varthabharthi

ವಿಶೇಷ-ವರದಿಗಳು

ಧರಾಶಾಯಿಯಾದ 10,000 ಬಾಳೆ ಗಿಡಗಳು ► 20 ಲಕ್ಷ ರೂ. ಲಾಭ ನಿರೀಕ್ಷಿಸಿದ್ದ ರೈತ ಕಂಗಾಲು

ಮಳೆ-ಬಿರುಗಾಳಿ ಅವಾಂತರ: 6 ಎಕರೆ ಬಾಳೆ ಸಂಪೂರ್ಣ ಹಾನಿ

ವಾರ್ತಾ ಭಾರತಿ : 12 May, 2020
ಬಂದೇನವಾಝ್ ಮ್ಯಾಗೇರಿ

ಗದಗ, ಮೇ 11: ಪ್ರಕೃತಿ ವಿಕೋಪದ ದವಡೆಗೆ ಸಿಲುಕಿದ ಬಾಳೆ ಬಹು ವಿಸ್ತಾರದ ತೋಟವೊಂದು ಸಂಪೂರ್ಣ ನಿರ್ನಾಮವಾಗಿದೆ. ಬಲವಾಗಿ ಬೀಸಿದ ಮಳೆ-ಬಿರುಗಾಳಿಯ ರಭಸಕ್ಕೆ ಬಾಳೆ ಗಿಡಗಳು ಕತ್ತು ಉರುಳಿಸಿಕೊಂಡು ಧರಾಶಾಯಿಯಾಗಿದ್ದು, ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹೊರವಲಯದ ರೈತ ರಾಮಚಂದ್ರಪ್ಪ ಬೆಂತೂರು ಅವರ ತೋಟದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಮಳೆ-ಬಿರುಗಾಳಿಯ ಅವಾಂತರಕ್ಕೆ ನಲುಗಿ ಹೋಗಿವೆ. ಕೊರೋನ ವೈರಸ್ ಹಾವಳಿ ತಡೆಗಟ್ಟಲು ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದ ರೈತರು ಜರ್ಜರಿತಗೊಂಡಿದ್ದರು. ಲಾಕ್‌ಡೌನ್ ಸಡಿಲಿಕೆಯಾಗಿ ಬಾಳೆಯ ವ್ಯವಹಾರಕ್ಕೆ ಅನುಕೂಲ ಆಗುತ್ತಿದ್ದ ಹೊತ್ತಲ್ಲೇ ಗಾಳಿ-ಮಳೆಗೆ ಫಸಲು ತತ್ತರಿಸಿ ಹೋಗಿದ್ದು, ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಾವು, ಶೇಂಗಾ, ದ್ರಾಕ್ಷಿ, ದಾಳಿಂಬೆ, ಪಪ್ಪಾಯಿ, ಬಾಳೆಯನ್ನು ತೋಟಗಾರಿಕೆ ಬೆಳೆಯಾಗಿ ಈ ಭಾಗದಲ್ಲಿ ಬೆಳೆಯಲಾಗುತ್ತಿದೆ. ತೋಟದಲ್ಲಿ ಬೆಳೆದಿದ್ದ ಬೆಳೆಗಳು ಲಾಕ್‌ಡೌನ್ ಹಾಗೂ ಪ್ರಕೃತಿಯ ವಿಕೋಪದಿಂದ ರೈತರನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ.

6 ಎಕರೆ ತೋಟದಲ್ಲಿ 10 ಸಾವಿರಕ್ಕೂ ಅಧಿಕ ಬಾಳೆ ಗಿಡಗಳನ್ನು ಬೆಳೆಯಲಾಗಿತ್ತು. ಕಳೆದ ವರ್ಷ ಜುಲೈನಲ್ಲೇ ಬಾಳೆಯನ್ನು ನಾಟಿ ಮಾಡಲಾಗಿತ್ತು. ಬಾಳೆ ಹುಲುಸಾಗಿ ಬೆಳೆದಿತ್ತು. ಬಾಳೆ ಗಿಡಗಳೆಲ್ಲ ರಸಭರಿತ ಕಾಯಿಗಳಿಂದ ನಳನಳಿಸುತ್ತಿದ್ದವು. ಬಾಳೆಕಾಯಿ ಕಟಾವಿಗೆ ಕೆಲವೇ ವಾರ ಬಾಕಿ ಇತ್ತು. ಬಾಳೆಗೊನೆಯೊಂದು ಸುಮಾರು 40ರಿಂದ 50 ಕೆ.ಜಿ. ತೂಕ ಬರುತ್ತಿತ್ತು. ಆದರೆ ಫಸಲು ಕಟಾವಿನ ಹಂತದಲ್ಲಿದ್ದಾಗಲೇ ಪ್ರಕೃತಿಯ ಅವಾಂತರಕ್ಕೆ ಬೆಳೆ ಸಂಪೂರ್ಣ ಹಾಳಾಗಿದ್ದು, ಯಾವುದೂ ತೋಚುತ್ತಿಲ್ಲ ಎಂದು ರೈತ ರಾಮಚಂದ್ರಪ್ಪ ಬೆಂತೂರು ಬೇಸರ ವ್ಯಕ್ತಪಡಿಸಿದರು.

ಸಸಿ ನೆಡುವ ಕಾರ್ಯದಿಂದ ಹಿಡಿದು, ಮಡಿ ಹಾಕುವುದು, ಔಷಧ ಸಿಂಪಡಣೆ, ಗೊಬ್ಬರ ಕಟ್ಟುವುದು, ಕೂಲಿ ಕಾರ್ಮಿಕರಿಗೆ ವೇತನ ಸಹಿತ ಇಲ್ಲಿವರೆಗೆ ಸುಮಾರು 10ರಿಂದ 12 ಲಕ್ಷ ರೂ.ವರೆಗೆ ಖರ್ಚು ಮಾಡಿದ್ದೇವೆ. ಹಣವೆಲ್ಲ ಖಾಲಿಯಾಗಿ ಕೈ ಬರಿದಾಗಿದೆ. ಕುಟುಂಬದ ಸದಸ್ಯರೂ ಕಷ್ಟಪಟ್ಟು ಬಾಳೆ ಕೃಷಿ ಮಾಡಿದ್ದೇವು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಟನ್‌ಗೆ 9,000 ರೂ. ಬೆಲೆ ಇದೆ. ಸುಮಾರು 20 ಲಕ್ಷ ರೂ.ನ್ನು ನಿರೀಕ್ಷೆ ಮಾಡಿದ್ದೆವು. ನಮ್ಮ ನಿರೀಕ್ಷೆಯೆಲ್ಲ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ ಎನ್ನುತ್ತಾರೆ ಅವರು.

ಬಾಳೆ ಗೊನೆಗಳು ಹೊಳಪಿನಿಂದ ಕೂಡಿದ್ದವು. ಇನ್ನು 15 ದಿನಗಳಲ್ಲಿ ಕಟಾವು ಕಾರ್ಯ ಆರಂಭವಾಗುತ್ತಿತ್ತು. ರಾಕ್ಷಸಾವತಾರದಲ್ಲಿ ಬೀಸಿದ ಬಿರುಗಾಳಿಯನ್ನು ಬಾಳೆಗಿಡಗಳು ತಡೆದುಕೊಳ್ಳಲಿಲ್ಲ. 10 ಸಾವಿರ ಗಿಡಗಳಲ್ಲಿ ಒಂದು ಕೂಡ ನಿಲ್ಲಲಿಲ್ಲ. ಸಂಪೂರ್ಣ ಹೊಲವೇ ನೆಲಕಚ್ಚಿ ದೆ. ಅಕ್ಷರಶಃ ಗಿಡಗಳು ಮಲಗಿವೆ. ಜತೆಗೆ ಹೊಲದಲ್ಲಿನ ಮನೆಯ ತಗಡುಗಳು ಕೂಡ ಹಾರಿ ಹೋಗಿವೆ. ಸರಕಾರ ಬಡವರ ಕಷ್ಟಕ್ಕೆ ಧಾವಿಸಬೇಕು ಎನ್ನುತ್ತಾರೆ ರಾಮಚಂದ್ರಪ್ಪ ಬೆಂತೂರು ಸಹೋದರ ಟೀಕಪ್ಪ ಸೋಮಪ್ಪ ಬೆಂತೂರು.

ಕಷ್ಟಪಟ್ಟು ಬಾಳೆ ಬೆಳೆದ ರೈತನ ಶ್ರಮ ವ್ಯರ್ಥವಾಗಿದೆ. ರೈತರ ನೋವಿಗೆ ಸ್ಪಂದಿಸಿ ಸರಕಾರದಿಂದ ಸಹಾಯಧನ ಕೊಡಿಸಲು ಮುಂದಾಗುವೆ. ರೈತನ ಸಂಕಷ್ಟವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗುವುದು. ಜಿಪಂ ಸಭೆಯಲ್ಲಿ ಚರ್ಚಿಸಿ ಪರಿಹಾರ ನೀಡಲು ಪ್ರಯತ್ನಿಸುತ್ತೇವೆ.

ಸಿದ್ದು ಪಾಟೀಲ್, ಗದಗ ಜಿಪಂ ಅಧ್ಯಕ್ಷ

ಕೈಯಲ್ಲಿದ್ದ ಹಣವನ್ನು ಖರ್ಚು ಮಾಡಿ ಬಾಳೆ ಬೆಳೆ ಬೆಳೆದಿದ್ದೇವೆ. ಫಸಲು ಕೈಗೆ ಬರುವ ಹೊತ್ತಿನಲ್ಲಿ ಭಾರೀ ಬಿರುಗಾಳಿಗೆ ಬಾಳೆ ಗಿಡಗಳು ಗೊನೆ ಸಮೇತ ನೆಲಕ್ಕೆ ಬಿದ್ದಿವೆ. ಇದರಿಂದ ಅಪಾರ ಹಾನಿಯಾಗಿದೆ. ಬೆಳೆ ಹಾನಿಯಾದ ರೈತರಿಗೆ ಸರಕಾರ ಶೀಘ್ರವೇ ಪರಿಹಾರಧನ ಬಿಡುಗಡೆ ಮಾಡಬೇಕು.

ರಾಮಚಂದ್ರಪ್ಪ ಬೆಂತೂರು, ಬಾಳೆ ಬೆಳೆದ ರೈ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)