varthabharthi

ನಿಮ್ಮ ಅಂಕಣ

ಸೌಹಾರ್ದತೆಗೆ ಮತ್ತೊಮ್ಮೆ ಸಾಕ್ಷಿಯಾದ ವಿಟ್ಲ

ವಾರ್ತಾ ಭಾರತಿ : 15 May, 2020
ಅಬೂಬಕರ್ ಅನಿಲಕಟ್ಟೆ

ವಿಟ್ಲ ಎಂಬ ಹೆಸರೇ ಸೌಹಾರ್ದತೆಗೆ ಪ್ರಸಿದ್ಧಿ ಪಡೆದಿದೆ. ಎಲ್ಲಿ ಮತೀಯ ಗಲಭೆ ಸಂಭವಿಸಿದರೂ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಇಲ್ಲಿನ ಜನಜೀವನ ಎಂದಿನಂತೆಯೇ ಇರುತ್ತದೆ. ಇದು ಈ ಮಣ್ಣಿನ ಗುಣ ಎಂದರೂ ತಪ್ಪಾಗಲಾರದು.

ಇಲ್ಲಿನ ಮಂಗಳೂರು ರಸ್ತೆಯಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿದ್ದರೆ ಕಾಸರಗೋಡು ಮಾರ್ಗದಲ್ಲಿ ಭಗವತಿ ಮಂದಿರವಿದೆ. ಹಾಗೇನೇ ಸಾಲೆತ್ತೂರು ರಸ್ತೆಯಲ್ಲಿ ಶೋಕಮಾತೆ ಚರ್ಚ್ ಇದ್ದು ,ಪುತ್ತೂರು ಮಾರ್ಗದಲ್ಲಿ ವಿಟ್ಲ ಕೇಂದ್ರ ಜುಮಾ ಮಸೀದಿ, ಟೌನ್ ಮಸೀದಿ ಹಾಗೂ ಜೈನ ಬಸದಿ ಇದ್ದು ಸರ್ವ ಧರ್ಮದ ಸಂಗಮಭೂಮಿ ಎನಿಸಿಕೊಂಡಿದೆ.

ಕೆಲವು ವರ್ಷಗಳ ಹಿಂದೆ ಇಲ್ಲಿನ ಇತಿಹಾಸ ಪ್ರಸಿದ್ಧ ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ನಡೆದಾಗ ವಿಟ್ಲದ ಮುಸ್ಲಿಮರು ಸಹಾಯ ಸಹಕಾರ ನೀಡಿದ್ದರು‌. ಹಾಗೆಯೇ ಇಲ್ಲಿನ ಕೇಂದ್ರ ಜುಮಾ ಮಸೀದಿಯಲ್ಲಿ ಉರೂಸ್ ನಂತಹ ಕಾರ್ಯಕ್ರಮ ಇರುವಾಗ ಹಿಂದೂ ಸಹೋದರರ ಸಹಾಯ, ಸಹಕಾರ ಇಲ್ಲಿನ ಸೌಹಾರ್ದತೆಗೆ ಪೂರಕವಾಗಿದ್ದುವು.

ಇದೀಗ ರಮಝಾನ್ ಹಬ್ಬದ  ಬಟ್ಟೆ ಬರೆ ಖರೀದಿಯ ಸಲುವಾಗಿ ಎಲ್ಲರೂ ಒಟ್ಟು ಸೇರಿದರೆ ಜನಜಂಗುಳಿ ಉಂಟಾಗಬಹುದು. ಆಗ ಸುರಕ್ಷಿತ ಅಂತರ ಇಲ್ಲದಾಗಿ ಕೊರೋನ ಮತ್ತೆ ವ್ಯಾಪಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದರ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ವರ್ತಕರು ಜಾತಿ ಮತ ಮರೆತು ಒಗ್ಗಟ್ಟಾಗಿ ತಮ್ಮ ಅಂಗಡಿ ಗಳನ್ನು ಮುಚ್ಚಿ ಮತ್ತೆ ತಮ್ಮ ಸೌಹಾರ್ದತೆಯನ್ನು ಇಡೀ ರಾಜ್ಯಕ್ಕೆ ಪರಿಚಯಿಸಿದ್ದಾರೆ. ಇದೀಗಾಗಲೇ ಒಂದು ಸಮುದಾಯದ ವ್ಯಾಪಾರಸ್ಥರು ತಮ್ಮ ವ್ಯವಹಾರ ಕೇಂದ್ರಗಳನ್ನು ಮುಚ್ಚಿದ್ದು ಇದೇ ಸೋಮವಾರದಿಂದ ಎಲ್ಲರೂ ಇದಕ್ಕೆ ಸಹಮತ ಸೂಚಿಸಿ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಲಿದ್ದಾರೆ. ಇದು ಅಭಿನಂದನಾರ್ಹ ಹೆಜ್ಜೆಯಾಗಿದೆ.

ಕಳೆದ ಐವತ್ತು ದಿನಗಳಿಂದ ಯಾವುದೇ ವ್ಯವಹಾರ ಇಲ್ಲದೆ ಲಾಕ್‌ಡೌನ್ ನಲ್ಲಿದ್ದರೂ ಇದೀಗ ಸಾಮರಸ್ಯದ ದೋತ್ಯಕವಾಗಿ ಪುನಃ ತಮ್ಮ ಅಂಗಡಿಗಳನ್ನು ತೆರೆಯದಿರುವ ನಿರ್ಧಾರ ಮಾಡಿ ಯಾವಾಗಲೂ ಶಾಂತಿ ಸಮಾಧಾನ, ಸಹಬಾಳ್ವೆಗೆ ಹೆಸರಾದ ವಿಟ್ಲದ ಹೆಸರನ್ನು ರಾಜ್ಯ ಮಟ್ಟದಲ್ಲಿ ಹಾರಾಡುವಂತೆ ಮಾಡಿ ಸೌಹಾರ್ದತೆಗೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ.

ಈ ನಿಟ್ಟಿನಲ್ಲಿ ಈ ಸೌಹಾರ್ದತೆಗೆ ಮುನ್ನುಡಿ ಬರೆದ ವಿಟ್ಲದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)