varthabharthi

ನಿಮ್ಮ ಅಂಕಣ

ಡ್ರೀಮ್‌ಲೈನ್ಸ್‌ಗೆ ಸ್ವಾಗತ

ವಾರ್ತಾ ಭಾರತಿ : 17 May, 2020
ಗಿರೀಶ್ ಬಜ್ಪೆ

ಈಗ ಕೊರೋನ ಕಾಟದ ಮಧ್ಯೆಯೇ ವಿಮಾನಗಳ ಹಾರಾಟಕ್ಕೆ ಹಸಿರು ನಿಶಾನೆ ದೊರೆತರೂ ಊರಿಗೆ ಮರಳುವ ಅಥವಾ ಪ್ರಪಂಚ ಸುತ್ತಾಡುವ ನಮ್ಮ ಸಂಭ್ರಮಕ್ಕೆ ಅಷ್ಟೊಂದು ಕಳೆ ಬಾರದು. ಕೊರೋನ ಸೃಷ್ಟಿಸಿರುವ ಆತಂಕಕ್ಕೆ ನಾವೆಲ್ಲ ನಲುಗಿ ಹೋಗಿದ್ದೇವೆ. ಬರೀ ಕೆಲಸಕ್ಕಾಗಿ ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಮನೆಯಿಂದ ಹೊರ ಬರುವ ನಾವು ಯಾವುದೇ ರೀತಿಯ ಶಾಪಿಂಗ್ ಸಾಹಸಕ್ಕೆ ಕೈ ಹಾಕಿ ಕೊರೋನ ಮಾರಿಯನ್ನು ಮೈ ಮೇಲೆ ಎಳೆಯುವ ದುಸ್ಸಾಹಸ ಮಾಡೆವು. ಜೀವ ಇದ್ದರೇ, ಪ್ರಪಂಚ ಇದೆ ಎನ್ನುವ ಮಾತಿಗೆ ನಾವು ಕಟಿಬದ್ಧರಾಗುವುದು ಖಚಿತ.

ಮಹಾಮಾರಿ ಕೊರೋನ ನೀಡಿದ ಹೊಡೆತಕ್ಕೆ ಜಗತ್ತಿನ ಬಹುತೇಕ ವಿಮಾನಯಾನ ಸಂಸ್ಥೆಗಳು ಪತರಗುಟ್ಟಿವೆ. ಇನ್ನೇನಿದ್ದರೂ ಸರಕಾರಗಳ ಹಣಕಾಸಿನ ಬಲದಿಂದ ಮೇಲೆದ್ದು ಹಾರಾಡಬೇಕಾಗಿದೆ. ಕೊರೋನ ಕಾರ್ಮೋಡದಿಂದಾಗಿ ತಕ್ಷಣಕ್ಕೆ ಆ ದಾರಿಯೂ ಗೋಚರಿಸುತ್ತಿಲ್ಲ. ಆದರೂ ಕನಸು ಕಾಣುವುದನ್ನು ಬಿಡಬಾರದು. ಒಮ್ಮಿಮ್ಮೆ ಸಿಹಿ ಸಿಹಿ ಅಲ್ಲದ ಕನಸನ್ನಾದರೂ ಕಂಡು ಮನಸ್ಸನ್ನು ಸಂತೈಸಬೇಕು. ಒಂದೊಮ್ಮೆ ಕೊರೋನ ಕಾಟದ ಮಧ್ಯೆಯೇ ವಿಮಾನ ಯಾನ ಶುರುವಾದರೆ ಅದು ಹೇಗಿರಬಹುದೆಂದು ಮನೆಯೊಳಗೆಯೇ ಕೂತು ಹೀಗೆ ಸುಮ್ಮನೆ ಯೋಚಿಸೋಣ.

ವಿಮಾನದಲ್ಲಿ ಪ್ರಯಾಣ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ತನಕ ಲೋಹದ ಹಕ್ಕಿಯೊಳಗೆ ತಂಪಾದ ಹವಾದಲ್ಲಿ ಹಾಯಾಗಿ ಕೂತು ನೀಲಾಕಾಶದಲ್ಲಿ ಕಂಡು ಬರುವ ಮೋಡಗಳ ದ್ರಶ್ಯ ವೈಭವವನ್ನು ಕಣ್ಣು ತುಂಬಿಸಿಕೊಳ್ಳುವ ಅದ್ಭುತ ಅನುಭವಕ್ಕೆ ಹಾತೊರೆಯುವವರೇ ಹೆಚ್ಚು. ಒಂದು ಬಾರಿ ತಂಗಿ ಜೊತೆ ನನ್ನ ಮನೆಗೆ ವಿಮಾನದಲ್ಲಿ ಪ್ರಯಾಣಿಸಿ ಬಂದಿದ್ದ ಅಮ್ಮನನ್ನು ಕೇಳಿದ್ದೆ, ಅಮ್ಮ, ವಿಮಾನ ಪ್ರಯಾಣ ಎಂಚ ಆಂಡ್; (ವಿಮಾನ ಪ್ರಯಾಣ ಹೇಗಿತ್ತು?), ಯಡ್ಡೆ ಇತ್ತಿಂಡ್ (ಚೆನ್ನಾಗಿತ್ತು) ಎಂಬುದೇ ಸರಳ ಉತ್ತರವಾಗಿತ್ತು. ಖಂಡಿತವಾಗಿಯೂ ವಿಮಾನ ಹೇಗೆ ಹಾರಿತು, ಸೀಟ್ ಹೇಗಿತ್ತು, ತಿನ್ನಲು ಏನಿತ್ತು, ಏನಿರಲಿಲ್ಲ ಎನ್ನುವ ಈ ಎಲ್ಲ ಪ್ರಶ್ನೆಗಳು ನಗಣ್ಯ. ಒಟ್ಟಾರೆ ವಿಮಾನ ತಲುಪುವ ಸ್ಥಳವನ್ನು ಸುರಕ್ಷಿತವಾಗಿ ಸಕಾಲದಲ್ಲಿ ತಲುಪಿದರೆ ಸಾಕಲ್ಲವೇ, ಅದಕ್ಕಲ್ಲವೇ ಹೇಳುವುದು ಯಾನ ಚೆನ್ನಾಗಿತ್ತೆಂದು.

ಪರ ದೇಶಕ್ಕೆ ದುಡಿಯಲು ಹೋದವರಿಗಂತೂ ಸುದೀರ್ಘಾವಧಿಯ ದುಡಿಮೆಯ ಬಳಿಕ ವಿಮಾನ ಏರುವ ಖುಷಿಯನ್ನು ವರ್ಣಿಸಲಸಾಧ್ಯ. ಊರಿಗೆ ಹೋಗಿ ಬಂಧು ಬಳಗವನ್ನು ಸೇರುವ ಆ ಸಂಭ್ರಮವೇ ಬೇರೆ. ಅದಕ್ಕಾಗಿ ಪ್ರೀತಿ ಪಾತ್ರರಿಗೆ ಏನಾದರೊಂದು ಉಡುಗೊರೆ ಕೊಂಡೊಯ್ಯುವ ಲೆಕ್ಕಾಚಾರ 3 ತಿಂಗಳುಗಳ ಮೊದಲೇ ರೆಡಿ ಆಗುತ್ತೆ. ಸಮಯ ಸಿಕ್ಕಾಗಲೆಲ್ಲ ಅಪ್ಪ ಅಮ್ಮನಿಗೊಂದು, ಪತ್ನಿ ಮಕ್ಕಳಿಗೊಂದು, ಇತರರಿಗೊಂದು ಎಂದು ಭರ್ಜರಿ ಶಾಪಿಂಗ್ ಶುರುವಾಗುತ್ತೆ. ಇದು ಎಲ್ಲಿಯ ವರೆಗೆ ಮುಂದುವರಿಯುತ್ತದೆ ಎಂದರೆ, ವಿಮಾನ ನಿಲ್ದಾಣದಲ್ಲಿ ವಿಮಾನದೊಳಗೆ ಪ್ರವೇಶಿಸಲು ಬೋರ್ಡಿಂಗ್ ಕರೆ ಬರುವ ತನಕ.

ಈಗ ಕೊರೋನ ಕಾಟದ ಮಧ್ಯೆಯೇ ವಿಮಾನಗಳ ಹಾರಾಟಕ್ಕೆ ಹಸಿರು ನಿಶಾನೆ ದೊರೆತರೂ ಊರಿಗೆ ಮರಳುವ ಅಥವಾ ಪ್ರಪಂಚ ಸುತ್ತಾಡುವ ನಮ್ಮ ಸಂಭ್ರಮಕ್ಕೆ ಅಷ್ಟೊಂದು ಕಳೆ ಬಾರದು. ಕೊರೋನ ಸೃಷ್ಟಿಸಿರುವ ಆತಂಕಕ್ಕೆ ನಾವೆಲ್ಲ ನಲುಗಿ ಹೋಗಿದ್ದೇವೆ. ಬರೀ ಕೆಲಸಕ್ಕಾಗಿ ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಮನೆಯಿಂದ ಹೊರ ಬರುವ ನಾವು ಯಾವುದೇ ರೀತಿಯ ಶಾಪಿಂಗ್ ಸಾಹಸಕ್ಕೆ ಕೈ ಹಾಕಿ ಕೊರೋನ ಮಾರಿಯನ್ನು ಮೈ ಮೇಲೆ ಎಳೆಯುವ ದುಸ್ಸಾಹಸ ಮಾಡೆವು. ಜೀವ ಇದ್ದರೇ ಪ್ರಪಂಚ ಇದೆ ಎನ್ನುವ ಮಾತಿಗೆ ನಾವು ಕಟಿಬದ್ಧರಾಗುವುದು ಖಚಿತ.

ಇಷ್ಟು ದಿನ ಮೈ ಕೈಗಳಿಗೆ ಗಮ ಗಮ ಭರಿಸುವ ಬಗೆ ಬಗೆಯ ಸುಗಂಧ ದ್ರವ್ಯ ಪೂಸಿ, ಮೇಕ್ ಅಪ್ ಮೂಲಕ ಮುಖ ಸೌಂದರ್ಯ ವರ್ಧಿಸಿ, ಕೈ ಬೆರಳುಗಳಿಗೆ ಚಿತ್ರ ವಿಚಿತ್ರವಾದ ಉಂಗುರ ತೊಡಿಸಿ, ಟಾಪ್ ಬ್ರಾಂಡ್ ನ ಸನ್ ಗ್ಲಾಸ್ ಧರಿಸಿ ಏರ್‌ಪೋರ್ಟ್ ಕಡೆ ಉಲ್ಲಾಸ ಸಡಗರದಿಂದ ಹೆಜ್ಜೆ ಹಾಕುತ್ತಿದ್ದ ನಾವು, ಇನ್ನು ಮುಂದೆ ಅಂಗೈಗಳ ತುಂಬಾ ಸ್ಯಾನಿಟೈಸರ್ ಹಚ್ಚಿ, ಬಾಯಿ ಮತ್ತು ಕೈಗಳನ್ನು ಗವಸುಗಳಿಂದ ಮುಚ್ಚಿ, ದಪ್ಪ ಗ್ಲಾಸಿನ ದೊಡ್ಡ ಸೈಝಿನ ಸೇಫ್ಟಿ ಗ್ಲಾಸ್ ಧರಿಸಿ ಗೌಜಿ ಗದ್ದಲವಿಲ್ಲದೆ ಏರ್ ಪೋರ್ಟ್ ನಲ್ಲಿ ನಾವು ಮೌನಕ್ಕೆ ಜಾರುವುದು ಬದುಕಿನ ವಿಪರ್ಯಾಸವೇ ಸರಿ.

ಏರ್‌ಪೋರ್ಟ್‌ನಲ್ಲಿ ಬ್ಯಾಗೇಜ್‌ಗಳನ್ನು ಸಹಾಯಕರ ಕೈಯಲ್ಲಿ ಕೊಟ್ಟು, ಬೋರ್ಡಿಂಗ್ ಪಾಸ್ ಪಡೆಯಲು ಖಾಲಿ ತೋಳು ಬೀಸುತ್ತಾ ವಯ್ಯಾರದಿಂದ ತೆರಳುತ್ತಿದ್ದ ನಾವು, ಇನ್ನು ಮುಂದೆ ಸಣ್ಣ ಗಾತ್ರದ, ಕಮ್ಮಿ ಭಾರದ ಬ್ಯಾಗೇಜುಗಳನ್ನು ನಾವೇ ಟ್ರಾಲಿಯಲ್ಲಿ ಎತ್ತಿಟ್ಟು ದೂಡಿಕೊಂಡು ಹೋಗುವ ದ್ರಶ್ಯ ಸಾಮಾನ್ಯವಾಗಬಹುದು.

ಬೋರ್ಡಿಂಗ್ ಪಾಸ್ ನೀಡುತ್ತಿದ್ದ ಏರ್‌ಲೈನ್ಸ್ ಸಂಸ್ಥೆಗಳ ಅಧಿಕಾರಿಗಳು, ನೂಕು ನುಗ್ಗಲು ಮಾಡುತ್ತಿದ್ದ ನಮಗೆ ದೂರ ದೂರ ಸಾಲಲ್ಲಿ ನಿಲ್ಲಿ ಎಂದು ಆಗಾಗ ಹೇಳಿದಾಗ ಪಡಬೇಕಾದ ಪಡಿಪಾಟಲು ಇನ್ನು ಸದ್ಯಕ್ಕೆ ಬಾರದು. ಏಕೆಂದರೆ, ಕೊರೋನ ಎಂಬ ಹೆಸರಿನ ಸಮಾಜ ಶಾಸ್ತ್ರದ ಭಾರೀ ಜೋರಿನ ನಮ್ಮ ಟೀಚರ್, ದೈಹಿಕ ಅಂತರ ಕಾಯ್ದುಕೊಳ್ಳುವ ಸೋಶಿಯಲ್ ಡಿಸ್ಟಾನ್ಸಿಂಗ್ ಎಂಬ ಶಿಸ್ತಿನ ಪಾಠವನ್ನು ನಮಗೆ ಕಟ್ಟು ನಿಟ್ಟಾಗಿ ಕಲಿಸಿಕೊಟ್ಟಿರುವ ರೀತಿಯೇ ಹಾಗೆ ಇದೆ.

ಏರೋ ಬ್ರಿಜ್ ಮೂಲಕ ಸಾಗಿ ವಿಮಾನದೊಳಗೆ ಹೆಜ್ಜೆ ಇಡುತ್ತಿದ್ದಂತೆ ನಮ್ಮನ್ನು ನಗು ಮೊಗದಿಂದ ಆತ್ಮೀಯವಾಗಿ ಸ್ವಾಗತಿಸುತ್ತಿದ್ದ ಗಗನ ಸಖಿಯರ ಆ ನಗು ಇನ್ನು ಮುಂದೆ ಮಾಸ್ಕ್‌ನ ಹಿಂದೆ ಮರೆಯಾಗಲಿದೆ. ಅಲ್ಲದೆ ನಮ್ಮನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದ ಆ ಗಗನ ಸಖಿಯರು ಇನ್ನು ಮುಂದೆ ನಮ್ಮಿಂದ ಆದಷ್ಟು ದೂರವೇ ಸರಿದು ಅಂತಿಮವಾಗಿ ವಿಮಾನದಿಂದ ಹೊರ ಬರುವಾಗ ಎಂದಿನ ನಗುವನ್ನು ಮರೆ ಮಾಡಿ ಧನ್ಯವಾದ ಸಮರ್ಪಿಸಬಹುದು. ಆದರೆ ನಡು ನಡುವೇ, ಕರಾಬ್ ಮೊಸಂ ಕಿ ವಜಸೇ ಕ್ಯಾಪ್ಟನ್ ನೇ ಆಪ್ ಕಾ ಕುರ್ಸಿಕಾ ಬೆಲ್ಟ್ ಬಾಂಧ್ ನೇ ಕಾ ಸಂಕೇತ್ ದಿಯಾ ಗಯಾ ಹೇ (ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅವರು ತಮ್ಮ ಕುರ್ಚಿಯ ಬೆಲ್ಟ್ ಹಾಕಿ ಕೊಳ್ಳುವ ಸೂಚನೆ ನೀಡಿದ್ದಾರೆ) ಅನ್ನುವಂತಹ ಸ್ವಲ್ಪ ಗಾಬರಿ ಪಡುವ ಸೂಚನೆಯನ್ನು ಮೆದುವಾದ ಧ್ವನಿಯಲ್ಲಿ ಉದ್ಘೋಷಣೆ ಮಾಡಲು ಅವರು ಮರೆಯಲಾರರು.

ಈ ಮೊದಲು ವಿಮಾನ ಟೇಕ್ ಆಫ್ ಆಗಿ ಊಟಕ್ಕಾಗಿ ನಾವು ಬಹಳ ಹೊತ್ತು ಕಾಯಬೇಕಿದ್ದರೆ, ಇನ್ನು ಮುಂದೆ ವಿಮಾನದ ಸೀಟ್ ಪೊಕೆಟ್‌ನಲ್ಲಿ ಮೊದಲೇ ಬಂದು ಕೂತಿರುವ ಪ್ಯಾಕೆಟ್‌ನಲ್ಲಿರುವ ಊಟ     ನಮ್ಮ ಹೊಟ್ಟೆ ಸೇರಲು ಕಾಯುತ್ತಿರಬಹುದು. ಆದರೆ ಕೊರೋನಕ್ಕೆ ಹೆದರಿ ಮನೆಯಿಂದಲೇ ತಿಂಡಿ ತಿನಿಸುಗಳನ್ನು ಬ್ಯಾಗ್ ನಲ್ಲಿ ಕಟ್ಟಿಕೊಂಡು ಬಂದಿರುವ ನಾವು ವಿಮಾನದಲ್ಲಿರುವ ಆಹಾರವನ್ನು ಮುಟ್ಟುವ ಗೋಜಿಗೆ ಹೋಗೆವು. ಅತ್ತ ವಿಮಾನದ ಎದುರು ಸಾಲಿನ ಸುಮಾರು ಇಪ್ಪತ್ತು ಮೂವತ್ತು ಸೀಟ್ ಗಳನ್ನು ಫ್ಯಾಮಿಲಿ ಕ್ಯಾಬಿನ್ ಥರ ಬುಕ್ ಮಾಡಿಕೊಂಡು, ಹರಟೆ ಹೊಡೆಯುತ್ತಾ, ಬೇಕಾಬಿಟ್ಟಿ ಬಗೆಬಗೆಯ ವಿಶೇಷವಾದ ಊಟ, ತಿಂಡಿ, ಪಾನೀಯಗಳನ್ನು ಏರ್ ಲೈನ್ಸ್ ಮೂಲಕ ಆರ್ಡರ್ ಮಾಡಿ ಕುಡಿದು ತಿಂದು ತೇಗುತ್ತಿದ್ದ ನಾವು, ಇನ್ನು ಮುಂದೆ ಮನೆಯಲ್ಲೇ ಖುದ್ದು ತಯಾರಿಸಿದ್ದ ಊಟ ತಿಂಡಿಯನ್ನೇ ತಂದು ತಿಂದು ಬಾಯಿ ಮುಚ್ಚಿಕೊಳ್ಳಬಹುದು.

ಎಕ್ಸ್ ಕ್ಯೂಸ್ ಮೀ ಡ್ರಿಂಕ್ಸ್, ಎಕ್ಸ್ ಕ್ಯೂಸ್ ಮೀ ಜ್ಯೂಸ್, ಎಕ್ಸ್ ಕ್ಯೂಸ್ ಮೀ ಚಾಕ್ಲೇಟ್, ಎಕ್ಸ್ ಕ್ಯೂಸ್ ಮೀ ಬ್ಲಾಂಕೆಟ್ ಎಂದು ಗಗನ ಸಖಿಯರನ್ನು ಸತಾಯಿಸುತ್ತಿದ್ದ ನಾವು, ಇದಾವುದನ್ನೂ ಕೇಳದೆ ತೆಪ್ಪಗೆ ಕೂತು ಪ್ರಯಾಣ ಮಾಡಬಹುದು. ಮನೆಯಲ್ಲಿರುವ ಬೆಡ್ ರೂಮಿನ ಅಟ್ಯಾಚ್ಡ್ ಬಾತ್ ರೂಮ್‌ನಂತೆ ಆಗಾಗ ಟಾಯ್ಲೆಟ್‌ಗೆ ಓಡಾಡುತ್ತಿದ್ದ ನಾವು, ಇನ್ನು ಮುಂದೆ ಎಲ್ಲವನ್ನೂ ಸಹಿಸಿಕೊಂಡು ಹೋಗಬಹುದು. ಏಕೆಂದರೆ ಕೊರೋನ ಎಂಬ ಸೈತಾನದ ಭಯ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಕಾಡುವುದು.

ಕೆಲವೊಮ್ಮೆ ಏರ್ ಪೊಕೆಟ್ (ಆಕಾಶದಲ್ಲಿ ವಾಯು ಭಾರ ಇಲ್ಲದ ಪ್ರದೇಶ) ನಲ್ಲಿ ಸಿಲುಕಿ ವಿಮಾನ ಏಕಾಏಕಿ ಕೆಳಕ್ಕೆ ಕುಸಿದಾಗ ನಮ್ಮಲ್ಲಿ ನಗು ಮೊಗದಿಂದಲೇ ಧೈರ್ಯ ತುಂಬುತ್ತಿದ್ದ ಗಗನ ಸಖಿಯರು ಇನ್ನು ಮುಂದೆ ಪ್ರಯಾಣದುದ್ದಕ್ಕೂ ನಮ್ಮ ಬಳಿ ಸುಳಿಯರು. ಆದ್ದರಿಂದ ಗುಂಡಿಗೆಯಲ್ಲಿ ಸಾಕಷ್ಟು ಧೈರ್ಯವನ್ನು ತುಂಬಿಸಿಕೊಂಡೇ ವಿಮಾನ ಹತ್ತಬೇಕು. ಕೆಂಜಾರು ಪದವಿನ ರನ್ ವೇಯಲ್ಲಿ ಇಷ್ಟು ದಿನ ಲ್ಯಾಂಡಿಂಗ್ ಆದ ಬಳಿಕ ಹೊರ ಹೋಗಲು ನಾವು ಮಾಡುತ್ತಿದ್ದ ನೂಕು ನುಗ್ಗಲಿಗೆ ಇನ್ನು ಕೊರೋನದ್ದೆ ಆಟೋಮ್ಯಾಟಿಕ್ ಬ್ರೇಕ್.

ಮಂಗಳೂರು ವಿಮಾನ ನಿಲ್ದಾಣದ  ಲ್ಲಿ ಈ ತನಕ ಚಿನ್ನಕ್ಕಾಗಿ ಆಕಾಶ ಭೂಮಿ ಒಂದು ಮಾಡಿ ನಮ್ಮನ್ನು ಗದರಿಸಿ ಬೆದರಿಸಿ ಹುಡುಕಾಡುತ್ತಿದ್ದ ಅಧಿಕಾರಿಗಳು, ಇನ್ನು ಮುಂದೆ ಕೊರೋನ ಕಳ್ಳ ಸಾಗಣೆಯ ಬಗ್ಗೆಯೂ ಶಂಕಿಸಿ ತಪಾಸಣೆ ನಡೆಸಲಿದ್ದಾರೆ.

ಡ್ರೀಮ್‌ಲೈನ್ಸ್‌ನಲ್ಲಿ ಪ್ರಯಾಣಿಸಿದ ನಿಮಗೆಲ್ಲರಿಗೂ ಧನ್ಯವಾದಗಳು! ಆದಷ್ಟು ಮನೆಯಲ್ಲಿರಿ... ಸುರಕ್ಷಿತವಾಗಿರಿ...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)