varthabharthi

ನಿಮ್ಮ ಅಂಕಣ

ನಿನ್ನೆ MSME ಗಳಿಗೆ ಕೊಟ್ಟ ಪ್ಯಾಕೇಜಿನಲ್ಲಿ ಗಂಟೆಷ್ಟು ? ಕನ್ನಡಿಯ ಗಂಟೆಷ್ಟು ?

ವಾರ್ತಾ ಭಾರತಿ : 14 May, 2020
ಶಿವಸುಂದರ್

ಆತ್ಮೀಯರೇ ,

ಕೋವಿಡ್ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಭಾರತದ ಆರ್ಥಿಕತೆಯನ್ನು ಮೇಲೆತ್ತಲು ಮೊನ್ನೆ ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜಿನಲ್ಲಿ ಮೌಲ್ಯವಿಲ್ಲದ ಸೊನ್ನೆಗಳೆಷ್ಟು ಮತ್ತು 'ಅರ್ಥ'ವಿರುವ ಅಂಕಗಳೆಷ್ಟು ಎಂಬ ಮೂಲಭೂತ  ಚರ್ಚೆ  ನಡೆಯದೆ ಮೋದಿ ಪ್ಯಾಕೇಜಿನ ಪರಿಣಾಮವಾಗಲೀ, ಉದ್ದೇಶವಾಗಲೀ ಅರ್ಥವಾಗುವುದಿಲ್ಲ. 

ಆದರೆ ಸರ್ಕಾರವು ಆ ಚರ್ಚೆ ಗೆ ಸಿದ್ಧವಿಲ್ಲ. ಆದ್ದರಿಂದಲೇ ಸರ್ಕಾರವು 20 ಲಕ್ಷ ಕೋಟಿಯನ್ನು ಹೇಗೆ ಸಂಗ್ರಹಿಸಲಿದೆ ಮತ್ತು ಎಷ್ಟು ಸಂಪನ್ಮೂಲವನ್ನು ಸಂತ್ರಸ್ತ ವರ್ಗಗಳಿಗೆ ನಿಜಕ್ಕೂ ವರ್ಗಾಯಿಸಲಿದೆ ಎಂಬ ಪ್ರಶ್ನೆಯನ್ನೆ ಮರೆಸುವ ತಂತ್ರವನ್ನು ಅನುಸರಿಸುತ್ತಿದೆ.

 ಆ ಉದ್ದೇಶದಿಂದಲೇ  ಮೋದಿಯವರ ಪ್ಯಾಕೇಜ್ ಭಾಷಣವು ಇಂಥಾ ಯಾವುದೇ ವಿವರಗಳ ಗೋಜಿಗೇ ಹೋಗದೆ 'ಆತ್ಮನಿರ್ಬರ'ವಾಗಿತ್ತು....

ನಿನ್ನೆ ಪ್ಯಾಕೇಜಿನ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಆದರೂ  ಒಂದೇ ಬಾರಿಗೆ ಸುದೀರ್ಘ ಹಾಗು ಸಮಗ್ರ ಹೇಳಿಕೆನ್ನು ಕೊಡಬಹುದಿತ್ತು. ಆ ಮೂಲಕ ಪ್ಯಾಕೇಜಿನ  ಮ್ಯಾಕ್ರೋ ಚಿತ್ರಣವನ್ನು ಹಾಗು ಮೈಕ್ರೋ ಮಟ್ಟದ ವಿವರಗಳನ್ನು ಒಟ್ಟಿಗೇ ಒದಗಿಸಬಹುದಿತ್ತು.  

ಕೋವಿಡ್ ಸಂದರ್ಭದಲ್ಲು ನಾಲ್ಕು ಬಾರಿ ಮೋದಿಯವರ ಅನರ್ಥಕ ಹಾಗೂ ನಿರರ್ಥಕ ಭಾಷಣವನ್ನು ಕೇಳಿಸಿಕೊಂಡಿರುವ ಭಾರತದ ಜನತೆಗೆ ಮೋದಿ ಭಾಷಣವನ್ನು ತಡೆದುಕೊಳ್ಳುವ ಇಮ್ಯುನಿಟಿ ಬಂದಿರುವುದರಿಂದ ಹಣಕಾಸು ಮಂತ್ರಿಗಳ ಒಟ್ಟು ಘೋಷಣೆಗಳನ್ನು ಒಂದೇ ಬಾರಿಗೆ ಮಾಡಿದ್ದರೂ ಕೇಳಿ ಎದುರಿಸುತ್ತಿದ್ದರು. 

ಆದರೆ ಸರಕಾರದ ಉದ್ದೇಶ ಸತ್ಯವನ್ನು ಹಾಗೂ ತನ್ನ ಉದ್ದೇಶಗಳನ್ನು ಬಿಚ್ಚಿಡುವುದಲ್ಲ. ಬಚ್ಚಿಡುವುದು.

ಸರ್ಕಾರವು ಈ  ಸತ್ಯವನ್ನು ಮರೆಮಾಚಲು ಎರಡು ಬಗೆಯ ತಂತ್ರಗಳನ್ನು ಅನುಸರಿಸುತ್ತಿದೆ.

1. ಒಂದೇ ಬಾರಿ  ಸಮಗ್ರ  ಚಿತ್ರಣವನ್ನು ಕೊಡುವ ಬದಲಿಗೆ ಪ್ರತಿದಿನ ಬಿಡಿಬಿಡಿಯಾದ ವಿವರಗಳನ್ನು ತಂದು ಸುರಿಯುವುದು.

ನಿನ್ನೆಯ  ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ಚಿತ್ರಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವುದನ್ನು  ಹಣಕಾಸು ಮಂತ್ರಿಗಳು ಸ್ಪಷ್ಟವಾಗಿ  ನಿರಾಕರಿಸಿದ ರೀತಿಯು ಸರ್ಕಾರದ  ಈ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. 

2. ಬೇರೆಬೇರೆ  ಕಾಲದಲ್ಲಿ ಜಾರಿಯಾದ  ಹಾಗು ಬೇರೆಬೇರೆ ಸ್ವರೂಪ ಹಾಗು ಉದ್ದೇಶಗಳನ್ನು ಹೊಂದಿರುವ  ಹಣಕಾಸು ಕ್ರಮಗಳನ್ನೆಲ್ಲಾ   ಪ್ಯಾಕೇಜ್ ನ ಭಾಗವಾಗಿ ಮುಂದಿಟ್ಟುಬಿಡುವುದು.

ಈ ಕ್ರಮಗಳು MSME ವಲಯದಲ್ಲಿ ಸಂತ್ರಸ್ತರಾಗಿರುವವರು ಪೂರೈಸಲಾಗದೆ ಕಂಗೆಟ್ಟಿರುವ ಕಾರ್ಮಿಕರ ಸಂಬಳ, ಸರಕು ಸಾಗಾಟ,  ಸಾಲ-ಬಡ್ಡಿ ಇನ್ನಿತರ ಹೊಣೆಗಾರಿಕೆಗಳನ್ನು ರದ್ದು ಮಾಡಿಲ್ಲ. ಬದಲಿಗೆ ಅದರಲ್ಲಿ ಸರ್ಕಾರ ಕ್ಕೆ ಮತ್ತು ಬ್ಯಾಂಕುಗಳಿಗೆ ಬಾಕಿ ಇರುವ ಬಾಬತ್ತನ್ನು ಕೇವಲ ಆರು ತಿಂಗಳಿಂದ  ಒಂದು ವರ್ಷ ದ ವರೆಗೆ  ಮುಂದೂಡಲಾಗುತ್ತಿದೆ ಅಷ್ಟೇ.

ಇವು ಕೋವಿಡ್ ಹಾಗೂ ಲಾಕ್ ಡೌನ್ ತಂದೊಡ್ಡಿದ  ಬಿಕ್ಕಟ್ಟಿನಿಂದ ಮೇಲೇಳಲು ತ್ರಾಣವಿಲ್ಲದೆ ನೆಲಕ್ಕೆ ಬಿದ್ದಿರುವ ವರ್ಗಗಳು  ಮೇಲೆದ್ದು  ಕೂರಲು ಬೇಕಾದ ತುರ್ತು ಸಂಪನ್ಮೂಲವನ್ನೇನೂ ಒದಗಿಸುವುದಿಲ್ಲ. ಬದಲಿಗೆ ಈ ಕ್ರಮಗಳು  ಚೇತರಿಸಿಕೊಂಡಂಥವರು ನಂತರದಲ್ಲಿ ವೇಗವಾಗಿ ಪ್ರಯಾಣಿಸಲು ಬೇಕಾಗುವ ವಾಹನವನ್ನು ಕೊಂಡುಕೊಳ್ಳಲು ಈಗ ತುರ್ತಾಗಿ  ಸುಲಭ ಸಾಲ ಕೊಡುವ ಕ್ರಮವಾಗಿವೆ....

ಇವು ನಗದು ಸೌಲಭ್ಯ ಹಾಗು ನಗದು ಹರಿವಿನ ಸುಲಭತೆಯನ್ನು ಒದಗಿಸುವ ಮಾನಿಟರಿ ಕ್ರಮಗಳೇ ಹೊರತು ಸಂತ್ರಸ್ತರ ಜೋಬಿಗೆ ಸಂಪನ್ಮೂಲವನ್ನು ವರ್ಗಾಯಿಸುವ  ವಿತ್ತೀಯ ಕ್ರಮವಲ್ಲ (Fiscal Transfer ಅಲ್ಲ). 

ಇದನ್ನೇ ಇಂದು  ಅಖಿಲಭಾರತ ಸಣ್ಣ  ಹಾಗು ಮಾಧ್ಯಮ ಉದ್ದಿಮೆಗಳ ಸಂಘ ಗಳು ಸ್ಪಷವಾಗಿ ಹೇಳಿವೆ.  "ನಾವು ಉಳಿದುಕೊಳ್ಳಲು ಬೇಕಿದ್ದದ್ದು ವೆಂಟಿಲೇಟರ್ ಗಳು. ಆದರೆ ಸರ್ಕಾರ ಬರಿ ಗಿಮಿಕ್ಕನ್ನು ಮಾಡಿದೆ" ಎಂದು ಅವರು ಆರೋಪಿಸಿದ್ದಾರೆ. 

ಒಂದು ಪ್ಯಾಕೇಜಿನಲ್ಲಿ ವಿತ್ತೀಯ ಸಂಪನ್ಮೂಲ ವರ್ಗಾವಣೆ, ದೀರ್ಘ ಅವಧಿ ಸಾಲ, ಸಡಿಲವಾದ ಮರುಪಾವತಿ ಶರತ್ತುಗಳು, ಬಡ್ಡಿ ರಿಯಾಯತಿ , ನಗದು ಪೂರೈಕೆ ಮತ್ತು ಸುಲಭ ಲಭ್ಯತೆ ಇವೆಲ್ಲವೂ ಸೇರಿಕೊಂಡಿರುತ್ತವೆ. ಅದರಲ್ಲಿ ತಪ್ಪಿಲ್ಲ. ಆದರೆ ಯಾವ್ಯಾವ ಸಂದರ್ಭದಲ್ಲಿ ಯಾವ್ಯಾವ ಕ್ರಮಗಳಿಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂಬುದು ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದರೆ ಬಿಕ್ಕಟ್ಟಿನ ಸ್ವರೂಪದ ಬಗ್ಗೆ, ತನ್ನ ಜನರ ಬಾಧೆಗಳ ಸ್ವರೂಪಗಳ ಬಗ್ಗೆ ಸರಿಯಾದ ತಿಳವಳಿಕೆ ಇರಬೇಕಾಗುತ್ತದೆ. ಅದು ಬಾಲ್ಕನಿಯಿಂದ ನೋಡಿದರೆ ಅರ್ಥವಾಗುವುದಿಲ್ಲ....

ಉದಾಹರಣೆಗೆ ಒಂದು ಉದ್ಯಮ ವಿಭಾಗ ದಲ್ಲಿ ಬೇಡಿಕೆ-ಪೂರೈಕೆ ಗಳೆಲ್ಲವೂ ಸರಿ ಇದ್ದು ದೊಡ್ಡ ಮಟ್ಟದ ವಹಿವಾಟು ನಡೆಸಲು ಬೇಕಾದ ತುರ್ತು ನಗದಿನ ಕೊರತೆ ಇದ್ದರೆ ಸುಲಭ ನಗದು ಹರಿವನ್ನು ಒದಗಿಸುವ ಮಾನಿಟರಿ ಕ್ರಮಗಳ ಸಡಿಲತೆ ಬೇಕಾಗುತ್ತದೆ. ಆದರೆ ಇವತ್ತಿನ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬೇಡಿಕೆ-ಪೂರೈಕೆ ಎಲ್ಲವು ಕುಸಿದುಬಿದ್ದು ಉದ್ದಿಮೆ ನಡೆಸಲು ಕಾರ್ಮಿಕರಿಗೆ ಸಂಬಳವನ್ನು ಕೊಡದಷ್ಟು ಸಣ್ಣ ಉದ್ದಿಮೆ ಗಳು ಕಂಗೆಟ್ಟು ಕೂತಿರುವಾಗ ಉದ್ದಿಮೆ ಪ್ರಾರಂಭವಾಗಬೇಕೆಂದರೆ ಕೂಡಲೇ ಬೇಕಾಗುವುದು ಕಾರ್ಮಿಕರ ಸಂಬಳವನ್ನು ಸರ್ಕಾರವೇ ನೀಡುವಂತ , ಕಚ್ಚಾವಸ್ತುಗಳ ಬೆಲೆ ಇಳಿತ  ಅಥವಾ ಉತ್ಪಾದನೆಗೆ ತಗಲುವ ವಿದ್ಯುತ್ ಇನ್ನಿತರ ವೆಚ್ಚಗಳ ಮನ್ನಾ ಮಾಡುವಂತ ಆರ್ಥಿಕ ಹಾಗು ವಿತ್ತೀಯ ಕ್ರಮಗಳು. 

ಅಮೇರಿಕ ಹಾಗು ಬ್ರಿಟನ್ನುಗಳ ಪ್ಯಾಕೇಜುಗಳಲ್ಲಿ ಇಂಥ ವಿತ್ತೀಯ ವರ್ಗಾವಣೆಯ ಪಾಲು ಕೂಡ ಸಾಕಷ್ಟಿದೆ. ಆದರೆ ಅದ್ಕಕೆ ಬೇಕಾದ ಸಂಪನ್ಮೂಲಗಳನ್ನು ಅವರು ಕ್ರೂಢೀಕರಿಸುವುದಕ್ಕೆ ಅವರು ಕೂಡ ಜನವಿರೋಧಿ ಮಾರ್ಗಗಳನ್ನೇ ಅನುಸರಿಸುತ್ತಿದ್ದಾರೆ ಎಂಬುದು ಬೇರೆ ವಿಷಯ. 

ಅಂಥಾ ವಿತ್ತೀಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದರೆ ಸರ್ಕಾರವು ಅಷ್ಟು ವಿತ್ತೀಯ ಸಂಪನ್ಮೂಲಗಳನ್ನು ಸಂಗ್ರಹಿಸಬೇಕಾಗುತ್ತದೆ. ಅಂದರೆ ಎಲ್ಲಿ ಉಳಿತಾಯ ಹಾಗು ಸಂಪತ್ತುಗಳಿವೆಯೋ ಅಲ್ಲಿ ತೆರಿಗೆ ಹಾಕಬೇಕಾಗುತ್ತದೆ, ಸಾಲವನ್ನು ಪಡೆದುಕೊಳ್ಳಬೇಕಾಗುತ್ತದೆ. ಅರ್ಥಾತ್ ತನ್ನನ್ನು ಪೋಷಿಸುತ್ತಿರುವ ಶ್ರೀಮಂತ ಹಾಗು ಕಾರ್ಪೊರೇಟ್ ವರ್ಗಗಳ ಮೇಲೆ ಕೋವಿಡ್ ಕಷ್ಟದ ಭಾರವನ್ನು ಹೊರುವಂತೆ ಕೇಳಬೇಕಾಗುತ್ತದೆ. 

ಆದರೆ ಕಾರ್ಪೊರೇಟ್ ಋಣದಲ್ಲಿರುವ ಮೋದಿ ಸರ್ಕಾರ ತನ್ನ ಧಣಿಗಳ ಮೇಲೆ ಭಾರ ಹಾಕುವುದುಂಟೇ? ಹೀಗಾಗಿಯೇ ತನ್ನ ಹಳೆಯ ಮಾತಿನ ಗಾರುಡಿಯ ತಂತ್ರವನ್ನೇ ಈ ಸಂಕಷ್ಟದ ಸಂದರ್ಭದಲ್ಲೂ ಮೋದಿ ಸರ್ಕಾರ ಅನುಸರಿಸುತ್ತಿದೆ. ಅಂದರೆ ಹೇಳೋದು ಮಾರುದ್ದ ...ಕೊಡುವುದು ಮಾತ್ರ ಗೇಣುದ್ದ ... ಅದೇ ದೇಶಭಕ್ತಿ.. ಅದೇ ದೇಶವನ್ನು ಉಳಿಸುವ ರೀತಿ ಎಂಬ ಕರ್ಕಶ ಪ್ರಚಾರ.

ಭಾರತವು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಕೂಡ ತಮ್ಮ ರಾಜಕೀಯದ ಪ್ಯಾಕೇಜಿಗೆ ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಇನ್ನು ಸರಳವಾಗಿ ಅರ್ಥಮಾಡಿಕೊಳ್ಳಬೇಕೆಂದರೆ,  ನಿನ್ನೆ MSME ವರ್ಗಗಳಿಗೆ ಸೀಮಿತವಾಗಿ ಘೋಷಿಸಲಾದ ಪ್ಯಾಕೇಜಿನಲ್ಲಿ ಆ ವಿಭಾಗಕ್ಕೆ ಸರ್ಕಾರವು ನಿಜಕ್ಕೂ ವರ್ಗಾಯಿಸಿರುವ ವಿತ್ತೀಯ ಮೊತ್ತವೆಷ್ಟು ಎಂಬುದನ್ನು ಗಮನಿಸಬೇಕು.

ನಿನ್ನೆ  MSME ವರ್ಗಗಳಿಗೆ ವಿಧವಿಧವಾದ ಬಾಬತ್ತಿನಲ್ಲಿ ಘೋಷಿಸಲಾಗಿರುವ ಮೊತ್ತ ಹೆಚ್ಚು ಕಡಿಮೆ 6 ಲಕ್ಷ ಕೋಟಿ . 

ಆರ್ಥಿಕ ಅನಕ್ಷರತೆ ಮತ್ತು ಮೋದಿ ಮೌಢ್ಯ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಅಷ್ಟು ವಿತ್ತೀಯ ಸಂಪನ್ಮೂಲ ವನ್ನು  ಸಂಕಷ್ಟದಲ್ಲಿರುವ 45 ಲಕ್ಷ ಉದ್ದಿಮೆಗಳಿಗೆ ವರ್ಗಾಯಿಸಲಾಗಿದೆ ಎಂಬಂತೆ ಅರ್ಥವಾಗಿ ಬಿಡುವುದು ಸಹಜ., ಆದರೆ ವಾಸ್ತವವೇನೆಂದರೆ ಒಂದು ನೈಜ ಅಂದಾಜಿನ ಪ್ರಕಾರ ಈ ವರ್ಗಗಳಿಗೆ ಸರ್ಕಾರ ನೇರವಾಗಿ ವರ್ಗಾಯಿಸಿರುವ ವಿತ್ತೀಯ ಸಂಪನ್ಮೂಲ ಕೇವಲ 16,000 ಕೋಟಿ ಮಾತ್ರ !

16,000 ಕೋಟಿ ಕೊಟ್ಟಿದ್ದಕ್ಕೆ 6 ಲಕ್ಷ ಕೋಟಿಯ ಪ್ರಚಾರ ! 

 ಅಂದರೆ 36 ಪಟ್ಟು ಉತ್ಪ್ರೇಕ್ಷೆ. 

ಅಂದರೆ ಸರ್ಕಾರ 36 ರೂಪಾಯಿ ಕೊಡುತ್ತಿದೆ ಎಂದರೆ ಅಸಲಿನಲ್ಲಿ ಕೊಡುವುದು ಕೇವಲ 1 ರೂಪಾಯಿ ಮಾತ್ರ ಎಂದಾಯ್ತು. 

ಸರ್ಕಾರದ ತಂತ್ರ ಇದೆ ಆಗಿದ್ದಲ್ಲಿ  20 ಲಕ್ಷ ಕೋಟಿಯ ಪ್ಯಾಕೇಜ್ ಎಂದರೆ ವಾಸ್ತವದಲ್ಲಿ ಜನರಿಗೆ ವರ್ಗಾವಣೆಯಾಗುವುದು ಕೇವಲ 50,000 ಕೋಟಿ ರೂಪಾಯಿಗಳು ಮಾತ್ರ ಎಂದಾಯ್ತಲ್ಲವೇ????

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)