varthabharthi

ನಿಮ್ಮ ಅಂಕಣ

ಲಾಕ್‌ಡೌನ್ ಮತ್ತು ನಮ್ಮ ಮುಖವಾಡಗಳು!

ವಾರ್ತಾ ಭಾರತಿ : 17 May, 2020
ಡಾ. ಸುಶಿ ಕಾಡನಕುಪ್ಪೆ

ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನಮ್ಮ ಮನೆಯ ಕೆಲಸ ಮಾಡಲು ಈ ‘ಸೇವಕರು’ ಬೇಕು. ಬಾಗಿಲು ಕಾಯಲು ಸೆಕ್ಯುರಿಟಿ ಗಾರ್ಡ್‌ಗಳು ಬೇಕು. ಸೂಪರ್ ಮಾರ್ಕೆಟ್‌ಗಳಲ್ಲಿ ನಮಗೆ ಸಹಾಯಕರು ಬೇಕು. ನಮ್ಮ ರಸ್ತೆಯನ್ನು ಸ್ವಚ್ಛವಾಗಿಡಲು, ನಮ್ಮ ಮನೆಯ ಕಸವನ್ನು ವಿಲೇವಾರಿ ಮಾಡಲು, ನಮ್ಮ ಕಕ್ಕಸುಬಚ್ಚಲು, ಕೊಳಚೆ ಸೇರುವ ಒಳಚರಂಡಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಪೌರಕಾರ್ಮಿಕರು ಬೇಕು. ಇವರ ಇಡೀ ಕುಟುಂಬ ನಮ್ಮ ಸೇವೆ ಮಾಡಬೇಕು. ಇವರ ಮಕ್ಕಳು ಮುಂದೆ ಇದೇ ದಾರಿ ಹಿಡಿದು ನಮ್ಮ ಮಕ್ಕಳ ಸೇವೆ ಮಾಡಬೇಕು. ಅವರೇಕೆ ಓದಿ ಬೇರೆ ವೃತ್ತಿ ಹಿಡಿಯಬೇಕು? ಅವರು ವಾಸಿಸುವ ಸ್ಥಳಕ್ಕೆ ಮಣ್ಣಿನ ಸೂರೇಕೆ, ತಗಡಿನ ಶೆಡ್ಡಾದರೂ ಸಾಕು! ಸ್ನಾನದ ಮನೆ, ಕಕ್ಕಸು ಮನೆ ಅವರಿಗೆ ಬೇಡವೇ ಬೇಡ! ಅವರು ಬದುಕಲು ಯೋಗ್ಯರಾದ ಮನುಷ್ಯರಲ್ಲ ನೋಡಿ! ಕೇವಲ ದುಡಿಯುವ ಸೇವಕರು!

ರಮೇಶ ಸಿಮೆಂಟು ಕಾರ್ಖಾನೆಯಲ್ಲಿ ಎಂದಿನಂತೆ ಆ ದಿನ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ರಮೇಶನಿಗೆ ಕೆಮ್ಮು ಹೆಚ್ಚಾಗುತ್ತಿದೆ. ಎರಡು ತಿಂಗಳ ಹಿಂದೆ ನಮ್ಮ ಕೇರಿಯ ಸಿದ್ದಯ್ಯ ಹೀಗೆ ಕೆಮ್ಮಿ ಕೆಮ್ಮಿ ಸತ್ತೇಹೋಗಿದ್ದು ರಮೇಶನಿಗೆ ಆಗಾಗ ನೆನಪಾಗುತ್ತಿತ್ತು. ‘ಒಂದೇ ಕಾರ್ಖಾನೆಯಲ್ಲಿ ನಮ್ಮ ಕೇರಿಯ ಸುಮಾರು ಜನ ಕೆಲಸ ಮಾಡುತ್ತೇವೆ. ಈ ಸಿಮೆಂಟ್ ಧೂಳು ಕುಡಿದು ಸಾಕಾಗಿ ಹೋಗಿದೆ. ಆದರೂ ಹೊಟ್ಟೆ ಪಾಡಿಗೆ ಈ ಕೆಲಸ ಬಿಡುವುದಾದರೂ ಹೇಗೆ’. ಸಿದ್ದಯ್ಯನಿಗೆ ಸಿಮೆಂಟ್ ಧೂಳಿನಿಂದಲೇ ಕ್ಯಾನ್ಸರ್ ಬಂದು ಸತ್ತಿದ್ದು ಎಂದು ಸ್ವಲ್ಪ ಹೆದರಿದ್ದ ರಮೇಶ ಮೂಗು ಬಾಯಿಗೆ ಟವೆಲ್ ಸುತ್ತಿಕೊಂಡೇ ಕೆಲಸ ಮಾಡಲು ಶುರು ಮಾಡಿದ್ದ. ‘ಮಾಲಕರಿಗೆ ಮಾಸ್ಕ್ ಕೊಡಿರೆಂದು ಗೋಗರೆಯುವುದೇ ಆಗಿದೆ’. ದಿನವೂ ಮನಸ್ಸಿನಲ್ಲೇಳುವ ಇಂತಹ ಹಾಳು ಯೋಚನೆಗಳನ್ನು ನಿಭಾಯಿಸುತ್ತಾ ಆ ದಿನದ ಕೆಲಸ ಮುಗಿಸಿ ಮನೆಗೆ ಬಂದಿದ್ದ ರಮೇಶ. ಅವನ ಕೇರಿ ಎಂದರೆ ತಗಡಿನ ಶೆಡ್‌ಗಳಿದ್ದ ಜಾಗ. ಇವರೆಲ್ಲ ದೂರದ ಊರು, ರಾಜ್ಯಗಳಿಂದ ಎರಡು ವರ್ಷದ ಹಿಂದೆ ಕೆಲಸ ಹುಡುಕಿ ಇಲ್ಲಿಗೆ ಬಂದು ಸೇರಿದವರು. ರಮೇಶನಿಗೆ ಹೊಸದಾಗಿ ಮದುವೆ ಆಗಿತ್ತು. ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಊರು ಬಿಟ್ಟು ಬಂದಿದ್ದರು. ‘ಊಟಕ್ ಹಾಕವ್ವ’ ಎಂದ ರಮೇಶ ಇನ್ನೇನು ಕೂರಬೇಕು, ಅಷ್ಟರಲ್ಲಿ ಪಕ್ಕದ ಶೆಡ್ಡಿನಿಂದ ಓಡಿ ಬಂದ ವೆಂಕಟ ‘ಇದೇನ್ಲಾ, ನಿಂಗೆ ಗೊತ್ತಾಗ್ಲಿಲ್ವಾ? ಈಗ ಅರ್ಧ ಗಂಟೆ ಹಿಂದೆ ಅನೌನ್ಸ್ ಮಾಡೊವ್ರಂತೆ ಗೌರ್ನಮೆಂಟು! ಎಲ್ಲಾ ಲಾಕಂತೆ. ನಾಳೆಯಿಂದ ಸಿಮೆಂಟು ಕೆಲಸ ಏನೂ ಇರಕ್ಕಿಲ್ಲ. ಕೆಲಸ ಎಲ್ಲಾ ಬಂದ್’. ‘ಮತ್ತೆ, ಯಾವಾಗ ತೆಗಿತಾರೆ?’ ‘ತೆಗಿಯೋದಿಲ್ಲ ಅಂತಾವ್ರೆ. ನಮ್ ಕೆಲಸ ಹೋಯ್ತು ಅಷ್ಟೇ’. ‘ಅದೆಂಗ್ಲಾ?! ಈಗ ತಾನೆ ಕೆಲ್ಸ ಮುಗ್ಸಿ ಬಂದಿವ್ನಿ. ಈಗ ಇಲ್ಲಾ ಅಂದರೆ ನಾಳೆ ಏನ್ ತಿನ್ನವಾ?!’ ರಮೇಶನ ಹೆಂಡತಿ ಪೆಚ್ಚು ಮೋರೆ ಹಾಕಿ ನಿಂತವಳು ತನ್ನ ಹೊಟ್ಟೆ ಮೇಲೆ ಕೈಯಾಡಿಸುತ್ತಿದ್ದಳು. ‘ಯೆಂಕಟ, ನನ್ ಎಂಡ್ರು ಪ್ರೆಗ್ನೆಂಟು ಕಣ್ಲಾ! ನಾಳೆ ಫ್ಯಾಕ್ಟರಿ ಹತ್ರಾ ಓಗುವಾ. ಹಿಂಗೆಲ್ಲಾ ಇದ್ದಕ್ಕಿದ್ದಂತೆ ಮುಚ್ಚಾಕಾಯ್ತದ?!’ ‘ರಮೇಶ, ನಾಳೆ ಏನು ಇರಕಿಲ್ಲ. ಮನೆಯಿಂದ ಯಾರೂ ಆಚೆ ಬರಬಾರದೂ ಅಂತನೂ ಹೇಳವ್ರೆ. ನೀನು ನಿನ್ ಎಂಡ್ರು ವಾಪಸ್ ಊರ್ ಕಡಿಗೆ ಓಗ್ಬುಡದೇ ಒಳ್ಳೆದು ಅನ್ನುಸ್ತಾದೆ ನಂಗೆ. ನೀ ಯೋಚನೆ ಮಾಡು. ನಾನು ನನ್ ಎಂಡ್ರು ಮಕ್ಕಳು ಏನ್ ಮಾಡದೋ. ನಾಳೆ ಹೇಳ್ತಿವ್ನಿ’. ವೆಂಕಟ ಹೇಳಿದ್ದನ್ನು ಕೇಳಿ ರಮೇಶನಿಗೆ ಅನ್ನ ಗಂಟಲಿನಿಂದ ಕೆಳಗಿಳಿಯಲಿಲ್ಲ. ಇವನ ಹೆಂಡತಿಯೂ ದಿನಗೂಲಿ ಮಾಡುತ್ತಿದ್ದಳು. ಅಳುತ್ತಿದ್ದ ಹೆಂಡತಿಯನ್ನು ಸಮಾಧಾನ ಪಡಿಸುತ್ತಾ ‘ಹಿಂಗೆಲ್ಲಾ ಆಗಕಿಲ್ಲ ಬುಡು. ನಾಳೆ ಬೆಳಗಾನ ಎದ್ದು ಫ್ಯಾಕ್ಟರಿ ಕಡೆ ಓಗಿ ನೋಡ್ಕಂಡು ಬತ್ತಿನಿ’.

 ಎರಡು ದಿನಗಳ ಬಳಿಕ ರಮೇಶ, ಅವನ ತುಂಬು ಗರ್ಭಿಣಿ ಹೆಂಡತಿ, ವೆಂಕಟ ಮತ್ತು ಅವನ ಕುಟುಂಬ ಇನ್ನೂ ಸಾವಿರಾರು ಅವರಂತೆಯೇ ಹೊಟ್ಟೆ ಪಾಡಿಗೆ ವಲಸೆ ಬಂದಿದ್ದ ಸಂಗಾತಿಗಳೊಡನೆ ಊರಿನ ದಾರಿ ಹಿಡಿದಿದ್ದರು. ಲಾಕ್‌ಡೌನ್ ಮಾಡಿದ್ದರಿಂದ ಬಸ್ಸು, ರೈಲು, ಟೆಂಪೋ ಯಾವುದೇ ವಾಹನವೂ ಸಿಗದೆ ಅಲೆದು ಅಲೆದು ಸುಸ್ತಾಗಿ ಕೊನೆಗೆ ನಡೆದೇ ಹೋಗುವ ನಿರ್ಧಾರ ಮಾಡಿದ್ದವು ಈ ಮನಸ್ಸುಗಳು. ನಮ್ಮ ದೇಶದಲ್ಲಿ ಸುಮಾರು 3,140 ಲಕ್ಷ ವಲಸೆ ಕಾರ್ಮಿಕರಿದ್ದಾರೆ. ‘ಇವರು ನಾಳೆ ಹೊಟ್ಟೆಪಾಡಿಗೆ ಏನು ಮಾಡಿಯಾರು?’ ಎಂದು ಅನುಕ್ಷಣವೂ ಯೋಚಿಸದ ಸರಕಾರಕೇವಲ ನಾಲ್ಕು ತಾಸುಗಳಲ್ಲಿ ಲಾಕ್ ಡೌನ್ ತಂದದ್ದು ಈ ಮನಸ್ಸುಗಳು ಇನ್ನೆಂದೂ ಸರಕಾರದ ನಾಯಕತ್ವದ ಮೇಲೆ ವಿಶ್ವಾಸವಿಡದ ಹಾಗೆ ಮಾಡಿತು.

ಲಾಕ್‌ಡೌನ್ ಮತ್ತು ಕೊರೋನ ಹಿಂದಿನ ದಿನಗಳು ಇವರಿಗೆ ಸುಖಕರವಾಗಿಯೇನು ಇರಲಿಲ್ಲ. ಅವರ ಬದುಕು ಅಂದೂ ಕಡುಕಷ್ಟದಲ್ಲೇ ಬೇಯುತಿತ್ತು. ಪ್ರತಿಷ್ಠಿತ ಬಹುಮಹಡಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಒಂದೇ ದಿನದಲ್ಲಿ ಎರಡು ಸಾವುಗಳು ಸಂಭವಿಸಿದ್ದನ್ನು ಅಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಮಾಡುವ ನನ್ನ ಸಹೋದ್ಯೋಗಿಯೊಬ್ಬರು ಹೇಳುತ್ತಿದ್ದರು. ಇಬ್ಬರೂ ಈ ಸಮುಚ್ಚಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು. ಒಬ್ಬ ಕಟ್ಟಡಕ್ಕೆ ಬಣ್ಣ ಹಚ್ಚಲು ಹನ್ನೆರಡನೇ ಮಹಡಿಯ ಮಟ್ಟಕ್ಕೆ ಏರಿದ್ದ. ಅಪಾರ್ಟ್‌ಮೆಂಟ್‌ನ ಮನೆಗಳಿಗೆ ನೀರು ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಇರುವ ಶಾಫ್ಟ್‌ನಲ್ಲಿ ಕಾಲು ಜಾರಿ ಬಿದ್ದು ಜೀವ ಕಳೆದುಕೊಂಡ. ಆತನಿಗೆ ಸೂಕ್ತವಾದ ರಕ್ಷಣಾ ಪರಿಕರ್‌ಗಳನ್ನು ವ್ಯವಸ್ಥಾಪಕರು ಒದಗಿಸಿರಲಿಲ್ಲ. ಇದೇ ಸಮುಚ್ಚಯದ ಇನ್ನೊಬ್ಬ ಕೂಲಿ ಕಾರ್ಮಿಕ ಇಲ್ಲಿನ ಕೆಲಸದ ಒತ್ತಡ, ಕಡಿಮೆ ಕೂಲಿ, ವಾಸಯೋಗ್ಯವಲ್ಲದ ತಗಡಿನ ಸೂರಿನಲ್ಲಿ ಸವೆಸುತ್ತಿದ್ದ ಹೀನಾಯ ಬದುಕಿಗೆ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗಿದ್ದ. ಬೆಂಗಳೂರಿನ ಬೆಳಂದೂರಿನ ಪ್ರತಿಷ್ಠಿತ ಮಂತ್ರಿ ಅಪಾರ್ಟ್‌ಮೆಂಟ್ ಸಮುಚ್ಚಯದ ನೆರೆಯಲ್ಲಿದ್ದ ಅನಧಿಕೃತ ವಾಸಿಗಳನ್ನು ಯಾವುದೇ ಪೂರ್ವ ಸೂಚನೆಯಿಲ್ಲದೆ ಬಿಬಿಎಂಪಿ ಅಧಿಕಾರಿಗಳು ಒಕ್ಕಲೆಬ್ಬಿಸಿದ ಮರುದಿನವೇ ಇನ್ನೊಂದು ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಈ ಎರಡು ಸಾವುಗಳುನಡೆದಿದ್ದವು.

 ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನಮ್ಮ ಮನೆಯ ಕೆಲಸ ಮಾಡಲು ಈ ‘ಸೇವಕರು’ ಬೇಕು. ಬಾಗಿಲು ಕಾಯಲು ಸೆಕ್ಯುರಿಟಿ ಗಾರ್ಡ್‌ಗಳು ಬೇಕು. ಸೂಪರ್ ಮಾರ್ಕೆಟ್‌ಗಳಲ್ಲಿ ನಮಗೆ ಸಹಾಯಕರು ಬೇಕು. ನಮ್ಮ ರಸ್ತೆಯನ್ನು ಸ್ವಚ್ಛವಾಗಿಡಲು, ನಮ್ಮ ಮನೆಯ ಕಸವನ್ನು ವಿಲೇವಾರಿ ಮಾಡಲು, ನಮ್ಮ ಕಕ್ಕಸುಬಚ್ಚಲು, ಕೊಳಚೆ ಸೇರುವ ಒಳಚರಂಡಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಪೌರಕಾರ್ಮಿಕರು ಬೇಕು. ಇವರ ಇಡೀ ಕುಟುಂಬ ನಮ್ಮ ಸೇವೆ ಮಾಡಬೇಕು. ಇವರ ಮಕ್ಕಳು ಮುಂದೆ ಇದೇ ದಾರಿ ಹಿಡಿದು ನಮ್ಮ ಮಕ್ಕಳ ಸೇವೆ ಮಾಡಬೇಕು. ಅವರೇಕೆ ಓದಿ ಬೇರೆ ವೃತ್ತಿ ಹಿಡಿಯಬೇಕು? ಅವರು ವಾಸಿಸುವ ಸ್ಥಳಕ್ಕೆ ಮಣ್ಣಿನ ಸೂರೇಕೆ, ತಗಡಿನ ಶೆಡ್ಡಾದರೂ ಸಾಕು! ಸ್ನಾನದ ಮನೆ, ಕಕ್ಕಸು ಮನೆ ಅವರಿಗೆ ಬೇಡವೇ ಬೇಡ! ಅವರು ಬದುಕಲು ಯೋಗ್ಯರಾದ ಮನುಷ್ಯರಲ್ಲ ನೋಡಿ! ಕೇವಲ ದುಡಿಯುವ ಸೇವಕರು! ದಿನಗೂಲಿಯನ್ನು ನಂಬಿ ಬದುಕುವ ಈ ಜೀವಿಗಳಿಗೆ ಲಾಕ್‌ಡೌನ್ ಬಡತನದ ಸಂಕೋಲೆಯನ್ನು ಹೇಳತೀರದಷ್ಟು ಬಿಗಿದಿತ್ತು. ಲಾಕ್‌ಡೌನ್ ಸೃಷ್ಟಿಸಿದ ಊಹಿಸಲೂ ಅಸಾಧ್ಯವಾದ ಪರಿಸ್ಥಿತಿಗೆ ಇಲ್ಲಿಯವರೆಗೂ ಸುಮಾರು ಇನ್ನೂರು ವಲಸೆ ಕಾರ್ಮಿಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಈ ಪರಿಸ್ಥಿತಿ ಎಷ್ಟು ಆಘಾತಕಾರಿಯೋ ಅಷ್ಟೇ ಆಘಾತಕಾರಿ ಬೆಳವಣಿಗೆಯೊಂದು ನಮ್ಮನ್ನು ಎದುರುಗೊಂಡಿದೆ. ಅದು ಸಂಕಷ್ಟದಲ್ಲಿ ಬೇಯುತ್ತಿರುವವರ ಸಮಸ್ಯೆಯನ್ನು ಸಮಸ್ಯೆಯೇ ಅಲ್ಲವೆಂಬಂತೆ ಪ್ರತಿಕ್ರಿಯಿಸಿದ ಕೆಲವು ಶುಷ್ಕ ಮನಸ್ಸುಗಳ ನಡವಳಿಕೆ. ಇಲ್ಲಿಯವರೆಗೂ ಇವರ ಸೇವೆಯನ್ನು ಅನುಭವಿಸಿ ಸುಖ ಜೀವನ ಪಡೆದ ಈ ಮನಸ್ಸುಗಳಿಗೆ ಲಾಕ್‌ಡೌನ್ ತಂದಿಟ್ಟ ಈ ಭೀಕರ ಚಿತ್ರಣಗಳು ಅವರ ವೈಭವದ ಬದುಕಿನ ಗ್ರಹಿಕೆಗೆ ಕಪ್ಪು ಚುಕ್ಕೆಗಳಾಗಿ ಕಂಡವು. ಅಷ್ಟು ದಿನ ಅಂತರಂಗದಲ್ಲಿ ಬಚ್ಚಿಟ್ಟುಕೊಂಡಿದ್ದ ಅಭಿಪ್ರಾಯಗಳು ಹೊರಬರತೊಡಗಿದವು.‘ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರು ತಲುಪಲು ಕಷ್ಟ ಪಡುತ್ತಿದ್ದಾರೆ. ಇವರಿಗೆ ಸ್ಪಂದಿಸಿ’ ಎಂದು ಸರಕಾರವನ್ನು ಪ್ರಜೆಗಳು ಕೇಳಿದ್ದನ್ನೇ ಪ್ರಶ್ನಿಸಿದ ಈ ಮನಸ್ಸುಗಳು ಹೇಳಿದ್ದು ಏನು ಗೊತ್ತೆ? ‘ಮಾರಣಾಂತಿಕ ಕೊರೋನ ತಂದಿಟ್ಟಿರುವಇಂತಹ ಕ್ಲಿಷ್ಟ ಪರಿಸ್ಥಿತಿಯ ನಿರ್ವಹಣೆಯಲ್ಲಿ ಕೆಲವರ ಜೀವ ಹೋದರೆ ಅದು ಕೊಲ್ಯ್‌ಟರಲ್ ಡ್ಯಾಮೇಜ್. ಏನೂ ಮಾಡಲು ಆಗುವುದಿಲ್ಲ. ಮೊದಲು ಕೊರೋನ ಮಹಾ ಆಪತ್ತಿನಿಂದ ಪಾರಾದ ಮೇಲೆ ನೀವೆಲ್ಲಾ ಸಮಾನತೆ ಬಗ್ಗೆ ಮಾತನಾಡಿ. ಈಗ ಸಮಾನತೆ, ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಾ, ಪ್ರಶ್ನೆ ಮಾಡುತ್ತಾ ಸರಕಾರಕ್ಕೆ ತೊಂದರೆ ಕೊಡುವ ಸಮಯವಲ್ಲ. ಪಾಸಿಟಿವ್ ಆಗಿ ಯೋಚಿಸಿ. ಒಳ್ಳೆಯದನ್ನು ಗುರುತಿಸಿ’. ಈ ಬೆಲೆಯಿಲ್ಲದ ಜೀವಗಳು ಸಾಯುತ್ತಿರುವಾಗ ಅದನ್ನು ಗುರುತಿಸುವುದೇ ತಪ್ಪಲ್ಲವೆ?!

ಇತರ ಜೀವಿಗಳ ನೋವಿಗೆ ಸಹಾಯ ಹಸ್ತ ನೀಡದಿದ್ದರೂ ಕಡೇ ಪಕ್ಷ ಅವರ ಕಷ್ಟಗಳು ದೂರವಾಗಲಿ ಎಂದು ಆಶಿಸುವ ಅಂತಃಕರಣವೇ ಇಲ್ಲದಿರುವ ಮನಸ್ಸುಗಳನ್ನು ಹೇಗೆ ಅರ್ಥೈಸುವುದು? ಈ ರೀತಿಯ ಮನಸ್ಥಿತಿ ಹೇಸಿಗೆ ಹುಟ್ಟಿಸಬೇಕಲ್ಲವೇ? ಸ್ಪಂದನೆಗೂ ನಿಲುಕದಷ್ಟು ಅಸೂಕ್ಷ್ಮತೆಯನ್ನು ನಾವು ಪಡೆದುದಾದರೂ ಹೇಗೆ? ನಮ್ಮ ಈ ವರ್ತನೆಗೆ ಕಾರಣಗಳೇನಿರಬಹುದು? ನೋವನ್ನು ಅನುಭವಿಸುವ, ಭಾವನೆಗಳನ್ನು ಹೊರಸೂಸುವ ಮತ್ತು ಇತರರ ಭಾವನೆಗಳಿಗೆ ಮಿಡಿಯುವ ಜೀವಿಯೆಂದೇ ಮಾನವ ಸಂಕುಲವನ್ನು ಪರಿಗಣಿಸಲಾಗಿದೆ. ಇತರ ಜೀವಿಗಳಿಗೆ ಹೋಲಿಸಿದರೆ ಈ ಗುಣಗಳನ್ನು ಅತಿ ಎತ್ತರದ ಸ್ಥರದಲ್ಲಿ ಅನುಭವಿಸಬಲ್ಲ ಏಕೈಕ ಜೀವಿ ಮಾನವ. ಮನುಷ್ಯ ಜನಾಂಗವು ಇಷ್ಟು ವರ್ಷಗಳ ಕಾಲ ಉನ್ನತಿಯನ್ನು ಗಳಿಸಿರುವುದೂ ಇತರ ಜೀವಿಗಳಿಗೆ ಮಿಡಿಯುವ ವಿಶಿಷ್ಟ ಪ್ರಜ್ಞೆಯವಿಕಾಸದಿಂದ ಎಂದೇ ಜೀವವಿಕಾಸ ಶಾಸ್ತ್ರ, ಮನೋವಿಕಾಸ ಶಾಸ್ತ್ರದ ಅಧ್ಯಯನಗಳು ತಿಳಿಸುತ್ತವೆ.

ಸ್ಪಂದನೆ ಇಲ್ಲದ ನಿರ್ದಯಿ ನಾಯಕತ್ವವನ್ನು ಪ್ರಶ್ನಾತೀತವನ್ನಾಗಿಸುತ್ತಿರುವ ನಮ್ಮ ನಡವಳಿಕೆ ಏನನ್ನು ತೋರಿಸುತ್ತಿದೆ? ಅಧಿಕಾರ ಮತ್ತು ಹಣದ ಕ್ರೋಢೀಕರಣವಾಗುತ್ತಾ ಸಾಗಿದಷ್ಟೂ ಅಮಾನವೀಯ ವರ್ತನೆ ಹೆಚ್ಚುವುದೇ? ಈ ರೀತಿಯ ನಡವಳಿಕೆಯನ್ನು ಪುಷ್ಟೀಕರಿಸುವ ಮಾಧ್ಯಮಗಳು ಹೊಣೆ ಹೊರಬೇಕೇ? ನಮ್ಮ ಜಾತಿ ಧರ್ಮದವರ ಕಷ್ಟಕ್ಕೆ ಮಾತ್ರ ಸ್ಪಂದಿಸುವ ನಮ್ಮ ಮನಸ್ಥಿತಿಗೆ ಕಾರಣವೇನು? ಸ್ಪಂದನೆ, ಅಂತಃಕರಣ, ಸಹಾನುಭೂತಿ ಈ ಗುಣಗಳನ್ನು ಕಲಿಯಲು ಸಾಧ್ಯವಿಲ್ಲವೇ? ಮಕ್ಕಳಲ್ಲಿ ಜೀವನದ ಮೌಲ್ಯಗಳನ್ನು ಮತ್ತು ಜೀವಪರ ಆರ್ದ್ರ ಮನಸ್ಸಿನ ತಳಪಾಯವನ್ನು ಹಾಕುವಲ್ಲಿ ಶಿಕ್ಷಣ ವ್ಯವಸ್ಥೆ ಸೋತಿದೆಯೇ? ಪ್ರತಿ ವ್ಯಕ್ತಿಯ ವ್ಯಕ್ತಿತ್ವ ವಿಕಸನವಲ್ಲವೇ ಸಮಾಜದ ವಿಕಸನ? ಸಹೃದಯದ ನಾಯಕತ್ವ ಬೇಕೆಂದರೆ ಮೊದಲು ನಾವು ಸಹೃದಯಿಗಳಾಗಬೇಕಲ್ಲವೇ? ಒಟ್ಟಾರೆಯಾಗಿ ನಾವು ಎಲ್ಲಿ ಎಡವಿದ್ದೇವೆ? ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳುವ ಸಮಯವಿದು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)