varthabharthiಸಂಪಾದಕೀಯ

ರಾಜ್ಯ ಬಿಜೆಪಿ ಸರಕಾರದ ಅಪಕ್ವ ನಡೆ

ವಾರ್ತಾ ಭಾರತಿ : 5 May, 2020

ಕೊರೋನ ವೈರಸ್ ಹಬ್ಬುತ್ತಿರುವ ಸೂಕ್ಷ್ಮ ಸನ್ನಿವೇಶದಲ್ಲಿ ಕರ್ನಾಟಕದ ಬಿಜೆಪಿ ಸರಕಾರದ ಇತ್ತೀಚಿನ ಆತುರದ ತೀರ್ಮಾನಗಳು ಗೊಂದಲಕ್ಕೆ ಕಾರಣವಾಗಿವೆ. ಆರಂಭದ ಒಂದೂವರೆ ತಿಂಗಳ ಕಾಲ ಬಿಗಿಯಾದ ದಿಗ್ಬಂಧನದಿಂದ ಈ ಮಾರಕ ವೈರಸ್‌ನ್ನು ನಿಯಂತ್ರಣದಲ್ಲಿಡಲು ಸರಕಾರ ಯಶಸ್ವಿಯಾಗಿತ್ತು. ಇದರಿಂದಾಗಿ ಕೊರೋನ ಹಬ್ಬುವಿಕೆ ನಿಯಂತ್ರಣದಲ್ಲಿತ್ತು. ಆದರೆ ಒಮ್ಮಿಂದೊಮ್ಮೆಲೆ ದಿಗ್ಬಂಧನವನ್ನು ಸಡಿಲುಗೊಳಿಸಿ ನಂತರ ಕೈಗೊಂಡ ಹಲವಾರು ದುಡುಕಿನ ಕ್ರಮಗಳು ಅಧ್ವಾನಕ್ಕೆ ಕಾರಣವಾಗಿವೆ. ಬಹುಶಃ ಕೇಂದ್ರ ಸರಕಾರದ ಸೂಚನೆಗಳಂತೆ ಇವೆಲ್ಲ ನಡೆದಂತೆ ಕಾಣುತ್ತದೆ. ಅಷ್ಟೇ ಅಲ್ಲದೆ ರಾಜ್ಯ ಸಚಿವ ಸಂಪುಟದಲ್ಲಿ ಹೊಂದಾಣಿಕೆ ಇದ್ದಂತೆ ಕಾಣುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೆಲ ಮಂತ್ರಿಗಳ ಸಹಕಾರ ಸಿಗುವಂತೆ ಕಾಣುತ್ತಿಲ್ಲ. ಅಲ್ಲದೆ ಸಂಘ ಪರಿವಾರದ ಮಿತಿ ಮೀರಿದ ಹಸ್ತಕ್ಷೇಪ ಆಡಳಿತದಲ್ಲಿ ಗೊಂದಲಕ್ಕೆ ಕಾರಣವಾದಂತೆ ಕಾಣುತ್ತದೆ. ಹೀಗಾಗಿ ಕೊರೋನ ವಿರುದ್ಧದ ಸಮರ ಹಿನ್ನಡೆ ಅನುಭವಿಸುವುದೇನೋ ಎಂಬ ಆತಂಕ ಸಹಜವಾಗಿ ಉಂಟಾಗಿದೆ.

ಯಾವುದೇ ವೈಜ್ಞಾನಿಕ ಮಾನದಂಡಗಳಿಲ್ಲದೆ ಕೆಂಪು, ಕಿತ್ತಳೆ, ಹಸಿರು ವಲಯ ಎಂದು ವಿಂಗಡನೆ ಮಾಡಲಾಯಿತು. ಇದಕ್ಕಾಗಿ ಪರಿಣತರ ಸಲಹೆಯನ್ನು ಪಡೆಯಲಾಗಿದೆಯೋ, ಇಲ್ಲವೋ ಗೊತ್ತಿಲ್ಲ. ಇಂತಹ ದುಡುಕಿನ ತೀರ್ಮಾನದಿಂದ ಹಸಿರು ವಲಯದಲ್ಲಿ ಇದ್ದ ದಾವಣಗೆರೆಯಲ್ಲಿ ಕೊರೋನ ವೈರಸ್ ಒಮ್ಮಿಂದೊಮ್ಮೆಲೆ ಕಾಣಿಸಿಕೊಂಡು ಈಗ 32 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಈ ಸರಕಾರದಲ್ಲಿ ಮುಖ್ಯಮಂತ್ರಿ ಒಂದು ಹೇಳಿಕೆ ನೀಡಿದರೆ, ಆರೋಗ್ಯ ಮಂತ್ರಿ ಬೇರೊಂದು ಹೇಳಿಕೆ ನೀಡುತ್ತಾರೆ. ಗೃಹಮಂತ್ರಿ ಒಂದು ಹೇಳಿಕೆ ನೀಡಿದರೆ ವೈದ್ಯಕೀಯ ಶಿಕ್ಷಣ ಸಚಿವರು ಮತ್ತೊಂದು ಹೇಳಿಕೆ ನೀಡುತ್ತಾರೆ. ಯಾರಲ್ಲೂ ತಾಳ ಮೇಳವಿಲ್ಲ. ಹೀಗಾಗಿ ಆಡಳಿತದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಈ ಅವ್ಯವಸ್ಥೆ ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಕಳಿಸುವಾಗ ಗೋಚರಿಸಿತು.

ಬೆಂಗಳೂರಿಗೆ ವಲಸೆ ಬಂದ ಉತ್ತರ ಕರ್ನಾಟಕದ ಕಾರ್ಮಿಕರು ಮತ್ತೆ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಸುರಕ್ಷಿತವಾಗಿರುವ ಆ ಪ್ರದೇಶದಲ್ಲಿ ಕೊರೋನ ಹರಡುವುದು ಬೇಡ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆರಂಭದಿಂದಲೂ ಹೇಳುತ್ತಲೇ ಬಂದರು. ಆದರೆ ಕಳೆದ ವಾರ ಒಮ್ಮಿಂದೊಮ್ಮೆಲೆ ಬೆಂಗಳೂರಿನಲ್ಲಿ ಇರುವ ವಲಸೆ ಕಾರ್ಮಿಕರು ಊರಿಗೆ ಹೋಗಬಹುದೆಂದು ತೀರ್ಮಾನಿಸಲಾಯಿತು ಹಾಗೂ ಅವರಿಗಾಗಿ ಬಸ್ ಏರ್ಪಾಟು ಮಾಡಲಾಯಿತು.ಆದರೆ ಅವರವರ ಊರಿಗೆ ತಲುಪಲು ಮೂರು ಪಟ್ಟು ಬಸ್ ಚಾರ್ಜ್ ನಿಗದಿಪಡಿಸಿದರು. ಒಂದೂವರೆ ತಿಂಗಳಿಂದ ದುಡಿಮೆಯಿಲ್ಲದೆ ಬರಿಗೈನಲ್ಲಿರುವಾಗ ಈ ಕಾರ್ಮಿಕರು ಮೂರು ಪಟ್ಟು ಹಣ ನೀಡಿ ಊರಿಗೆ ಹೋಗಲು ಹೇಗೆ ಸಾಧ್ಯ? ಎಂದು ಟೀಕೆ ಬಂದಾಗ ಚೌಕಾಸಿ ಮಾಡಿ ದುಪ್ಪಟ್ಟು ಎಂದು ಹೇಳಿ ಕೊನೆಗೆ ಸಿಂಗಲ್ ದರ ನಿಗದಿ ಪಡಿಸಲಾಯಿತು. ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ಒಂದು ಕೋಟಿ ರೂ. ಚೆಕ್ ಕೊಟ್ಟು ಕಾರ್ಮಿಕರನ್ನು ಉಚಿತವಾಗಿ ಕಳಿಸಲು ಸೂಚಿಸಿದಾಗ ಇನ್ನೆಲ್ಲಿ ಅಪಹಾಸ್ಯಕ್ಕೀಡಾಗಬೇಕಾದೀತು ಎಂದು ಉಚಿತವಾಗಿ ಕಾರ್ಮಿಕರನ್ನು ಕಳಿಸಲು ನಿರ್ಧರಿಸಲಾಯಿತು. ಈ ರೀತಿ ಪದೇ ಪದೇ ನಿರ್ಧಾರ ಬದಲಿಸುವುದು ಸರಕಾರಕ್ಕೆ ಶೋಭೆ ತರುವುದಿಲ್ಲ.

ಮದ್ಯದ ಅಂಗಡಿಗಳನ್ನು ಪುನರಾರಂಭಿಸುವಲ್ಲಿ ಸರಕಾರ ದುಡುಕಿನ ಹೆಜ್ಜೆ ಇಟ್ಟಿದೆ. ಈ ದೇಶದಲ್ಲಿ ಮೊದಲ ಕೊರೋನ ಸಾವು ಸಂಭವಿಸಿದ ಕಲಬುರಗಿಯಲ್ಲಿ ಮದ್ಯದ ಲಾಬಿಯ ಒತ್ತಡಕ್ಕೆ ಮಣಿದು ಕೆಂಪು ವಲಯದಲ್ಲಿದ್ದ ಕಲಬುರಗಿಯನ್ನು ಕಿತ್ತಳೆ ವಲಯಕ್ಕೆ ಬದಲಾಯಿಸಲಾಯಿತೆಂಬ ಆರೋಪ ಕೇಳಿ ಬರುತ್ತಿದೆ. ಕೊರೋನ ಇನ್ನೇನು ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಾಗ ಸರಕಾರ ಕೈಗೊಂಡ ಆತುರದ ತೀರ್ಮಾನಗಳ ಹಿಂದೆ ಅಗೋಚರ ಕೈವಾಡದ ಶಂಕೆ ಎದ್ದು ಕಾಣುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲ.

ಕಲ್ಯಾಣ ಕರ್ನಾಟಕದ ವಲಸೆ ಕಾರ್ಮಿಕರು ಬೆಂಗಳೂರಿನಲ್ಲಿ ಮಾತ್ರವಿಲ್ಲ, ದೂರದ ಮುಂಬೈ, ಪುಣೆ, ಗೋವಾಗಳಲ್ಲಿದ್ದಾರೆ. ಅವರು ಅಲ್ಲಿ ಕೆಲಸವಿಲ್ಲದೆ, ತಮ್ಮ ಊರಿಗೆ ಬರಲು ವಾಹನವಿಲ್ಲದೆ ವಿಲ ವಿಲ ಒದ್ದಾಡುತ್ತಿದ್ದಾರೆ. ಅವರನ್ನು ರಾಜ್ಯಕ್ಕೆ ಕರೆತರಲು ಸರಕಾರ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಈ ಕಾರ್ಮಿಕರು ಮುಂಬೈ, ಪುಣೆಗಳಲ್ಲಿದ್ದರೂ ಅವರ ಓಟುಗಳು ಮಾತ್ರ ಅವರವರ ಊರುಗಳಲ್ಲಿವೆ. ಚುನಾವಣೆ ಬಂದಾಗ ರಾಜಕಾರಣಿಗಳು ವಿಶೇಷ ಬಸ್ಸುಗಳಲ್ಲಿ ಅವರನ್ನು ಊರಿಗೆ ಕರೆ ತಂದು ಓಟು ಹಾಕಿಸಿಕೊಂಡು ಗೆದ್ದು ಬರುತ್ತಾರೆ. ಆದರೆ ಈಗ ತಮ್ಮನ್ನು ಕರೆದುಕೊಂಡು ಹೋಗಿ ಎಂದು ಹಸಿದ ಹೊಟ್ಟೆಯಲ್ಲಿ ಇರುವ ಈ ಕಾರ್ಮಿಕರು ಗೋಳಾಡಿ ಮನವಿ ಮಾಡಿದರೂ ನಮ್ಮ ಜನಪ್ರತಿನಿಧಿಗಳು ಜಾಣ ಕಿವುಡುತನ ತೋರಿಸುತ್ತಿದ್ದಾರೆ.

ಇವೆಲ್ಲ ವಿದ್ಯಮಾನಗಳನ್ನು ಗಮನಿಸಿದರೆ ರಾಜ್ಯ ಬಿಜೆಪಿ ಸರಕಾರದಲ್ಲಿ ಯಾವುದೂ ಸರಿಯಿಲ್ಲ ಎಂಬಂತೆ ಭಾಸವಾಗುತ್ತಿದೆ. ಸಚಿವರ ನಡುವೆ ಪರಸ್ಪರ ಹೊಂದಾಣಿಕೆಯೂ ಇಲ್ಲ. ಅಲ್ಲದೆ ಮುಖ್ಯಮಂತ್ರಿ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿಯೂ ಇಲ್ಲ. ಒಂದೆಡೆ ಆಪರೇಷನ್ ಕಮಲದ ಶಾಸಕರ, ಮಂತ್ರಿಗಳ ಒತ್ತಡ, ಮತ್ತೊಂದೆಡೆ ಮೂಲ ಬಿಜೆಪಿಗರ ಕಾಟ, ಮಗದೊಂದೆಡೆ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರದ ಅಸಹಕಾರ, ಇವೆಲ್ಲದರ ಮೇಲೆ ಸಂಘಪರಿವಾರದ ಹಸ್ತಕ್ಷೇಪ, ಹೀಗಾಗಿ ಆಡಳಿತ ದಿಕ್ಕು ದೆಸೆಯಿಲ್ಲದೆ ಸಾಗಿದೆ. ದಿಗ್ಬಂಧನ ಸಡಿಲಿಸಿ ಮದ್ಯದ ಅಂಗಡಿ ಆರಂಭಿಸಲು ಅನುಮತಿ ನೀಡಿದ ಪರಿಣಾಮ ವಾಗಿ ದೇಶದಲ್ಲಿ ಕೊರೋನ ಉಲ್ಬಣಿಸುವ ಅಪಾಯಕಾರಿ ಸೂಚನೆಗಳು ಗೋಚರಿಸುತ್ತಿವೆ. ರಾಜ್ಯದಲ್ಲೂ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಸರಕಾರದ ತಪ್ಪು ನಡೆಯಿಂದ ಜನತೆ ಬೆಲೆ ತೆರಬೇಕಾಗಿ ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)