varthabharthi

ನಿಮ್ಮ ಅಂಕಣ

ವಖ್ಫ್ ಮಂಡಳಿ: ಸಮುದ್ರದ ನೆಂಟಸ್ಥನ; ಉಪ್ಪಿಗೆ ಬಡತನ!!

ವಾರ್ತಾ ಭಾರತಿ : 15 May, 2020
ಎನ್.ಕೆ.ಎಂ.ಶಾಫಿ ಸ‌ಅದಿ, ನಂದಾವರ ಸದಸ್ಯರು, ಕರ್ನಾಟಕ ರಾಜ್ಯ ವಖ್ಫ್ ಮಂಡಳಿ

ವಖ್ಫ್ ಬೋರ್ಡ್ ಮತ್ತು ಅದರ ಕಾರ್ಯಚಟುವಟಿಕೆಗಳು ಯುವಕರಿಗೆ ಚರ್ಚೆಯ ವಸ್ತುವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.‌  ಚರ್ಚೆ ಸಕಾರಾತ್ಮಕವಾಗಿದ್ದರೂ ನಕಾರಾತ್ಮಕವಾಗಿದ್ದರೂ 'ವಖ್ಫ್ ಇಲಾಖೆ' ಯನ್ನು ಸಮುದಾಯವು ಮರೆಯದಂತೆ ನೋಡಿಕೊಳ್ಳುವ ತನ್ನ ಹೊಣೆಗಾರಿಕೆಯನ್ನು ಯುವಜನತೆ ನಿಭಾಯಿಸುತ್ತಿದೆ ಎಂದೇ ಪರಿಗಣಿಸೋಣ.

 ವಖ್ಫ್ ಆಸ್ತಿಯ ಕುರಿತು 2016 ಮಾರ್ಚ್ 30ರ ‘ವಾರ್ತಾಭಾರತಿ’ಯ  ಸಂಪಾದಕೀಯವು ಗಮನಾರ್ಹವಾದುದು.

 'ವಖ್ಫ್ ಆಸ್ತಿ: ಬೆಕ್ಕಿಗೆ ಗಂಟೆ ಕಟ್ಟುವವರಾರು? ಗಂಟೆ ಬೆಕ್ಕಿನ ಕೈಯಲ್ಲೇ ಇದ್ದರೆ?' ಎಂಬ ಶೀರ್ಷಿಕೆಯಲ್ಲಿ‌ ನಾನು ಬರೆದ ಲೇಖನವನ್ನು ‘ವಾರ್ತಾಭಾರತಿ’ ತನ್ನ ವೆಬ್ ಪೋರ್ಟಲ್ ನಲ್ಲಿ 2016ರ ಎಪ್ರಿಲ್ 7ರಂದು ಪ್ರಕಟಿಸಿತ್ತು. ಮುದ್ರಣ ಆವೃತ್ತಿಯಲ್ಲೂ ಅದು ಪ್ರಕಟಗೊಂಡಿದೆ. ಆ ಲೇಖನದಲ್ಲಿ ವಖ್ಫ್ ಆಸ್ತಿ ಕುರಿತು ಸವಿವರವಾಗಿ ಅಂದಿನ ಅಂಕಿಅಂಶಗಳನ್ನಿಟ್ಟು ವಿಶ್ಲೇಷಣೆ ನಡೆಸಲು ಪ್ರಯತ್ನಿಸಿದ್ದೇನೆ. ಅಂತರ್ಜಾಲದಲ್ಲಿ ಆ ಬರಹ ಲಭ್ಯವಿದೆ.  

ಸದ್ಯ ಕೋವಿಡ್ ಸಂಕಷ್ಟದ ಸಮಯದಲ್ಲಿ  ವಖ್ಫ್ ಆಸ್ತಿಯ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ವಖ್ಫ್ ಮಂಡಳಿಯಿಂದಲೇ ನೇರವಾಗಿ ಸಮುದಾಯಕ್ಕೆ ಆರ್ಥಿಕ ನೆರವು ನೀಡಬಾರದೇಕೆ ಎಂಬ ಸಲಹೆಯನ್ನು ಕೆಲವು ಹಿತಚಿಂತಕರು ಮುಂದಿಟ್ಟಿದ್ದಾರೆ. ನಮ್ಮ ವಖ್ಫ್ ಮಂಡಳಿ ಆ ಮಟ್ಟಕ್ಕೆ ಬೆಳೆಯಬೇಕೆಂಬ ಇರಾದೆಯೆ ನಮಗಿರುವುದು.  ಅದಕ್ಕೆ ವಖ್ಫ್ ಮಂಡಳಿಯು ಆರ್ಥಿಕವಾಗಿ ಪರ್ಯಾಪ್ತವಾಗಿದೆಯೇ ಎಂದು  ಪರಿಶೀಲಿಸೋಣ. 

 ವಖ್ಫ್ ಮಂಡಳಿಯು ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳ‌ ಒಡೆತನ ಹೊಂದಿದೆ ನಿಜ.‌ ಆದರೆ ರಾಜ್ಯಾದ್ಯಂತ ಇಡೀ ಸಮುದಾಯಕ್ಕೆ ಆರ್ಥಿಕ ನೆರವು ಒದಗಿಸುವಷ್ಟು ವರಮಾನವನ್ನು ಮಂಡಳಿಯು ಹೊಂದಿಲ್ಲ. ಇದಕ್ಕೆ ಕಾರಣಗಳೇನು ಎಂಬ ಅಧ್ಯಯನ ಮಾಡಲು ಮುಸ್ಲಿಮ್ ಯುವಜನತೆ ಮಂದೆ ಬರಲಿ. ಮುಂದಕ್ಕೆ ಆ ಸಾಮರ್ಥ್ಯವನ್ನು ವಖ್ಫ್ ಮಂಡಳಿ ಹೇಗೆ ಗಳಿಸಬಹುದು ಎಂಬ  ಸಮುದಾಯದ ಜವಾಬ್ದಾರಿಯುತರ ಮಧ್ಯೆ ಚಿಂತನ ಮಂಥನ ನಡೆಯಲಿ.

ಸ್ಪಷ್ಟವಾಗಿ ಹೇಳಬೇಕೆಂದರೆ ಕರ್ನಾಟಕ ರಾಜ್ಯ ವಖ್ಫ್ ಮಂಡಳಿಗೆ ಆಸ್ತಿ ಇದೆ ಎಂದರೆ ನೇರವಾಗಿ ಮಂಡಳಿಯ ಸುಪರ್ದಿಯಲ್ಲಿರುವಂತಹದ್ದಲ್ಲ.  ಪ್ರಸಕ್ತ ಅಂಕಿಅಂಶದ ಪ್ರಕಾರ ರಾಜ್ಯ ವಖ್ಫ್ ಮಂಡಳಿಯಲ್ಲಿ ನೋಂದಾವಣೆಗೊಂಡಿರುವ 31,333 ಸಂಸ್ಥೆಗಳಿವೆ. 41,291 ಆಸ್ತಿಗಳು ವಖ್ಫ್ ಮಂಡಳಿಯ ನೋಂದಾವಣೆಯಲ್ಲಿವೆ.‌ ಸುಮಾರು 50 ಸಾವಿರದಷ್ಟು ಸಂಸ್ಥೆಗಳು ಇನ್ನೂ ನೋಂದಾವಣೆಯಾಗದೇ ಇರುವಂತಹದ್ದು ಇವೆ.

ಇಲ್ಲಿ ಗಮನಿಸಬೇಕಾದ ಅತಿ ಪ್ರಮುಖ ಅಂಶ ಏನು ಅಂದರೆ ಅಷ್ಟೂ ಸಂಸ್ಥೆ ಹಾಗೂ ಆಸ್ತಿಗಳು ವಖ್ಫ್ ಮಂಡಳಿಯ ನೇರ ಸುಪರ್ದಿಯಲ್ಲಿಲ್ಲ!

ವಖ್ಫ್ ಮಂಡಳಿಯಲ್ಲಿ ನೋಂದಣಿಯಾಗಿರುವ ಮಸೀದಿ, ದರ್ಗಾ, ಆಶುರಖಾನ ಮುಂತಾದವುಗಳನ್ನು ವಖ್ಫ್ ಸಂಸ್ಥೆಗಳೆಂದೂ ಜಮೀನು ಇತ್ಯಾದಿಗಳನ್ನು  ವಖ್ಫ್ ಆಸ್ತಿಯೆಂದೂ ಹೇಳಲಾಗುತ್ತದೆ. ಇವುಗಳೆಲ್ಲವನ್ನೂ ಒಟ್ಟು ಸೇರಿಸಿ ವಖ್ಫ್ ಬೋರ್ಡ್ ಗೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎನ್ನುತ್ತೇವೆ. ಈ ಎಲ್ಲಾ ಸಂಸ್ಥೆಗಳು ಅವುಗಳದೇ ಆದ ಸ್ವಯಂ ಆಡಳಿತ ಮಂಡಳಿಗಳನ್ನು ಹೊಂದಿವೆ. ಆ ಎಲ್ಲ ವಖ್ಫ್ ಸಂಸ್ಥೆಗಳ ವರಮಾನವು ಆಯಾ ಆಡಳಿತ ಮಂಡಳಿಯ ಕೈಗೆ ಸಿಗುತ್ತದೆ. ಆಯಾ ಸಂಸ್ಥೆಗಳ ಖರ್ಚನ್ನೂ ಆಯಾ ಆಡಳಿತ ಮಂಡಳಿಗಳೇ ಭರಿಸುತ್ತವೆ. ವಖ್ಫ್ ನಲ್ಲಿ ನೋಂದಣಿಯಾಗಿರುವ ಸಂಸ್ಥೆಗಳು ತಮ್ಮ ವರಮಾನದಲ್ಲಿ ಖರ್ಚುವೆಚ್ಚ ಭರಿಸಿ ಉಳಿದುದರಲ್ಲಿ 7% ನ್ನು ಮಂಡಳಿಗೆ ದೇಣಿಗೆಯಾಗಿ ನೀಡಬೇಕೆನ್ನುವುದು ನಿಯಮ. ಅದರಂತೆ ಬಹುತೇಕ ಸಂಸ್ಥೆಗಳು    ಉಳಿತಾಯ ಇಲ್ಲದೆ ಖೋತಾ ಲೆಕ್ಕಪತ್ರವನ್ನೇ ಮಂಡಿಸುತ್ತವೆ. ಕೆಲವು ಪ್ರಸಿದ್ಧ ಸಂಸ್ಥೆಗಳೇ ತನ್ನ ಉಳಿತಾಯ ಮೊತ್ತದ 7% ಎಂದು ಲೆಕ್ಕ ಹಾಕಿ  ವಾರ್ಷಿಕವಾಗಿ ವಖ್ಫ್ ಮಂಡಳಿಗೆ ದೇಣಿಗೆ ನೀಡುವುದು ಕೇವಲ 10,000 ರೂ. !!

 ಹೆಚ್ಚಿನ ಮೊಹಲ್ಲಾ ಮಸೀದಿಗಳು ಉಳಿತಾಯವನ್ನೇ ಹೊಂದಿರುವುದಿಲ್ಲ.  ಕೆಲವು ಆಸ್ತಿಗಳು ಅಕ್ರಮವಾಗಿ ಪರಭಾರೆಯಾಗಿವೆ. ಕೆಲವನ್ನು ಅಕ್ರಮವಾಗಿ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ.

ನೋಂದಾಯಿತ ವಖ್ಫ್ ಆಸ್ತಿಯ ಒಟ್ಟು ಮೌಲ್ಯ ರೂ.4,500 ಕೋಟಿಯೆಂಬುದೂ ಅವುಗಳಿಂದ 7% ದಂತೆ ವಾರ್ಷಿಕ 100 ಕೋಟಿ ರೂ. ದೇಣಿಗೆಯು ಬೋರ್ಡ್ ಗೆ ಬರಬೇಕೆಂಬುದೂ ಬೋರ್ಡಿನ ಅಂದಾಜು. ಆದರೆ ಈಗ ವಾರ್ಷಿಕ ವಖ್ಫ್ ಬೋರ್ಡ್ ಗೆ ಬರುತ್ತಿರುವ ದೇಣಿಗೆ ಕೇವಲ ರೂ.6 ಕೋಟಿ!!!

ಈ ಆರು ಕೋಟಿ ರೂ.ವನ್ನು ಏನು ಮಾಡುತ್ತದೆ?

ವಖ್ಫ್ ಮಂಡಳಿಗಿರುವ ವಾರ್ಷಿಕ ಖರ್ಚುವೆಚ್ಚಗಳ ಬಗ್ಗೆ ಗಮನ ಹರಿಸೋಣ.  ಸರಕಾರವು ಅಧಿಕಾರಿಗಳ ವೇತನಕ್ಕಾಗಿಯೇ ಸುಮಾರು ಇಪ್ಪತ್ತರಷ್ಟು ಕೋಟಿ ರೂ.ನ್ನು ಪ್ರತ್ಯೇಕವಾಗಿಯೇ ವ್ಯಯಿಸುತ್ತದೆ.  ಇದು ವಖ್ಫ್ ಮಂಡಳಿಗೆ ಬಂದ ದೇಣಿಗೆಯ ಹಣವಲ್ಲ. ಅಧಿಕಾರಿಗಳು ಹೊರತುಪಡಿಸಿ ವಖ್ಫ್ ಮಂಡಳಿ ನೇಮಿಸಿರುವ ಇತರ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಯ ವೇತನವೇ ವಾರ್ಷಿಕ ಸುಮಾರು ರೂ.4 ಕೋಟಿಯಷ್ಟಾಗುತ್ತದೆ! ಉಳಿದ ಎರಡು ಕೋಟಿ ರೂ.ನಲ್ಲಿ ಇನ್ನೇನು ಮಾಡಬಹುದು?  ಜಿಲ್ಲಾ ಸಲಹಾ ಸಮಿತಿಯ ಚೇರ್ಮೇನ್, ವೈಸ್ ಚೇರ್ಮೇನ್ ಗಳ ಗೌರವಧನ, ವಾಹನಗಳ ನಿರ್ವಹಣೆ ಮುಂತಾದವುಗಳ ವೆಚ್ಚವನ್ನು ಇದೇ ದೇಣಿಗೆ ಹಣದಿಂದ ಭರಿಸಬೇಕು.

 ಉಳಿದಂತೆ   ಸರಕಾರವು ಪ್ರತ್ಯೇಕವಾಗಿ ನೀಡುವ 50 ಕೋ. ರೂ.ನಿಂದ ಪೇಶ್ ಇಮಾಮ್ ಮತ್ತು ಮು‌ಅದ್ಸಿನ್ ಗಳ ಗೌರವಧನ ವಿತರಿಸಲಾಗುತ್ತಿದೆ.  ವಖ್ಫ್ ಮಂಡಳಿಯು ಹೊಂದಿರುವ ಸಿಬ್ಬಂದಿಯ ಸಂಖ್ಯೆಯ ಬಗ್ಗೆಯೇ ಸದಸ್ಯರಾದ ನಾವು ಚರ್ಚಿಸಿದ್ದೇವೆ.

ವಖ್ಫ್ ರಾಜ್ಯ ಮಂಡಳಿಯ ಪ್ರಧಾನ ಕಚೇರಿಯಲ್ಲಿ  36 ಮಂದಿ, ಜಿಲ್ಲಾ ವಖ್ಫ್ ಸಲಹಾ ಸಮಿತಿ ಕಚೇರಿಗಳಲ್ಲಿ ಒಟ್ಟು 108  ಖಾಯಂ ಸಿಬ್ಬಂದಿಯಿದ್ದಾರೆ. ಇವರ ವೇತನ ವೆಚ್ಚವನ್ನು ಸರಕಾರವೇ ಭರಿಸುತ್ತದೆ‌.  ಹೊರಗುತ್ತಿಗೆ ಹಾಗೂ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿ ಪ್ರಧಾನ ಕಚೇರಿಯಲ್ಲಿ ರಾಜ್ಯಾದ್ಯಂತ 80ಕ್ಕೂ ಹೆಚ್ಚು ಸಿಬ್ಬಂದಿಯಿವೆ.  ಇವರ ವೇತನ ವೆಚ್ಚವಾಗಿ ತಿಂಗಳಿಗೆ ಸುಮಾರು 7 ಲಕ್ಷ ರೂ.ನಷ್ಟನ್ನು  ವಖ್ಫ್ ಮಂಡಳಿ ವ್ಯಯಿಸುತ್ತಿದೆ. ಜಿಲ್ಲಾ ಸಲಹಾ ಸಮಿತಿಯ ಬಾಡಿಗೆಗೆಂದು ತಿಂಗಳಿಗೆ 1.8 ಲಕ್ಷ ರೂ. ಖರ್ಚು ತಗಲುತ್ತದೆ.

ಜಿಲ್ಲಾ ಸಲಹಾ ಸಮಿತಿಯ ಚೇರ್ಮೇನ್ ಹಾಗೂ ಉಪಾಧ್ಯಕ್ಷರ ಗೌರವಧನ ಬಾಬ್ತು ತಿಂಗಳಿಗೆ ಒಟ್ಟು 60,000 ರೂ.,   ವಖ್ಫ್ ಮಂಡಳಿಯ ವಾಹನ‌ ಮತ್ತಿತರ ತಿಂಗಳ ವೆಚ್ಚ 75,000 ರೂ., ಇತರ ಒಂದು ಲಕ್ಷ ಹೀಗೆ 30 ಲಕ್ಷ ರೂ. ಮಾಸಿಕ ವೆಚ್ಚ ಇರುತ್ತದೆ. ಮೇಲೆ ಉಲ್ಲೇಖಿಸಿದ್ದು ಮಾಸಿಕ ಖರ್ಚು!

ಸಮುದಾದಯ ಸಂಕಷ್ಟದಲ್ಲಿ ಆಸರೆಯಾಗಲು ಸಮರ್ಥ ಆಗಬೇಕಾದರೆ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಈಗಾಗಲೇ ಮಂಡಳಿ ಮಟ್ಟದಲ್ಲಿ  ಚರ್ಚೆ ನಡೆಸಿದ್ದೇವೆ. ಅನಗತ್ಯ ಸಿಬ್ಬಂದಿಯ ನೇಮಕವನ್ನು ರದ್ದುಗೊಳಿಸುವ ಮೂಲಕ ವೆಚ್ಚ ಕಡಿತ ಮಾಡಬಹುದು. ಸಂಸ್ಥೆಗಳಿಂದ ಸಮರ್ಪಕವಾಗಿ ದೇಣಿಗೆಯು ವಖ್ಫ್ ಮಂಡಳಿಗೆ ಸಲ್ಲಿಕೆಯಾಗುವಂತಾಗಬೇಕು‌.

ಒತ್ತುವರಿಯಾಗಿರುವ ವಖ್ಫ್ ಆಸ್ತಿಗಳು ಮರಳಿ ಮಂಡಳಿಗೆ ದೊರೆತರೆ ಆದಾಯದ ಮೂಲವನ್ನು ವಿಸ್ತೃತಗೊಳಿಸಲು ಅವಕಾಶ ಇದೆ.

 ವಖ್ಫ್ ಮಂಡಳಿಯು  ಜನರಿಂದಲೋ ಸಂಸ್ಥೆಗಳಿಂದಲೋ ಯಾವುದೇ ಕಾರಣವೊಡ್ಡಿ ಹೆಚ್ಚುವರಿ ದೇಣಿಗೆಯನ್ನು ಸಂಗ್ರಹಿಸುವ ಪ್ರಯತ್ನ ನಡೆದರೆ ಅದನ್ನು ವಿರೋಧಿಸುತ್ತೇವೆ. ಅದು ಬೆಂಬಲಾರ್ಹವಲ್ಲ‌.

 ವಖ್ಫ್ ಸಂಸ್ಥೆಗಳು ಕೋವಿಡ್ ದೇಣಿಗೆ ನೀಡಬೇಕೆಂದು ವಖ್ಫ್ ಅಧಿಕಾರಿಯು ಕೆಲವು ನಿಗದಿತ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಯಲು ಸಾಧ್ಯವಾಯಿತು. ಇದು ವಖ್ಫ್ ಮಂಡಳಿಯಲ್ಲಿ ಚರ್ಚೆಯಾಗಿ ತೀರ್ಮಾನವಾಗಿ ಹೊರಡಿಸಿದ ಸುತ್ತೋಲೆಯಲ್ಲ. ಕೆಲವು ಬೆರಳೆಣಿಕೆಯ ಸಂಸ್ಥೆಗಳಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು  ಬರೆದಿರುವ ಪತ್ರವಾಗಿದೆ. ಅದು ಗಮನಕ್ಕೆ ಬಂದ ತಕ್ಷಣ ವಖ್ಫ್ ಸದಸ್ಯರ ವಿಡೀಯೋ ಕಾನ್ಫರೆನ್ಸ್ ನಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು; ರದ್ದುಗೊಳಿಸುವಂತೆ ಆಗ್ರಹಿಸಲಾಗಿದೆ. ಅದರಂತೆ ಆ ಪತ್ರದಲ್ಲಿ ಉಲ್ಲೇಖಿಸಿರುವ ಸೂಚನೆಗಳನ್ನು ಅನೂರ್ಜಿತಗೊಳಿಸಲಾಗಿದೆ. ಇದೆಲ್ಲಾ ನಡೆದ ಬಳಿಕ  ಈ ಕುರಿತು ಅನಗತ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವಖ್ಫ್ ಸದಸ್ಯರನ್ನು ಆರೋಪಿಗಳನ್ನಾಗಿಸುವ ಪ್ರಯತ್ನ ನಡೆದಿರುವುದು ಖೇದಕರ.

ಮುಂದೇನು ಮಾಡಬಹುದು?:

ಆಯಾ ಮೊಹಲ್ಲಾಗಳು ಮಸೀದಿಗಳ ವಾರ್ಷಿಕ ಲೆಕ್ಕಪತ್ರವನ್ನೂ ಮಂಡಳಿಗೆ ನೀಡಬೇಕಾದ 7% ದೇಣಿಗೆಯನ್ನೂ ಸಮರ್ಪಕವಾಗಿ ಸಲ್ಲಿಸುವಂತಾಗಬೇಕು. ಆ ನಿಟ್ಟಿನಲ್ಲಿ ಯುವಜನತೆಯ ಹೋರಾಟ ನಡೆಯಲಿ.

ಪ್ರಭಾವಿಗಳ ಉಪಸ್ಥಿತಿ ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನುದಾನ ಸಿಗುವ ಪರಿಪಾಠ ಕೊನೆಯಾಗಬೇಕು‌‌. ಖಾಸಗಿಯವರ ವಶದಲ್ಲಿರುವ, ವಖ್ಫ್ ಮಂಡಳಿಗೆ ಸೇರಬೇಕಾದ ಸಾವಿರಾರು ಎಕರೆ ಭೂಮಿಯನ್ನು ಹೇಗೆ ಮರಳಿ ಪಡೆಯಬಹುದು?

ನಿಜ ಹೇಳಬೇಕೆಂದರೆ;  ಅಂತಹ ವ್ಯಾಜ್ಯಗಳಲ್ಲಿ ನ್ಯಾಯಾಲಯದಲ್ಲಿ ವಾದಿಸಲು ಸೂಕ್ತ ಹಾಗೂ ಸಮರ್ಥ ನ್ಯಾಯವಾದಿಯನ್ನು ನೇಮಿಸುವುದಕ್ಕೂ ಹಣಕಾಸಿನ ಕೊರತೆಯು ಅಡ್ಡಿಯಾದದ್ದಿದೆ! ಈ ಸಮಸ್ಯೆಯನ್ನು ಪರಿಹರಿಸುವ ಮೂಲಕ ಆಸ್ತಿ ಮರಳಿಪಡೆಯುವ ಕುರಿತು ಚರ್ಚೆ ನಡೆಸುತ್ತಿದ್ದೇವೆ. ವಖ್ಫ್ ಮಂಡಳಿಯ ಕುರಿತ ಚರ್ಚೆಗಳು ದಿಕ್ಕುತಪ್ಪಂದಂತೆ ನೋಡಿಕೊಳ್ಳಬೇಕಿದೆ. ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಲ್ಲರೂ ಸಹಕರಿಸಿದರೆ ಒಂದು ಕ್ರಾಂತಿಯನ್ನು ಮಾಡಬಹುದು.ಯಾರದೋ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಾಚೆಗಿನ‌ ದೃಷ್ಟಿಕೋನ ಈ ವಿಷಯದಲ್ಲಿ ಮುಖ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)