varthabharthiಸಂಪಾದಕೀಯ

ಮಧ್ಯಮವರ್ಗದ ಮೇಲೆ ಲಾಕ್‌ಡೌನ್ ಸಡಿಲಿಕೆಯ ತೂಗುಗತ್ತಿ

ವಾರ್ತಾ ಭಾರತಿ : 12 May, 2020

ಸರಕಾರ ಕೊರೋನ ಕುರಿತಂತೆ ಹೊಂದಿರುವ ‘ಕಠಿಣ ನಿಲುವಿನಿಂದ’ ಹಿಂದೆ ಸರಿಯುತ್ತಿರುವ ಎಲ್ಲ ಸೂಚನೆಗಳು ಕಾಣುತ್ತಿವೆ. ಕೊರೋನ ಎದುರಿಸಲು ‘ಲಾಕ್‌ಡೌನ್’ ಅಂತಿಮ ಪರಿಹಾರ ಅಲ್ಲ ಎನ್ನುವುದು, ಒಂದೂವರೆ ತಿಂಗಳ ಫಲಿತಾಂಶದಿಂದ ಅದು ಕಂಡುಕೊಂಡಂತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಕೊರೋನದಿಂದ ಸತ್ತವರ ಸಂಖ್ಯೆಗಿಂತ ಲಾಕ್‌ಡೌನ್ ಕಾರಣದಿಂದ ಸತ್ತವರ ಸಂಖ್ಯೆ ಹೆಚ್ಚಿರುವುದೂ ಸರಕಾರದ ಚಿಂತೆಗೆ ಕಾರಣವಾಗಿರಬಹುದು. ದೇಶವನ್ನು ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿಸಿರುವ ಲಾಕ್‌ಡೌನ್ ಇನ್ನೂ ಮುಂದುವರಿದರೆ, ಕೊರೋನದ ಜೊತೆಗೆ ಬೇರೆಲ್ಲ ರೋಗಗಳೂ ಸೇರಿಕೊಂಡು ಜನರನ್ನು ಆಹುತಿ ತೆಗೆದುಕೊಳ್ಳಬಹುದಾದ ಭಯ ಸರಕಾರವನ್ನು ಕಾಡುತ್ತಿದೆ. ಆದುದರಿಂದಲೇ ಈಗಾಗಲೇ ಬೇರೆ ಬೇರೆ ವಲಯಗಳಲ್ಲಿ ಲಾಕ್‌ಡೌನ್‌ಗಳನ್ನು ಸಡಿಲಿಕೆ ಮಾಡಿದೆ. ಆದರೆ ಒಂದೂವರೆ ತಿಂಗಳ ಲಾಕ್‌ಡೌನ್ ಈಗಾಗಲೇ ಜನರ ಮೇಲೆ ಭೀಕರ ಪರಿಣಾಮಗಳನ್ನುಂಟು ಮಾಡಿ ಆಗಿದೆ. ಅದರಿಂದ ಅವರನ್ನು ಹೇಗೆ ಪಾರು ಮಾಡಬಹುದು ಎನ್ನುವುದು ಜನರನ್ನು ಕೊರೋನಾದಿಂದ ಪಾರು ಮಾಡುವಷ್ಟೇ ಮುಖ್ಯವಾದ ಹೊಣೆಗಾರಿಕೆಯಾಗಿದೆ.

ಇದೀಗ ಮಾಧ್ಯಮಗಳಲ್ಲಿ ಲಾಕ್‌ಡೌನ್, ವಲಸೆ ಕಾರ್ಮಿಕರ ಮೇಲೆ ಬೀರಿರುವ ದುಷ್ಪರಿಣಾಮಗಳು ವರದಿಯಾಗುತ್ತಿವೆ. ಅವು ಬೆಳಕಿಗೆ ಬರಲು, ಕಾರ್ಮಿಕರು ರೈಲು ಹಳಿಗಳಲ ಮೇಲೆ ಹೃದಯವಿದ್ರಾವಕವಾಗಿ ಪ್ರಾಣಕೊಡಬೇಕಾಗಿ ಬಂತು. ಅಲ್ಲಿಯವರೆಗೆ ಮಾಧ್ಯಮಗಳೂ ಇವರ ಸ್ಥಿತಿಗತಿಯ ಬಗ್ಗೆ ಕುರುಡಾಗಿಯೇ ಇದ್ದವು. ಸದ್ಯಕ್ಕೆ ಲಾಕ್‌ಡೌನ್‌ನ ದುಷ್ಪರಿಣಾಮ ನೇರವಾಗಿ ಎರಗಿರುವುದು ಈ ವಲಸೆ ಕಾರ್ಮಿಕರ ಮೇಲೆ. ಇಂದು ಸರಕಾರ ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಸಣ್ಣ ಪುಟ್ಟ ಪರಿಹಾರಗಳ ಮೂಲಕ ‘ತೇಪೆ ಹಚ್ಚುವ’ ಮಾತುಗಳನ್ನಾಡುತ್ತಿದೆೆ. ಅಭಿವೃದ್ಧಿ ಕಾಮಗಾರಿಗಳು ನಿಧಾನಕ್ಕೆ ಚೇತರಿಸಿಕೊಳ್ಳಲಿರುವುದರಿಂದ ಕಾರ್ಮಿಕರು ವಲಸೆ ಹೋಗದೆ ನಗರದಲ್ಲಿರುವುದು ಉತ್ತಮ ಎನ್ನುವುದೂ ಅವುಗಳಲ್ಲಿ ಒಂದು. ಆದರೆ ಸದ್ಯಕ್ಕೆ ಬೀದಿಯಲ್ಲಿರುವ ವಲಸೆ ಕಾರ್ಮಿಕರಷ್ಟೇ ಆತಂಕಗಳನ್ನು ಮನೆಯೊಳಗೆ ಕೂತಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರೂ ಹೊಂದಿದ್ದಾರೆ. ಲಾಕ್‌ಡೌನ್ ಹಿಂದೆಗೆದಾಕ್ಷಣ ತಮ್ಮೆಲ್ಲರ ಬದುಕು ಹಸನಾಗುತ್ತದೆ ಎನ್ನುವಂತಹ ನಿರೀಕ್ಷೆ ಅವರಿಗಿಲ್ಲ. ಬದಲಿಗೆ, ಲಾಕ್‌ಡೌನ್ ಸಡಿಲಗೊಂಡ ಬೆನ್ನಿಗೇ ಈ ಮಧ್ಯಮ, ಕೆಳ ಮಧ್ಯಮ ವರ್ಗಗಳ ಜನರನ್ನು ಮುಕ್ಕಿ ತಿನ್ನಲು ನೂರಾರು ತೋಳಗಳು ಕಾದು ಕುಳಿತಿವೆ. ಜನಸಾಮಾನ್ಯರು ಕೊರೋನ ವೈರಸ್‌ಗಳ ಆತಂಕಕ್ಕಿಂತ, ಈ ತೋಳಗಳು ಯಾವಾಗ ತಮ್ಮ ಮನೆಯ ಬಾಗಿಲು ತಟ್ಟುತ್ತವೋ ಎಂಬ ಭಯದಲ್ಲಿದ್ದಾರೆ. ವಲಸೆ ಕಾರ್ಮಿಕರಷ್ಟೇ ಭೀಕರವಾಗಲಿದೆ ಇವರ ಸ್ಥಿತಿ. ಈಗಾಗಲೇ ಭವಿಷ್ಯದ ಕುರಿತಂತೆ ತೀವ್ರ ಖಿನ್ನತೆಯಲ್ಲಿರುವ ಈ ವರ್ಗ, ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆಯಂತಹ ಸ್ಥಿತಿಗೆ ತಲುಪುವ ಅಪಾಯಗಳು ಕಾಣುತ್ತಿವೆ.

 ಮಧ್ಯಮವರ್ಗದ ಜನರದು ತ್ರಿಶಂಕು ಬದುಕು. ಮೇಲ್ನೋಟಕ್ಕೆ ಅವರು ಎಲ್ಲವೂ ಚೆನ್ನಾಗಿರುವವರಂತೆ ಸಮಾಜದಲ್ಲಿ ಬದುಕುತ್ತಿರುತ್ತಾರೆ. ಆದರೆ ತಮ್ಮಾಳಗಿನ ತೇಪೆಗಳನ್ನು ಅವರು ಸಮಾಜಕ್ಕೆ ಗೊತ್ತಾಗದ ಹಾಗೆ ಬಚ್ಚಿಟ್ಟಿರುತ್ತಾರೆ. ಮನೆ ಚೆನ್ನಾಗಿಯೇ ಇದ್ದರೂ ಅದು ಬಾಡಿಗೆಯದಾಗಿರುತ್ತದೆ. ಮನೆಯಲ್ಲಿ ಫ್ರಿಜ್, ಕಾರುಗಳಿದ್ದರೂ ಪ್ರತಿ ತಿಂಗಳು ಕಷ್ಟಪಟ್ಟು ಇಎಂಐ ಕಟ್ಟುತ್ತಿರುತ್ತಾರೆ. ವಿದ್ಯುತ್ ಬಿಲ್ಲನ್ನು ಅವರು ಜಮಾವಣೆ ಮಾಡುವುದೇ, ಇನ್ನೇನೂ ಲೈನ್‌ಮೆನ್ ವಿದ್ಯುತ್‌ನ್ನು ಕಡಿತಗೊಳಿಸುತ್ತಾನೆ ಎನ್ನುವ ಸಂದರ್ಭದಲ್ಲಿ. ಇನ್ಶೂರೆನ್ಸ್ ಕಂತು ಪಾವತಿ, ಬ್ಯಾಂಕ್‌ಗಳಲ್ಲಿ ಪಡೆದ ಸಾಲದ ಕಂತು...ಹೀಗೆ ಹತ್ತು ಹಲವು ಹೊಂದಾಣಿಕೆಗಳ ಜೊತೆಗೆ ಅವರ ಬದುಕು ಸಾಗುತ್ತಿರುತ್ತದೆ. ಲಾಕ್‌ಡೌನ್ ಘೋಷಣೆಯಾದಾಗ, ದೈನಂದಿನ ಆಹಾರಕ್ಕಿಂತಲೂ ಅವರನ್ನು ಕಂಗಾಲಾಗಿಸಿರುವುದು ಇಂತಹ ಬಾಧ್ಯತೆಗಳು. ಮನೆಯಿಂದ ಹೊರಗೆ ಕಾಲಿಡುವ ಸ್ಥಿತಿಯೇ ಇಲ್ಲ ಎಂದ ಮೇಲೆ ಬಾಡಿಗೆಯನ್ನು ಕಟ್ಟುವುದು ಹೇಗೆ? ದುಡಿಯುತ್ತಿರುವಾಗಲೇ ಕಷ್ಟದಿಂದ ವಿದ್ಯುತ್ ಬಿಲ್ಲನ್ನು ಕಟ್ಟುತ್ತಿದ್ದವರು, ಈಗ ಏಕಾಏಕಿ ಎರಡೆರಡು ತಿಂಗಳ ಬಿಲ್‌ನ್ನು ಹೇಗೆ ಕಟ್ಟಬೇಕು? ತಿಂಗಳ ವೇತನದ ಧೈರ್ಯದಿಂದ ಇಎಂಐ ಕಟ್ಟುತ್ತಿದ್ದವರು, ವೇತನವೇ ಇಲ್ಲದೇ ಇರುವಾಗ ಇಎಂಐ ಕಟ್ಟುವುದು ಹೇಗೆ? ಇವೆಲ್ಲವೂ ಸಾವು ಬದುಕಿನ ಪ್ರಶ್ನೆಯೇ ಎಂದು ನಿರ್ಲಕ್ಷಿಸುವಂತಿಲ್ಲ. ಮಧ್ಯಮ ವರ್ಗ ತನ್ನ ಆತ್ಮಗೌರವ ಬೀದಿಗೆ ಬೀಳುವುದನ್ನು ತಾಳಿಕೊಳ್ಳಲಾರದು. ನಾಳೆ ಕರೆಂಟ್ ಬಿಲ್ ಕಟ್ಟಿಲ್ಲ ಎಂದು ವಿದ್ಯುತ್ ಕಡಿತವಾದರೆ, ಇಎಂಐ ಕಟ್ಟಿಲ್ಲ ಎಂದು ಮನೆಯ ಸೊತ್ತುಗಳನ್ನು ಹೊತ್ತುಕೊಂಡು ಹೋದರೆ, ಬ್ಯಾಂಕ್ ಸಾಲ ಉಳಿಸಿದರು ಎಂದು ಮನೆಯನ್ನೇ ಜಪ್ತಿ ಮಾಡಿದರೆ, ಬಾಡಿಗೆ ಕಟ್ಟಿಲ್ಲ ಎಂದು ಕುಟುಂಬವನ್ನು ಮನೆ ಮಾಲಕ ಹೊರ ಹಾಕಿದರೆ ಆ ಅವಮಾನಗಳನ್ನು ಸಹಿಸಿಕೊಳ್ಳುವಂತಹ ಗಟ್ಟಿ ಮನಸ್ಸು ಮಧ್ಯಮವರ್ಗದ ಜನರಲ್ಲಿಲ್ಲ. ಬ್ಯಾಂಕ್ ಇಎಂಐ, ವಿದ್ಯುತ್ ಬಿಲ್ ಸಹಿತ ವಿವಿಧ ಬಾಧ್ಯತೆಗಳ ಬಗ್ಗೆ ಸರಕಾರ ಈಗಾಗಲೇ ಸ್ಪಷ್ಟನೆ, ಆದೇಶಗಳನ್ನು ನೀಡಿದೆಯಾದರೂ, ಅದು ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ವಿವಿಧ ಸಂಸ್ಥೆಗಳು ಮಧ್ಯಮ ವರ್ಗದ ಬೇಟೆಗೆ ಇಳಿದಿವೆ. ದುರಂತವೆಂದರೆ, ವಿದ್ಯುತ್ ಸರಬರಾಜು ನಿಗಮಗಳೇ ಮುಂಚೂಣಿಯಲ್ಲಿ ನಿಂತು ಜನರನ್ನು ಬೇಟೆಯಾಡುವುದಕ್ಕೆ ಹೊರಟಿರುವುದು. ವಿದ್ಯುತ್ ಬಿಲ್ ಪಾವತಿಯನ್ನು ಮುಂದೂಡಬೇಕು ಎಂದು ನಿಗಮಕ್ಕೆ ಸ್ಪಷ್ಟ ಸೂಚನೆಗಳಿದ್ದರೂ, ಕಳೆದ ತಿಂಗಳೇ ನಿಗಮದಿಂದ ಎಲ್ಲರ ಮೊಬೈಲ್‌ಗಳಿಗೆ ‘ಬಿಲ್ ಪಾವತಿ’ ಮಾಡಿ ಎಂಬ ಸಂದೇಶಗಳನ್ನು ನೀಡಲಾಗಿತ್ತು. ಇದೀಗ ಅಧಿಕೃತವಾಗಿ ಮನೆಬಾಗಿಲಿಗೇ ಬಿಲ್ ಬಂದಿದ್ದು, ಹಲವೆಡೆ ದುಪ್ಪಟ್ಟು ಹಣವನ್ನು ನಮೂದಿಸಲಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಎರಡು ತಿಂಗಳ ಬಿಲ್‌ನ್ನು ಒಟ್ಟಿಗೆ ಕಳುಹಿಸಿರುವುದು ಮಾತ್ರವಲ್ಲ, ಸಾಮಾನ್ಯ ಬಳಕೆಗಿಂತ ಎರಡು ಪಟ್ಟು ಶುಲ್ಕವನ್ನು ವಿಧಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಗೊಂದಲಕಾರಿಯಾದ ತಪ್ಪು ತಪ್ಪು ಬಿಲ್‌ಗಳೂ ಗ್ರಾಹಕರನ್ನು ಆತಂಕಕ್ಕೆ ತಳ್ಳಿವೆೆ. ಇದೇ ಸಂದರ್ಭದಲ್ಲಿ ಕೆಲವು ಬ್ಯಾಂಕ್‌ಗಳು ಸೂಚ್ಯವಾಗಿ ಗ್ರಾಹಕರಿಗೆ ಕಂತುಗಳನ್ನು ಕಟ್ಟಲು ಒತ್ತಡ ಹಾಕುತ್ತಿರುವುದು ಕೇಳಿ ಬರುತ್ತಿದೆ. ಮಧ್ಯಮ ವರ್ಗ ವಿವಿಧ ಪೀಠೋಪಕರಣಗಳನ್ನು ಫೈನಾನ್ಸ್‌ಗಳ ಮೂಲಕ ಕೊಂಡುಕೊಂಡಿರುವುದೇ ಅಧಿಕ. ಅವರೆಲ್ಲ ಇದೀಗ ಗ್ರಾಹಕರಿಗೆ ಕಂತುಗಳನ್ನು ಕಟ್ಟಲು ಒತ್ತಡ, ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಎರಡು ತಿಂಗಳ ಕಂತುಗಳಿಗೆ ಸಂಬಂಧಿಸಿ ದುಪ್ಪಟ್ಟು ಬಡ್ಡಿ ಹಾಕಿ ಗ್ರಾಹಕರನ್ನು ಸುಲಿಯುತ್ತಿದ್ದಾರೆ. ಫೈನಾನ್ಸ್‌ಗಳನ್ನು ಪ್ರತಿನಿಧಿಸುವ ಸಿಬ್ಬಂದಿ, ಕಂತು ಕಟ್ಟದ ಗ್ರಾಹಕರಿಗೆ ತಕ್ಷಣ ಕಟ್ಟಲೇ ಬೇಕು ಎನ್ನುವ ಒತ್ತಡಗಳನ್ನೂ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮನೆ ಬಾಡಿಗೆ ಕಟ್ಟಲಾಗದೆ ಅತಂತ್ರದಲ್ಲಿರುವ ಕುಟುಂಬಗಳ ಸಂಖ್ಯೆಯಂತೂ ಸಹಸ್ರಾರು. ಇವರೆಲ್ಲರ ನೆತ್ತಿಯ ಮೇಲೆ ಬಾಡಿಗೆಯ ಕತ್ತಿ ತೂಗುತ್ತಿದೆ. ಯಾವತ್ತು ಬೇಕಾದರೂ ಅವರು ಬಲಿಯಾಗಬಹುದು. ಇದೇ ಸಂದರ್ಭದಲ್ಲಿ ಶಾಲೆಗಳು ತೆರೆಯ ತೊಡಗಿತೆಂದರೆ ಇನ್ನೊಂದು ಆರ್ಥಿಕ ಸಂಕಷ್ಟ ಅವರ ಮುಂದೆ ತೆರೆದುಕೊಳ್ಳುತ್ತದೆ. ಈ ಎಲ್ಲ ಆರ್ಥಿಕ ಕಾರಣಗಳಿಂದ ಜನರು ಖಿನ್ನತೆ, ಆತ್ಮಹತ್ಯೆಯ ಕಡೆಗೆ ಜಾರುವ ಅಪಾಯಗಳು ಹೆಚ್ಚಿವೆ. ಲಾಕ್‌ಡೌನ್ ಸಡಿಲಿಕೆಯ ಬಳಿಕ ಜನಸಾಮಾನ್ಯರು ಮುಖಾಮುಖಿಯಾಗಲಿರುವ ಬಿಕ್ಕಟ್ಟುಗಳ ಕುರಿತಂತೆ ಸರಕಾರ ತಕ್ಷಣ ಗಮನ ಹರಿಸಬೇಕಾಗಿದೆ. ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಸರಕಾರ ನೀಡಿದ ಭರವಸೆ ಈಡೇರಬೇಕು. ಜನರಿಗೆ ತಕ್ಷಣದ ಆರ್ಥಿಕ ನೆರವುಗಳನ್ನು ವಿವಿಧ ಮೂಲಗಳ ಮೂಲಕ ನೀಡುವುದಕ್ಕೆ ಮುಂದಾಗಬೇಕು. ಬಾಡಿಗೆದಾರರಲ್ಲಿ ಯಾವ ಕಾರಣಕ್ಕೂ ಕಳೆದೆರಡು ತಿಂಗಳ ಬಾಡಿಗೆಗಳನ್ನು ಮಾಲಕರು ವಸೂಲಿ ಮಾಡಬಾರದು ಎಂಬ ಸ್ಪಷ್ಟ ಆದೇಶವನ್ನು ಸರಕಾರ ನೀಡಬೇಕು. ಹಾಗೆಯೇ ಬಾಡಿಗೆ ನೀಡದ ಕುಟುಂಬಗಳನ್ನು ಹೊರ ಹಾಕಿದರೆ, ಮಾಲಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಬೇಕು. ಲಾಕ್‌ಡೌನ್ ಸಡಿಲಿಕೆಯಿಂದ ಜನರು ಬಾಣಲೆಯಿಂದ ಬೆಂಕಿಗೆ ಬೀಳದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ್ದು. ಕೊರೋನದ ಜೊತೆಗೇನೋ ಬದುಕಬಹುದು, ಆದರೆ ಮನುಷ್ಯರು ಪರಸ್ಪರ ಜೊತೆಯಾಗಿ ಬದುಕುವುದರ ಬಗ್ಗೆ ಅನುಮಾನಗಳಿವೆ. ಇದಕ್ಕೆ ಅನುಕೂಲ ಮಾಡಿಕೊಡುವ ಆದೇಶ ನೇರವಾಗಿ ಪ್ರಧಾನಿಯಿಂದಲೇ ಹೊರಬೀಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)