varthabharthi

ವಿಶೇಷ-ವರದಿಗಳು

ಸ್ಪಷ್ಟೀಕರಣ ನೀಡಿದ Moneycontrol.com

ಯುಪಿಎಯ ದುರ್ಬಲ ನೀತಿಗಳು ಸಮಸ್ಯೆಗಳಿಗೆ ಕಾರಣ ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದ್ದರೇ?: ಇಲ್ಲಿದೆ ವಾಸ್ತವ

ವಾರ್ತಾ ಭಾರತಿ : 8 May, 2020

ಮೇ 4ರಂದು Moneycontrol.com  ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಯವರು , ‘ವಾಸ್ತವವಾಗಿ ಅಲ್ಪಾವಧಿಯಲ್ಲಿ ಇರುವ ಸಮಸ್ಯೆಯೆಂದರೆ ಯುಪಿಎಯ ದುರ್ಬಲ ನೀತಿಗಳನ್ನು ಈಗಿನ ಸರಕಾರ ಅಳವಡಿಸಿಕೊಂಡಿರುವುದು’ ಎಂದು ಹೇಳಿದ್ದಾಗಿ ವರದಿಯೊಂದನ್ನು ಪ್ರಕಟಿಸಿತ್ತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಜತೆಗೆ ಕೋವಿಡ್-19 ಸಾಂಕ್ರಾಮಿಕದ ಪರಿಣಾಮಗಳು ಎಂಬ ವಿಷಯವಾಗಿ ಚರ್ಚೆ ನಡೆಸಿದ ವೇಳೆ ಅವರು ಈ ಅಭಿಪ್ರಾಯಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ಕಳೆದ ವಾರ ರಾಹುಲ್‍ ಗಾಂಧಿಯವರು ಆರ್‍ ಬಿಐನ ಮಾಜಿ ಗವರ್ನರ್ ರಘುರಾಂ ರಾಜನ್ ಮತ್ತು ಬ್ಯಾನರ್ಜಿ ಜತೆ ಸಂವಾದ ನಡೆಸಿದ್ದರು. ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಸಿದ್ಧಪಡಿಸುವ ವೇಳೆ ನ್ಯಾಯ್ ಯೋಜನೆಗಾಗಿ ಇಬ್ಬರೂ ಮುಖಂಡರನ್ನು ಪಕ್ಷ ಸಂಪರ್ಕಿಸಿತ್ತು.

ಸಿಎನ್‍ಎನ್ ನ್ಯೂಸ್ 18 ಕೂಡಾ ಯುಪಿಎಯ ದುರ್ಬಲ ನೀತಿಗಳನ್ನು  ಬಿಜೆಪಿ ಸರ್ಕಾರ ಅಳವಡಿಸಿಕೊಂಡಿದೆ ಎಂದು ಬ್ಯಾನರ್ಜಿ ಹೇಳಿದ್ದಾಗಿ ವರದಿ ಮಾಡಿತ್ತು.

ಆ ಬಳಿಕ ಹಲವು ಮಂದಿ  Moneycontrol.com  ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿ ರಾಹುಲ್ ಅವರನ್ನು ಅಣಕವಾಡಿದ್ದರು. ಟ್ವಿಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫಾಲೋ ಮಾಡುವ ರಿಷಿ ಬ್ಯಾನರ್ಜಿ ಎಂಬುವವರು ಸ್ಕ್ರೀನ್‍ ಶಾಟ್ ಹಾಕಿ ‘ಮದರ್ ಆಫ್ ಆಲ್ ಬ್ಯಾಕ್‍ಫೈರ್’ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದರು.

ವಾಸ್ತವವೇನು?

ಮೂಲ ಟ್ವೀಟ್ ಪೋಸ್ಟ್ ಮಾಡಿದ ಕೆಲವು ಗಂಟೆಗಳ ಬಳಿಕ Moneycontrol.com  ಸ್ಪಷ್ಟನೆ ನೀಡಿ, ಬ್ಯಾನರ್ಜಿಯವರ ಹೇಳಿಕೆಯನ್ನು ತಾನು ತಪ್ಪಾಗಿ ಬಿಂಬಿಸಿದ್ದಾಗಿ ತಿಳಿಸಿತ್ತು.

ತಮ್ಮ ಸಂವಾದದ 2:14 ನಿಮಿಷದಲ್ಲಿ ರಾಹುಲ್ ಗಾಂಧಿ ಲಾಕ್‍ಡೌನ್‍ನ ಪರಿಣಾಮ ಹಾಗೂ ಆ ಬಳಿಕದ ಆರ್ಥಿಕ ಕುಸಿತ ಹಾಗೂ ಬಡವರ ಮೇಲೆ ಅದು ಬೀರಿದ ಪರಿಣಾಮದ ಬಗ್ಗೆ ಚರ್ಚಿಸಲು ಬಯಸಿದ್ದಾಗಿ ತಿಳಿಸಿದ್ದರು.

“ನಿಮ್ಮೊಂದಿಗೆ ನಾನು ಚರ್ಚಿಸಲು ಬಯಸುವ ಪ್ರಮುಖ ಅಂಶವೆಂದರೆ ಕೋವಿಡ್ ಹಾಗೂ ಲಾಕ್‍ ಡೌನ್ ‍ನ ಪರಿಣಾಮಕ್ಕೆ ಸಂಬಂಧಿಸಿದ್ದು. ಜತೆಗೆ ಇದು ನಮ್ಮ ಬಡವರ ಆರ್ಥಿಕತೆಯನ್ನು ಹದಗೆಡಿಸಿರುವ ವಿಷಯಕ್ಕೆ ಸಂಬಂಧಿಸಿದ್ದು. ನಾವು ಈ ಬಗ್ಗೆ ಹೇಗೆ ಯೋಚಿಸಬೇಕು ಎಂಬ ಬಗೆಗಿನ ಚರ್ಚೆ. ನಾವು ಭಾರತದಲ್ಲಿ ಹಿಂದೆ ನಿರ್ದಿಷ್ಟವಾಗಿ ನೀತಿ ಚೌಕಟ್ಟು ರೂಪಿಸಿದ್ದೆವು. ಅದರಲ್ಲೂ ಮುಖ್ಯವಾಗಿ ಯುಪಿಎ ಅಧಿಕಾರಾವಧಿಯಲ್ಲಿದ್ದಾಗ ಬಡವರಿಗೆ ಒಂದು ರೀತಿಯ ನೆಲೆ ಕಲ್ಪಿಸಲು ಯೋಚಿಸಿದ್ದೆವು. ನರೇಗಾ, ಆಹಾರದ ಹಕ್ಕು ಇತ್ಯಾದಿ. ಆದರೆ ಈ ಸಾಂಕ್ರಾಮಿಕ ಹರಡಿರುವ ಹಿನ್ನೆಲೆಯಲ್ಲಿ ಈ ಕೆಲಸಗಳು ಇದೀಗ ಹಿಂದೆ ಬಿದ್ದಿವೆ. ಆದ್ದರಿಂದ ಲಕ್ಷಗಟ್ಟಲೆ ಮಂದಿ ಮತ್ತೆ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಇಂಥ ವಿಷಯದ ಬಗ್ಗೆ ನಾವು ಹೇಗೆ ಚಿಂತನೆ ನಡೆಸಬೇಕು?” ಎಂದು ಗಾಂಧಿ ಪ್ರಶ್ನಿಸಿದ್ದರು.

ಇದಕ್ಕೆ ಉತ್ತರವಾಗಿ ಬ್ಯಾನರ್ಜಿ, “ನನ್ನ ಪ್ರಕಾರ ಇದು ಪ್ರತ್ಯೇಕ ವಿಷಯ. ನನ್ನ ಕಲ್ಪನೆಯಂತೆ ಅಲ್ಪಾವಧಿಯಲ್ಲಿ ನಿಜವಾದ ಸಮಸ್ಯೆ ಎಂದರೆ ಹೆಚ್ಚು ನೀತಿಗಳಿರುವುದು. ಯುಪಿಎ ಸರ್ಕಾರ ಜಾರಿಗೆ ತಂದ ಉತ್ತಮ ನೀತಿಗಳಲ್ಲಿ ಕೆಲವು ಅಸಮರ್ಪಕವಾಗಿತ್ತು. ಈಗಿನ ಸರ್ಕಾರವು ಅವೆಲ್ಲವನ್ನೂ ಅಳವಡಿಸಿದೆ. ಇದು ಏನು ಮಾಡುತ್ತಿದೆಯೋ ಅವೆಲ್ಲವನ್ನೂ ಯುಪಿಎ ಸಾಧನೆಗಳ ಮೂಲಕ ಮಾಡುತ್ತಿದೆ ಎನ್ನುವುದು ಸ್ಪಷ್ಟ. ಆದರೆ ಈ ಯೋಜನೆಗಳ ವ್ಯಾಪ್ತಿಗೆ ಒಳಪಡದವರಿಗಾಗಿ ಏನು ಮಾಡುತ್ತೀರಿ ಎನ್ನುವುದು ಪ್ರಮುಖವಾದ ವಿಷಯ. ಅಂಥ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲಿ ವಲಸಿಗರು ಪ್ರಮುಖ” ಎಂದವರು ಹೇಳುತ್ತಾರೆ.

ಇದೇ ಸಂದರ್ಭ ಅವರು ‘ಯುಪಿಎ ಸರ್ಕಾರ ಜಾರಿಗೆ ತಂದ ಉತ್ತಮ ನೀತಿಗಳು ಅಸಮರ್ಪಕ’ ಎಂದು ಹೇಳಿರುವುದನ್ನು ಮುಂದಿನ ಕೆಲ ನಿಮಿಷಗಳಲ್ಲಿ ವಿವರಿಸುತ್ತಾರೆ.

“ಯುಪಿಎಯ ಕೊನೆಯ ವರ್ಷಗಳಲ್ಲಿ ಜಾರಿಗೆ ತರಲು ಬಯಸಿದ ರಾಷ್ಟ್ರವ್ಯಾಪಿ ಆಧಾರ್ ಕಡ್ಡಾಯಪಡಿಸಬೇಕು ಮತ್ತು ಇದನ್ನು ಪಡಿತರ ಹಾಗೂ ಇತರ ಅಂಶಗಳಿಗೆ ಬಳಸಬೇಕು ಎಂಬ ನೀತಿಗಳನ್ನು ಪ್ರಸಕ್ತ ಸರ್ಕಾರ ಒಪ್ಪಿಕೊಂಡಿದೆ. ಆದ್ದರಿಂದ ನೀವು ಎಲ್ಲೇ ಇದ್ದರೂ ಅದಕ್ಕೆ ಅರ್ಹರಾಗುತ್ತೀರಿ. ಆದರೆ ಅದನ್ನು ಈಗ ಜಾರಿಗೆ ತಂದರೆ ಮಾತ್ರ ಅದ್ಭುತ ಕೆಲಸವಾಗುತ್ತದೆ ಎಂದು ಹೇಳಬಹುದು. ನಾನು ಪಡಿತರಕ್ಕೆ ಅರ್ಹ ಎನ್ನುವುದು ನಿಮಗೆ ಗೊತ್ತು; ನನ್ನ ಕುಟುಂಬ ಮಾಲ್ಡಾ ಅಥವಾ ದರ್ಬಾಂಗ್‍ ನಲ್ಲಿದ್ದರೂ ನಾನು ಮುಂಬೈನಲ್ಲಿ ಪಡಿತರ ಸ್ವೀಕರಿಸುತ್ತೇನೆ. ಆದರೆ ಅದಾಗುತ್ತಿಲ್ಲ ಏಕೆಂದರೆ, ಈ ವ್ಯವಸ್ಥೆಯಲ್ಲಿ ಸೇರದ ಹಲವು ಮಂದಿ ಇದ್ದಾರೆ. ಅವರು ಮುಂಬೈನಲ್ಲಿ ಇರುವುದರಿಂದ ಅವರು ನರೇಗಾಗೆ ಅರ್ಹರಲ್ಲ. ಏಕೆಂದರೆ ಮುಂಬೈನಲ್ಲಿ ನರೇಗಾ ಇಲ್ಲ. ಅವರು ಪಿಡಿಎಸ್‍ಗೆ ಅರ್ಹರಲ್ಲ; ಏಕೆಂದರೆ ಅವರು ವಾಸ್ತವವಾಗಿ ಇಲ್ಲಿನ ನಿವಾಸಿಗಳಲ್ಲ. ಸಮಸ್ಯೆ ಇರುವುದು ಯಾರೋ ಒಬ್ಬ ವ್ಯಕ್ತಿ ಎಲ್ಲಿರಬೇಕೋ ಅಲ್ಲಿ ಇರದೇ, ಅಲ್ಲಿ ಕೆಲಸ ಮಾಡದೆ ಆದಾಯ ಗಳಿಸುತ್ತಿಲ್ಲ ಎಂದಾದಲ್ಲಿ ಅವರ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿಲ್ಲ ಎಂಬ ಕಲ್ಯಾಣ ಸಂರಚನೆಯ ಪರಿಕಲ್ಪನೆಯಲ್ಲಿ. ಈ ವ್ಯವಸ್ಥೆ ನಿಜಕ್ಕೂ ಹದಗೆಟ್ಟಿದೆ” ಎಂದು ಹೇಳಿದ್ದರು.

ಸರಳವಾಗಿ ಹೇಳಬೇಕೆಂದರೆ, ಬ್ಯಾನರ್ಜಿ ಹೇಳಿದ್ದು, ಯುಪಿಎ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ನೀತಿಗಳು ಒಳ್ಳೆಯದಿದ್ದರೂ, ದೊಡ್ಡ ಸಂಖ್ಯೆಯ ಬಡವರವನ್ನು, ಅದರಲ್ಲೂ ಮುಖ್ಯವಾಗಿ ವಲಸೆ ಕಾರ್ಮಿಕರನ್ನು ಅದು ಒಳಗೊಳ್ಳದೇ ಇರುವುದರಿಂದ ಅದು ಅಸಮರ್ಪಕ.

ದೇಶದ ವಿವಿಧ ಕಡೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು, ಆಧಾರ್ ಮೂಲಸೌಕರ್ಯವನ್ನು ಬಳಸಿಕೊಳ್ಳದೇ ಇರುವ ಕಾರಣದಿಂದ ಪಡಿತರ ಪಡೆಯುವಲ್ಲಿ ಎಂಥ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಅವರು ವಿವರಿಸಿದ್ದರು. ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯದಲ್ಲಿ ಅಲ್ಲದೇ ಇತರೆಡೆಗಳಲ್ಲಿ ಹೇಗೆ ಪಡಿತರಕ್ಕೆ ಅರ್ಹರಲ್ಲ ಎನ್ನುವುದನ್ನು ವಿವರಿಸಿದ್ದರು.

Moneycontrol.com ಹಾಗೂ ನ್ಯೂಸ್ 18 ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಯವರ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಿವೆ. ಈ ಪೈಕಿ Moneycontrol.com ಸ್ಪಷ್ಟನೆಯನ್ನು ನೀಡಿದ್ದರೆ, ನ್ಯೂಸ್ 18 ಈ ಬಗ್ಗೆ ಯಾವ ವಿವರಣೆಯನ್ನೂ ನೀಡಿಲ್ಲ. ಬದಲಾಗಿ ಮೊದಲ ತಪ್ಪು ಹೇಳಿಕೆಯ ಬಗ್ಗೆ ಯಾವ ಉಲ್ಲೇಖವನ್ನೂ ಮಾಡದೇ, ಬ್ಯಾನರ್ಜಿಯವರ ಸಂದರ್ಶನದ ಬಗ್ಗೆ ಹೆಚ್ಚಿನ ಅಂಶಗಳನ್ನು ಒಳಗೊಂಡ ತುಣುಕನ್ನು ಟ್ವೀಟ್ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)