varthabharthiಸಂಪಾದಕೀಯ

ಜೈಲು ಪಾಲಾಗಿರುವ ನ್ಯಾಯದ ಪರವಾಗಿ ಹೀಗೊಂದು ‘ನ್ಯಾಯ ದಿನ’

ವಾರ್ತಾ ಭಾರತಿ : 16 May, 2020

ಯಾವುದಾದರೊಂದು ದಿನವನ್ನು ನಾವು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದರೆ ‘ಆ ದಿನ’ ನಾಶದ ಹಂತದಲ್ಲಿದೆ ಎಂದು ಅರ್ಥ. ಮಾನವಹಕ್ಕುಗಳಿಗೆ ಧಕ್ಕೆ ಬಂದಂತೆಯೇ ನಾವು ‘ಮಾನವ ಹಕ್ಕು ದಿನ’ವನ್ನು ಆಚರಿಸಲು ತೊಡಗಿದ್ದೇವೆ. ಪರಿಸರವನ್ನು ನಾಶ ಮಾಡಿ ‘ಪರಿಸರ ದಿನ’, ಭೂಮಿಯನ್ನು ಕೆಡಿಸಿ ‘ಭೂಮಿ ದಿನ’, ನೀರನ್ನು ಕೆಡಿಸಿ ‘ಜಲ ದಿನ’ ಆಚರಿಸುತ್ತಿದ್ದೇವೆ. ಒಂದು ಕಾಲದಲ್ಲಿ ‘ಸ್ವಾತಂತ್ರ ಸಿಕ್ಕಿದ ಸಂಭ್ರಮ ಹಂಚಿಕೊಳ್ಳುವ’ ಕಾರಣಕ್ಕಾಗಿ ಸ್ವಾತಂತ್ರ ದಿನವನ್ನು ಆಚರಿಸುತ್ತಿದ್ದೆವು. ಇಂದು ‘ಸ್ವಾತಂತ್ರ’ ದಿನೇ ದಿನೇ ಅರ್ಥ ಕಳೆದುಕೊಳ್ಳುತ್ತಿರುವುದರಿಂದ ಅದನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಆ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಾತಂತ್ರ ದಿನವನ್ನು ಆಚರಿಸಬೇಕಾಗಿದೆ. ಸಂವಿಧಾನ ಆಪತ್ತಿನಲ್ಲಿ ಸಿಲುಕಿಕೊಂಡಿರುವುದರಿಂದ ನಾವಿಂದು ‘ಸಂವಿಧಾನ ದಿನ’ವನ್ನೂ ಆಚರಿಸುತ್ತಿದ್ದೇವೆ. ಇದೀಗ ಈ ದೇಶದ ಕಟ್ಟ ಕಡೆಯ ಭರವಸೆಯಾಗಿ ಉಳಿದಿದ್ದ ‘ನ್ಯಾಯ ವ್ಯವಸ್ಥೆ’ಯೂ ಆಪತ್ತಿನಲ್ಲಿದೆ. ಆದುದರಿಂದ ದೇಶಾದ್ಯಂತ ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರು ‘ಮೇ 16’ನ್ನು ನ್ಯಾಯ ದಿನವನ್ನಾಗಿ ಆಚರಿಸಲು ಮುಂದಾಗಿದ್ದಾರೆ.

ಹಿರಿಯ ವಿಚಾರವಾದಿ, ದಲಿತ ಚಿಂತಕ ಆನಂದ್ ತೇಲ್ತುಂಬ್ಡೆಯವರ ‘ಅನ್ಯಾಯದ ಬಂಧನ’ಕ್ಕೆ ಒಂದು ತಿಂಗಳು ತುಂಬಿದೆ. ಆದುದರಿಂದ ಆ ದಿನವನ್ನು ‘ನ್ಯಾಯ ದಿನ’ವಾಗಿ ಆಚರಿಸಿ, ತೇಲ್ತುಂಬ್ಡೆಯವರು ಮತ್ತು ಇನ್ನಿತರ ಮಾನವ ಹಕ್ಕು ಹೋರಾಟಗಾರರನ್ನು ಬಿಡುಗಡೆಗೊಳಿಸಲು ಮಾನವ ಹಕ್ಕು ಹೋರಾಟಗಾರರು ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ಜಗತ್ತಿಗೆ ಕೊರೋನ ‘ನ್ಯಾಯ’ದ ಪಾಠವನ್ನು ಕಲಿಸಲು ಆಗಮಿಸಿದೆಯಾದರೂ, ಭಾರತದಲ್ಲಿ ಅದನ್ನು ‘ಅನ್ಯಾಯ’ ಎಸಗುವುದಕ್ಕಾಗಿಯೇ ದುರ್ಬಳಕೆ ಮಾಡಲಾಗುತ್ತಿದೆ. ತಳಸ್ತರದ ಜನರ ಬದುಕಿನ ಯೋಗಕ್ಷೇಮವನ್ನು ಸಂಪೂರ್ಣ ಕೈ ಬಿಟ್ಟು, ‘ಬಾಲ್ಕನಿ ಕ್ಲಾಸ್’ನ್ನು ರಕ್ಷಿಸುವ ಒಂದೇ ಗುರಿಯನ್ನಿಟ್ಟುಕೊಂಡು ದೇಶ ಕೊರೋನಕ್ಕೆ ಮುಖಾಮುಖಿಯಾಗಿದೆ. ಪರಿಣಾಮವಾಗಿ ಸಹಸ್ರಾರು ಸಂಖ್ಯೆಯ ವಲಸೆ ಕಾರ್ಮಿಕರು ಬೀದಿಯಲ್ಲಿ ನೆರೆದು, ಹಸಿವಿನ ವಿರುದ್ಧ ಸೆಣಸಾಟ ನಡೆಸುತ್ತಿದ್ದಾರೆ. ಶ್ರೀಮಂತರಿಗೆ ಕೊರೋನಾ ಸಮಸ್ಯೆಯಾಗಿದ್ದರೆ ಬಡವರ ಪಾಲಿಗೆ ಹಸಿವು ಭಯಾನಕವಾಗಿ ಕಾಣುತ್ತಿದೆ. ಕೊರೋನ ಸೋಂಕಿನ ಜೊತೆಗೆ ಸತ್ತವರ ಸಂಖ್ಯೆಗಳನ್ನ್ನಷ್ಟೇ ಮಾಧ್ಯಮಗಳು ಎಣಿಕೆ ಮಾಡುತ್ತಿವೆ. ಇದೇ ಸಂದರ್ಭದಲ್ಲಿ ಹಸಿವು, ಲಾಕ್‌ಡೌನ್ ಕಾರಣಗಳಿಂದ ಸತ್ತವರೂ ಈ ದೇಶವಾಸಿಗಳೇ ಆಗಿದ್ದಾರೆ ಎನ್ನುವ ಮಾಧ್ಯಮಗಳು ಮತ್ತು ಸರಕಾರ ಮರೆತಿವೆ. ಸರಕಾರದ ಬೇಜವಾಬ್ದಾರಿ ನೀತಿಗಳಿಂದಾಗಿ ವಲಸೆ ಕಾರ್ಮಿಕರ ಮಾರಣ ಹೋಮ ನಡೆಯುತ್ತಿದೆ.

ವಿಪರ್ಯಾಸವೆಂದರೆ, ಕೊರೋನ ಹಾಹಾಕಾರದ ಈ ಸಂದರ್ಭವನ್ನು ಸರಕಾರ ತನ್ನ ವಿರೋಧಿಗಳ ಮಟ್ಟ ಹಾಕುವುದಕ್ಕೆ ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿ, ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಧ್ವನಿಯೆತ್ತುತ್ತಿದ್ದ ಒಬ್ಬೊಬ್ಬರೇ ಜೈಲು ಸೇರತೊಡಗಿದ್ದಾರೆ. ದೇಶಾದ್ಯಂತ ಈ ಅನ್ಯಾಯ ವಿಜೃಂಭಿಸುತ್ತಿರುವ ಕಾರಣದಿಂದ ‘ತೇಲ್ತುಂಬ್ಡೆ’ ಅವರ ಬಂಧನವನ್ನು ನೆಪವಾಗಿಟ್ಟುಕೊಂಡು ದೇಶಾದ್ಯಂತ ಪ್ರಗತಿಪರ ಹೋರಾಟಗಾರರು ಮೇ 16ನ್ನು ನ್ಯಾಯದಿನವನ್ನಾಗಿ ಆಚರಿಸುತ್ತಿದ್ದಾರೆ. ತೇಲ್ತುಂಬ್ಡೆ ಅವರಿಗಾಗಿರುವ ಅನ್ಯಾಯ ವೈಯಕ್ತಿಕವಾದುದು ಅಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ತೇಲ್ತುಂಬ್ಡೆ ಅವರು ಈ ದೇಶದ ದಲಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ನಿರಂತರ ಧ್ವನಿಯೆತ್ತುತ್ತಾ ಬಂದವರು. ‘ಖೈರ್ಲಾಂಜಿ’ ಹತ್ಯಾಕಾಂಡವೂ ಸೇರಿದಂತೆ, ದಲಿತರ ಮೇಲೆ ದೇಶಾದ್ಯಂತ ನಡೆಯುತ್ತಾ ಬಂದಿರುವ ಹಲವು ದೌರ್ಜನ್ಯಗಳನ್ನು ಗುರುತಿಸಿ, ಅವುಗಳನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದವರು ತೇಲ್ತುಂಬ್ಡೆ. ಅಂಬೇಡ್ಕರ್ ಕುಟುಂಬದ ಸದಸ್ಯರೂ ಆಗಿರುವ ಇವರ ಬಂಧನಕ್ಕಾಗಿ ಸರಕಾರ ಕಳೆದ ಒಂದು ವರ್ಷಗಳಿಂದ ಪ್ರಯತ್ನಿಸುತ್ತಿತ್ತು ಮತ್ತು ಕೊರೋನ ಸಂದರ್ಭ ಬಳಸಿಕೊಂಡು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಅಂಬೇಡ್ಕರ್ ಜಯಂತಿಯ ದಿನವೇ ಇವರ ಬಂಧನವಾಗಿರುವುದು, ಸರಕಾರದ ದುರುದ್ದೇಶ ಏನು ಎನ್ನುವುದನ್ನು ಸ್ಪಷ್ಟಪಡಿಸಿದೆ. ದೇಶದಲ್ಲಿ ದಲಿತರನ್ನು ಸಂಘಟಿಸುವ ಯತ್ನ ನಡೆಸಿದರೆ ಅವರ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ವಿವಿಧ ದಲಿತ ಮುಖಂಡರಿಗೆ ಎಚ್ಚರಿಕೆಯ ರೂಪದಲ್ಲಿ ತಿಳಿಸುವ ಉದ್ದೇಶದಿಂದ ಈ ಸರಣಿ ಬಂಧನ ನಡೆಯುತ್ತಿವೆ ಎಂದು ವಿವಿಧ ಸಂಘಟನೆಗಳು ಆರೋಪಿಸ್ತಿವೆ. ಈ ಮೂಲಕ ಈ ದೇಶದ ದಲಿತ ಚಳವಳಿಯನ್ನು ತಳಮಟ್ಟದಿಂದ ಬಗ್ಗು ಬಡಿಯುವುದು ಸರಕಾರದ ಉದ್ದೇಶವಾಗಿದೆ.

ತೇಲ್ತುಂಬ್ಡೆಯ ಬಂಧನದ ಸಂಚಿನ ಹಿಂದಿರುವ ಘಟನೆಗಳು ಯಾವುವು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಎರಡು ವರ್ಷಗಳ ಹಿಂದೆ ಕೋರೆಗಾಂವ್ ವಿಜಯ ದಿನದಂದು, ದಲಿತರನ್ನು ಸಂಘಟಿಸಿ ಬೃಹತ್ ಸಮಾವೇಶವೊಂದನ್ನು ನಡೆಸಿ ಸಂಘಪರಿವಾರಕ್ಕೆ ಸವಾಲು ಹಾಕಿರುವುದೇ ಮಾನವಹಕ್ಕು ಹೋರಾಟಗಾರರ ಸರಣಿ ಬಂಧನಗಳಿಗೆ ಕಾರಣವಾಯಿತು. ವಿಜಯ್ ದಿವಸ ಕಾರ್ಯಕ್ರಮವನ್ನು ತಡೆಯಲು ಸಂಘಪರಿವಾರ ಕಾರ್ಯಕರ್ತರು ಹಿಂಸಾತ್ಮಕ ಪ್ರಯತ್ನವನ್ನು ನಡೆಸಿದರಾದರೂ, ಅದನ್ನು ಅಷ್ಟೇ ತೀವ್ರವಾಗಿ ದಲಿತ ಕಾರ್ಯಕರ್ತರು ಪ್ರತಿರೋಧಿಸಿದರು. ಆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

500 ಮಂದಿ ಮಹಾರ್ ಯೋಧರು, 20 ಸಾವಿರಕ್ಕೂ ಅಧಿಕ ಸೈನಿಕರುಳ್ಳ ಪೇಶ್ವೆಗಳ ಸೇನೆಯನ್ನು ಎದುರಿಸಿ ಗೆದ್ದ ದಿನ ‘ಕೋರೆಗಾಂವ್ ವಿಜಯ ದಿವಸ್’. ಆ ಮೂಲಕ ಜಾತೀಯತೆಯ ತಳಹದಿಯ ಮೇಲೆ ನಿಂತಿದ್ದ ಪೇಶ್ವೆ ಆಡಳಿತಕ್ಕೆ ದಲಿತರು ಮಂಗಳ ಹಾಡಿದರು. ಅಂಬೇಡ್ಕರ್ ಈ ದಿನವನ್ನು ‘ವಿಜಯ್ ದಿವಸ್’ ಆಗಿ ಘೋಷಿಸಿ, ಮಹಾರ್ ಯೋಧರಿಗೆ ಗೌರವ ಸಲ್ಲಿಸಿದ್ದರು. ಅಲ್ಲಿಂದ ಪ್ರತಿ ವರ್ಷ ಕೋರೆಗಾಂವ್ ವಿಜಯ ಸ್ತಂಭದ ಮುಂದೆ ಈ ಸ್ಮರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಪೇಶ್ವೆಯ ಆಡಳಿತವನ್ನು ತಮ್ಮ ಕಾಲದ ‘ಸುವರ್ಣಯುಗ’ವೆಂದು ಭಾವಿಸುವ ಸಂಘಪರಿವಾರಕ್ಕೆ ವಿಜಯ್ ದಿವಸ್ ನುಂಗಲಾರದ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆ ಆಚರಣೆ ನಡೆಯದಂತೆ ಅವರು ಸಂಚು ರೂಪಿಸಿ ವಿಫಲವಾದರು. ವಿಪರ್ಯಾಸವೆಂದರೆ, ಕೋರೆಗಾಂವ್ ಹಿಂಸಾಚಾರದಲ್ಲಿ ಭಾಗಿಯಾದ ಸಂಘಪರಿವಾರದ ಆರೋಪಿಗಳೆಲ್ಲ ಬಳಿಕ ಹಂತಹಂತವಾಗಿ ಬಿಡುಗಡೆಗೊಳ್ಳತೊಡಗಿದರು. ಕೋರೆಗಾಂವ್ ಸಮಾವೇಶವನ್ನು ಸಂಘಟಿಸಿದ ಮಾನವಹಕ್ಕು ಹೋರಾಟಗಾರರೆಲ್ಲ ‘ಅರ್ಬನ್ ನಕ್ಸಲ್’ ಹೆಸರಿನಲ್ಲಿ ಒಬ್ಬೊಬ್ಬರಾಗಿ ಬಂಧನಕ್ಕೊಳಗಾಗ ತೊಡಗಿದರು.

ಕೋರೆಗಾಂವ್ ಸಮಾವೇಶದಲ್ಲಾಗಲಿ, ಅದಕ್ಕೆ ಸಂಬಂಧಿಸಿದ ಯಾವುದೇ ಸಭೆಗಳಲ್ಲಾಗಲಿ ತಾನು ಗುರುತಿಸಿಕೊಂಡಿಲ್ಲ ಎನ್ನುವುದನ್ನು ಆನಂದ್ ತೇಲ್ತುಂಬ್ಡೆ ಪದೇ ಪದೇ ಘೋಷಿಸುತ್ತಾ ಬಂದಿದ್ದಾರೆ. ಆದರೂ ಅವರ ಕೂಗು ಅರಣ್ಯರೋದನವಾಯಿತು. ಸರಿಯಾದ ಸಾಕ್ಷಾಧಾರಗಳಿಲ್ಲದಿದ್ದರೂ ಅತ್ಯಂತ ಕಠಿಣ ಕಾನೂನಿಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಅಂದರೆ ಇದರ ಉದ್ದೇಶ ಸ್ಪಷ್ಟ. ಎಲ್ಲ ಮಾನವ ಹಕ್ಕು ಹೋರಾಟಗಾರರನ್ನು, ದಲಿತ ಚಿಂತಕರನ್ನು ಜೈಲಿಗಟ್ಟಿ ದಲಿತರ ಪಾಲಿನ ನ್ಯಾಯವನ್ನು ಶಾಶ್ವತವಾಗಿ ದಫನ ಮಾಡುವುದು ಇವರ ಗುರಿ. ತೇಲ್ತುಂಬ್ಡೆ ಮತ್ತು ಇತರ ಮಾನವ ಹಕ್ಕು ಹೋರಾಟಗಾರರ ಬಿಡುಗಡೆಯೆಂದರೆ, ಜೈಲು ಪಾಲಾಗಿರುವ ಶೋಷಿತ ಶಕ್ತಿಗಳ ಬಿಡುಗಡೆ. ಆದುದರಿಂದ, ಮೇ 16ರಂದು ಸಾಂಕೇತಿಕವಾಗಿ ಆಚರಿಸಲು ಹೊರಟಿರುವ ‘ನ್ಯಾಯ ದಿನ’ಕ್ಕೆ ದೇಶದ ಎಲ್ಲ ಶೋಷಿತ ವರ್ಗ ಕೈ ಜೋಡಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)