varthabharthiಸಂಪಾದಕೀಯ

ಸರಕಾರದ ಆರೋಗ್ಯದ ಬಗ್ಗೆ ಬೇಕಾಗಿದೆ ಸ್ಪಷ್ಟೀಕರಣ

ವಾರ್ತಾ ಭಾರತಿ : 11 May, 2020

ರೋಗ ಮತ್ತು ಸಾವು ಮನುಷ್ಯನನ್ನು ಸದಾ ನೆರಳಿನಂತೆ ಹಿಂಬಾಲಿಸುತವೆ. ನಾವು ಒಬ್ಬನ ಸಾವನ್ನು ಸಂಭ್ರಮಿಸುತ್ತಿರುವ ಹೊತ್ತಿನಲ್ಲೇ, ಸಾವು ನಮ್ಮ ಹಿಂದೆ ನಿಂತು ನಗುತ್ತಿರುತ್ತದೆ. ರೋಗವೂ ಇದಕ್ಕೆ ಭಿನ್ನವಾಗಿಲ್ಲ. ಹಲವರು ರೋಗ ಮತ್ತು ಸಾವನ್ನು ಶಿಕ್ಷೆಗಳಾಗಿ ಬಿಂಬಿಸುವುದಿದೆ. ತಮ್ಮ ಶತ್ರುವಿಗೆ ಅಥವಾ ತಮಗಾಗದವರಿಗೆ ರೋಗ ಅಥವಾ ಸಾವು ಬಂದಾಗ ಅದನ್ನು ಶಿಕ್ಷೆಯೆಂದು ನಂಬಿ ಸಂಭ್ರಮಿಸುವವ, ಒಂದಲ್ಲ ಒಂದು ದಿನ ತಾನೂ ಆ ಶಿಕ್ಷೆಗೆ ತಾನೂ ಬಲಿಯಾಗಬೇಕಾಗಿದೆ ಎನ್ನುವ ಕಹಿ ಸತ್ಯವನ್ನ್ನು ನೆನಪಿಟ್ಟುಕೊಳ್ಳಬೇಕಾಗಿದೆ. ಇನ್ನೊಬ್ಬರು ನಮ್ಮ ಸಾವನ್ನು, ನಮ್ಮ ರೋಗಗಳನ್ನು ವಿಕೃತವಾಗಿ ಸಂಭ್ರಮಿಸಬಾರದು ಎಂದಾದಲ್ಲಿ, ನಾವು ಇತರರ ರೋಗ ಸಾವುಗಳ ಕುರಿತಂತೆ ಮಾನವೀಯವಾಗಿ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ.

ಭಾರತದಲ್ಲಿ ಸಾವನ್ನು ಸಂಭ್ರಮಿಸುವ ಮನಸ್ಥಿತಿ ಇತ್ತೀಚೆಗೆ ವಿಜೃಂಭಿಸುತ್ತಿದೆೆ. ಅನಂತಮೂರ್ತಿಯಂತಹ ಹಿರಿಯ ಮಾನವೀಯ ಚಿಂತಕರ ಸಾವಿಗೆ ಕೆಲವರು ಪಟಾಕಿ ಹಚ್ಚಿ ಸಂಭ್ರಮಿಸಿದ ಕ್ರೌರ್ಯಕ್ಕೆ ನಾಡು ಸಾಕ್ಷಿಯಾಯಿತು. ಕಲಬುರ್ಗಿ, ಗೌರಿಲಂಕೇಶ್ ಹತ್ಯೆಗಳನ್ನು ಕೆಲವರು ವಿಕೃತವಾಗಿ ಸಂಭ್ರಮಿಸಿದರು. ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿಯ ಸಾವನ್ನು ಬಯಸುವ ಅಮಾನವೀಯ ಮನಸ್ಸುಗಳು ನಮ್ಮ ನಡುವೆ ಇವೆ. ಇದೀಗ ಇಂತಹ ವಿಕೃತ ಮನಸ್ಥಿತಿಯ ಕುರಿತಂತೆ ನಮ್ಮ ದೇಶದ ಗೃಹ ಸಚಿವ ಅಮಿತ್ ಶಾ ಅವರು ನೊಂದು ಸ್ಪಷ್ಟೀಕರಣವೊಂದನ್ನು ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ತೀರಾ ಕಡಿಮೆ ಕಾಣಿಸಿಕೊಳ್ಳುತ್ತಿದ್ದರು. ದಿಲ್ಲಿ ಗಲಭೆಯ ಆನಂತರ ಅವರು ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡದ್ದೇ ಒಂದೆರಡು ಬಾರಿ. ಕೊರೋನ ವೈರಸ್ ಈ ದೇಶವನ್ನು ಮುಕ್ಕಿ ತಿನ್ನುತ್ತಿರುವ ವೇಳೆಯಲ್ಲೂ ಅವರು ಒಂದೆರೆಡು ಪತ್ರಿಕಾ ಹೇಳಿಕೆಗಳನ್ನು ನೀಡಿದ್ದು ಹೊರತು ಪಡಿಸಿದರೆ, ಪ್ರಧಾನಿಗೆ ಜೊತೆಯಾಗಿ ಬಿಕ್ಕಟ್ಟನ್ನು ಎದುರಿಸಿದ ಉದಾಹರಣೆಗಳಿಲ್ಲ. ಆದರೆ ಇದನ್ನೇ ಮುಂದಿಟ್ಟುಕೊಂಡ ದುಷ್ಕರ್ಮಿಗಳು ಅಮಿತ್ ಶಾ ಕುರಿತಂತೆ ವದಂತಿಗಳನ್ನು ಹಬ್ಬಿಸತೊಡಗಿದರು. ಅಮಿತ್ ಶಾ ಅವರು ಕೊರೋನ ಸೋಂಕಿತರಾಗಿದ್ದಾರೆ, ಅವರು ಕ್ಯಾನ್ಸರ್ ಪೀಡಿತರಾಗಿದ್ದಾರೆ ಎನ್ನುವ ಸುಳ್ಳು ಸುದ್ದಿಗಳನ್ನು ಕೆಲವು ರೋಗ ಪೀಡಿತ ಮನಸ್ಸುಗಳು ಸಾಮಾಜಿಕ ತಾಣಗಳಲ್ಲಿ ಹಬ್ಬಿಸತೊಡಗಿದವು. ಈ ವಿಕೃತಿ ಇನ್ನಷ್ಟು ಮುಂದುವರಿದು, ಅಮಿತ್ ಶಾ ಅವರ ಕಾಯಿಲೆ ಅವರಿಗೆ ಸಿಕ್ಕಿದ ಶಿಕ್ಷೆ ಎನ್ನುವಂತೆ ಕೆಲವರು ಸಂಭ್ರಮಿಸಿ ಹೇಳಿಕೆಗಳನ್ನು ಹಂಚಿಕೊಳ್ಳತೊಡಗಿದರು. ಆದರೆ ಇದೀಗ ಅಮಿತ್ ಶಾ ‘‘ನಾನು ಯಾವುದೇ ರೋಗದಿಂದ ಬಳಲುತ್ತಿಲ್ಲ’’ ಎಂಬ ಹೇಳಿಕೆ ನೀಡುವ ಮೂಲಕ ಕಿಡಿಗೇಡಿಗಳ ಪ್ರಯತ್ನಗಳಿಗೆ ಅಂತ್ಯ ಹಾಡಿದ್ದಾರೆ. ಆದರೆ ಈ ದೇಶದ ಗೃಹ ಸಚಿವರೊಬ್ಬರು ಇಂತಹದೊಂದು ಸ್ಪಷ್ಟನೆಯನ್ನು ಜನರಿಗೆ ನೀಡುವ ಸಂದರ್ಭ ಬಂದುದು ನಿಜಕ್ಕೂ ಖೇದಕರ. ಅವರೂ ಈ ಬಗ್ಗೆ ತೀವ್ರವಾಗಿ ನೊಂದು ಮಾತನಾಡಿದ್ದಾರೆ. ‘‘ಕೆಲವು ದಿನಗಳಿಂದ ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಆರೋಗ್ಯದ ಕುರಿತು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ವಾಸ್ತವಿಕವಾಗಿ ಹಲವರು ನನ್ನ ಸಾವನ್ನು ಹಾರೈಸಿ ಟ್ವೀಟ್ ಕೂಡ ಮಾಡಿದ್ದಾರೆ’’ ಎಂದು ಅವರು ತೋಡಿಕೊಂಡಿದ್ದಾರೆ. ‘‘ಜನರು ಇಂತಹ ಊಹಾಪೋಹಗಳನ್ನು ಹರಡುವುದನ್ನು ನಿಲ್ಲಿಸಬೇಕು ಹಾಗೂ ಕರ್ತವ್ಯವನ್ನು ನಿರ್ವಹಿಸಲು ನನಗೆ ಬಿಡಬೇಕು’’ ಎಂದೂ ಕೋರಿಕೊಂಡಿದ್ದಾರೆ.

  ಬಹುಶಃ ವಿಕೃತರಿಗೆ ಆಹಾರ ಒದಗಿಸುವಲ್ಲಿ ಗೃಹ ಸಚಿವರ ಸಣ್ಣ ಪಾಲೂ ಇದೆ. ಕೊರೋನ ಸೇರಿದಂತೆ ದೇಶದ ವಿವಿಧ ಬಿಕ್ಕಟ್ಟುಗಳಿಗೆ ಅಮಿತ್ ಶಾ ಸಮರ್ಥವಾಗಿ ಸ್ಪಂದಿಸಿದ್ದಿದ್ದರೆ ಇಂತಹ ವದಂತಿಗಳು ಹರಡುವ ಅವಕಾಶವೇ ಇರುತ್ತಿರಲಿಲ್ಲ. ಗೃಹ ಸಚಿವರ ಆರೋಗ್ಯದ ಬಗ್ಗೆ ಕುಹಕವಾಡುವ ಜನರನ್ನು ನಾವು ಖಂಡಿಸುತ್ತಲೇ, ತನ್ನ ಖಾತೆಯನ್ನು ನಿರ್ವಹಿಸುವಲ್ಲಿ ಅಮಿತ್ ಶಾ ಅವರ ವೈಫಲ್ಯವನ್ನು ಟೀಕಿಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಬಲಗೈಯಂತೆ ಕೆಲಸ ಮಾಡುತ್ತಿದ್ದ ಅಮಿತ್ ಶಾ ಅವರು ಪ್ರಧಾನಿ ಮೋದಿಯವರನ್ನು ಏಕಾಂಗಿಯಾಗಿಸಿ ಸಾರ್ವಜನಿಕ ಚಟುವಟಿಕೆಗಳಿಂದ ದೂರ ಉಳಿದಿರುವುದು ಯಾಕೆ ಎನ್ನುವುದು ಸದ್ಯಕ್ಕೆ ಜನರ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ. ಸದ್ಯದ ಸಂದರ್ಭದಲ್ಲಿ ಗೃಹ ಖಾತೆಯ ಹೊಣೆಗಾರಿಕೆ ಅಮಿತ್ ಶಾ ಅವರಿಗೆ ಕಷ್ಟವಾದರೆ ಅದನ್ನು ಇತರರಿಗೆ ವಹಿಸುವ ಅವಕಾಶವೂ ಇದೆ. ಇದರಿಂದಾಗಿ ಪ್ರಧಾನಿ ಮೋದಿಯವರು ಮುಜುಗರ ಅನುಭವಿಸುವುದು ತಪ್ಪ ಬಹುದು. ಜೊತೆಗೆ ಗೃಹ ಇಲಾಖೆ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಂತಾಗಬಹುದು. ಬಹುಶಃ ಅಮಿತ್ ಶಾ ಎಂದಲ್ಲ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಬಹುತೇಕ ಸಚಿವರು ಮುನ್ನೆಲೆಯಲ್ಲಿಲ್ಲ. ಈ ಹಿಂದೆ, ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ರಕ್ಷಣಾ ಖಾತೆಯ ಸಚಿವರು ವಿವರಿಸಿದರೆ, ಈಗ ನೇರವಾಗಿ ಸೇನೆಯ ಮುಖ್ಯಸ್ಥರೇ ಬಂದು ಪತ್ರಿಕಾಗೋಷ್ಠಿ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರಕಾರದ ಬಹುಮುಖ್ಯ ಖಾತೆಗಳನ್ನು ವಹಿಸಿಕೊಂಡಿರುವ ರಾಜ್‌ನಾಥ್ ಸಿಂಗ್, ನಿರ್ಮಲಾ ಸೀತಾರಾಮನ್‌ರಂತಹ ನಾಯಕರು ಸಾರ್ವಜನಿಕವಾಗಿ ಸರಕಾರವನ್ನು ಪ್ರತಿನಿಧಿಸಿ ಮಾತನಾಡುವುದು ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೆ ವದಂತಿ ಹರಡುತ್ತಿರುವವರು ಮಾತ್ರ ಅಮಿತ್ ಶಾ ಅವರನ್ನಷ್ಟೇ ಗುರಿಯಾಗಿಸುತ್ತಿದ್ದಾರೆ. ಇದರ ಹಿಂದೆ ದ್ವೇಷ ರಾಜಕಾರಣವಿದೆ ಎನ್ನುವುದು ಸ್ಪಷ್ಟ. ಸಚಿವರಾಗಿ ಅಮಿತ್ ಶಾ ಅದೇನೇ ತಪ್ಪು ಹೆಜ್ಜೆಗಳನ್ನು ಇಟ್ಟರೂ ಅವರನ್ನು ಶಿಕ್ಷಿಸಲು ಈ ದೇಶದ ನ್ಯಾಯಾಲಯವಿದೆ. ಆದರೆ ದುರದೃಷ್ಟವಶಾತ್ ನ್ಯಾಯ ವ್ಯವಸ್ಥೆ ಅನಾರೋಗ್ಯದಿಂದ ಮಲಗಿದೆ. ಆ ಬಗ್ಗೆ ನಾವು ಚರ್ಚೆ ನಡೆಸಬೇಕೇ ಹೊರತು, ಬದಲಿಗೆ ಹತಾಶರಾಗಿ ಅಮಿತ್ ಶಾ ಅವರಿಗೆ ಕಾಯಿಲೆಯಾಗಿದೆ ಎಂದು ಸುಳ್ಳು ಸುದ್ದಿ ಹರಡಿ ಸಂಭ್ರಮಿಸುವುದಲ್ಲ. ಇದು ಖಂಡನೀಯ.

ಕೊರೋನ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಸರಕಾರವೂ ಕೋರೋನಾ ವೈರಸ್ ಸೋಂಕು ತಗಲಿ ದವನಂತೆ ಏದುಸಿರು ಬಿಡುತ್ತಿದೆ. ಕೊರೋನವನ್ನು ಎದುರಿಸಬೇಕಾದರೆ ಮೊತ್ತ ಮೊದಲು ಸರಕಾರ ತನ್ನೊಳಗಿನ ಸೋಂಕಿಗೆ ಔಷಧಿ ನೀಡಬೇಕು. ಸದ್ಯಕ್ಕೆ ದೇಶದಲ್ಲಿ ಆರ್ಥಿಕತೆ ಮಕಾಡೆ ಮಲಗಿದೆ. ಕೊರೋನವನ್ನು ಎದುರಿಸುವ ದಾರಿ ತಿಳಿಯದೆ ಸರಕಾರ ಗೊಂದಲಗೊಂಡಿದೆ. ಬೇಜವಾಬ್ದಾರಿ ನಿರ್ಧಾರಗಳಿಂದ ರಸ್ತೆಗಳಲ್ಲಿ , ರೈಲು ಹಳಿಗಳಲ್ಲಿ ವಲಸೆ ಕಾರ್ಮಿಕರ ಮಾರಣಹೋಮ ನಡೆಯುತ್ತಿದೆ. ಒಂದೆಡೆ ಪ್ರಧಾನಮಂತ್ರಿ ಮೋದಿಯವರ ಹೆಸರಲ್ಲಿ ಪರಿಹಾರ ಹಣ ಸಂಗ್ರಹವಾಗುತ್ತಿದ್ದರೆ, ಈವರೆಗೆ ಆ ನಿಧಿ ಇನ್ನೂ ಸಂತ್ರಸ್ತರಿಗೆ ತಲುಪಿಲ್ಲ. ಜೊತೆಗೆ ಅದರ ಲೆಕ್ಕವನ್ನು ಯಾರೂ ಕೇಳುವಂತಿಲ್ಲ. ರಾಜ್ಯಗಳಿಗೆ ನೀಡಬೇಕಾದ ಪರಿಹಾರ ನಿಧಿಯನ್ನು ಕೇಂದ್ರ ಒದಗಿಸುತ್ತಿಲ್ಲ. ಆಸ್ಪತ್ರೆಗಳಿಗೆ, ವೈದ್ಯರಿಗೆ ಬೇಕಾದ ಆಧುನಿಕ ಉಪಕರಣಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ, ಹೆಲಿಕಾಪ್ಟರ್‌ನಲ್ಲಿ ಹೂವು ಸುರಿಸುವುದು, ಚಪ್ಪಾಳೆ ತಟ್ಟುವುದು, ದೀಪ ಹಚ್ಚುವುದು ಮೊದಲಾದ ಭಾವನಾತ್ಮಕ ಕ್ರಮಗಳ ಮೂಲಕ ಜನರನ್ನು ಸಂತೃಪ್ತಿ ಪಡಿಸುವ ಯತ್ನದಲ್ಲಿದೆ. ಕೊರೋನವನ್ನು ಎದುರಿಸುವ ಎಲ್ಲ ಹೊಣೆಗಾರಿಕೆಗಳನ್ನು ಆಯಾ ರಾಜ್ಯಗಳ ತಲೆಗೇ ಕಟ್ಟಲಾಗುತ್ತಿದೆ. ಇವೆಲ್ಲವೂ ಕೇಂದ್ರ ಸರಕಾರದ ಆರೋಗ್ಯದಲ್ಲಿ ಸಂಪೂರ್ಣ ಏರುಪೇರಾಗಿರುವ ಅಂಶವನ್ನು ಎತ್ತಿ ಹಿಡಿಯುತ್ತಿವೆ. ತಕ್ಷಣ ಅದರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಸಂಬಂಧ ಪಟ್ಟವರು ಮಾಧ್ಯಮಗಳಿಗೆ ಸ್ಪಷ್ಟೀಕರಣವನ್ನು ನೀಡಿ ಜನರ ಆತಂಕವನ್ನು ದೂರ ಮಾಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)