varthabharthi

ನಿಮ್ಮ ಅಂಕಣ

ಕೋವಿಡ್ 19ನಿಂದಾದ ಸಾಮಾಜಿಕ ಬದಲಾವಣೆಗಳು

ವಾರ್ತಾ ಭಾರತಿ : 13 May, 2020
ಡಾ.ಸ್ಮಿತಾ ಜೆ.ಡಿ.

ಆಧುನೀಕರಣ, ಪಾಶ್ಚಾತ್ಯೀಕರಣದ ಅಲೆಯಲ್ಲಿ ತೇಲುತ್ತಿದ್ದ ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದ ಬೆಳವಣಿಗೆ ಮಾನದಂಡವಾಗಿಸಿಕೊಂಡದ್ದು ಆಡಂಬರದ ಜೀವನಶೈಲಿ. ದೊಡ್ಡ ದೊಡ್ಡ ಮಾಲ್‍ಗಳು, ಮಳಿಗೆಗಳು, ಸಿನಿಮಾ ಥಿಯೇಟರ್‍ಗಳು, ರೆಸ್ಟೋರೆಂಟ್‍ಗಳು, ಹೋಟೆಲ್‍ಗಳು, ಇಂತಹ ಜೀವನಶೈಲಿಗೆ ಮಾರು ಹೋಗಿದ್ದ ಜನಸಾಗರವನ್ನು ಒಮ್ಮೆಗೆ ಗಾಳಿಯಲ್ಲಿ ತೂರಿದ್ದು ಕೋವಿಡ್ ಎಂಬ ಮಹಾಮಾರಿ. ಇವು ಯಾವುದೂ ಸುಂದರ ಬದುಕಿಗೆ ಅವಶ್ಯಕವಲ್ಲ ಎಂಬುದನ್ನು ಲಾಕ್‍ಡೌನ್ ಮಂತ್ರವು ಜನರಿಗೆ ತಿಳಿಯಲ್ಪಡಿಸಿದೆ.

ಬೆರಳ ತುದಿಯನ್ನು ಆಡಿಸಿ ಫೋನ್‍ ಗಳ ಮೂಲಕ ಆರ್ಡರ್ ಮಾಡಿ ಆನ್‍ಲೈನ್ ಪೋರ್ಟಲ್‍ಗಳಿಗೆ ಮಾರುಹೋಗಿದ್ದ ಜನತೆಗೆ ಮನೆಯಲ್ಲಿ ತಯಾರಿಸಿದ ರುಚಿಕರ, ಆರೋಗ್ಯಕರ ಆಹಾರದ ಮುಂದೆ ಇದರ ಅವಶ್ಯಕತೆಯಿಲ್ಲ ಎಂಬುದನ್ನು ತಿಳಿಸಿತು. ಈ ಮಹಾಮಾರಿ ಆಧುನೀಕರಣ ಸಂಕೇತವಾದ ಕೈ ಕುಲುಕುವುದು, ತಬ್ಬಿಕೊಳ್ಳುವುದು, ಕೆನ್ನೆಗೆ ಮುತ್ತಿಡುವುದು ಮಾಡಿದರಷ್ಟೆ ನಮ್ಮನ್ನು ಸುಸಂಸ್ಕೃತರ ಗುಂಪಿಗೆ ಸೇರುವುದು ಎಂಬ ಭ್ರಮಾಲೋಕದಲ್ಲಿ ತೇಲುತ್ತಿದ್ದ ಜನರಲ್ಲಿ ಕೈಮುಗಿದು ನಮಸ್ಕರಿಸುವುದೇ ನಮ್ಮ ಆರೋಗ್ಯಕರ ಸಂಸ್ಕೃತಿ ಎಂದು ಮನದಟ್ಟು ಮಾಡಿತು.

ರಜೆ ಬಂತೆಂದರೆ ಸಾಕು ವಿವಿಧ ದೇಶ ಪರ್ಯಟನೆ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನೇ ದೊಡ್ಡಸ್ತಿಕೆ ಮಾಡಿಕೊಂಡಿದ್ದ ಜನರಿಗೆ ಕಡಿವಾಣ ಹಾಕಿತು ಕೋವಿಡ್. ಸಣ್ಣ ಪುಟ್ಟ ನೆಪಗಳನ್ನು ಸೆಲೆಬ್ರೇಷನ್ ಮಾಡುವ ನೆಪದಲ್ಲಿ ಜನರನ್ನು ಗುಂಪು ಸೇರಿಸಿ ದುಂದು ವೆಚ್ಚದಲ್ಲಿ ಮುಳುಗಿದ್ದ ಶ್ರೀಮಂತರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಂತ್ರವನ್ನು ಭೋದಿಸಿದೆ ಕೋವಿಡ್. ನಾ ಮುಂದು, ತಾ ಮುಂದು ಎಂಬಂತೆ ಎಕರೆಗಟ್ಟಲೆ ಜಾಗದಲ್ಲಿ ಚಪ್ಪರ ಹಾಕಿಸಿ, ಲಕ್ಷಾಂತರ ಜನರನ್ನು ಸೇರಿಸಿ ಐಶಾರಾಮಿ ಊಟ ಉಪಚಾರಗಳನ್ನು ಮಾಡಿಸಿ, ವಧುವರರನ್ನು ಚಿನ್ನ, ವಜ್ರಾಭರಣಗಳಲ್ಲಿ ಮುಳುಗಿಸಿ ಪ್ರದರ್ಶಿಸಿಕೊಳ್ಳುತ್ತಿದ್ದ ಮೇಲ್ವರ್ಗದ ಜನರಿಗೆ ಮನೆ ಮುಂದೆ ಚಪ್ಪರ ಹಾಕಿಸಿ, ಆತ್ಮೀಯರು, ಬಂಧುಬಾಂಧವರ ಆಶೀರ್ವಾದದೊಂದಿಗೆ ಮಾಡುವ ಮದುವೆಯೇ ಶ್ರೇಷ್ಠ ಎಂಬುದನ್ನು ತೋರಿಸಿತು ಕೋವಿಡ್.

ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕತೆಯಿಂದ ಕೂಡಿದ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆಗಳಿಗೆ ಮಾರುಹೋಗಿದ್ದ ಜನರಿಗೆ ಸರ್ಕಾರಿ ಆಸ್ಪತ್ರೆಗಳು ಹಾಗೂ ಅಲ್ಲಿ ಸಿಗುವ ಚಿಕಿತ್ಸೆಗಳು, ಅಲ್ಲಿ ದುಡಿಯುವ ಜನರ ಸೇವೆಗಳು ಯಾವುದೇ ಆಧುನಿಕ ಆಸ್ಪತ್ರೆಗಳಿಗೆ ಕಡಿಮೆಯಿಲ್ಲ ಎಂಬುದನ್ನು ಸಾಮಾನ್ಯ ಜನರಿಗೆ ಮನದಟ್ಟು ಮಾಡಿತು ಕೋವಿಡ್.

ಸಣ್ಣ ಪುಟ್ಟ ತೊಂದರೆಗಳನ್ನು ನೆಪ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಗಳಲ್ಲಿ ಜಮಾಯಿಸುತ್ತಿದ್ದ ಜನರಿಗೆ ನೋವು, ಮೈಕೈ ನೋವಿಗಿಂತ ಜೀವ ಮುಖ್ಯ ಎಂಬುದನ್ನು ಮನದಟ್ಟು ಮಾಡಿತು ಕೋವಿಡ್.

ಶಾಪಿಂಗ್ ಇಲ್ಲದೆ ಜೀವನವೇ ಇಲ್ಲ ಎಂದು ಬಟ್ಟೆ ಬರೆ, ಚಿನ್ನಾಭರಣಗಳು, ಮನೆಯ ವಸ್ತುಗಳ ಖರೀದಿ ಹಾಗೂ ಆನ್‍ಲೈನ್ ಶಾಪಿಂಗ್‍ಗೆ ಮಾರುಹೋಗಿದ್ದ ಹೆಂಗಳೆಯರಿಗೆ ಅಡ್ಡಗೋಡೆಯಾಯಿತು ಕೋವಿಡ್.

ಪ್ರತಿಷ್ಠೆಯ ಸಲುವಾಗಿ ಒಬ್ಬೊಬ್ಬರು ಒಂದೊಂದು ಕಾರಿನಲ್ಲಿ ಪಯಣಿಸುತ್ತ, ಎಲ್ಲೆಂದರಲ್ಲಿ ಓಡಾಡುತ್ತಿದ್ದ ದ್ವಿಚಕ್ರ ಸವಾರರು, ಸಾರ್ವಜನಿಕ ಸಾರಿಗೆಯನ್ನು ಅಲ್ಲೆಗಳಿದ ಜನರಿಗೆ ಮುಳುವಾಯಿತು ಕೋವಿಡ್.

ಜಂಕ್ ಫುಡನ್ನು ಚಟವಾಗಿಸಿಕೊಂಡು, ರೆಸ್ಟೋರೆಂಟ್ ಆಹಾರವನ್ನೇ ಜೀವನ ಶೈಲಿಯಾಗಿಸಿಕೊಂಡು ಜನರಿಗೆ ಆರೋಗ್ಯಕರ ಮನೆ ಅಡುಗೆಯ ಕಡೆಗೆ ತಿರುಗುವಂತೆ ಮಾಡಿತು ಕೋವಿಡ್.

ಕೈಗೊಬ್ಬರು, ಕಾಲಿಗೊಬ್ಬರು ಕೆಲಸದವರನ್ನು ಇಟ್ಟು ಜಡತ್ವದ ಬದುಕಿಗೆ ಬಲಿಯಾದ ಜನರಿಗೆ ನಮ್ಮ ಕೆಲಸ ನಾವು ಮಾಡಿಕೊಳ್ಳುವುದಲ್ಲಿನ ಸುಖವನ್ನು ಮನದಟ್ಟು ಮಾಡಿತು ಕೋವಿಡ್.

ತಂಪಾದ ಶುದ್ಧವಾದ ಗಾಳಿಯನ್ನು ಮರೆತು ಎ.ಸಿ ಮೊರೆ ಹೋಗಿದ್ದ ಜನರಿಗೆ ಶುದ್ಧಗಾಳಿಯ ಮಹತ್ವವನ್ನು ಅರಿತುಕೊಳ್ಳಲು ತಿಳಿಸಿತು ಕೋವಿಡ್.

ಪ್ರಕೃತಿಯ ನೈಜತೆ, ಸಹಜ, ಸರಳ ಜೀವನ ಮರೆತು ಆಧುನಿಕತೆಯ ಹೆಸರಿನಲ್ಲಿ ವಿನಾಶದತ್ತ ಹೆಜ್ಜೆಹಾಕುತ್ತಿದ್ದ ಜನಜೀವನಕ್ಕೆ, ಮನುಷ್ಯತ್ವವನ್ನು ಮರೆತು ಭ್ರಷ್ಟಾಚಾರ, ವೈರತ್ವದಲ್ಲಿ, ಸ್ವಾರ್ಥದಲ್ಲಿ ಮುಳುಗಿದ್ದ ಮನುಷ್ಯನಲ್ಲಿ ಕೊನೆಗೆ ಮನದಟ್ಟು ಮಾಡಿದ್ದು ನನಗೆ ನಾನೇ ಆಗುವುದು ಕೊನೆಯಲ್ಲಿ ಎಂಬುದನ್ನು ತಿಳಿಸಿಕೊಟ್ಟಿತು ಕೋವಿಡ್. ಜೀವನಕ್ಕಿಂತ ಜೀವನಶೈಲಿ ಮುಖ್ಯ ಎಂಬುದನ್ನು ಮನದಟ್ಟು ಮಾಡಿತು ಕೋವಿಡ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)