varthabharthiಸಂಪಾದಕೀಯ

ಕನ್ನಡ ವ್ಯಾಸಂಗ: ಅನುದಾನ ಕಡಿತ ಸರಿಯಲ್ಲ

ವಾರ್ತಾ ಭಾರತಿ : 13 May, 2020

ರಾಜ್ಯ ಸರಕಾರವು ಅನುದಾನ ಕಡಿತಗೊಳಿಸಿರುವುದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿವಿಧ ಪ್ರಶಸ್ತಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದೆ.ಸರಕಾರ ಪ್ರಾಧಿಕಾರಕ್ಕೆ ಪ್ರತಿವರ್ಷ 8 ಕೋಟಿ ರೂಪಾಯಿ ಅನುದಾನ ನೀಡುತ್ತಿತ್ತು.ಆದರೆ 2020-_21 ನೇ ವರ್ಷದಲ್ಲಿ ಕೇವಲ ಎರಡು ಕೋಟಿ ರೂ. ಅನುದಾನವನ್ನು ಮಾತ್ರ ನೀಡಿದೆ.ಇದರಿಂದ ಕನ್ನಡವನ್ನು ಅಭಿವೃದ್ಧಿ ಮಾಡುವ ಪ್ರಾಧಿಕಾರ ಸಂಕಷ್ಟಕ್ಕೆ ಸಿಲುಕಿದೆ. ಈಗ ನೀಡಿರುವ ಎರಡು ಕೋಟಿ ರೂಪಾಯಿ ಅನುದಾನವು ಸಿಬ್ಬಂದಿಯ ಸಂಬಳ ಮತ್ತು ಕಾರ್ಯಕ್ರಮಗಳಿಗಷ್ಟೇ ಸಾಕಾಗುತ್ತದೆ. ಹೀಗಾಗಿ ಕನ್ನಡ ಮಾಧ್ಯಮ ಪ್ರಶಸ್ತಿ, ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಹಾಗೂ ಹೊರ ರಾಜ್ಯಗಳ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವವರಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಲು ಪ್ರಾಧಿಕಾರ ತೀರ್ಮಾನಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಅಸಹಾಯಕ ತೀರ್ಮಾನದ ಬಗ್ಗೆ ರಾಜ್ಯದ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.ಪ್ರಾಧಿಕಾರದ ತೀರ್ಮಾನದಿಂದ ಹೊರ ನಾಡಿನ ಕನ್ನಡ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹೊರ ನಾಡಿನ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗಗಳು ಉಳಿದು ಬೆಳೆಯಬೇಕಾದರೆ ಶಿಷ್ಯವೇತನದಂತಹ ಪ್ರೋತ್ಸಾಹಕ ಕ್ರಮಗಳು ತೀರಾ ಅಗತ್ಯವಾಗಿವೆ. ಅದಕ್ಕಾಗಿ ಸರಕಾರ ವಿಶೇಷ ಅನುದಾನ ರೂಪದಲ್ಲಿ ಕನಿಷ್ಠ 40 ಲಕ್ಷ ರೂಪಾಯಿಗಳನ್ನಾದರೂ ನೀಡಬೇಕೆಂದು ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಹಾಗೂ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.

ವಾಸ್ತವವಾಗಿ ಹೊರ ನಾಡಿನ ಕನ್ನಡ ವಿಭಾಗಗಳು ಕೇವಲ ಕನ್ನಡ ಬೋಧನೆಯನ್ನು ಮಾತ್ರ ಮಾಡುತ್ತಿಲ್ಲ.ರಾಷ್ಟ್ರ ಮಟ್ಟದಲ್ಲಿ ಭಾಷೆ ಹಾಗೂ ಸಂಸ್ಕೃತಿಯ ಪ್ರಸಾರ ಮಾಡುತ್ತಿವೆ. ಕನ್ನಡ ಭಾಷೆಯ ಬಗ್ಗೆ ಸರಕಾರದ ಉದಾಸೀನ ನೀತಿ ಸರಿಯಲ್ಲ.

ಕೊರೋನ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಪರಿಣಾಮವಾಗಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಕಡಿತ ಮಾಡಲಾಗಿದೆ ಎಂದು ಸರಕಾರ ಸಮರ್ಥಿಸಿಕೊಳ್ಳಬಹುದು. ಆದರೆ ವಿದ್ಯಾರ್ಥಿ ವೇತನಕ್ಕಾಗಿ ಪ್ರಾಧಿಕಾರಕ್ಕೆ ಈವರೆಗೆ ನೀಡುತ್ತಿದ್ದ ಎಂಭತ್ತು ಲಕ್ಷ ರೂಪಾಯಿ ದೊಡ್ಡ ಮೊತ್ತವೇನಲ್ಲ. ನಮ್ಮ ನೆರೆಹೊರೆಯ ರಾಜ್ಯಗಳು ತಮ್ಮ ಸ್ಥಳೀಯ ಭಾಷೆಯ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ನೀಡುತ್ತಿವೆ.ಅಂತಲೇ ತಮಿಳು ಭಾಷೆ ಅಂತರ್‌ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ವಿಜೃಂಭಿಸುತ್ತಿದೆ. ಕನ್ನಡ ನಮ್ಮ ದೇಶದ ವಿಶ್ವವಿದ್ಯಾನಿಲಯಗಳಲ್ಲಾದರೂ ಉಳಿದು ಬೆಳೆಯಲಿ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪತಮ್ಮ ನಿಲುವನ್ನು ಸಡಿಲಗೊಳಿಸಿ ಹೊರ ರಾಜ್ಯಗಳ ಕನ್ನಡ ವಿಭಾಗಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿಶೇಷ ಅನುದಾನ ಬಿಡುಗಡೆ ಮಾಡಲಿ.

ಈ ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಸರಕಾರಕ್ಕೆ ಸಾಧ್ಯವಿಲ್ಲ ಎಂದಾದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಉಳಿದ ಖರ್ಚು, ವೆಚ್ಚಗಳನ್ನು ಕಡಿತಗೊಳಿಸಿ ಮೊದಲು ಹೊರ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುವ ಕನ್ನಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಿ. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಅವಿಭಜಿತ ಆಂಧ್ರಪ್ರದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ವಿಭಾಗಗಳಿವೆ. ಈ ವಿದ್ಯಾರ್ಥಿಗಳಿಗೆ ಪ್ರಾಧಿಕಾರದಿಂದ ತಲಾ 25 ಸಾವಿರ ರೂಪಾಯಿ ನೀಡಲಾಗುತ್ತಿದೆ.ಇಂತಹ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 150ಕ್ಕಿಂತ ಜಾಸ್ತಿ ಇಲ್ಲ. ಕಾರಣ ಯಡಿಯೂರಪ್ಪ ಸರಕಾರ ಮೀನಮೇಷ ಎಣಿಸದೆ ಹೊರ ರಾಜ್ಯದ ಕನ್ನಡ ವಿಭಾಗಗಳ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಕ್ರಮ ಕೈಗೊಳ್ಳಲಿ.

ಕೇಂದ್ರ ಸರಕಾರ ಹಿಂದಿ ಮತ್ತು ಸಂಸ್ಕೃತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿದೆ. ಕನ್ನಡ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರ ನೆರವಾಗದಿದ್ದರೆ ಇನ್ಯಾರು ನೆರವಿಗೆ ಬರುತ್ತಾರೆ? ಅಮೆರಿಕದ ಅಕ್ಕ ಮೊದಲಾದ ಅನಿವಾಸಿ ಕನ್ನಡಿಗರ ಸಮ್ಮೇಳನಗಳ ನೆಪದಲ್ಲಿ ರಾಜಕಾರಣಿಗಳು ಮತ್ತು ಸಾಹಿತಿಗಳ ಅಮೆರಿಕ ಪ್ರಯಾಣಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸುವ ಕರ್ನಾಟಕ ಸರಕಾರ ಹೊರ ರಾಜ್ಯದಲ್ಲಿ ಆಸಕ್ತಿಯಿಂದ ಓದುವ ಕನ್ನಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನಿರಾಕರಿಸುತ್ತಿರುವುದು ಸರಿಯಲ್ಲ. ಕರ್ನಾಟಕ ಸರಕಾರವೇ ಉದಾಸೀನ ಧೋರಣೆ ತಾಳಿದರೆ ಕನ್ನಡದಲ್ಲಿ ವ್ಯಾಸಂಗ ಮಾಡಲು ಹೊರ ರಾಜ್ಯದ ವಿದ್ಯಾರ್ಥಿಗಳು ಮುಂದೆ ಬರುವುದಿಲ್ಲ. ಹೀಗಾಗಿ ಬಿಟ್ಟರೆ ಅಲ್ಲಿನ ರಾಜ್ಯ ಸರಕಾರಗಳು ಕನ್ನಡ ವಿಭಾಗಗಳಿಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸುವ ಸಂಭವವಿದೆ. ಹೀಗಾಗಬಾರದೆಂದಿದ್ದರೆ ಸರಕಾರ ಹೊರ ರಾಜ್ಯದಲ್ಲಿ ಕನ್ನಡ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)