆ ಬಂದೆರಗಿರುವ ಕೊರೋನದ ಲಾಕ್‌ಡೌನ್ ಬಡವರ ಪಾಲಿಗೆ ಸಂಕಷ್ಟಗಳ ಮೂಟೆಯನ್ನೇ ಹೊತ್ತು ತಂದಿದ್ದರೂ ಮದ್ಯದಂಗಡಿಗಳನ್ನು ಮುಚ್ಚಿಸಿದ್ದು ಕುಡುಕರ ಕುಟುಂಬದ ಹೆಣ್ಣುಮಕ್ಕಳಿಗೆ ಕೊಂಚ ನೆಮ್ಮದಿಯನ್ನು ಕೊಟ್ಟಿತ್ತು. ರೇಶನ್‌ನ ಬರಿಯ ಅಕ್ಕಿಯ ಗಂಜಿಯನ್ನೇ ಕುಡಿದಿರಬಹುದು, ಆದರೆ ಮನೆಯವರೆಲ್ಲ ಹಂಚಿಕೊಂಡು ಕುಡಿದಿದ್ದರು. ಕುಡಿದು ಬರುವ ಅಪ್ಪ ಅಮ್ಮನಿಗೆ ಪೆಟ್ಟು ಕೊಡುವುದು ನಿಂತಿದ್ದರಿಂದ ಮಕ್ಕಳು ಸಮಾಧಾನದ ನಿದ್ದೆ ಮಾಡಿದ್ದವು. ಬಹಳ ದಿನಗಳ ನಂತರ ತಮ್ಮ ಸಂಸಾರಗಳಲ್ಲಿ ಮದ್ಯದ ಕಾಟವಿಲ್ಲದೆ ಬಹಳಷ್ಟು ಕುಟುಂಬಗಳು ನೆಮ್ಮದಿಯ ಉಸಿರುಬಿಟ್ಟಿದ್ದವು. ಕುಡುಕರೂ ಒಂದೂವರೆ ತಿಂಗಳಿಂದ ಮದ್ಯವಿಲ್ಲದೇ ಪ್ರಾರಂಭದಲ್ಲಿ ದೈಹಿಕ, ಮಾನಸಿಕ ತೊಂದರೆ ಅನುಭವಿಸಿದ್ದರೂ ಎಲ್ಲ ಮೀರಿ ಸಮಚಿತ್ತವನ್ನು ಗಳಿಸಿಕೊಳ್ಳುವ ಹಂತಕ್ಕೆ ಬಂದಿದ್ದರು.
ಆದರೆ ಕೊರೋನ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲದ, ಸೋಂಕು ಮತ್ತು ಅದರಿಂದ ಸಾವು ದಿನದಿನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಯಾವ ಆಧಾರದ ಮೇಲೆ ಮದ್ಯದಂಗಡಿಗಳನ್ನು ಮತ್ತೆ ತೆರೆಯುತ್ತಿದೆ ಸರಕಾರ? ಇದೇನು ಜೀವನವಶ್ಯಕ ವಸ್ತುವೇ? ಯಾವ ತಜ್ಞ ವೈದ್ಯ ತಂಡ ಈಗ ಮತ್ತೆ ಮದ್ಯದಂಗಡಿಗಳನ್ನು ತೆರೆಯಲು ಶಿಫಾರಸ್ಸು ಮಾಡಿದೆ ದಯಮಾಡಿ ತಿಳಿಸಿ. ಕುಡಿದ ಮತ್ತಿನಲ್ಲಿ ಸೋಂಕು ಅಂಟಿಸುವ ಯಾವ ಕೆಲಸವನ್ನಾದರೂ ಕುಡುಕರು ಮಾಡುವ ಸಾಧ್ಯತೆ ಈಗಲೂ ಹೆಚ್ಚೇ ಇದೆ. ಈ ಕಾರಣಕ್ಕೇ ಸೋಂಕು ವ್ಯಾಪಕವಾದರೆ ಅದರ ಹೊಣೆ ಯಾರದ್ದು? ಮದ್ಯದಂಗಡಿ ತೆರೆಯದಿರಲು ಇಷ್ಟೆಲ್ಲ ಗಂಭೀರ ಕಾರಣಗಳಿದ್ದಾಗಲೂ ಮದ್ಯ ಮಾರಾಟಗಾರರ ಲಾಬಿಗೆ ಮಣಿದು ಸರಕಾರ ಈ ದುಸ್ಸಾಹಸಕ್ಕೆ ಕೈ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಖಂಡಿತಾ ಈ ನಡೆ ಕ್ಷಮೆಗೆ ಅರ್ಹವಲ್ಲ.
  
ಗಂಡಸರನ್ನು ಈ ಚಟದ ದಾಸ್ಯದಿಂದ ಕಾಪಾಡಿಕೊಳ್ಳುವುದು ನಮ್ಮ ಮಹಿಳೆಯರಿಗೆ ಖಂಡಿತಾ ಸಾಧ್ಯವಿಲ್ಲ. ಧರ್ಮದ ಎಲ್ಲಾ ನೀತಿಗಳೂ ಗೊತ್ತಿದ್ದೂ ಧರ್ಮರಾಜ ಜೂಜಿಗೆ ಹೆಂಡತಿಯನ್ನೇ ಪಣಕ್ಕಿಡಲಿಲ್ಲವೇ? ಚಟಗಳ ದಾಸ್ಯ ಅಂಥಾದ್ದು. ಸರಕಾರ ನಡೆಯುತ್ತಿರುವುದು ಖಂಡಿತ ಆ ಮದ್ಯದ ಆದಾಯದಿಂದ ಮಾತ್ರ ಅಲ್ಲ. ನೊಂದ ಹೆಣ್ಣುಮಕ್ಕಳ ಬೆವರು, ರಕ್ತ, ಕಣ್ಣೀರಿನಿಂದ ಎಂಬುದು ನಿಮಗೆ ಗೊತ್ತಾಗಲಿ. ಇಷ್ಟೇ ಸಾಲದೆಂದು ಈಗ ಕಣ್ಣೀರನ್ನೂ ಕೇಳುತ್ತಿದ್ದೀರಾ? ಚುನಾವಣೆಯ ಸಮಯದಲ್ಲಿ ಜನರಿಗೆ ನೆಮ್ಮದಿ ನೀಡುವ ಭರವಸೆ ನೀಡಿದ್ದು ಎಲ್ಲಿ ಹೋಯಿತು? ಎಲ್ಲರಿಗೂ ಆಹಾರ ಕೊಡಿ ಎಂದು ಕೇಳಿದೆವು, ಕೊಡಲಾಗಲಿಲ್ಲ ನಿಮಗೆ! ಉದ್ಯೋಗ ಕೊಡಿ ಎಂದೆವು. ಕೊಡುವ ಸಾಮರ್ಥ್ಯ ನಿಮಗಿಲ್ಲವೆಂದು ಎಂದೋ ಅರಿವಾಗಿದೆ ನಮಗೆ. ಇಷ್ಟರ ಮಧ್ಯೆಯೂ ಹೇಗೋ ಬದುಕು ಸಾಗುತ್ತಿದೆ. ಕೋಟ್ಯಂತರ ಕುಟುಂಬಗಳಿಗೆ ಈಗ ದಕ್ಕಿರುವ ಶಾಂತಿ, ನೆಮ್ಮದಿ, ಸಮಾಧಾನವನ್ನಾದರೂ ದಯವಿಟ್ಟು ಕಸಿಯಬೇಡಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)