varthabharthi

ನಿಮ್ಮ ಅಂಕಣ

ಕೊರೋನ ವೈರಸ್ ಭೀತಿ ಬೇಡ; ಜಾಗ್ರತೆ ಇರಲಿ

ವಾರ್ತಾ ಭಾರತಿ : 12 May, 2020
ಡಾ.ವಸುಂಧರಾ ಭೂಪತಿ

ಈಗ ಎಲ್ಲೆಡೆ ಕೊರೋನ ವೈರಸ್‌ನದೇ ಸುದ್ದಿ. ಚೆನ್ನೈನಲ್ಲಿ ವೈದ್ಯರೊಬ್ಬರು ಕೋವಿಡ್-19 ಸೋಂಕಿಗೀಡಾಗಿ ತೀರಿಹೋದಾಗ ಆ್ಯಂಬುಲೆನ್ಸ್‌ನಲ್ಲಿ ಅಂತ್ಯಕ್ರಿಯೆಗಾಗಿ ಕರೆದೊಯ್ಯುವಾಗ ಜನ ಕಲ್ಲೆಸೆದು ಗಲಭೆಯಾದ ನಂತರ ಆ ವೈದ್ಯರ ಪತ್ನಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕ್ವಾರಂಟೈನ್ ಆದವರ ಮನೆಯವರನ್ನು ಅಕ್ಕಪಕ್ಕದವರು ನಡೆಸಿಕೊಳ್ಳುವ ರೀತಿ, ಆರೋಗ್ಯ ಕಾರ್ಯಕರ್ತರು ಮನೆಗೆ ಭೇಟಿ ನೀಡಿದರೆ ಭಯಭೀತರಾಗುವ ಜನ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಮತ್ತು ಮಂಗಳೂರಿನಲ್ಲಿ ಸೋಂಕಿನಿಂದ ಸತ್ತ ಮಹಿಳೆಯ ಅಂತ್ಯಕ್ರಿಯೆಗೆ ತಮ್ಮ ಕ್ಷೇತ್ರದ ಸ್ಮಶಾನದಲ್ಲಿ ಅವಕಾಶ ನೀಡದ ಶಾಸಕರ ನಡವಳಿಕೆಗಳನ್ನು ಗಮನಿಸಿದಾಗ ನಿಜಕ್ಕೂ ಸಮಾಜದಲ್ಲಿ ಏನಾಗುತ್ತಿದೆ ಎಂದು ಕಳವಳವಾಗುತ್ತದೆ. ಮನುಷ್ಯ ತನ್ನೊಳಗಿನ ಮಾನವೀಯತೆಯನ್ನು ಮರೆಯುತ್ತಿದ್ದಾನೆಯೇ? ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಮತ್ತು ಕುವೆಂಪುರವರ ಆದರ್ಶಗಳು ನಮ್ಮನ್ನು ಮನುಷ್ಯತ್ವ ಉಳ್ಳವರನ್ನಾಗಿ ಮಾಡುತ್ತ ವಾದ್ದರಿಂದ ಮತ್ತೆ ಮತ್ತೆ ಅವರೆಡೆಗೆ ದೃಷ್ಟಿ ಹರಿಸಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದೊಡೆಂತಯ್ಯ?

ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?

ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು

ಶಿವಶರಣೆ ಅಕ್ಕಮಹಾದೇವಿಯ ಈ ಸುಪ್ರಸಿದ್ಧ ವಚನ ಹಿಂದೆಂದಿಗಿಂತಲೂ ಇಂದಿಗೆ ಬಹಳ ಸೂಕ್ತವಾಗಿದೆ. ಇಂದು ಕೊರೋನವೈರಸ್ ಮತ್ತು ಅದು ಉಂಟುಮಾಡುವ ಕೋವಿಡ್-19 ಮಾರಣಾಂತಿಕ ರೋಗ ಜಗತ್ತನ್ನೇ ನಡುಗಿಸುತ್ತಿದೆ. ಈ ರಣಭೀಕರ ವೈರಾಣು ಸೋಂಕಿನ ಭೀತಿಯ ನಡುವೆಯೇ ನಾವು ಬದುಕು ಸಾಗಿಸುತ್ತಿದ್ದೇವೆ. ಹೆಚ್ಚಾಗಿ ಹೊರಗೆ ಹೋಗದೆ ಮನೆಯಲ್ಲಿದ್ದೇ ನಮ್ಮನ್ನು ನಾವು ವೈರಾಣುವಿನ ಸೋಂಕಿನಿಂದ ರಕ್ಷಿಸಿಕೊಳ್ಳಬೇಕಾಗಿದೆ. ಎಲ್ಲೆಡೆ ಭಯ, ಆತಂಕ ತುಂಬಿರುವ ಈ ಸಂದರ್ಭದಲ್ಲಿ ನಾವು ಮತ್ತು ಪ್ರತಿಯೊಬ್ಬರೂ ಅದನ್ನು ಎದುರಿಸಲು ಬೇಕಾದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕೊರೋನ ವೈರಸ್‌ನಿಂದ ರೋಗ ಬಂದರೆ ಸಾವೇ ಗತಿ ಎಂದು ಹೆದರಿಕೊಳ್ಳುವವರು ಅಧಿಕ. ಆದರೆ ಈ ವೈರಾಣುವಿನ ಸೋಂಕನ್ನು ಬಾರದಂತೆ ತಡೆಗಟ್ಟುವುದು ಬಹಳ ಮುಖ್ಯ. ಮನದಲ್ಲಿ ಕೋಪವ ತಾಳದೇ ಸಮಾಧಾನಿಯಾಗಿ ಬಂದದ್ದನ್ನು ಜಾಗ್ರತೆಯಾಗಿ ಎದುರಿಸಬೇಕು. ಇಂದು ನಮ್ಮ ಕೈಯಿಂದ ನಮ್ಮ ಮುಖ, ಮೂಗು, ಕಿವಿ, ಕಣ್ಣನ್ನು ಮುಟ್ಟಿಕೊಳ್ಳುವುದೂ ತಪ್ಪೇ. ಏಕೆಂದರೆ ಕೊರೋನ ವೈರಾಣು ಹೇಗಾದರೂ ನಮಗೆ ತಗಲಬಹುದು. ಆದ್ದರಿಂದ ನಮ್ಮ ಕೈಯ್ಯನ್ನು ನಾವೇ ನಂಬದಿರುವಂತಹ ಕಾಲದಲ್ಲಿ ನಾವಿದ್ದೇವೆ. ಕಚೇರಿಗೂ ಹೋಗುವಂತಿಲ್ಲ. ಹೊರಗೆ ಹೋಗಿ ಯಾವುದೇ ಕೆಲಸ ಮಾಡುವಂತಿಲ್ಲ. ಮನೆಯಲ್ಲಿಯೇ ಇದ್ದರೆ ಕ್ಷೇಮ. ದೈನಿಕ ಬದುಕಿಗೆ ಅಗತ್ಯ ಸಾಮಗ್ರಿಗಳನ್ನು ತರಲು ಹೊರಗೆ ಸುರಕ್ಷತೆಗಾಗಿ ಮಾಸ್ಕ್ ಧರಿಸಿಯೇ ಹೋಗಬೇಕು. ಕನಿಷ್ಠ ಮೂರು ಅಡಿಗಳ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಉತ್ತಮ ಪೋಷಕಾಂಶಭರಿತ ಆಹಾರ, ವ್ಯಾಯಾಮ, ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ, ಮಾನಸಿಕ ಒತ್ತಡ ತಗ್ಗಿಸಿಕೊಳ್ಳಲು ಮನೆಯಲ್ಲಿ ಎಲ್ಲರೊಂದಿಗೆ ಒಟ್ಟಿಗೆ ಚೆಸ್, ಕೇರಂ ಮುಂತಾದ ಆಟಗಳನ್ನು ಆಡುವುದು, ಸಿನೆಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು ಮತ್ತು ಎಲ್ಲರೂ ಸೇರಿ ಅಡುಗೆ-ಮನೆಕೆಲಸ ಮಾಡುವುದು ಒಳ್ಳೆಯದು. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಹಾರದಲ್ಲಿ ಅರಿಷಿಣ, ಶುಂಠಿ, ಮೆಣಸು ಮತ್ತು ಜ್ಯೇಷ್ಠಮಧುಗಳನ್ನು ಬಳಸಬೇಕು.

ಕೊರೋನ ವೈರಾಣು ಸೋಂಕು ತಗಲಿದೆ ಎಂದು ತಿಳಿದ ನಂತರ ಅಂದರೆ ಪಾಸಿಟಿವ್ ಎಂದು ಪರೀಕ್ಷೆಯ ವರದಿ ಗೊತ್ತಾದ ಕೂಡಲೇ ಜನರು ಎಲ್ಲಿಗೆ ಹೋಗಬೇಕು, ಆಸ್ಪತ್ರೆಯಲ್ಲಿ ಯಾವ ರೀತಿ ಕೊರೋನಸೋಂಕಿಗೆ ಚಿಕಿತ್ಸೆ ನೀಡುವ ತಂಡ ಸೋಂಕಿತರನ್ನು ಎದುರುಗೊಳ್ಳುತ್ತದೆ ಮತ್ತು ಅಲ್ಲಿನ ವ್ಯವಸ್ಥೆ ಹೇಗಿರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣವೆಂದು ಬೌರಿಂಗ್ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಹಗಲಿರುಳು ಕೋವಿಡ್-19 ರೋಗಿಗಳ ಸೇವೆ ಮಾಡುತ್ತಿರುವ ಡಾ. ಗುರುಪ್ರಸಾದ್ ಅವರಿಗೆ ಕರೆ ಮಾಡಿದೆ. ಅವರು ತಿಳಿಸಿದ ಸಂಪೂರ್ಣ ವಿವರವನ್ನು ತಮ್ಮಿಡನೆ ಹಂಚಿಕೊಳ್ಳುತ್ತಿದ್ದೇನೆ. ಕೊರೋನ ವೈರಾಣು ಸೋಂಕು ಖಚಿತವಾದ ನಂತರ ಸಾಮಾಜಿಕವಾಗಿ ಎಲ್ಲರಿಂದಲೂ ದೂರವಿರಬೇಕು ಮತ್ತು ಏನನ್ನೂ ಮೊದಲಿನಂತೆ ಮುಟ್ಟುವಂತಿಲ್ಲ ಎಂದು ತಿಳಿದ ತಕ್ಷಣ ಜನರಿಗೆ ಗಾಬರಿಯಾಗುತ್ತದೆ ಮತ್ತು ಇನ್ನಿಲ್ಲದ ಆತಂಕ ಹುಟ್ಟುತ್ತದೆ. ಬೆಂಗಳೂರಿನಲ್ಲಿ ನಿಮ್ಹಾನ್ಸ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಮತ್ತು ಆನಂದ್ ಲ್ಯಾಬ್‌ಗಳಲ್ಲಿ ಈ ಸೋಂಕಿನ ಪರೀಕ್ಷೆ ಮಾಡಲಾಗುತ್ತದೆ. ಸೋಂಕಿತರ/ರೋಗಿಗಳ ಗಂಟಲು ದ್ರವದಪರೀಕ್ಷೆ ವರದಿಯು ಅರು ಗಂಟೆಗಳಲ್ಲಿ ದೊರೆಯುತ್ತದೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿ.ವಿ.ರಾಮನ್ ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗಳು ಬೆಂಗಳೂರಿನಲ್ಲಿ ವಿಶೇಷವಾಗಿ ಕೋವಿಡ್-19 ರೋಗಕ್ಕೆ ಮೀಸಲಾಗಿರುವ ಆಸ್ಪತ್ರೆಗಳಾಗಿವೆ. ಇಲ್ಲಿ 24 ಗಂಟೆ ಸೆಕ್ಯೂರಿಟಿ ಗಾರ್ಡ್ ನಿಂದ ಹಿಡಿದು ವೈದ್ಯಾಧಿಕಾರಿಗಳವರೆಗೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಮೈಸೂರಿನಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೊರೋನ ಸೋಂಕು ಪತ್ತೆ ವಿಭಾಗಗಳಿವೆ. ಇನ್ನು ಹಾಸನದಲ್ಲಿರುವ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಶಿವಮೊಗ್ಗದಲ್ಲಿರುವ ಶಿವಮೊಗ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗಳಲ್ಲಿ ಕೊರೋನವೈರಸ್ ಸೋಂಕು ಪತ್ತೆ ಮಾಡಲಾಗುತ್ತದೆ. ಹೀಗೆಯೇ ರಾಜ್ಯದ ವಿವಿಧೆಡೆ ಇಂತಹ ಸೌಲಭ್ಯ ಇದೆ.

ಕೊರೋನ ವೈರಾಣು ರೋಗಿಗಳಿಗೆ ಚಿಕಿತ್ಸೆ ನೀಡುವ ತಂಡದಲ್ಲಿರುವ ಡಾಕ್ಟರುಗಳು, ನರ್ಸ್‌ಗಳು, ವಾರ್ಡ್ ಬಾಯ್‌ಗಳು, ಸಿಸ್ಟರ್‌ಗಳು ಹೀಗೆ ಪ್ರತಿಯೊಬ್ಬರಿಗೂ ವೈಯಕ್ತಿಕ ಸುರಕ್ಷಿತ ಸಾಧನಗಳನ್ನು (ಪಿಪಿಇ) ಹಾಕಿಕೊಳ್ಳುವುದು, ಬಳಸುವುದರ ಬಗ್ಗೆ ಮೊದಲೇ ತರಬೇತಿ ನೀಡಲಾಗಿರುತ್ತದೆ. ಪಿಪಿಇ ಹಾಕಿಕೊಳ್ಳಲು ಕನಿಷ್ಠ 15 ನಿಮಿಷಗಳು ಬೇಕಾಗುತ್ತವೆ. ಅದನ್ನು ಸುರಕ್ಷಿತ ವಲಯದಲ್ಲಿಯೇ ತೆಗೆಯಬೇಕು. ರೋಗಿಗಳಿಗೆ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಬಳಸಲು ಅವಕಾಶ ನೀಡಲಾಗುತ್ತದೆ. ರೋಗಿಗಳಿಗೆ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಮೊಬೈಲ್ ಒಬ್ಬ ಒಳ್ಳೆಯ ಸ್ನೇಹಿತ. ರೋಗಿಗಳ ಮನೆಯವರಿಗೂ ಆಸ್ಪತ್ರೆಗೆ ಪ್ರವೇಶ ಇಲ್ಲದೇ ಇರುವುದರಿಂದ ಮೊಬೈಲ್ ಫೋನಿನ ಮೂಲಕವೇ ಅವರು ತಮ್ಮ ಕುಟುಂಬದ ಸದಸ್ಯರೊಡನೆ ಮಾತನಾಡಬಹುದು ಮತ್ತು ಸಿನೆಮಾ ನೋಡಬಹುದು. ವೀಡಿಯೊ ಕಾಲ್ ಕೂಡ ಮಾಡಬಹುದು. ಕೆಲವು ರೋಗಿಗಳು ಕೋವಿಡ್-19ರ ಸುದ್ದಿಗಳನ್ನು ನೋಡಿ ಭಯಭೀತರಾಗುವುದೂ ಉಂಟು. ಆದ್ದರಿಂದ ರೋಗಿಗಳಿಗೆ ದೈಹಿಕ ಚಿಕಿತ್ಸೆಯ ಜೊತೆಗೆ ಮಾನಸಿಕವಾಗಿ ಅವರನ್ನು ಈ ಪರಿಸ್ಥಿತಿಗೆ ಒಗ್ಗಿಕೊಳ್ಳುವಂತೆ ಧೈರ್ಯ ನೀಡಬೇಕಾಗುತ್ತದೆ.

ಆಸ್ಪತ್ರೆಯಲ್ಲಿ ರೋಗಿಯಿಂದ ಹಿಡಿದು ಡಾಕ್ಟರ್‌ವರೆಗೂ ಎಲ್ಲರಿಗೂ ಒಂದೇ ರೀತಿಯ ಊಟ ನೀಡಲಾಗುತ್ತದೆ. ಕೋವಿಡ್-19 ಆಸ್ಪತ್ರೆಗಳ ಪರಿಸ್ಥಿತಿ ರೋಗಿಗೂ ಹೊಸದು. ವೈದ್ಯರಿಗೂ ಹೊಸದು. ವೈರಾಣು ಹರಡದಂತೆ ಸುರಕ್ಷಿತವಾಗಿ ಶೌಚಾಲಯವನ್ನು ಉಪಯೋಗಿಸುವುದನ್ನೂ ಹೇಳಿಕೊಡಲಾಗುತ್ತದೆ. ಶೌಚಾಲಯವನ್ನು ಸರಿಯಾಗಿ ಮತ್ತು ಸುರಕ್ಷಿತವಾಗಿ ಬಳಸದೇ ಇದ್ದರೆ ವೈರಾಣು ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಆಸ್ಪತ್ರೆಯಲ್ಲಿಯೇ ಹರಡಬಹುದು! ಅಲ್ಲದೆ ಕೈ ತೊಳೆದುಕೊಂಡಾಗ ಅಲ್ಲಿ ನಲ್ಲಿಯನ್ನೂ ಸ್ವಚ್ಛ ಮಾಡಬೇಕು. ಆಸ್ಪತ್ರೆಯಲ್ಲಿ ರೋಗಿಗಳ ಮಧ್ಯೆ ಕನಿಷ್ಠ ಆರು ಅಡಿಗಳ ಅಂತರವಿರಬೇಕು (ಸುರಕ್ಷಿತ ಅಂತರ). ಅಲ್ಲಿ ರೋಗಿಗಳೂ ಮುಖಗವಸು (ಫೇಸ್ ಮಾಸ್ಕ್) ಹಾಕಿಕೊಳ್ಳಬೇಕು. ರೋಗಿಗಳಿಗೆ ಕಾಣಿಸಿಕೊಳ್ಳುವ ಲಕ್ಷಣಗಳಿಗೆ ಅನುಸಾರವಾಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಏಕೆಂದರೆ ಸದ್ಯಕ್ಕೆ ಈ ರೋಗವನ್ನು ವಾಸಿಮಾಡುವ ನಿಖರ ಲಸಿಕೆ ಇಲ್ಲ. ಇಂತಹ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನಗಳು ಸಾಗುತ್ತಿವೆ.

ಆಸ್ಪತ್ರೆಯಲ್ಲಿಯೇ ಇರುವ ರೋಗಿಗಳಿಗೆ ದಿನವೂ ವ್ಯಾಯಾಮ, ದೀರ್ಘ ಉಸಿರಾಟ ಮತ್ತು ಅತಂಕ ಪಡದೆ ಆರಾಮವಾಗಿರುವುದು ಹೇಗೆ ಎಂಬುದನ್ನು ಹೇಳಿಕೊಡಲಾಗುತ್ತದೆ. ವೈದ್ಯರು ಆಗಾಗ ಬಂದು ಅವರ ರಕ್ತ ಮತ್ತು ರಕ್ತದ ಒತ್ತಡ (ಬಿಪಿ) ಪರೀಕ್ಷೆಗಳನ್ನು ಮಾಡುತ್ತಾರೆ. ಇದಲ್ಲದೆ ರೋಗಿಗಳು ತಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡುಬಂದರೆ ಅದನ್ನು ವೈದ್ಯರಿಗೆ ತಿಳಿಸಬೇಕು. ಆಗ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ನೀಡಲು ಕಣ್ಣಿನ, ಮೂಗು ಗಂಟಲಿನ, ಹೃದಯದ, ಮೂಳೆಯ, ರೇಡಿಯಾಲಜಿಯ, ಪ್ರಯೋಗಾಲಯದ ಸಿಬ್ಬಂದಿ ಸೇರಿದಂತೆ ವಿವಿಧ ವಿಶೇಷ ಪರಿಣತಿಯ ವೈದ್ಯರು ಸದಾ ಸನ್ನದ್ಧರಾಗಿರುತ್ತಾರೆ. ವೈದ್ಯಕೀಯ ಸಿಬ್ಬಂದಿ ಪಾಳಿಯ ಆಧಾರದಲ್ಲಿ ದಿನದ 24 ಗಂಟೆಗಳ ಕಾಲ ತಂಡಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅನೇಕರು ಮನೆಗೆ ಹೋಗುವುದಿಲ್ಲ. ಏಕೆಂದರೆ ಅವರಿಂದ ಮನೆಯ ಸದಸ್ಯರಿಗೆ ಸೋಂಕು ತಗಲಬಹುದು. ಅವರನ್ನು ಪ್ರತ್ಯೇಕವಾಗಿ ಹೋಟೆಲ್ ರೂಮುಗಳಲ್ಲಿ ಉಳಿಸಲಾಗಿದೆ. ಒಂದು ತಂಡದ ಸಿಬ್ಬಂದಿ ಒಂದು ವಾರ ಕೆಲಸ ಮಾಡಿದ ನಂತರ ಅವರು ಎರಡು ವಾರಗಳ ಕಾಲ ಹೋಟೆಲಿನಲ್ಲಿ ಪ್ರತ್ಯೇಕವಾಗಿ ಇರಬೇಕು. ಹೀಗೆ ಆವರ್ತನ (ರೊಟೇಷನ್) ಆಧಾರದ ಮೇಲೆ ಇಡೀ ಆಸ್ಪತ್ರೆಯ ಸಿಬ್ಬಂದಿಯು ಕಾರ್ಯ ನಿರ್ವಹಿಸುತ್ತಾರೆ. ಇದು ಸೆಕ್ಯೂರಿಟಿ ಗಾರ್ಡ್‌ಗಳಿಗೂ ಅನ್ವಯವಾಗುವ ನಿಯಮ.

ಗರ್ಭಿಣಿ /ಬಾಣಂತಿ ಕೊರೋನ ಸೋಂಕಿಗೆ ತುತ್ತಾದಲ್ಲಿ ಆಕೆಯ ಜೊತೆಗೆ ಮತ್ತೊಬ್ಬರು ಇರಲು ಅವಕಾಶ ಮಾಡಿಕೊಡಲಾಗುತ್ತದೆ. ಮಗುವನ್ನು ಹಾಲೂಡಿಸುವಾಗ ಮಾತ್ರ ತಾಯಿ ಬಳಿ ಕರೆದೊಯ್ಯಲಾಗುತ್ತದೆ. ತಾಯಿಯ ಎದೆಹಾಲು ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಡಾ. ಗುರುಪ್ರಸಾದ್ ಹೇಳುವಂತೆ ಬೌರಿಂಗ್ ಆಸ್ಪತ್ರೆಯಲ್ಲಿ 220 ಹಾಸಿಗೆಗಳಿವೆ. ಸದ್ಯ ಅಲ್ಲಿ 25 ರೋಗಿಗಳಿದ್ದಾರೆ. ನಮ್ಮದು ಟೀಮ್ ವರ್ಕ್. ಪ್ರತಿದಿನ ರೋಗಿಗಳಿಗೆ ಬೆಳಗ್ಗೆ ಮತ್ತು ಸಂಜೆ ಫೋನ್ ಮಾಡಿ ಮಾತನಾಡಿಸಿ ಅವರ ಮನಸ್ಸಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಎರಡು ಬಾರಿ ವೈದ್ಯರು ಅವರನ್ನು ಭೇಟಿ ಮಾಡುತ್ತಾರೆ. ಎಲ್ಲರ ಸಹಕಾರದಿಂದ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧೋಪಚಾರ ನೀಡಲಾಗುತ್ತದೆ. ರೋಗಿಗಳೊಡನೆ ನೇರವಾಗಿ ತೊಡಗಿಕೊಂಡಿರುವ ವೈದ್ಯಕೀಯ ಸಿಬ್ಬಂದಿ ಮನೆಗೆ ಹೋಗುವುದೇ ಇಲ್ಲ. ಪ್ರತ್ಯೇಕವಾಗಿಯೇ ಇರುತ್ತಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಪಿಪಿಇ, ಎನ್95 ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ. ಎನ್ 95 ಮಾಸ್ಕ್ ಮಾಮೂಲಿ ಮಾಸ್ಕಲ್ಲ. ಅದರಲ್ಲಿ ಅವರು ಉಸಿರಾಡಿದ ಬಿಸಿಗಾಳಿಯೇ ತುಂಬಿರುತ್ತದೆ. ಮೊದಲ ಬಾರಿಗೆ ಪಿಪಿಇ ಧರಿಸಿದಾಗ ಕೆಲವರಿಗೆ ತಲೆನೋವು ಮತ್ತು ಗೊಂದಲ ಕಾಡಿದ್ದುಂಟು. ಆದರೆ ಕ್ರಮೇಣ ಇದೆಲ್ಲಾ ಅಭ್ಯಾಸವಾಗುತ್ತದೆ.

ಪ್ಲಾಸ್ಮಾ ಚಿಕಿತ್ಸೆ
ಈಗಾಗಲೇ ಕೊರೋನವೈರಾಣುರೋಗಕ್ಕೆ ಪಾಸಿಟಿವ್ ವರದಿ ಬಂದು ಅದರಿಂದ ಚೇತರಿಸಿಕೊಂಡವರ ರಕ್ತವನ್ನು ತೆಗೆದುಕೊಂಡು ಇಬ್ಬರು, ಮೂವರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಬಹುದಾಗಿದೆ. ಕೋವಿಡ್-19 ರೋಗದಿಂದ ಗುಣಮುಖರಾದ ವ್ಯಕ್ತಿಯ ಮತ್ತು ಅವರ ಮನೆಯವರ ಒಪ್ಪಿಗೆ ಬೇಕು.

ಪಾಸಿಟಿವ್ ರೋಗಿಗಳು ನೆಗೆಟಿವ್ ಆದಾಗ ಸಾಮಾನ್ಯವಾಗಿ ಕೊರೋನ ಸೋಂಕಿನ ಲಕ್ಷಣಗಳು ಕಂಡುಬಂದ ರೋಗಿಗಳ ಗಂಟಲು ದ್ರವದ ಪರೀಕ್ಷೆಯನ್ನು ಎರಡು ಬಾರಿ ಮಾಡಿದ ಮೇಲೆ 48 ಗಂಟೆಗಳಲ್ಲಿ ವರದಿಯು ನೆಗೆಟಿವ್ ಎಂದು ಬಂದರೆ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಮನೆಗೆ ಕಳುಹಿಸಲಾಗುತ್ತದೆ. ಅವರು ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿ ಇರಬೇಕಾಗುತ್ತೆ (ಕ್ವಾರಂಟೈನ್). ಏಕೆಂದರೆ ಅವರಿಗೆ ರೋಗದ ಲಕ್ಷಣಗಳು ಮರುಕಳಿಸುವ ಸಂಭವ ಇರಬಹುದೆನ್ನುವ ಅನುಮಾನ ಇದೆ. ರೋಗಿಗಳ ಸಾವು ಸಂಭವಿಸಿದಾಗ ಅವರ ಕುಟುಂಬದವರಿಗೆ ಸಾವಿನ ವಿಷಯ ತಿಳಿಸಲಾಗುತ್ತದೆ. ಕುಟುಂಬದವರಿಗೆ ದೂರ ನಿಂತೇ ರೋಗಿಯ ಮುಖವನ್ನು ತೋರಿಸಲಾಗುತ್ತದೆ. ಶವವನ್ನು ಮುಟ್ಟಲು ಅಥವಾ ಅಪ್ಪಿಕೊಳ್ಳಲು ಅವಕಾಶವಿರುವುದಿಲ್ಲ. ಕೇವಲ ಐದರಿಂದ ಹತ್ತು ಜನ ಹತ್ತಿರದ ಸಂಬಂಧಿಗಳಿಗೆ ರೋಗಿಯನ್ನು ಕಡೆಯ ಬಾರಿಗೆ ನೋಡಲು ಬಿಡಲಾಗುತ್ತದೆ. ನಂತರ ಅವರ ಸಂಪ್ರದಾಯದ ಪ್ರಕಾರ ದೇಹವನ್ನು ಸುಡಲಾಗುತ್ತದೆ ಅಥವಾ ಹೂಳಲಾಗುತ್ತದೆ.

ಎಲ್ಲವನ್ನೂ ಆಸ್ಪತ್ರೆಯ ಕಡೆಯಿಂದಲೇ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ನಿಯಮಾವಳಿಗಳಿಗೆ ಅನುಗುಣವಾಗಿಯೇ ಮಾಡಲಾಗುತ್ತದೆ. ಒಟ್ಟಾರೆಯಾಗಿ ಹೇಳಬೇಕಾದರೆ ಕೊರೋನವೈರಸ್ ಉಂಟುಮಾಡಿರುವ ಭೀತಿಗಿಂತ ಜನರಲ್ಲಿರುವ ಭಯ ಮತ್ತು ಆತಂಕಗಳದ್ದೇ ಇಂದು ಮೇಲಾಟವಾಗಿದೆ. ಈ ವೈರಸ್‌ನ ತೊಂದರೆ ಈಗಾಗಲೇ ಬೇರೆ ಬೇರೆ ರೋಗಗಳಿರುವರಿಗೆ, ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಅಧಿಕ. ವೈರಸ್ಸುಗಳ ಕಾಟ ಮನುಕುಲಕ್ಕೆ ಹೊಸದೇನು ಅಲ್ಲ. ಹಿಂದೆಯೂ ಅನೇಕ ವೈರಸ್‌ಗಳು ಕಾಣಿಸಿಕೊಂಡು ಅನೇಕ ಜನರನ್ನು ಬಲಿ ತೆಗೆದುಕೊಂಡಿವೆ. ನಂತರ ಆ ವೈರಸ್‌ಗಳುಂಟುಮಾಡುವ ರೋಗಗಳನ್ನು ವಾಸಿ ಮಾಡುವ ಲಸಿಕೆ ಮತ್ತು ಚಿಕಿತ್ಸೆಯನ್ನು ಕಂಡುಹಿಡಿಯಲಾಯಿತು. ಕೊರೋನ ವೈರಸನ್ನು ನಾಶಮಾಡುವ ಲಸಿಕೆಯನ್ನು ಕಂಡುಹಿಡಿಯುವ ಎಲ್ಲಾ ಪ್ರಯತ್ನಗಳು ಭರದಿಂದ ಸಾಗಿವೆ. ಆದ್ದರಿಂದ ಈ ವೈರಸ್ ಸೋಂಕು ತಗುಲಿದ ತಕ್ಷಣ ಹೆದರಿಕೊಂಡು ಅಧೀರರಾಗುವುದು ಬೇಡ. ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗುವುದು ಮುಖ್ಯ. ಆದರೆ ಇದೆಲ್ಲಕ್ಕಿಂತ ಮುಖ್ಯವಾದದ್ದು ಈ ವೈರಸ್‌ನ ಸೋಂಕು ಬಾರದಂತೆ ನಾವು ನೋಡಿಕೊಳ್ಳಬೇಕು. ಇದಕ್ಕಾಗಿ ನಾವು ಮಾಸ್ಕ್ ಧರಿಸಬೇಕು, ಇತರ ಜನರಿಂದ ಸುರಕ್ಷಿತ ಅಂತರ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೊನೆಯದಾಗಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮಹತ್ಕಾರ್ಯದಲ್ಲಿ ತೊಡಗಿಕೊಂಡಿರುವ ಎಲ್ಲಾ ವೈದ್ಯರು ಮತ್ತು ಅವರ ಸಿಬ್ಬಂದಿಗೆ ಮನಃಪೂರ್ವಕ ನಮನಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)