varthabharthiಸಂಪಾದಕೀಯ

ಅನಿವಾಸಿಗಳ ಜೊತೆ ನಮ್ಮ ಹೊಣೆಗಾರಿಕೆ

ವಾರ್ತಾ ಭಾರತಿ : 14 May, 2020

ಈ ದೇಶದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ದೊಡ್ಡ ದೌರ್ಬಲ್ಯವೆಂದರೆ, ವಿದೇಶಗಳ ಕುರಿತಂತೆ ‘ಭ್ರಮೆ’ಗಳನ್ನು ಕಟ್ಟಿಕೊಂಡು ಬದುಕುವುದು. ತಮ್ಮ ದೇಶವನ್ನು ಅದೆಷ್ಟು ಪ್ರೀತಿಸುತ್ತಿದ್ದರೂ, ಕುಟುಂಬದಲ್ಲೊಬ್ಬ ‘ವಿದೇಶದಲ್ಲಿದ್ದಾನೆ’ ಎನ್ನಲು ಅದೇನೋ ಹೆಮ್ಮೆ. ವಿದ್ಯಾವಂತರ ಕುಟುಂಬದಲ್ಲಿ ಒಬ್ಬನಾದರೂ ಅಮೆರಿಕ, ಲಂಡನ್‌ನಲ್ಲಿ ಬದುಕುತ್ತಿರುತ್ತಾನೆ. ತಮ್ಮ ಮಕ್ಕಳು ಕಲಿತು ದೊಡ್ಡವರಾಗಿ, ಅಮೆರಿಕದಲ್ಲೋ, ಬ್ರಿಟನ್‌ನಲ್ಲೋ ಕೈತುಂಬಾ ಸಂಪಾದಿಸುತ್ತಿರಬೇಕು ಎಂದು ಹಂಬಲಿಸುವವರ ಸಂಖ್ಯೆ ಬಹುದೊಡ್ಡದಿದೆ. ಇದೇ ಸಂದರ್ಭದಲ್ಲಿ, ಯಾವುದೇ ಪದವಿಗಳನ್ನು ಮಾಡಿ ಅಥವಾ ಮಾಡದೆ, ದೇಶದೊಳಗೆ ನಿರುದ್ಯೋಗಿಗಳಾಗಿ ಅಲೆಯಬೇಕಾಗಿದ್ದ ಸಾವಿರಾರು ಯುವಕರು ಸೌದಿ, ದುಬೈ ಮೊದಲಾದ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿದು ಭಾರತದಲ್ಲಿರುವ ತಮ್ಮ ಕುಟುಂಬಗಳನ್ನು ಪೊರೆಯುತ್ತಿದ್ದಾರೆ. ಕೇರಳ ಸಹಿತ ಕರಾವಳಿಯ ಭಾಗದಲ್ಲಿ ಸಹಸ್ರಾರು ಜನರು ಉದ್ಯೋಗ ಅರಸಿ ದೇಶ ಬಿಟ್ಟ ಕಾರಣ, ಈ ಭಾಗ ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಿತು. ಬಡತನದಿಂದ ಪಾರಾಗಿ, ಶಿಕ್ಷಣ, ಆರೋಗ್ಯದ ಕಡೆಗೆ ಗಮನ ಹರಿಸಲು ಜನರಿಗೆ ಸಾಧ್ಯವಾಯಿತು. ಇಂದು ಅನಿವಾಸಿಗಳು ಭಾರತದ ಪಾಲಿಗೆ ಬಹುದೊಡ್ಡ ಶಕ್ತಿಯಾಗಿದ್ದಾರೆ. ಅದನ್ನು ಈ ದೇಶದ ಪ್ರಧಾನಿ ಮೋದಿ ಸ್ಪಷ್ಟವಾಗಿಯೇ ಗುರುತಿಸಿದ್ದರು.

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ, ದೇಶವನ್ನು ಉದ್ದೇಶಿಸಿ ಮಾತನಾಡಿರುವುದಕ್ಕಿಂತ ಅನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿ ಗುರುತಿಸಲ್ಪಟ್ಟದ್ದೇ ಅಧಿಕ. ಅಮೆರಿಕ, ಕೊಲ್ಲಿ ರಾಷ್ಟ್ರಗಳು ಸೇರಿದಂತೆ ವಿವಿಧೆಡೆಗಳಲ್ಲಿ ಅವರು ಅನಿವಾಸಿಗಳನ್ನುದ್ದೇಶಿಸಿ ಹಮ್ಮಿಕೊಂಡ ಸಮಾವೇಶಗಳಲ್ಲಿ, ಅವರನ್ನು ಹಾಡಿ ಹೊಗಳಿದ್ದಾರೆ. ಅವರು ಭಾರತಕ್ಕೆ ಕೊಡುತ್ತಿರುವ ಕೊಡುಗೆಗಳನ್ನು ಬಾಯಿ ತುಂಬಾ ಮೆಚ್ಚಿದ್ದಾರೆ. ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅನಿವಾಸಿಗಳ ಸಹಕಾರದ ಅಗತ್ಯವನ್ನು ಪದೇ ಪದೇ ಒತ್ತಿ ಹೇಳಿದ್ದಾರೆ. ಈ ಅನಿವಾಸಿಗಳಲ್ಲೂ ಎರಡು ಬಗೆಯ ವರ್ಗಗಳಿವೆ. ಒಂದು ಕೋಟು ಬೂಟುಗಳನ್ನು ಹಾಕಿದ ಉದ್ಯಮಿಗಳು, ಐಟಿ-ಬಿಟಿ ಸಂಸ್ಥೆಯ ಪ್ರಮುಖ ಹುದ್ದೆಗಳಲ್ಲಿರುವವರು. ಇವರು ಬದುಕಿನ ಅನಿವಾರ್ಯತೆಗಾಗಿ ಅವರು ವಿದೇಶಗಳಲ್ಲಿ ವಾಸಿಸುತ್ತಿರುವವರಲ್ಲ. ಮೋದಿ ಸಮಾವೇಶಗಳನ್ನು ಹಮ್ಮಿಕೊಂಡಿದ್ದು, ಇಂತಹ ಶ್ರೀಮಂತವರ್ಗವನ್ನು ಉದ್ದೇಶಿಸಿ. ಇದೇ ಸಂದರ್ಭದಲ್ಲಿ, ಭಾರತದೊಳಗಿರುವ ಬಡತನ, ಸಂಕಟಗಳಿಂದ ಅನಿವಾರ್ಯವಾಗಿ ತಾಯ್ನೆಲವನ್ನು ತೊರೆದವರ ಸಂಖ್ಯೆಯೊಂದಿದೆ. ಈ ದೇಶಕ್ಕೆ ನಿಜವಾದ ಲಾಭವಾಗಿರುವುದು ಇವರಿಂದ.

ಬೃಹತ್ ಉದ್ಯಮಿಗಳು ತಮ್ಮ ಆರ್ಥಿಕ ಸ್ವಾರ್ಥಕ್ಕಾಗಿ ವಿದೇಶಗಳಲ್ಲಿ ಕುಳಿತು ಭಾರತವನ್ನು ಬಳಸಿಕೊಂಡಿದ್ದರೆ, ಈ ಮಧ್ಯಮವರ್ಗದ ಜನರು ವಿದೇಶಗಳಲ್ಲಿ ದುಡಿದು ಭಾರತದಲ್ಲಿರುವ ತಮ್ಮವರನ್ನು ಆರ್ಥಿಕವಾಗಿ ಮೇಲೆತ್ತಿದ್ದಾರೆ. ಊರಲ್ಲಿರುವ ಜನರಿಗೆ ವಿದೇಶದಲ್ಲಿರುವವರು ಸ್ವರ್ಗದಲ್ಲಿ ಬದುಕುತ್ತಿದ್ದಾರೆ ಎಂಬ ಭ್ರಮೆಯಿರುತ್ತದೆ. ಆದುದರಿಂದಲೇ, ಅನಿವಾಸಿಗಳು ತಾಯ್ನೆಲಕ್ಕೆ ಬರುತ್ತಾರೆ ಎಂದಾಕ್ಷಣ ಸ್ವರ್ಗದಿಂದ ತಮಗೆ ಬೇಕಾದ ಅವಶ್ಯ ವಸ್ತುಗಳೊಂದಿಗೆ ಬರುತ್ತಿರುವ ದೇವದೂತರಂತೆ ಸ್ವಾಗತಿಸುತ್ತಾರೆ. ಅನಿವಾಸಿಗಳೂ ತಮ್ಮ ಊರಿನ ಜನರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ತಮ್ಮ ಕಷ್ಟಗಳನ್ನೆಲ್ಲ ಮುಚ್ಚಿಟ್ಟು ಸಾಲಸೋಲ ಮಾಡಿಯಾದರೂ, ತಮ್ಮವರನ್ನು ಸಂತೋಷಗೊಳಿಸಿ ಮರಳಿ ವಿದೇಶಕ್ಕೆ ತೆರಳುತ್ತಾರೆ. ಆದರೆ ಇಂತಹ ಅನಿವಾಸಿಗಳು ತಾವು ವಿದೇಶಗಳಲ್ಲಿ ಅನುಭವಿಸುತ್ತಿರುವ ನೋವು, ಕಷ್ಟಗಳನ್ನು ಯಾವತ್ತೂ ಕುಟುಂಬಗಳ ಜೊತೆಗೆ ಹಂಚಿಕೊಂಡಿರುವುದಿಲ್ಲ. ಒಂದು ರೀತಿಯಲ್ಲಿ ಇವರು, ಮೊಂಬತ್ತಿಯಂತೆ ತಾನುರಿದು ಬೆಳಕಾಗುತ್ತಾರೆ. ವಿಪರ್ಯಾಸವೆಂದರೆ, ಈ ಕೊರೋನ ಎಲ್ಲವನ್ನೂ ಬದಲಿಸಿದೆ. ಅನಿವಾಸಿಗಳು ಭಾರತಕ್ಕೆ ಕಾಲಿಡುತ್ತಾರೆ ಎಂದರೆ ಸಂಭ್ರಮ ಪಡುತ್ತಿದ್ದ ಜನರು ಇದೀಗ ಬದುಕಿನಲ್ಲಿ ಮೊದಲ ಬಾರಿ ಆತಂಕ ಪಡುತ್ತಿದ್ದಾರೆ. ಅನಿವಾಸಿಗಳ ಕುರಿತಂತೆ ಬಾಯಿ ತುಂಬ ಹೊಗಳಿದ್ದ ಸರಕಾರವೇ ಅವರನ್ನು ಭಾರತಕ್ಕೆ ಕರೆಸುವುದಕ್ಕೆ ಹಿಂದು ಮುಂದು ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೋನ ಈಗಾಗಲೇ ಭಾರತದೊಳಗೆ ವೇಗವಾಗಿ ಹರಡುತ್ತಿರುವಾಗ, ವಿದೇಶಗಳಲ್ಲಿರುವ ಭಾರತೀಯರನ್ನೂ ಕರೆ ತಂದರೆ ಅವರಿಂದ ವೈರಸ್ ಇನ್ನಷ್ಟು ವೇಗವಾಗಿ ಹರಡಬಹುದು ಎನ್ನುವುದು ಸರಕಾರದ ಆತಂಕ.

ಇದೇ ಸಂದರ್ಭದಲ್ಲಿ, ಜನಸಾಮಾನ್ಯರೂ ಅನಿವಾಸಿಗಳನ್ನು ಅಪರಿಚಿತರಂತೆ ನೋಡುತ್ತಿದ್ದಾರೆ. ಕೆಲವೆಡೆ ಅವರ ಆಗಮನಕ್ಕೆ ಆಕ್ಷೇಪಗಳು ಕೇಳಿ ಬಂದಿವೆ. ದೂರದ ಮುಂಬೈಯಲ್ಲಿದ್ದು ದುಡಿದು ಕರಾವಳಿಯನ್ನು ಪೊರೆಯುತ್ತಿದ್ದ ಜನರ ಸ್ಥಿತಿಯೂ ಇದೇ ಆಗಿದೆ. ಅತ್ತ, ವಿದೇಶಗಳಲ್ಲಿ ಆ ಸರಕಾರಕ್ಕೆ ಭಾರತೀಯರು ತಲೆನೋವಾಗಿದ್ದಾರೆ. ಅಲ್ಲಿನ ಸರಕಾರಗಳು ಈವರೆಗೆ ಭಾರತೀಯರಿಗೆ ಆಶ್ರಯವನ್ನು ನೀಡಿ ಪೊರೆದಿವೆ. ಇದೀಗ ನಾವೇ ನಮ್ಮ ಜನರನ್ನು ಸ್ವೀಕರಿಸಲು ಸಿದ್ಧರಿಲ್ಲದೇ ಇರುವಾಗ, ಅವರು ನಮ್ಮವರನ್ನು ಸ್ವೀಕರಿಸುವುದು ಹೇಗೆ ಸಾಧ್ಯ? ಕೊರೋನ ವಿದೇಶದಿಂದ ಬಂದವರಿಂದ ಹಬ್ಬಿದೆ, ಇದರಿಂದ ಇಡೀ ದೇಶ ನಷ್ಟ ಅನುಭವಿಸುವಂತಾಗಿದೆ ಎನ್ನುವ ಆರೋಪದ ಇನ್ನೊಂದು ಮಗ್ಗುಲನ್ನು ನಾವು ನೋಡಬೇಕಾಗಿದೆ. ವಿದೇಶಗಳಲ್ಲಿ ಕೊರೋನ ಮಾರಣಹೋಮ ನಡೆಸುತ್ತಿರುವಾಗ, ವಿದೇಶದಿಂದ ಬಂದವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ, ಅವರನ್ನು ಕಡ್ಡಾಯ ಕ್ವಾರಂಟೈನ್‌ನಲ್ಲಿ ಇಡುವುದು ಸರಕಾರದ ಹೊಣೆಗಾರಿಕೆಯಾಗಿತ್ತು. ಸರಕಾರದ ವೈಫಲ್ಯಕ್ಕಾಗಿ ಇಂದು ಅನಿವಾಸಿಗಳು ಮತ್ತು ಈ ದೇಶ ಬೆಲೆ ತೆರಬೇಕಾದ ಸ್ಥಿತಿಗೆ ತಲುಪಿದೆ. ವಿಶ್ವ ಕೊರೋನದಿಂದ ತತ್ತರಿಸುತ್ತಿರುವಾಗ, ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಏರ್ಪಡಿಸಿ ವಿದೇಶಿಯರಿಗೆ ರತ್ನಗಂಬಳಿ ಹಾಕಿದ ಸರಕಾರ, ಇದೀಗ ಸಂಕಷ್ಟದಲ್ಲಿರುವ ನಮ್ಮದೇ ನೆಲದ ಮಕ್ಕಳನ್ನು ಸ್ವೀಕರಿಸುವಾಗ ತಾರತಮ್ಯವನ್ನು ಅನುಸರಿಸುವುದು ಎಷ್ಟು ಸರಿ?

ಒಂದೆಡೆ ಸರಕಾರದ ಒಲ್ಲದ ಸಹಕಾರ, ಇನ್ನೊಂದೆಡೆ ಭಾರತೀಯರ ಸಂಶಯ ಇವುಗಳ ನಡುವೆ ಇದೀಗ ಹಂತ ಹಂತವಾಗಿ ಅನಿವಾಸಿಗಳು ಭಾರತಕ್ಕೆ ಕಾಲಿಡತೊಡಗಿದ್ದಾರೆ. ಸುಮಾರು 30,000 ಭಾರತೀಯರನ್ನು ‘ವಂದೇ ಭಾರತ’ ಅಭಿಯಾನದ ಎರಡನೆ ಹಂತದಲ್ಲಿ ಸ್ವದೇಶಕ್ಕೆ ವಾಪಸ್ ಕರೆತರಲಾಗುವುದು ಎಂದು ನಾಗರಿಕ ವಾಯುಯಾನ ಸಚಿವರು ತಿಳಿಸಿದ್ದಾರೆ. ಕೊಲ್ಲಿ ದೇಶಗಳಿಂದ ಮಾತ್ರವಲ್ಲದೆ, ಜಪಾನ್, ನೈಜೀರಿಯ, ಇಟಲಿ, ಜರ್ಮನಿಯಂತಹ ದೇಶಗಳಿಂದಲೂ ಅನಿವಾಸಿಗಳು ಆಗಮಿಸಲಿದ್ದಾರೆ. ಮೊದಲ ಹಂತದ ಅನಿವಾಸಿಗಳು ಭಾರತಕ್ಕೆ ಆಗಮಿಸುವ ಸಂದರ್ಭದಲ್ಲಿ ವಿಮಾನ ನಿಲ್ದಾಣಗಳಲ್ಲಿ ಅವರಿಗಾಗಿರುವ ತೊಂದರೆಗಳು, ಅಧಿಕಾರಿಗಳ ನಿರ್ಲಕ್ಷ ಇತ್ಯಾದಿಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಮುಂದಿನ ದಿನಗಳಲ್ಲಿ ಸಾವಿರಾರು ಅನಿವಾಸಿಗಳು ಆಗಮಿಸುತ್ತಿದ್ದಂತೆಯೇ ಸಮಾಜದ ಕಿರುಕುಳ, ತೊಂದರೆ, ನಿರಾಸಕ್ತಿ ಹೆಚ್ಚುವ ಸಾಧ್ಯತೆಗಳೂ ಇವೆ. ಶ್ರೀಮಂತ ಅನಿವಾಸಿಗಳೇನೋ ತಮ್ಮ ಹಣ ಬಲದಿಂದ ಸರಕಾರದಿಂದ ಸವಲತ್ತುಗಳನ್ನು ಕಿತ್ತುಕೊಳ್ಳಬಹುದು. ಆದರೆ ಮಧ್ಯಮವರ್ಗಕ್ಕೆ ಸೇರಿರುವ ಅನಿವಾಸಿಗಳ ಸ್ಥಿತಿ ತೀರಾ ಆತಂಕಕಾರಿಯಾಗಿದೆ. ವಿದೇಶಗಳಲ್ಲಿ ದುಡಿದು ಭಾರತದ ಕುಟುಂಬಗಳನ್ನು ಪೊರೆದ ಜೀವಗಳು ಇದೀಗ ನಮ್ಮ ನೆಲಕ್ಕೆ ಆಗಮಿಸಿವೆ. ಸರಕಾರಕ್ಕೂ ನಮಗೂ ಇದೊಂದು ಅಗ್ನಿ ಪರೀಕ್ಷೆ. ಅವರೊಂದಿಗೆ ಅತ್ಯಂತ ಮಾನವೀಯವಾಗಿ ನಡೆದುಕೊಳ್ಳುವುದು ಮಾತ್ರವಲ್ಲ, ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವುದು ನಮ್ಮ ಕರ್ತವ್ಯ. ಸೋಂಕಿತರನ್ನು ಕೂಡ ಪ್ರೀತಿ ವಿಶ್ವಾಸದಿಂದ ಕಂಡು, ಅವರ ಕ್ವಾರಂಟೈನ್‌ಗೆ ಸಹಕರಿಸಿ ಅವರು ಸೋಂಕು ಮುಕ್ತರಾದ ಬಳಿಕ ಅಷ್ಟೇ ವಾತ್ಸಲ್ಯಭಾವದಿಂದ ನಾವು ಸ್ವೀಕರಿಸಬೇಕಾಗಿದೆ. ಮೊಗೆ ಮೊಗದೆ ಕೊಟ್ಟ ಅವರ ಸಾಲವನ್ನು ಈ ಮೂಲಕ ತೀರಿಸಬೇಕಾಗಿದೆ. ಕೊರೋನ ಮುಖ್ಯವಾಗಿ ನಮ್ಮಾಳಗಿನ ಮನುಷ್ಯತ್ವಕ್ಕೆ ಅತಿ ದೊಡ್ಡ ಸವಾಲಾಗಿ ನಿಂತಿದೆ. ಆ ಸವಾಲನ್ನು ಗೆದ್ದಾಗ ಮಾತ್ರ ನಾವು ಕೊರೋನ ವೈರಸ್‌ನ್ನು ಸಂಪೂರ್ಣವಾಗಿ ಗೆಲ್ಲಬಲ್ಲೆವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)