varthabharthi

ನಿಮ್ಮ ಅಂಕಣ

ಶಾಲೆಗಳ ಪುನರಾರಂಭ ಚರ್ಚೆಗಳು ಸರಿದಾರಿಯಲ್ಲಿ ಸಾಗುತ್ತಿದೆಯೇ?

ವಾರ್ತಾ ಭಾರತಿ : 16 May, 2020
ಮೌಲಾನಾ ಅಝೀಝ್ ದಾರಿಮಿ

ಕರೋನ ನಮ್ಮೆಲ್ಲರ ಬದುಕನ್ನು ಕದಡಿದೆ. ವ್ಯವಸ್ಥೆಗಳನ್ನು ಅಸ್ತವ್ಯಸ್ತಗೊಳಿಸಿದೆ. ಮುಂದೇನು? ಎಂಬ ಚಿಂತೆ ಭಯದಲ್ಲಿ ಎಲ್ಲರೂ ಬದುಕುತ್ತಿದ್ದಾರೆ. ಅತಿಸೂಕ್ಷ್ಮ ವೈರಸ್ ಈ ರೀತಿಯ ಪರಿಸ್ಥಿಯನ್ನು ಹಿಂದೆಂದೂ ನಿರ್ಮಿಸಿಲ್ಲ. ಜನರ ಜೀವನ ಪ್ರಕ್ರಿಯೆಯ ಬುಡವನ್ನೇ ಕಿತ್ತುಹಾಕಿ ಕೇಕೆ ಹಾಕುತ್ತಿರುವ ಕರೋನ ಶಿಕ್ಷಣ ವ್ಯವಸ್ಥೆಯ ಮೇಲೆ ಮಾಡಿರುವ ದಾಳಿ ಅಪಾರ. ಇಂತಹ ಸ್ಥಿತಿಯೊಂದು ಬರಬಹುದೆಂಬ ಊಹೆಯೂ ಮಾಡಲಾಗದ ಮಟ್ಟಕ್ಕೆ ಶಿಕ್ಷಣ ವ್ಯವಸ್ಥೆಯನ್ನು ಅದು ಅಲ್ಲೋಲ ಕಲ್ಲೋಲಗೊಳಿಸಿದೆ.

ಕರೋನ ಮುಂದೆ ಯಾವ ಮಟ್ಟಕ್ಕೆ ಹೋಗಬಹುದೆಂಬ ಊಹೆ ಯಾರಿಗೂ ಇಲ್ಲ. ಆದರೆ ಈ ಮಧ್ಯೆ ಹಳಿತಪ್ಪಿದ ಶಿಕ್ಷಣವೆಂಬ ರೈಲನ್ನು ಹಳಿಯ ಮೇಲೆ ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದರ ಫಲವಾಗಿ ಹತ್ತನೇಯ ತರಗತಿ ಮಕ್ಕಳಿಗೆ ಪುನರ್ಮನನ ತರಗತಿ ನಡೆಸಲಾಗುತ್ತಿದೆ. ಆನ್ ಲೈನ್ ತರಗತಿ ನಡೆಸಲಾಗುತ್ತಿದೆ. ಇನ್ನೂ ಅನೇಕ ರೀತಿಯ ಪ್ರಯತ್ನ ಸಾಗುತ್ತಿದೆ. ಇವೆಲ್ಲ ಶಿಕ್ಷಣಕ್ಕೆ ಮರುಪೂರಣ ನೀಡುವ ಪ್ರಾಮಾಣಿಕ ಪ್ರಯತ್ನ ಅಥವಾ ಮುಂದಿನ ಶಿಕ್ಷಣ ಪ್ರಕ್ರಿಯೆಯ ಮುನ್ಸೂಚನೆಗಳಾಗಿ ಗೋಚರವಾಗುತ್ತಿದೆ.

ಆದರೆ ಮತ್ತೊಂದು ದಿಕ್ಕಿನಲ್ಲಿ ಅವಲೋಕಿಸಬೇಕಿದೆ. ಶಾಲಾ ಮಕ್ಕಳನ್ನು ಯಾವುದೇ ಆದೇಶಗಳ ಮೂಲಕ ಕಟ್ಟಿಹಾಕಲು ಸಾಧ್ಯವಿಲ್ಲ ಎಂಬ ಅರಿವು ನಮಗಿರಬೇಕು. ಮಕ್ಕಳು ಸ್ವಚ್ಚಂದ ಬದುಕನ್ನು ಇಷ್ಟ ಪಡುತ್ತಾರೆ. ಅಧ್ಯಾಪಕರ ಅನುಪಸ್ಥಿತಿಯಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ವಿರಳ ಎಂಬುವುದು ನಿಸ್ಸಂಶಯ. ಈ ಅವಧಿಯಲ್ಲಿ ಪರೋಕ್ಷವಾದ ಯಾವ ವ್ಯವಸ್ಥೆಯೂ ಭಾಗಶ: ಯಶಸ್ವಿಯಾಗಬಹುದಷ್ಟೆ. ಕೆಳಗಿನ ಅಧಿಕಾರಿಗಳಿಗೆ ಸೂಚನೆಗಳ ಮೂಲಕ ಭಯಮೂಡಿಸಬಹುದು. ಆದರೆ ಅದನ್ನೇ ವಿದ್ಯಾರ್ಥಿಗಳಿಗೂ ಮಾಡಬಹುದೆಂದು ಭಾವಿಸಿದರೆ ಅದು ಭ್ರಮೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಕರೋನದ ತೀವ್ರತೆಗಳ ಅರಿವು ಮೂಡಿಸುವುದು ಕಷ್ಟಸಾಧ್ಯ. ಒಂದು ವೇಳೆ ಆ ಅರಿವು ಮೂಡಿದರೂ ಅದು ಅಲ್ಪಾಯುಷಿ. ತನ್ನ ಸಹಪಾಠಿಗಳು, ಸ್ನೇಹಿತರು ಇವರನ್ನು ಕಂಡಾಗ ತನ್ನ ಹಿಂದಿನ ರೀತಿಗೇ ಅವರು ಮರಳುತ್ತಾರೆ. ಗ್ರಾಮೀಣ ಪ್ರದೇಶ(ನಗರಗಳು ಇವುಗಳಿಂದ ಮುಕ್ತವಾಗಿಲ್ಲ)ಗಳಲ್ಲಿ ಅಂತರ್ಜಾಲ ಸಂಪರ್ಕ ತೀರಾ ಕಳಪೆಯಾಗಿದೆ. ಸಂಪರ್ಕ ಇದ್ದರೂ ಸ್ಮಾರ್ಟ್ ಫೋನ್ ಬಳಸುವ ಪೋಷಕರೂ ಕೆಲವೇ ಮಂದಿ ಕಾಣಬಹುದು. ಸ್ಮಾರ್ಟ್ ಫೋನ್ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಸಾಧನ. ತಮ್ಮ ದೈನಂದಿನ ಕಾರ್ಯದಲ್ಲಿ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಪೋಷಕರು ಮಕ್ಕಳ ಕೈಯಲ್ಲಿ ಹೆಚ್ಚು ಸಮಯ ನೀಡಲಾರರು. ಹಾಗಂತ ಅಲ್ಪ ಸಮಯ ನೀಡಿದರೂ ಅದರ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಬಹುದು. ಹಾಗಂತ ಪ್ರತಿಯೊಬ್ಬ ವಿದ್ಯಾರ್ಥಿ ಸ್ಮಾರ್ಟ್ ಫೋನ್ ಇಟ್ಟುಕೊಂಡಿರಬೇಕೆಂಬ ಆದೇಶ ಮಾಡಲು ಸಾಧ್ಯವೇ? ಹೀಗೆ ಆನ್ ಲೈನ್ ತರಗತಿಗಳು ಕಾಟಾಚಾರಕ್ಕೆ ಮಾಡಬಹುದೇ ಹೊರತು ಅದರಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಳ್ಳುವುದು ಆತ್ಮಹತ್ಯೆಯಾಗಬಹುದು. ಇವೆಲ್ಲ ಒಂದು ಕಡೆಯಾದರೆ ಶಿಕ್ಷಣ ಇಲಾಖೆ ಇದೀಗ ಶಾಲೆ ಪುನರಾರಂಭಕ್ಕೆ ಯೋಜನೆ ಸಿದ್ಧಪಡಿಸಿದೆ. ಇಲಾಖೆಯ ಶಿಕ್ಷಣ ಪರ ಕಾಳಜಿ ಶ್ಲಾಘನೀಯ. ಆದರೆ ಈ ಸಮಯದಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳು ಬೆಂಕಿಯ ಮೇಲಿನ ನಡುಗೆಯಂತೆ. ಬೆಳಗ್ಗೆ 7.50 ರಿಂದ ಸಂಜೆ 5ಗಂಟೆ ತನಕ ಎರಡು ಪಾಳಿಗಳಲ್ಲಿ (ಬದಲಾವಣೆಗೆ ಅವಕಾಶವಿದೆ) ತರಗತಿ ನಡೆಸುವುದೂ ಸೇರಿ ಒಂದು ಮಾದರಿ ವೇಳಾಪಟಿಯನ್ನು ಹೊರಡಿಸಿದೆ. ಇಲಾಖೆಯ ಈ ಪರಿಯ ಕಾಳಜಿ ಅಭಿನಂದನೀಯ. ಆದರೆ ಇವುಗಳ ಅನುಷ್ಠಾನದ ಬಗ್ಗೆ ಯೋಚಿಸಬೇಕಿದೆ.

ಇಲ್ಲಿ ಕೇವಲ ವಿದ್ಯಾರ್ಥಿ ಕೇಂದ್ರಿತ ಸಮಸ್ಯೆಗಳ ಬಗ್ಗೆ ಮಾತ್ರ ನೋಡೋಣ. ಶಿಕ್ಷಕರು ತೊಂದರೆ ಅನುಭವಿಸಿದರೂ, ಅವರು ನೌಕರರಾಗಿರುವುದರಿಂದ ಇಂತಹ ತುರ್ತುಪರಿಸ್ಥಿತಿಯಲ್ಲಿ ತ್ಯಾಗ ಮಾಡಲೇಬೇಕಿದೆ. ಯಾವ ತ್ಯಾಗವೂ ವೈದ್ಯರು ಮತ್ತು ದಾದಿಯರು ಇಂದು ಮಾಡುತ್ತಿರುವ ತ್ಯಾಗವನ್ನು ಸರಿದೂಗ ಲಾರದು. ಇನ್ನು ವಿದ್ಯಾರ್ಥಿಗಳ ಬಗ್ಗೆ ಚರ್ಚಿಸಿದರೆ ಅನೇಕ ಪ್ರಶ್ನೆಗಳು ಮೂಡಲಾರಂಭಿಸುತ್ತದೆ. ಶಾಲಾ ದಿನಗಳಲ್ಲಿ ಎಲ್ಲಾ ಸಾರಿಗೆ ವಾಹನಗಳು ವಿದ್ಯಾರ್ಥಿ ಗಳಿಂದ ಕಿಕ್ಕಿರಿದು ಹೋಗಿರುತ್ತದೆ. ಗಂಟೆಗಟ್ಟಲೆ ರಸ್ತೆ ಬದಿ ಕಾದು ಸುಸ್ತಾದ ವಿದ್ಯಾರ್ಥಿಗಳೂ ಇದ್ದಾರೆ. ಆದರೆ ಈಗ ವಿದ್ಯಾರ್ಥಿಗಳು ಈ ಹಿಂದಿನಂತೆ ಪ್ರಯಾಣಿಸಲು ಸಾಧ್ಯವೇ ? ದೂರದಿಂದ ಬರುವ ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೂಲಕ ಶಾಲೆ ತಲುಪಬಹುದೇ ? ಬಸ್ಸು ಸೌಲಭ್ಯ ಕಲ್ಪಿಸಿದರೆ ಸುರಕ್ಷಿತ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳನ್ನು ಕರೆದೊಯ್ಯಲು ಸಾಕಾಗಬಹುದೇ ? ಅಟೋದಲ್ಲಿ ಇಬ್ಬರು ಮಾತ್ರ ಪ್ರಯಾಣಿಸ ಬಹುದಾದರೆ ಅದು ವಿದ್ಯಾರ್ಥಿಗಳಿಗೆ ದಕ್ಕ ಬಹುದೇ? ಇನ್ನು ವಾರ್ಷಿಕ ಪಾಸು ಮೂಲಕ ಸರಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಸುರಕ್ಷಿತ ಅಂತರ ಕಾಯ್ದುಕೊಂಡರೆ ಬಸ್ಸುಗಳ ಸಂಖ್ಯೆ ಈಗಿನ ನಾಲ್ಕು ಪಟ್ಟು ವ್ಯವಸ್ಥೆ ಮಾಡಬಹುದೇ ? ಖಾಸಗಿ ಶಾಲೆಯ ಬಸ್ಸುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಗೊಳಿಸಿದರೆ ಅದೆಷ್ಟು ಬಸ್ಸು ಬೇಕಾಗಬಹುದು ? ಇಲ್ಲಿ ಪೋಷಕರು ಆರ್ಥಿಕ ಹೊರೆ ನಿಭಾಯಿಸುವಷ್ಟು ಸಮರ್ಥರೇ ? ಕೊರೋನ ಇತರ ರೋಗಗಳಂತಲ್ಲ. ಅದು ಹರಡುವ ರೀತಿಯೇ ಭಯಾನಕ. ಹಾಗಿರುವಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಿದರೂ ಅದು ವಕ್ಕರಿಸಬಾರದೆಂಬ ನಿಯಮವಿಲ್ಲ. ಮಾಸ್ಕ್ ಧರಿಸಿದ ಮಾತ್ರಕ್ಕೆ ಅದನ್ನು ತಡೆಯಬಹುದಾದರೆ ಅದು ಚೀನಾದಿಂದ ನಮ್ಮ ಹಳ್ಳಿ ತನಕ ಪ್ರಯಾಣಿಸುತ್ತಿರಲಿಲ್ಲ. ಇನ್ನು ಪೋಷಕರು ಯಾವ ಧೈರ್ಯದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಿ. ಇದುವರೆಗೆ ಹೊರಗೂ ಕಳುಹಿಸದೆ ಮನೆಯಲ್ಲೇ ಉಳಿಸಿ ನೆಮ್ಮದಿಯಲ್ಲಿದ್ದ ಪೋಷಕರು ಶಾಲೆ ಆರಂಭಗೊಂಡರೆ ನೆಮ್ಮದಿಯಿಂದ ಕೂರಲು ಸಾಧ್ಯವೇ?

ಇನ್ನು ಪೋಷಕರೇ ಜವಾಬ್ದಾರಿ ಹೊತ್ತು ಶಾಲೆಗೆ ಕರೆತರುವುದು ಎಷ್ಟರ ಮಟ್ಟಿಗೆ ಸಾಧ್ಯ. ಕೂಲಿ ಕಾರ್ಮಿಕ ಪೋಷಕರ ಪಾಡೇನು ? ಇನ್ನು ಬಹುತೇಕ ನೌಕರರು (ಸರಕಾರಿ ಇಲ್ಲವೇ ಖಾಸಗಿ) ತಮ್ಮ ಮಕ್ಕಳನ್ನು ಕಚೇರಿಗೆ ತೆರಳುವ ಸಮಯದಲ್ಲಿ ಶಾಲೆಗೆ ತಮ್ಮ ಮಕ್ಕಳನ್ನು ಶಾಲೆಯಲ್ಲಿ ಬಿಟ್ಟು ಕಚೇರಿಯಿಂದ ಮರಳುವಾಗ ಕರೆತರಬಹುದಾಗಿತ್ತು. ಆದರೆ ಎರಡು ಪಾಳಿಯಲ್ಲಿ ಶಾಲೆ ನಡೆದರೆ ನೌಕರರು ಕಚೇರಿ ಅಥವಾ ಕೆಲಸದ ಸ್ಥಳದಿಂದ ಅದೇಗೆ ಮಕ್ಕಳಿಗಾಗಿ ಕೆಲಸದ ಮಧ್ಯೆ ಎದ್ದು ಬರಬಹುದು ? ಹೀಗೇ ಪಟ್ಟಿ ಮಾಡುತ್ತಾ ಹೋದರೆ ನೂರಾರು ಸಮಸ್ಯೆಗಳು. ಎಲ್ಲವೂ ಗಂಭೀರವಾದದ್ದೆ. ಪರಿಹಾರವೂ ಕಷ್ಟ ಸಾಧ್ಯವಾದದ್ದೆ.

ಇನ್ನು ಇದಕ್ಕಿಂತ ಗಂಭೀರವಾದ ಸಮಸ್ಯೆ ಇಲ್ಲಿ ಪ್ರಸ್ತಾಪಿಸಲೇ ಬೇಕು. ಅಷ್ಟಕ್ಕೂ ಇವೆಲ್ಲವನ್ನು ಎದುರಿಸಿ ಶಾಲೆ ಪ್ರಾರಂಭವಾಯಿತು ಎಂದು ಭಾವಿಸೋಣ. ಆಗ ವ್ಯವಸ್ಥೆ ನೆಮ್ಮದಿಯಿಂದ ಇರಲು ಸಾಧ್ಯವೇ? ಯಾವುದೇ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಈ ರೋಗಕ್ಕೆ ತುತ್ತಾದರೆ (ಹಾಗಾಗದಿರಲಿ) ಆ ಶಾಲೆಯನ್ನು ಸೀಲ್ ಮಾಡಬೇಡವೇ ? ಪ್ರತಿ ವಿದ್ಯಾರ್ಥಿ ಹಾಗೂ ಅವರ ಮನೆಯವರು, ಅವರು ಪ್ರಯಾಣಿಸಿದ ವ್ಯವಸ್ಥೆ, ಶಿಕ್ಷಕರು, ಅಡುಗೆ ಸಿಬ್ಬಂದಿ ಇವರೆಲ್ಲರನ್ನೂ ಹೋಂ ಕ್ವಾರಂಟೈನ್ ಗೆ ಒಳಪಡಿಸಬೇಡವೇ ? ಇಂತಹ ಶಾಲೆಗಳ ಸಂಖ್ಯೆ ಹೆಚ್ಚಾದರೆ? ಅಬ್ಬಾ ಊಹಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ ತಲೆದೋರಬಹುದು. ಹೀಗೆ ಕೊರೋನ ಮೂಡಿಸಿರುವ ಸಮಸ್ಯೆ ಅಗಾಧವಾದದ್ದು. ಆದ್ದರಿಂದ ಸದ್ಯ ಒಂದಷ್ಟು ಕಾಲ ಕಾಯೋದು ಉತ್ತಮ ಪರಿಹಾರವಾಗ‌ಬಹುದಲ್ಲವೇ? ಕಷ್ಟವಾಗಬಹುದು ಆದರೆ ಜೀವಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ ತಾನೆ ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)