varthabharthiಗಲ್ಫ್ ಸುದ್ದಿ

ಮಧ್ಯಪ್ರಾಚ್ಯದಲ್ಲಿ ಸಿಕ್ಕಿಹಾಕಿಕೊಂಡ 800 ಮಂದಿ ಮೇ 7ರಂದು ಕೇರಳಕ್ಕೆ ವಾಪಾಸ್

ವಾರ್ತಾ ಭಾರತಿ : 6 May, 2020

ತಿರುವನಂತಪುರ : ವಿವಿಧ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಕ್ಕಿಹಾಕಿಕೊಂಡ 800 ಮಂದಿ ಭಾರತೀಯರು ನಾಲ್ಕು ವಿಶೇಷ ವಿಮಾನಗಳಲ್ಲಿ ಮೇ 7ರಂದು ಕೇರಳಕ್ಕೆ ಆಗಮಿಸಲಿದ್ದಾರೆ.

ದುಬೈ, ಅಬುಧಾಬಿ, ರಿಯಾದ್ ಹಾಗೂ ಕತರ್‌ಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ವಾಪಸ್ಸಾತಿ ಸರ್ಕಾರದ ಆದ್ಯತೆಯಾಗಿದ್ದು, ಕೊಚ್ಚಿನ್ ಹಾಗೂ ಕೋಝಿಕೋಡ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇವರನ್ನು ಕರೆ ತರಲಾಗುತ್ತಿದೆ.

ವಿದೇಶಗಳಿಂದ ವಾಪಸ್ಸಾದವರನ್ನು ತಪಾಸಣೆ ನಡೆಸಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಎಂದು ಅನಿವಾಸಿ ಕೇರಳಿಗರ ವ್ಯವಹಾರಗಳ ಉಪಾಧ್ಯಕ್ಷ ಕೆ. ವರದರಾಜನ್ ಹೇಳಿದ್ದಾರೆ.

ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ದೇಶಕ್ಕೆ ಕರೆತಂದ ಎಲ್ಲರಿಗೆ ಸರ್ಕಾರಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಅವರು ಹಣ ಪಾವತಿಸಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲೂ ಅವಕಾಶವಿದೆ. ಹಾಸ್ಟೆಲ್ ಮತ್ತಿತರ ಕಡೆಗಳಲ್ಲಿ ಮಾಡಿರುವ ಕ್ವಾರಂಟೈನ್ ವ್ಯವಸ್ಥೆ ಉಚಿತವಾಗಿ ಲಭ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 2 ಲಕ್ಷ ಮಂದಿ ರಾಜ್ಯಕ್ಕೆ ವಾಪಸ್ಸಾದರೂ, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಒಟ್ಟು 64 ವಿಶೇಷ ವಿಮಾನಗಳಲ್ಲಿ ಅನಿವಾಸಿ ಭಾರತೀಯರು ಆಗಮಿಸಲಿದ್ದು, ಈ ಪೈಕಿ 15 ವಿಮಾನಗಳು ಕೇರಳಕ್ಕೆ ಆಗಮಿಸಲಿವೆ. ಪ್ರತಿ ವಿಮಾನದಲ್ಲಿ 200 ಮಂದಿ ಆಗಮಿಸಲಿದ್ದಾರೆ. ಕೇರಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 1.64 ಲಕ್ಷ ಮಂದಿ ಕೇರಳಿಗರಿದ್ದಾರೆ. ಈ ಪೈಕಿ 10 ಸಾವಿರ ಗರ್ಭಿಣಿಯರು ಸೇರಿದ್ದಾರೆ. 5 ಸಾವಿರ ಮಂದಿ ಹಿರಿಯ ನಾಗರಿಕರು ಹಾಗೂ 44 ಸಾವಿರ ಮಂದಿ ವೀಸಾ ಅವಧಿ ಮುಗಿದವರಿದ್ದಾರೆ. 60 ಸಾವಿರ ನಿರುದ್ಯೋಗಿಗಳು ಇವರಲ್ಲಿದ್ದಾರೆ. ಇವರನ್ನು ಕರೆತರಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)