varthabharthiಆರೋಗ್ಯ

ಉಷ್ಣ, ನಿರ್ಜಲೀಕರಣ, ಮಲಬದ್ಧತೆಯಿಂದ ಮುಕ್ತಿ ಪಡೆಯಲು ಇದನ್ನು ಸೇವಿಸಿ

ವಾರ್ತಾ ಭಾರತಿ : 8 May, 2020

ಉರಿಬಿಸಿಲಿನ ಈ ದಿನಗಳಲ್ಲಿ ಚೇತರಿಸಿಕೊಳ್ಳಲು ತಣ್ಣನೆಯ ಮತ್ತು ಶಕ್ತಿದಾಯಕ ಪೇಯಗಳನ್ನು ಸೇವಿಸುವುದು ಅಗತ್ಯವಾಗಿದೆ. ಇಂತಹ ಹಲವಾರು ಪೇಯಗಳ ಪೈಕಿ ಮಜ್ಜಿಗೆಯು ಬೇಸಿಗೆಯಲ್ಲಿ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಮಜ್ಜಿಗೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವಾರು ಕಾಯಿಲೆಗಳನ್ನು ದೂರವಿರಿಸಬಹುದು.

ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗಿರುವವರು ಮಜ್ಜಿಗೆಯನ್ನು ಅತ್ಯಗತ್ಯವಾಗಿ ಸೇವಿಸಬೇಕು. ಅದರಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು,ಕಾರ್ಬೊಹೈಡ್ರೇಟ್‌ಗಳು ಮತ್ತು ಲ್ಯಾಕ್ಟಿಕ್ ಆಮ್ಲ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆಯುರ್ವೇದದಲ್ಲಿ ಮಜ್ಜಿಗೆಯನ್ನು ಸಾತ್ವಿಕ ಆಹಾರ ಎಂದು ಪರಿಗಣಿಸಲಾಗಿದೆ. ಮೊಸರಿನಿಂದ ತಯಾರಾಗುವ ಈ ಪೇಯವು ಆರೋಗ್ಯಕ್ಕೆ ಅತ್ಯಂತ ಲಾಭಕಾರಿಯಾಗಿದೆ. ಭಾರೀ ಅಥವಾ ಹೆಚ್ಚು ಮಸಾಲೆಯುಕ್ತ ಊಟದ ಪರಿಣಾಮವಾಗಿ ಆ್ಯಸಿಡಿಟಿ ಉಂಟಾದಾಗ ಒಂದು ಗ್ಲಾಸ್ ಮಜ್ಜಿಗೆಯನ್ನು ಕುಡಿದುಬಿಡಿ,ಅದು ಹೊಟ್ಟೆಗೆ ಅತ್ಯಂತ ಹಿತಕರವಾಗಿರುತ್ತದೆ. ನಮ್ಮ ತಲೆಗೂದಲು ಮತ್ತು ಚರ್ಮದ ಆರೋಗ್ಯಕ್ಕೂ ಪೂರಕವಾಗಿರುವ ಮಜ್ಜಿಗೆಯ ಈ ಐದು ಆರೋಗ್ಯಲಾಭಗಳು ನಿಮಗೆ ಗೊತ್ತಿರಲಿ.

► ತೂಕವನ್ನು ಇಳಿಸುತ್ತದೆ

ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸುವವರಿಗೆ ಮಜ್ಜಿಗೆಯು ಎಲ್ಲಕ್ಕಿಂತ ಅತ್ಯುತ್ತಮ ಪೇಯವಾಗಿದೆ. ಮಜ್ಜಿಗೆಯಲ್ಲಿ ಅತ್ಯಂತ ಕಡಿಮೆ ಕ್ಯಾಲರಿಗಳು ಇರುತ್ತವೆ,ಕೊಬ್ಬು ಇರುವುದಿಲ್ಲ. ಅದು ಸಮೃದ್ಧ ಪೋಷಕಾಂಶಗಳು ಮತ್ತು ಕಿಣ್ವಗಳನ್ನು ಒಳಗೊಂಡಿದೆ. ಇದು ಶರೀರಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ ಮತ್ತು ಶರೀರಕ್ಕೆ ಅಗತ್ಯವಾದ ದ್ರವಾಂಶವನ್ನು ಒದಗಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಸೇರಿದಂತೆ ಹಲವಾರು ಖನಿಜಗಳು,ಪ್ರೋಟಿನ್ ಮತ್ತು ವಿಟಾಮಿನ್‌ಗಳು ಶರೀರದಲ್ಲಿ ಶಕ್ತಿ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಹಸಿವನ್ನು ನಿಯಂತ್ರಿಸಲು ಇದು ಅದ್ಭುತ ಪೇಯವಾಗಿದೆ.

► ನಿರ್ಜಲೀಕರಣವನ್ನು ತಡೆಯುತ್ತದೆ

ನಮ್ಮ ಶರೀರದಿಂದ ಅತಿಯಾದ ಪ್ರಮಾಣದಲ್ಲಿ ದ್ರವಗಳು ಹೊರಗೆ ಹಾಕಲ್ಪಟ್ಟಾಗ ತಲೆ ಸುತ್ತುವಿಕೆ ಮತ್ತು ಸಂಪೂರ್ಣ ಶಕ್ತಿಗುಂದಿದ ಅನುಭವವಾಗುತ್ತದೆ. ಈ ಸ್ಥಿತಿಯನ್ನು ನಿರ್ಜಲೀಕರಣ ಎನ್ನಲಾಗುತ್ತದೆ. ನಿರ್ಜಲೀಕರಣವು ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಅತಿಯಾದ ತಾಪಮಾನದಿಂದಾಗಿ ಉಂಟಾಗುತ್ತದೆ. ಬೆವರುವಿಕೆ,ವಾಂತಿ ಮತ್ತು ಅತಿಸಾರ ಇತ್ಯಾದಿಗಳು ನಿರ್ಜಲೀಕರಣದ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ಒಂದು ಗ್ಲಾಸ್ ಮಜ್ಜಿಗೆಗೆ ಕೊಂಚ ಉಪ್ಪು,ಜೀರಿಗೆ ಮತ್ತು ಕರಿಮೆಣಸಿನ ಹುಡಿಯನ್ನು ಸೇರಿಸಿಕೊಂಡು ಸೇವಿಸಿದರೆ ಬೇಸಿಗೆಯ ದಿನಗಳಲ್ಲಿ ನಿರ್ಜಲೀಕರಣದಿಂದ ಪಾರಾಗಬಹುದು. ಈ ಪೇಯವು ಸಮೃದ್ಧ ವಿದ್ಯುದ್ವಿಚ್ಛೇದ್ಯಗಳನ್ನು ಒಳಗೊಂಡಿರುತ್ತದೆ ಮತ್ತು ಇವು ಶರೀರದಲ್ಲಿ ನೀರಿನ ನಷ್ಟವನ್ನು ಸರಿದೂಗಿಸುತ್ತವೆ.

► ಮೂಳೆಗಳನ್ನು ಬಲಗೊಳಿಸುತ್ತದೆ

ಮಜ್ಜಿಗೆಯನ್ನು ಸೇವಿಸುವುದರಿಂದ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ನಮ್ಮ ಶರೀರಕ್ಕೆ ಲಭಿಸುತ್ತದೆ. ನಮ್ಮ ಶರೀರಕ್ಕೆ ದಿನವೊಂದಕ್ಕೆ 1,000 ಎಂ.ಜಿ.ಕ್ಯಾಲ್ಸಿಯಂ ಅಗತ್ಯವಿದೆ. ಒಂದು ಕಪ್ ಮಜ್ಜಿಗೆಯಲ್ಲಿ ಸುಮಾರು 284 ಎಂ.ಜಿ.ಕ್ಯಾಲ್ಸಿಯಂ ಇರುತ್ತದೆ ಮತ್ತು ಇದು ನಮ್ಮ ದೈನಂದಿನ ಅಗತ್ಯದ ಶೇ.28ರಷ್ಟನ್ನು ಪೂರೈಸುತ್ತದೆ. ನಮಗೆ ವಯಸ್ಸಾಗುತ್ತ ಹೋದಂತೆ ಮೂಳೆಗಳ ಸಾಂದ್ರತೆಯೂ ಕಡಿಮೆಯಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವನೆ ಎಲ್ಲ ವಯೋಮಾನದವರಲ್ಲಿಯೂ ಮೂಳೆಗಳನ್ನು ಸದೃಢವಾಗಿರಿಸುತ್ತದೆ.

► ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ವೈದ್ಯಕೀಯ ಮಾರ್ಗಸೂಚಿಗಳಂತೆ ರಕ್ತದೊತ್ತಡವು 130/80 ಎಂಎಂಎಚ್‌ಜಿಗಿಂತ ಹೆಚ್ಚಾಗಿದ್ದರೆ ಅದು ಹೈಪರ್‌ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡ ಎಂದು ಕರೆಸಿಕೊಳ್ಳುತ್ತದೆ. ಮಜ್ಜಿಗೆಯಲ್ಲಿ ಸಮೃದ್ಧವಾಗಿರುವ ಬಯೊಆ್ಯಕ್ಟಿವ್ ಪ್ರೋಟಿನ್ ರಕ್ತದೊತ್ತಡವನ್ನು ತಗ್ಗಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಸಂಶೋಧನೆಗಳು ಬೆಟ್ಟು ಮಾಡಿವೆ. ಅದು ಬ್ಯಾಕ್ಟೀರಿಯಾ ನಿರೋಧಕ ಮತ್ತು ವೈರಾಣು ನಿರೋಧಕವೂ ಆಗಿದೆ. ಪ್ರತಿದಿನ ಮಜ್ಜಿಗೆಯನ್ನು ಸೇವಿಸುವುದರಿಂದ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ ಮತ್ತು ಯಾವುದೇ ಹೃದಯ ಸಮಸ್ಯೆಗಳು ಉಂಟಾಗುವುದಿಲ್ಲ.

► ಮಲಬದ್ಧತೆಯನ್ನು ನಿವಾರಿಸುತ್ತದೆ

ಮಜ್ಜಿಗೆಯು ಶತಮಾನಗಳಿಂದಲೂ ವಾಯು ತೊಂದರೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಬಳಕೆಯಾಗುತ್ತಿದೆ. ಸಮತೋಲನವಿಲ್ಲದ ಆಹಾರವು ಅತಿಸಾರ ಅಥವಾ ಮಲಬದ್ಧತೆಯನ್ನು ಉಂಟು ಮಾಡುತ್ತದೆ. ಮಜ್ಜಿಗೆಯಲ್ಲಿ ನಾರು ಇರುವುದರಿಂದ ಅದರ ಸೇವನೆಯು ಕರುಳಿನ ಚಲನವಲನಗಳನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ. ಜೊತೆಗೆ ಜೀರ್ಣಾಂಗವನ್ನು ಮರಳಿ ಸುಸ್ಥಿತಿಗೆ ತರಲೂ ನೆರವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)