varthabharthiಆರೋಗ್ಯ

ಸಾಮಾನ್ಯ ಸೋಂಕುಗಳನ್ನು ನಿಭಾಯಿಸುವ ಬಗೆ

ವಾರ್ತಾ ಭಾರತಿ : 14 May, 2020
ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ, ಇತರ ಭಾಗಗಳಲ್ಲೂ ಮಲೇರಿಯಾ, ಡೆಂಗ್, ಇಲಿ ಜ್ವರ, ವೈರಾಣುಗಳಿಂದಾಗುವ ಯಕೃತ್ತಿನ ಉರಿಯೂತ (ವೈರಲ್ ಹೆಪಟೈಟಿಸ್) ಮುಂತಾದ ಸೋಂಕು ರೋಗಗಳು ಹೆಚ್ಚತೊಡಗುತ್ತವೆ. ಈಗ ಹೊಸ ಕೊರೋನ ವೈರಸ್ (ಸಾರ್ಸ್-ಕೋವಿ-2) ಕೂಡ ಸೇರಿಕೊಂಡಿರುವುದರಿಂದ ಇನ್ನಷ್ಟು ಗೊಂದಲಗಳಾಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಸೋಂಕುಗಳನ್ನು ಗುರುತಿಸುವುದಕ್ಕೆ ಮತ್ತು ನಿಭಾಯಿಸುವುದಕ್ಕೆ ಮಂಗಳೂರಿನ ವೈದ್ಯಕೀಯ ತಜ್ಞರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಚರ್ಮ ತಜ್ಞರಾದ ಡಾ. ಬಾಲಸರಸ್ವತಿ, ಶ್ವಾಸಾಂಗ ತಜ್ಞರಾದ ಡಾ. ವಿಷ್ಣು ಶರ್ಮ ಮತ್ತು ಪಚನಾಂಗ ತಜ್ಞರಾದ ಡಾ. ಶಿವಪ್ರಸಾದ್ ಅವರು ಜೊತೆಗೂಡಿ ಸರಳವಾದ, ಸುಲಭವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ.

ಮೊದಲ ಮೂರ್ನಾಲ್ಕು ದಿನಗಳಲ್ಲಿ ಕಂಡುಬರುವ ರೋಗ ಲಕ್ಷಣಗಳನ್ನಾಧರಿಸಿ, ಹಳ್ಳಿಗಳಲ್ಲೂ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಭ್ಯವಿರುವ ಸರಳವಾದ ಪರೀಕ್ಷೆಗಳನ್ನಷ್ಟೇ ಬಳಸಿ ಈ ಸೋಂಕುಗಳನ್ನು ಗುರುತಿಸಲು ಸಾಧ್ಯವಾಗುವಂತೆ ಈ ಮಾರ್ಗಸೂಚಿಯನ್ನು ರೂಪಿಸಲಾ ಗಿದ್ದು, ವೈದ್ಯರು, ಆರೋಗ್ಯ ಕರ್ಮಿಗಳು ಮತ್ತು ಜನಸಾಮಾನ್ಯರೆಲ್ಲರಿಗೂ ಇದು ನೆರವಾಗಲಿದೆ.

ಹೊಸ ಕೊರೋನ ಸೋಂಕನ್ನು ಕೂಡಲೇ ಗುರುತಿಸಿ, ಹರಡದಂತೆ ತಡೆಯುವುದಕ್ಕೆ ಈಗ ಪ್ರಾಶಸ್ತ್ಯ ನೀಡಲಾಗುತ್ತಿರುವುದರಿಂದ ಜ್ವರ ಇತ್ಯಾದಿ ಸೋಂಕು ಸಂಬಂಧಿತ ಲಕ್ಷಣಗಳಿರುವವರಲ್ಲಿ ಕೊರೋನ ಪೀಡಿತರನ್ನು ಮೊದಲಾಗಿ ಪ್ರತ್ಯೇಕಿಸಬೇಕಾಗುತ್ತದೆ. ಹೊಸ ಕೊರೋನ ವೈರಸ್ ತಗಲಿದ ಶೇ.80-85% ಮಂದಿಯಲ್ಲಿ ಯಾವುದೇ ರೋಗಲಕ್ಷಣಗಳೂ ಇಲ್ಲದೆ ಅದು ತನ್ನಿಂತಾನಾಗಿ ವಾಸಿಯಾಗುತ್ತದೆ ಎಂದು ಇತ್ತೀಚಿನ ಹಲವು ವರದಿಗಳಲ್ಲಿ ಹೇಳಲಾಗಿದೆ.

ಇನ್ನುಳಿದವರಲ್ಲಿ, ಮೂಗಿನಲ್ಲಿ ವಾಸನೆ ತಿಳಿಯದಿರುವುದು, ನಾಲಗೆಯಲ್ಲಿ ರುಚಿ ಹತ್ತದಿರುವುದು, ಗಂಟಲು ನೋವು, ನೆಗಡಿ, ಕೆಮ್ಮು, ಮೈಕೈ ನೋವು, ತಲೆ ನೋವು, ಮತ್ತು ಕೆಲವರಲ್ಲಿ ಭೇದಿ, ಕೊರೋನ ಸೋಂಕಿನ ಆರಂಭಿಕ ಲಕ್ಷಣಗಳೆಂದು ಹಲವಾರು ಅಧ್ಯಯನಗಳೀಗ ತೋರಿಸಿವೆ. ಕೆಲವರಲ್ಲಿ ಕಣ್ಣು ಕೆಂಪಾಗುವುದನ್ನೂ ಗುರುತಿಸಲಾಗಿದೆ. ಜ್ವರವು ಮೊದಲ ದಿನವೇ ಇರಬಹುದು ಅಥವಾ ಇತರ ಲಕ್ಷಣಗಳು ತೊಡಗಿದ ಎರಡು ಮೂರು ದಿನಗಳ ಬಳಿಕವೂ ಕಾಣಿಸಿಕೊಳ್ಳಬಹುದು, ಕೆಲವರಲ್ಲಿ ಜ್ವರ ಇಲ್ಲದೆಯೂ ಇರಬಹುದು; ಕೆಲವರಲ್ಲಿ ಜೊತೆಗೆ ಚಳಿ-ನಡುಕಗಳೂ ಇರಬಹುದು. ಹೀಗೆ ಶ್ವಾಸಾಂಗಕ್ಕೆ ಸಂಬಂಧಿಸಿದ ಲಕ್ಷಣಗಳಿರುವವರು ಕೊರೋನ ಸೋಂಕುಳ್ಳವರೆಂದುಕೊಂಡು ಮನೆಯಲ್ಳೇ ಉಳಿಯಬೇಕಾಗುತ್ತದೆ.

ಕೊರೋನ ಪೀಡಿತರಿಗೆ ಆರಂಭದ ಹಂತದಲ್ಲಿ ಯಾವುದೇ ಪರೀಕ್ಷೆ ಅಥವಾ ಚಿಕಿತ್ಸೆ ಅಗತ್ಯವಿಲ್ಲದಿರುವುದರಿಂದ ಅವರು ವೈದ್ಯರ ಬಳಿಗೋ, ಆಸ್ಪತ್ರೆಗೋ ಹೋಗುವ ಅಗತ್ಯವೇ ಇರುವುದಿಲ್ಲ; ಹಾಗೆ ಹೋಗುವುದರಿಂದ ಅವರು ಹೋದಲ್ಲೆಲ್ಲ ಸೋಂಕು ಹರಡಲು ಕಾರಣರಾಗುತ್ತಾರೆಯೇ ಹೊರತು ಬೇರಾವ ಪ್ರಯೋಜನವೂ ಆಗುವುದಿಲ್ಲ. ಆದ್ದರಿಂದ ಕೊರೋನ ಸೋಂಕಿನ ಲಕ್ಷಣಗಳಿರುವವರು ಮನೆಯಲ್ಲೇ ಪ್ರತ್ಯೇಕವಾಗಿ ಉಳಿದು, ಮನೆಯವರಿಗಾಗಲೀ, ಹೊರಗಿನವರಿಗಾಗಲೀ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ, ತಮ್ಮ ವೈದ್ಯರನ್ನೋ, ಈಗಾಗಲೇ ಸ್ಥಾಪಿಸಲಾಗಿರುವ ಕೊರೋನ ಸಹಾಯವಾಣಿ 14410 ಯನ್ನೋ ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆಯಬೇಕು.

ಹೀಗೆ ಮನೆಯಲ್ಲಿ ಉಳಿದವರಲ್ಲಿ ಜ್ವರ ಹೆಚ್ಚತೊಡಗಿದರೆ, ಕೆಮ್ಮು ಉಲ್ಬಣಿಸಿದರೆ ಅಥವಾ ಉಸಿರಾಟಕ್ಕೆ ಕಷ್ಟವೆನಿಸಿದರೆ ಅವರು ಆ ಕೂಡಲೇ ಮತ್ತೆ ತಮ್ಮ ವೈದ್ಯರನ್ನು ಅಥವಾ ಸಹಾಯವಾಣಿಯನ್ನು ಸಂಪರ್ಕಿಸಿ ನೆರವನ್ನು ಕೇಳಬೇಕು. ಹಾಗೆಯೇ, ಕೊರೋನ ಸೋಂಕು ಗಂಭೀರವಾಗುವ ಆಪಾಯವುಳ್ಳ 60-65 ವರ್ಷಕ್ಕೆ ಮೇಲ್ಪಟ್ಟವರು, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಮೂತ್ರ ಪಿಂಡಗಳು, ಯಕೃತ್ತು ಅಥವಾ ಶ್ವಾಸಾಂಗದ ದೀರ್ಘ ಕಾಲೀನ ಕಾಯಿಲೆಗಳು, ಕ್ಯಾನ್ಸರ್, ರೋಗರಕ್ಷಣಾ ಶಕ್ತಿ ಕುಂಠಿತವಾಗುಳ್ಳವರು ಕೂಡ ತಮ್ಮ ವೈದ್ಯರ ಸಂಪರ್ಕದಲ್ಲಿದ್ದು ನೆರವನ್ನು ಪಡೆಯಬೇಕು. ಅವರೆಲ್ಲರನ್ನು ಮನೆಗಳಲ್ಲೇ ಪರೀಕ್ಷಿಸಿ, ಪಲ್ಸ್ ಆಕ್ಸಿಮೀಟರ್ ಎಂಬ ಸರಳ ಸಾಧನದ ಮೂಲಕ ಅವರ ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು  ನೋಡುವುದಕ್ಕೆ ಸಂಚಾರಿ ಘಟಕಗಳನ್ನು ಏರ್ಪಡಿಸುವಂತೆ ಈಗಾಗಲೇ ಸರಕಾರವನ್ನು ವಿನಂತಿಸಲಾಗಿದೆ. ತೀವ್ರವಾದ ರೋಗಲಕ್ಷಣ ಗಳಿದ್ದರೆ, ಆಮ್ಲಜನಕದ ಪ್ರಮಾಣವು 95%ಕ್ಕಿಂತ ಕಡಿಮೆಯಿದ್ದರೆ, ನಾಡಿಯ ಗತಿ 100ಕ್ಕಿಂತ ಹೆಚ್ಚಿದ್ದರೆ, ಉಸಿರಾಟದ ಗತಿ 20ಕ್ಕಿಂತ ಹೆಚ್ಚಿದ್ದರೆ ಅಂಥ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.

ಡೆಂಗಿ, ಇಲಿ ಜ್ವರ, ಮಲೇರಿಯಾ, ಹೆಪಟೈಟಿಸ್

ಡೆಂಗಿ ಜ್ವರವು ವೈರಸ್‌ನಿಂದ ಉಂಟಾಗುವ ಸೋಂಕಾಗಿದ್ದು, ಈಡಿಸ್ ಜಾತಿಯ ಸೊಳ್ಳೆಯಿಂದ ಹರಡಲ್ಪಡುತ್ತದೆ. ಮಳೆಗಾಲದಲ್ಲಿ ಸೊಳ್ಳೆಗಳು  ವೃದ್ಧಿಯಾಗಲು ಅವಕಾಶವಾಗುವ ನಗರ ಹಾಗೂ ಇತರ ಪ್ರದೇಶಗಳಲ್ಲಿ, ನೀರು ನಿಲ್ಲಲು ಅವಕಾಶವಿರುವ ರಬ್ಬರ್ ಸಂಗ್ರಹಣೆಯಂತಹ ಚಟುವಟಿಕೆಗಳಿರುವ ಪ್ರದೇಶಗಳಲ್ಲಿ ಡೆಂಗಿ ಜ್ವರವು ಹೆಚ್ಚು ಹರಡುತ್ತದೆ. ಇಲಿ ಜ್ವರವು ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ; ಅವು ಇಲಿಗಳ ಮೂತ್ರದಲ್ಲಿ ವಿಸರ್ಜಿಸಲ್ಪಟ್ಟು, ಅದರಿಂದ ಕಲುಷಿತವಾದ ನೀರಿನ ಮೂಲಕ ಮನುಷ್ಯರನ್ನು ಸೋಂಕುತ್ತವೆ; ಕೃಷಿ ಚಟುವಟಿಕೆಗಳಿರುವ ಗ್ರಾಮೀಣ ಭಾಗಗಳಲ್ಲೇ ಅದು ಹೆಚ್ಚಾಗಿ ಕಂಡುಬರುತ್ತದೆ.

ಡೆಂಗ್ ಮತ್ತು ಇಲಿ ಜ್ವರಗಳೆರಡರಲ್ಲೂ ಜ್ವರ, ಮೈಕೈ ನೋವು ಮತ್ತು ತಲೆ ನೋವು ಸಾಮಾನ್ಯವಾಗಿರುತ್ತವೆ. ಡೆಂಗ್ ನಲ್ಲಿ ಕಣ್ಣಾಲಿಗಳ ಹಿಂಭಾಗದಲ್ಲಿ ನೋವು ಸಾಮಾನ್ಯವಾಗಿ ಕಂಡು ಬರುತ್ತದೆ. ಡೆಂಗಿ ಜ್ವರದಲ್ಲಿ ಮೊದಲ ಮೂರು ದಿನಗಳಲ್ಲಿ ಜ್ವರವಿದ್ದು, ನಂತರ ಒಂದೆರಡು ದಿನ ಜ್ವರ ಬಿಟ್ಟು, ಮತ್ತೆ ಒಂದೆರಡು ದಿನ ಜ್ವರವಿರುತ್ತದೆ, ಹೆಚ್ಚಿನವರಲ್ಲಿ ಯಾವ ಸಮಸ್ಯೆಗಳೂ ಆಗದೆ ಆರೇಳು ದಿನಗಳಲ್ಲಿ ಕಾಯಿಲೆಯು ವಾಸಿಯಾಗುತ್ತದೆ. ಡೆಂಗ್ ಜ್ವರದಲ್ಲಿ ಚರ್ಮದ ಮೇಲೆ ದಡಿಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ; ಮೊದಲ ದಿನಗಳಲ್ಲಿ ನವಿರಾದ, ಕೆಂಪಗಿನ ದಡಿಕೆಗಳು ಕೈ-ಕಾಲು, ಮೈಮೇಲೆ ಮೂಡುತ್ತವೆ, ಒತ್ತಿದಾಗ ಬಿಳಿಚಿಕೊಳ್ಳುತ್ತವೆ; ಮೂರ್ನಾಲ್ಕು ದಿನಗಳ ಬಳಿಕ, ಇನ್ನಷ್ಟು ಗಾಢವಾದ ದಡಿಕೆಗಳೆದ್ದು, ನಡುನಡುವೆ ದಡಿಕೆಯಿಲ್ಲದ ಚರ್ಮವು ದ್ವೀಪಗಳಂತೆ (ಕೆಂಪಗಿನ ಸಮುದ್ರದಲ್ಲಿ ಬಿಳಿ ದ್ವೀಪಗಳು) ಕಂಡುಬರುತ್ತದೆ. ಕೆಲವರಲ್ಲಿ ಕಣ್ಣುಗಳಲ್ಲಿ ರಕ್ತಸ್ರಾವವು ಕಂಡುಬರಬಹುದು.

ಇಲಿಜ್ವರವೂ ಎರಡು ಹಂತಗಳಲ್ಲಿ ಉಂಟಾಗುತ್ತದೆ; ಮೊದಲ ಹಂತದಲ್ಲಿ ಜ್ವರ, ಮೈಕೈ ನೋವು, ತಲೆ ನೋವು ಮುಂತಾದ ಸಾಮಾನ್ಯ ಲಕ್ಷಣಗಳಿರು ತ್ತವೆ; ಬೆನ್ನು, ಹೊಟ್ಟೆ ಮತ್ತು ಕಾಲಿನ ಸ್ನಾಯುಗಳಲ್ಲಿ ನೋವು ವಿಪರೀತವಾಗಿದ್ದು, ಆ ಸ್ನಾಯುಗಳನ್ನು ಒತ್ತಿದಾಗ ನೋವು ಇನ್ನಷ್ಟು ಹೆಚ್ಚಾಗುತ್ತದೆ. ಇಲಿ ಜ್ವರದಲ್ಲಿ ಆರಂಭದ ಹಂತದಲ್ಲೇ ಕಣ್ಣೊಳಗೆ ಕೆಂಪಾಗಿ ಊದಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ; ಕೆಲವರಲ್ಲಿ ಕಣ್ಣುಗಳಲ್ಲಿ ರಕ್ತಸ್ರಾವವೂ ಕಂಡುಬರಬಹುದು. ಮೊದಲ ಹಂತವು ಸುಮಾರು 2-9 ದಿನಗಳ ಕಾಲ ಇರುತ್ತದೆ. ಕೆಲದಿನಗಳ ಬಳಿಕ ಎರಡನೇ ಹಂತದಲ್ಲಿ ಮತ್ತೆ ಜ್ವರವು ತೊಡಗಿ ಅದರ ಜೊತೆಗೆ ಯಕೃತ್ತಿನ ಸಮಸ್ಯೆಯಾಗಿ ಕಾಮಾಲೆ, ಮೂತ್ರಪಿಂಡಗಳ ವೈಫಲ್ಯ, ಕೆಮ್ಮಿನಲ್ಲಿ ರಕ್ತ, ಕರುಳಿನಿಂದ ರಕ್ತಸ್ರಾವ, ಮಿದುಳುಪೊರೆಯ ಉರಿಯೂತ ಮುಂತಾದ ಗಂಭೀರ ಸಮಸ್ಯೆಗಳು ಕಂಡುಬರಬಹುದು.

ಮಲೇರಿಯಾದಲ್ಲಿ ಜ್ವರ ಹಾಗೂ ತಲೆ ನೋವು ಸಾಮಾನ್ಯವಾಗಿದ್ದು, ಮೊದಲ ದಿನಗಳಲ್ಲಿ ಆಗಾಗ, ದಿನವಿಡೀ ಜ್ವರವಿದ್ದು, ನಂತರ ಎರಡು ದಿನಗಳಿಗೊಮ್ಮೆ ಚಳಿ ಸಹಿತ ಜ್ವರವುಂಟಾಗಬಹುದು. ಕೆಲವರಲ್ಲಿ, ಅದರಲ್ಲೂ ವೈವಾಕ್ಸ್ ಮಲೇರಿಯಾದಲ್ಲಿ, ಒಣ ಕೆಮ್ಮು ಕಂಡುಬರಬಹುದು. ವೈರ‌ಸ್‌ಗಳಿಂದ ಉಂಟಾಗುವ ಯಕೃತ್ತಿನ ಉರಿಯೂತ, ಅಥವಾ ವೈರಲ್ ಹೆಪಟೈಟಿಸ್‌ನಲ್ಲಿ, ಜ್ವರದ ಜೊತೆಗೆ ವಾಕರಿಕೆ/ವಾಂತಿಗಳು ಸಾಮಾನ್ಯವಾಗಿರುತ್ತವೆ; ನಾಲ್ಕಾರು ದಿನಗಳಲ್ಲಿ ಈ ಲಕ್ಷಣಗಳು ಕಡಿಮೆಯಾಗುತ್ತಿದ್ದಂತೆ ಕಾಮಾಲೆ ಹೆಚ್ಚಾಗತೊಡಗಿ ಮೂತ್ರ ಮತ್ತು ಕಣ್ಣುಗಳು ಹಳದಿಯಾಗುತ್ತವೆ. ತೀವ್ರ ರೂಪದ ಮಲೇರಿಯಾ ಹಾಗೂ ಇಲಿ ಜ್ವರಗಳಲ್ಲಿ ಕೂಡ ಕಾಮಾಲೆಯಿಂದ ಕಣ್ಣು ಹಳದಿ ಬಣ್ಣಕ್ಕೆ ತಿರುಗಬಹುದು.

ರಕ್ತ-ಮೂತ್ರ ಪರೀಕ್ಷೆಗಳು

ಎಲ್ಲೆಡೆ ಲಭ್ಯವಿರುವ ರಕ್ತದ ಬಿಳಿ ರಕ್ತಕಣಗಳ ಪರೀಕ್ಷೆ, ಹಿಮೋಗ್ಲೋಬಿನ್ ಪರೀಕ್ಷೆ, ಇಎಸ್‌ಆರ್ ಪರೀಕ್ಷೆ, ಎಎಲ್‌ಟಿ ಕಿಣ್ವದ ಪರೀಕ್ಷೆ, ಮಲೇರಿಯಾ ಪರೀಕ್ಷೆ ಮತ್ತು ಮೂತ್ರದ ಪರೀಕ್ಷೆಗಳನ್ನು ಬಳಸಿ ಈ ಸೋಂಕುಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಿದೆ.

ಇಲಿ ಜ್ವರವುಳ್ಳ ಹೆಚ್ಚಿನವರಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ; ಕೊರೋನ ಸೋಂಕು, ಡೆಂಗ್, ಮಲೇರಿಯಾ ಮತ್ತು ವೈರಲ್ ಹೆಪಟೈಟಿಸ್‌ಗಳಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಯು ಸಾಮಾನ್ಯ ಮಟ್ಟದಲ್ಲಿರುತ್ತದೆ ಅಥವಾ ಕಡಿಮೆಯೇ ಆಗುತ್ತದೆ. ಹೊಸ ಕೊರೊನಾ ಸೋಂಕಿನಲ್ಲಿ ದುಗ್ಧ ಕಣಗಳಲ್ಲಿ ಇಳಿಕೆ (Lymphopenia) ಆಗುವುದನ್ನು ಗುರುತಿಸಲಾಗಿದ್ದು, ಅದು  <20% ಅಥವಾ <1000/ಮಿಮಿ3 ಇದ್ದರೆ ಗಂಭೀರ ಕಾಯಿಲೆಯ ಸೂಚನೆಯಾಗಿರಬಹುದು ಎನ್ನಲಾಗಿದೆ.

ಡೆಂಗ್ ಜ್ವರದ ತೀವ್ರತೆಯನ್ನು ಅಂದಾಜಿಸುವುದಕ್ಕೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಪರೀಕ್ಷಿಸಬೇಕು (ಪ್ಲೇಟ್ಲೆಟ್ ಪ್ರಮಾಣವನ್ನಲ್ಲ). ಡೆಂಗ್ ಜ್ವರದಲ್ಲಿ ಕಿರು ರಕ್ತನಾಳಗಳಲ್ಲಿ ಸಮಸ್ಯೆಯಾಗಿ ರಕ್ತದ್ರವವು ರಕ್ತನಾಳಗಳಿಂದ ಅಂಗಾಂಶಗಳೊಳಕ್ಕೆ ಸೋರಿಕೆಯಾಗುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಏರತೊಡಗುತ್ತದೆ. ಡೆಂಗ್ ಪೀಡಿತರಲ್ಲಿ ಕಾಯಿಲೆಯ 3ನೇ ಅಥವಾ 4ನೇ ದಿನಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣವು 20%ಕ್ಕಿಂತ ಹೆಚ್ಚು  ಮೇಲೇರಿದರೆ ರಕ್ತದ್ರವದ ಸೋರಿಕೆಯು ತೀವ್ರವಾಗಿರುವುದನ್ನು ಸೂಚಿಸುತ್ತದೆ. ಡೆಂಗ್ ಪೀಡಿತರಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಏರುವ ಬದಲು ಒಮ್ಮಿಂದೊಮ್ಮೆಗೇ ಕಡಿಮೆಯಾಗತೊಡಗಿ, ಜೊತೆಗೆ ರಕ್ತದಲ್ಲಿ ಎಎಲ್‌ಟಿ ಪ್ರಮಾಣವೂ ಹೆಚ್ಚಿ, ಜ್ವರವೂ ಏರತೊಡಗಿದರೆ ಅಪರೂಪದ ಸಮಸ್ಯೆಯಾದ ಹಿಮೋಫಾಗೊಸೈಟಿಕ್ ಲಿಂಫೋ ಹಿಸ್ಟಿಯೋಸೈಟೋಸಿಸ್ (ರೋಗರಕ್ಷಣೆಯ ಕಣಗಳೇ ರಕ್ತಕಣಗಳನ್ನು ಭಕ್ಷಿಸುವ ಸಮಸ್ಯೆ) ಉಂಟಾಗಿರುವ ಸಾಧ್ಯತೆಯನ್ನು ಪರಿಗಣಿಸಬೇಕಾಗುತ್ತದೆ. ಇಂತೆಲ್ಲ ಸಮಸ್ಯೆಗಳಾಗುವ ಡೆಂಗ್ ಪೀಡಿತರನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಿ, ವೈದ್ಯಕೀಯ ಅಥವಾ ರಕ್ತ ತಜ್ಞರ ಸಲಹೆಯನ್ನು ಒದಗಿಸಬೇಕು.

ತೀವ್ರ ರೂಪದ ಮಲೇರಿಯಾ ಇದ್ದವರಲ್ಲೂ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗಬಹುದಾಗಿದ್ದು, ರಕ್ತ ಮರುಪೂರಣದ ಅಗತ್ಯವುಂಟಾಗಬಹುದು. ಇಲಿ ಜ್ವರದಲ್ಲೂ ರಕ್ತಸ್ರಾವವಾದರೆ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗಬಹುದು. ಹೊಸ ಕೊರೊನಾ ಸೋಂಕು ಮತ್ತು ವೈರಲ್ ಹೆಪಟೈಟಿಸ್‌ಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಸಾಮಾನ್ಯವಾಗಿಯೇ ಇರುತ್ತದೆ.

ಡೆಂಗ್, ಮಲೇರಿಯಾ ಮತ್ತು ಇಲಿ ಜ್ವರಗಳೆಲ್ಲದರಲ್ಲಿ ಪ್ಲೇಟ್ಲೆಟ್ ಕಣಗಳ ಸಂಖ್ಯೆಯು ಗಣನೀಯವಾಗಿ ಇಳಿಯುತ್ತದೆ; ಅದು ಸೋಂಕಿನ ತೀವ್ರತೆಯನ್ನೇನೂ ಸೂಚಿಸುವುದಿಲ್ಲ. ಕೊರೋನ ಸೋಂಕು ಮತ್ತು ವೈರಲ್ ಹೆಪಟೈಟಿಸ್‌ಗಳಲ್ಲಿ ಪ್ಲೇಟ್ಲೆಟ್ ಸಂಖ್ಯೆಯು ಸಾಮಾನ್ಯ ಮಟ್ಟದಲ್ಲೇ ಇರುತ್ತದೆ.

ಇಲಿ ಜ್ವರದಲ್ಲಿ ರಕ್ತದ ಇಎಸ್ಆರ್ ಗಣನೀಯವಾಗಿ ಏರಿಕೆಯಾಗುತ್ತದೆ (>60ಮಿಮಿ); ಕೊರೊನಾ, ಮಲೇರಿಯಾ, ಡೆಂಗಿ ಮತ್ತು ವೈರಲ್ ಹೆಪಟೈಟಿಸ್‌ಗಳಲ್ಲಿ ಆರಂಭದ ಹಂತಗಳಲ್ಲಿ ಇಎಸ್ಆರ್ ಮಟ್ಟವು ಸಾಮಾನ್ಯವಾಗಿಯೇ ಇರುತ್ತದೆ ಅಥವಾ ತುಸು ಹೆಚ್ಚಿರಬಹುದು.

ರಕ್ತದಲ್ಲಿ ಎಎಲ್‌ಟಿ ಎಂಬ ಯಕೃತ್ತಿನ ಕಿಣ್ವದ ಪ್ರಮಾಣವು ವೈರಲ್ ಹೆಪಟೈಟಿಸ್‌ನಲ್ಲಿ ಗಣನೀಯವಾಗಿ, ಅಂದರೆ 350ಕ್ಕಿಂತ ಹೆಚ್ಚು ಏರುತ್ತದೆ. ಕೊರೋನ, ಡೆಂಗ್, ಮಲೇರಿಯಾ ಹಾಗೂ ಇಲಿ ಜ್ವರಗಳಲ್ಲಿ ಎಎಲ್‌ಟಿ ಪ್ರಮಾಣವು ಸಾಮಾನ್ಯವಾಗಿರುತ್ತದೆ ಅಥವಾ ಸ್ವಲ್ಪ ಮಟ್ಟಿಗೆ ಏರುತ್ತದೆ.

ಕೊರೋನದ ಲಕ್ಷಣಗಳಿಲ್ಲದ ಜ್ವರ ಪೀಡಿತರಲ್ಲಿ ಮಲೇರಿಯಾಕ್ಕಾಗಿ ರಕ್ತದ ಪರೀಕ್ಷೆಯನ್ನು ಮಾಡುವುದು ಅಪೇಕ್ಷಣೀಯವಾಗಿದ್ದು, ಮಲೇರಿಯಾ ಸೋಂಕಿದ್ದರೆ ಮಲೇರಿಯಾ ಪರೋಪಜೀವಿಗಳು ಕಾಣಸಿಗುತ್ತವೆ.

ಇಲಿ ಜ್ವರವುಳ್ಳವರ ಮೂತ್ರದಲ್ಲಿ ಆಲ್ಬುಮಿನ್, ಬಿಳಿ ರಕ್ತ ಕಣಗಳು ಮತ್ತು ಕೆಂಪು ರಕ್ತ ಕಣಗಳ ವಿಸರ್ಜನೆಯು ಹೆಚ್ಚುವುದು ಅತಿ ಸಾಮಾನ್ಯವಾಗಿ ಕಂಡು ಬರುತ್ತದೆ. ಕೊರೋನ, ಮಲೇರಿಯಾ ಮತ್ತು ಡೆಂಗ್ ಜ್ವರಗಳಲ್ಲಿ ಮೂತ್ರದ ಪರೀಕ್ಷೆಯು ಸಾಮಾನ್ಯವಾಗಿರುತ್ತದೆ; ತೀವ್ರ ಸಮಸ್ಯೆಗಳೇನಾದರೂ ಆದರೆ ಮೂತ್ರದಲ್ಲೂ ವ್ಯತ್ಯಾಸಗಳು ಕಂಡುಬರಬಹುದು. ವೈರಲ್ ಹೆಪಟೈಟಿಸ್‌ ಉಳ್ಳವರಲ್ಲಿ ಕಾಮಾಲೆ ಹೆಚ್ಚತೊಡಗಿದಂತೆ ಮೂತ್ರದಲ್ಲಿ ಯೂರೋಬಿಲಿನೋಜನ್ ಮತ್ತು ಬಿಲಿರುಬಿನ್ ವಿಸರ್ಜನೆಯು ಹೆಚ್ಚತೊಡಗುತ್ತದೆ.

ಸೋಂಕುಗಳ ಚಿಕಿತ್ಸೆ ಮತ್ತು ಆಸ್ಪತ್ರೆಗೆ ದಾಖಲಿಸುವಿಕೆ

ಹೊಸ ಕೊರೋನ ಸೋಂಕಿನ ಲಕ್ಷಣಗಳಿರುವವರಿಗೆ ಆರಂಭದ ಹಂತದಲ್ಲಿ ಯಾವುದೇ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿಲ್ಲ; ಹೆಚ್ಚಿನವರಲ್ಲಿ ಅದು ಸೌಮ್ಯ ರೂಪದ ಕಾಯಿಲೆಯಾಗಿ 4-7 ದಿನಗಳಲ್ಲಿ ತಾನಾಗಿ ವಾಸಿಯಾಗುತ್ತದೆ. ಆರೇಳು ದಿನಗಳ ಬಳಿಕವೂ ಜ್ವರವು ಮುಂದುವರಿಯುತ್ತಿದ್ದರೆ, ಕೆಮ್ಮು ಹೆಚ್ಚುತ್ತಿದ್ದರೆ, ಮತ್ತು ಉಸಿರಾಟಕ್ಕೆ ಕಷ್ಟವೆನಿಸುತ್ತಿದ್ದರೆ, ರಕ್ತದಲ್ಲಿ ಆಮ್ಲಜನಕದ ಮಟ್ಟವು 95% ಕ್ಕಿಂತ ಕಡಿಮೆಯಿದ್ದರೆ, ಮತ್ತು ಗಂಭೀರವಾದ ಸಮಸ್ಯೆಗಳಾಗುವ ಸಾಧ್ಯತೆಗಳುಳ್ಳ 60 ವರ್ಷಕ್ಕೆ ಮೇಲ್ಪಟ್ಟವರು, ರಕ್ತದ ಏರೊತ್ತಡವುಳ್ಳವರು, ಸಕ್ಕರೆ ಕಾಯಿಲೆಯುಳ್ಳವರು, ಶ್ವಾಸಾಂಗ, ಯಕೃತ್ತು ಹಾಗೂ ಮೂತ್ರಪಿಂಡಗಳ ಗಂಭೀರ ಕಾಯಿಲೆಯುಳ್ಳವರು, ಕ್ಯಾನ್ಸರ್ ಪೀಡಿತರು, ರೋಗರಕ್ಷಣಾ ವ್ಯವಸ್ಥೆಯ ಸಮಸ್ಯೆಯುಳ್ಳವರು ಆಸ್ಪತ್ರೆಗೆ ದಾಖಲಾಗ ಬೇಕಾಗಬಹುದು.

ಡೆಂಗ್ ಜ್ವರವು ಹೆಚ್ಚಿನವರಲ್ಲಿ ಸೌಮ್ಯ ರೂಪದಲ್ಲಿದ್ದು ವಾರದೊಳಗೆ ತಾನಾಗಿ ವಾಸಿಯಾಗುತ್ತದೆ; ಜ್ವರವು ವಿಪರೀತವಾಗಿದ್ದರಷ್ಟೇ ಪಾರಸಿಟಮಾಲ್ ಮಾತ್ರೆಯನ್ನು ಬಳಸಬಹುದು. ಮೇಲೆ ಹೇಳಿದಂತೆ ಹಿಮೋಗ್ಲೋಬಿನ್ ಮಟ್ಟವು 20%ಕ್ಕಿಂತ ಮೇಲೇರಿದರೆ ಅಥವಾ ಒಮ್ಮೆಗೇ ಇಳಿದರೆ, ಅಥವಾ ವಿಪರೀತವಾದ ಬಳಲಿಕೆ, ಏರುತ್ತಿರುವ ಜ್ವರ, ಎಡೆಬಿಡದ ವಾಂತಿ, ನಿಂತಾಗ ತಲೆ ಸುತ್ತಿ ಬವಳಿ ಬಂದಂತಾಗುವುದು, ರಕ್ತಸ್ರಾವ ಮುಂತಾದ ಲಕ್ಷಣಗಳಿದ್ದರೆ ಡೆಂಗ್ ಪೀಡಿತರನ್ನು ಆಸ್ಪತ್ರೆಯಲ್ಲಿ ದಾಖಲಿಸಬೇಕಾಗುತ್ತದೆ.

ಮಲೇರಿಯಾ ಸೋಂಕು ದೃಢಪಟ್ಟವರೆಲ್ಲರೂ ಸೂಕ್ತವಾದ ಮಲೇರಿಯಾ ನಿರೋಧಕ ಚಿಕಿತ್ಸೆಯನ್ನು ಪಡೆಯಬೇಕು, ಅದಾಗಿ 48 ಗಂಟೆಗಳಲ್ಲಿ ಜ್ವರವು ಶಮನವಾಗುತ್ತದೆ. ಎಡೆಬಿಡದ ವಾಂತಿಯಿದ್ದರೆ, ತೀವ್ರವಾದ ಮಲೇರಿಯಾದ ಲಕ್ಷಣಗಳಿದ್ದರೆ (ಪ್ರಜ್ಞಾಹೀನತೆ, ಉಸಿರಾಟದ ಸಮಸ್ಯೆ, ಮೂತ್ರಪಿಂಡಗಳ ವೈಫಲ್ಯ, ರಕ್ತಹೀನತೆ, ಇತ್ಯಾದಿ) ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ.

ಇಲಿ ಜ್ವರವು ಮೊದಲನೇ ಹಂತದಲ್ಲಿ ಹೆಚ್ಚಿನವರಲ್ಲಿ ಸಾಮಾನ್ಯ ಜ್ವರದಂತೆ ಹೋಗಿಬಿಡುತ್ತದೆ. ಈ ಹಂತದಲ್ಲಿ ಇಲಿ ಜ್ವರವು ಗುರುತಿಸಲ್ಪಟ್ಟರೆ ಡಾಕ್ಸಿಸೈಕ್ಲಿನ್, ಅಮಾಕ್ಸಿಸಿಲಿನ್ ಅಥವಾ ಆಂಪಿಸಿಲಿನ್ ಬಳಸಿ ಚಿಕಿತ್ಸೆ ನೀಡಬೇಕು. ಎರಡನೇ ಹಂತದಲ್ಲಿ ಯಕೃತ್ತು ಮತ್ತು ಮೂತ್ರಪಿಂಡಗಳ ಸಮಸ್ಯೆ, ಕೆಮ್ಮಿನಲ್ಲಿ ರಕ್ತಸ್ರಾವ, ಕರುಳಿನಲ್ಲಿ ರಕ್ತಸ್ರಾವ, ಮಿದುಳುಪೊರೆಯ ಉರಿಯೂತ ಇತ್ಯಾದಿ ಸಮಸ್ಯೆಗಳಾದರೆ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.

ವೈರಲ್ ಹೆಪಟೈಟಿಸ್ ಉಳ್ಳವರಲ್ಲಿ ವಾಂತಿಯನ್ನು ನಿಯಂತ್ರಿಸುವುದಕ್ಕೆ ಔಷಧವನ್ನು ನೀಡಬಹುದು; ಯಾವುದೇ ವಿಶೇಷವಾದ ಪಥ್ಯಕ್ರಮದ ಅಗತ್ಯವಿಲ್ಲ. ವಿಪರೀತವಾದ ವಾಂತಿಯಿದ್ದರೆ ಆಸ್ಪತ್ರೆಗೆ ದಾಖಲಾಗಬೇಕಾಗಬಹುದು.

ಒಟ್ಟಿನಲ್ಲಿ, ಶ್ವಾಸಾಂಗಕ್ಕೆ ಸಂಬಂಧಿಸಿದ ಲಕ್ಷಣಗಳಾದ ವಾಸನೆ, ರುಚಿ ತಿಳಿಯದಾಗುವುದು, ಗಂಟಲು ನೋವು, ನೆಗಡಿ, ಕೆಮ್ಮು, ಜೊತೆಗೆ ಜ್ವರ ಇದ್ದವರನ್ನು ಹೊಸ ಕೊರೋನ ಸೋಂಕಿನಿಂದ ಬಾಧಿತರಾದವರು ಎಂದು ಪರಿಗಣಿಸಿ, ಮನೆಯಲ್ಲೇ ಉಳಿದು ತಮ್ಮ ವೈದ್ಯರಿಗೆ ಅಥವಾ ಸಹಾಯವಾಣಿಗೆ ಕರೆ ಮಾಡುವಂತೆ ಹೇಳಬೇಕು. ಕೊರೋನ ಸೋಂಕಿನ ಲಕ್ಷಣಗಳನ್ನು ಹೊಂದಿಲ್ಲದೆ ಜ್ವರ ಮತ್ತು ಇತರ ಲಕ್ಷಣಗಳನ್ನು ಹೊಂದಿರುವವರಲ್ಲಿ ಕೊರೋನ ಅಲ್ಲದ ಇತರ ಸೋಂಕುಗಳನ್ನು ಪರಿಗಣಿಸಬೇಕು; ಜ್ವರ, ಕಣ್ಣಾಲಿಗಳ ನೋವು, ದೇಹದ ಮೇಲೆ ನವಿರಾದ, ಒತ್ತಿದರೆ ಬಿಳಿಚಿಕೊಳ್ಳುವ ದಡಿಕೆಯಿದ್ದು, ರಕ್ತದಲ್ಲಿ ಬಿಳಿ ಕಣಗಳ ಸಂಖ್ಯೆಯು ಕಡಿಮೆಯಿದ್ದರೆ ಡೆಂಗ್ ಜ್ವರವನ್ನು ಸೂಚಿಸುತ್ತವೆ; ಕಣ್ಣುಗಳು ಕೆಂಪಾಗಿದ್ದು, ಬೆನ್ನು, ಹೊಟ್ಟೆ, ಕೈಕಾಲುಗಳ ಸ್ನಾಯುಗಳಲ್ಲಿ ಬಹಳ ನೋವಿದ್ದು, ರಕ್ತದಲ್ಲಿ ಬಿಳಿ ಕಣಗಳು ಮತ್ತು ಇಎಸ್‍ಆರ್ ಮಟ್ಟವು ಏರಿ, ಜೊತೆಗೆ ಮೂತ್ರದಲ್ಲೂ ವ್ಯತ್ಯಾಸಗಳಿದ್ದರೆ ಇಲಿ ಜ್ವರವನ್ನು ಸೂಚಿಸುತ್ತವೆ; ಮಲೇರಿಯಾದಲ್ಲಿ ಪರೋಪಜೀವಿಯು ರಕ್ತ ಪರೀಕ್ಷೆಯಲ್ಲಿ ಪತ್ತೆಯಾಗುತ್ತದೆ; ವೈರಲ್ ಹೆಪಟೈಟಿಸ್‌ನಲ್ಲಿ ರಕ್ತದಲ್ಲಿ ಎಎಲ್‌ಟಿ ಮಟ್ಟವು 350ಕ್ಕಿಂತ ಹೆಚ್ಚಿರುತ್ತದೆ.

ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು
http://srinivaskakkilaya.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)