varthabharthi

ನಿಮ್ಮ ಅಂಕಣ

ಕೊರೋನ ಸಂಕಷ್ಟದಲ್ಲಿ ರಾಗಿ ಉತ್ಪಾದನೆ

ವಾರ್ತಾ ಭಾರತಿ : 17 May, 2020
ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ

ರಾಗಿಯು ಒಂದು ಸ್ವಕೀಯ ಪರಾಗಸ್ಪರ್ಶ ಬೆಳೆ. ವಿಜ್ಞಾನಿಗಳು ರಾಗಿಯಲ್ಲಿ ಸಂಕರಣ ಸಾಧ್ಯವಿಲ್ಲವೆಂದುಬಿಟ್ಟಿದ್ದರು. ಆದರೆ, ಲಕ್ಷ್ಮಣಯ್ಯನವರ ಪ್ರಬುದ್ಧ ಆಲೋಚನೆಗಳು ಫಲಕೊಟ್ಟವು. ರಾಗಿಯಲ್ಲಿ ಪರಾಗಸ್ಪರ್ಶಕ್ಕಾಗಿ ವಿಶೇಷ ಸಂಪರ್ಕ ಪದ್ಧತಿಯನ್ನು ತಮಗೆ ತಾವೇ ಕಂಡುಕೊಂಡರು. ರಾಗಿಯಲ್ಲಿ ಸಂಕರಣ ತಳಿಗಳನ್ನು ಕಂಡುಹಿಡಿದ ಜಗತ್ತಿನ ಮೊಟ್ಟ ಮೊದಲ ವಿಜ್ಞಾನಿಯಾದರು.

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ !

ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು !! ಪ !! ಎಂಬ ಪುರಂದರ ದಾಸರ ಪದವು ರಾಗಿ ಎಂಬ ಧಾನ್ಯದ ಬಗ್ಗೆ ಬರೆದ ಅತ್ಯುತ್ಕೃಷ್ಟ ಹಾಡಾಗಿದೆ. ಈ ಹಾಡು ರಾಗಿಯ ದಾನಕ್ಕೆ ಕರೆ ಕೊಡುತ್ತದೆ. ರಾಗಿ ಬೆಳೆವ ಸೀಮೆಯಲ್ಲಿ ಸುಗ್ಗಿಯ ಕಾಲದಲ್ಲಿ ರಾಗಿಕಣದಲ್ಲಿಯೇ ಪಡಿ, ಸೇರು, ಬಳ್ಳ ಲೆಕ್ಕದಲ್ಲಿ ಭೂರಹಿತರಿಗೆ, ಕೃಷಿ ಕಾರ್ಮಿಕರಿಗೆ, ಬಡಬಗ್ಗರಿಗೆ ರಾಗಿ ಹಂಚುವ ಪರಂಪರೆಯಿದೆ. ಹೊಲದೊಡೆಯನ ಮನೆ ಸೇರಿಕೊಳ್ಳುವ ರಾಗಿ, ಆ ಕ್ಷಣದಲ್ಲೇ ಸಮಾನತೆಯ ಕುರುಹಾಗಿ ಇತರರಿಗೂ ಹಂಚಲ್ಪಡುತ್ತದೆ. ರಾಗಿ ಲಕ್ಷ್ಮಣಯ್ಯನವರು ಅಧಿಕ ಇಳುವರಿಯ ರಾಗಿ ತಳಿಗಳನ್ನು ಕಂಡು ಹಿಡಿದ ಮೇಲಂತೂ ಪುರಂದರ ದಾಸರ ಹಾಡಿಗೆ ಹೆಚ್ಚು ಅರ್ಥ ಬಂತು. ಕೊರೋನ ಸಂಕಷ್ಟ, ಅದರಿಂದಾದ ಲಾಕ್‌ಡೌನ್, ಕಾರ್ಮಿಕರ ಅಲಭ್ಯತೆ, ಮತ್ತಿತರ ಸಂಕಷ್ಟಗಳ ಮಧ್ಯೆ ರೈತರು ತಮ್ಮ ಕಾಯಕವನ್ನು ಮುಂದುವರಿಸಲೇಬೇಕಿದೆ. ರಾಷ್ಟ್ರದಲ್ಲಿ ದವಸಧಾನ್ಯಗಳ ಉತ್ಪಾದನೆಯ ಪ್ರಮಾಣವನ್ನು ಕಾಯ್ದುಕೊಳ್ಳಬೇಕಿದೆ. ಗೋಧಿ, ಅಕ್ಕಿ, ಮುಸುಕಿನ ಜೋಳ, ಜವಾರ್ ಜೋಳ, ಬಾಜ್ರಾ ನಂತರದ ಸ್ಥಾನದಲ್ಲಿ ರಾಗಿಯ ಉತ್ಪಾದನೆಯಿದೆ. ಒಂದು ಅಂದಾಜಿನಂತೆ, ರಾಷ್ಟ್ರ ಮಟ್ಟದಲ್ಲಿ ಅವುಗಳ ಉತ್ಪಾದನಾ ಪ್ರಮಾಣವು ಕ್ರಮವಾಗಿ 990, 871, 158, 91, 87 ಮತ್ತು 23 ಲಕ್ಷ ಟನ್‌ಗಳು. ರಾಗಿಗೆ ಆರನೇ ಸ್ಥಾನ. ದೇಶದ ಒಟ್ಟು ರಾಗಿ ಉತ್ಪಾದನೆಯಾದ 23 ಲಕ್ಷ ಟನ್‌ಗಳಲ್ಲಿ ರಾಜ್ಯದ ಉತ್ಪಾದನೆಯು ಕನಿಷ್ಠ 13 ಲಕ್ಷ ಟನ್. ಕೆಲ ವರ್ಷಗಳಲ್ಲಿ 15 ರಿಂದ 18 ಲಕ್ಷ ಟನ್‌ಗಳವರೆಗೆ ದಾಖಲೆಯ ಇಳುವರಿಯಿತ್ತು. ರಾಗಿ ಉತ್ಪಾದನೆಯಲ್ಲಿ ರಾಜ್ಯವು ಮೊದಲನೇ ಸ್ಥಾನದಲ್ಲಿದೆ.

ರಾಗಿಯ ಮೂಲಸ್ಥಾನ ಆಫ್ರಿಕಾ ಖಂಡ. ಸಹಸ್ರಮಾನಗಳ ಹಿಂದೆ ಅಫ್ರಿಕಾದಿಂದ ಮೊಟ್ಟಮೊದಲಿಗೆ ಗುಜರಾತ್ ರಾಜ್ಯಕ್ಕೆ ರಾಗಿ ಬಂದಿರುವ ಕುರುಹುಗಳಿವೆ. ಹರಪ್ಪಾ ಸಂಸ್ಕೃತಿಯನ್ನು ಬಗೆದು ನೋಡಿದಾಗ ಕ್ರಿಸ್ತ ಪೂರ್ವ 1800 ವರ್ಷಗಳ ಹಿಂದಿನ ಸ್ಮಶಾನಗಳಲ್ಲಿ ರಾಗಿಯನ್ನು ಹಾಕಿ ಇಟ್ಟಿರುವುದನ್ನು 1962 ರಲ್ಲಿ ಉತ್ಖನನ ಮಾಡಿ ಕಂಡುಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಗೇವುಗಳಲ್ಲಿ ರಾಗಿಯನ್ನು ಶೇಖರಿಸಿಡಲಾಗುತ್ತಿತ್ತು. ದೇಶದ ಹಲವಾರು ರಾಜ್ಯಗಳಲ್ಲಿ ರಾಗಿಯನ್ನು ಬೆಳೆಯಲಾಗುತ್ತಿದೆ. ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಮೊದಲ ಐದು ಸ್ಥಾನಗಳಲ್ಲಿವೆ.

ರಾಗಿ ಉತ್ಪಾದನೆಯನ್ನು ಸಾಧಿಸಿಕೊಳ್ಳೋಣ

ರಾಜ್ಯದಲ್ಲಿ 6 ಲಕ್ಷ ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗುತ್ತಿದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು ರಾಗಿ ಬೆಳೆಗೆ ಹೆಸರುವಾಸಿ. ಕಡಿಮೆ ನೀರು, ಕಡಿಮೆ ಗೊಬ್ಬರ ಬೇಡುವ ರಾಗಿಗೆ ಕ್ರಿಮಿನಾಶಕಗಳು ಬೇಕಿಲ್ಲ. ಎರಡು ಹೊತ್ತು ರಾಗಿ ಮುದ್ದೆ ತಿನ್ನುವ ಹಲವಾರು ಜಿಲ್ಲೆಗಳ ಜನರಿಗೆ ರಾಗಿ ಬೇಕೇಬೇಕು. ರಾಗಿ ಪೌಷ್ಟಿಕ ಆಹಾರ. ಸ್ಥೂಲಕಾಯ ದೇಹ ವಿರೋಧಿ ಆಹಾರ. ಸಕ್ಕರೆ ಕಾಯಿಲೆ ರೋಗಿಗಳ ಆಧ್ಯತೆಯ ಆಹಾರ. ಮಾಜಿ ಪ್ರಧಾನಿಗಳಾದ ಎಚ್. ಡಿ. ದೇವೇಗೌಡರು ಜನಪ್ರಿಯಗೊಳಿಸಿದ ಆಹಾರ. ರಾಷ್ಟ್ರೀಯ ಆಹಾರ ಭದ್ರತೆ ಮಿಷನ್ (2007) ಮತ್ತು ಕಾಯ್ದೆ (2013)ಯ ಆಶಾಭಾವನೆಯಂತೆ ರಾಗಿ ಉತ್ಪಾದನೆಯ ಪ್ರಮಾಣವನ್ನು ಕಾಯ್ದುಕೊಳ್ಳಬೇಕಿದೆ. ಅದಕ್ಕಾಗಿ, ರಾಗಿ ಲಕ್ಷ್ಮಣಯ್ಯನವರ ಇಂಡಾಫ್ ತಳಿಗಳಿವೆ. ಇಂಡಾಫ್ ಮೂಲದಿಂದ ಸಂಕರಣ ಮಾಡಲಾದ ಇಂಡಾಫೋತ್ತರ ತಳಿಗಳಾದ ಎಲ್-5, ಜಿಪಿಯು- 26, ಜಿಪಿಯು 28, ಎಂ. ಆರ್.- 1, ಎಂ. ಆರ್.- 6, ಕೆ. ಎಂ. ಆರ್.- 301, ಕೆ. ಎಂ. ಆರ್.- 204, ಎಂ. ಎಲ್.- 365 ಮುಂತಾದವು ಇವೆ.

ರಾಗಿ ಕ್ರಾಂತಿಯ ಹರಿಕಾರರ ನೆನೆಯೋಣ

ರಾಗಿ ಬ್ರಹ್ಮ, ರಾಗಿ ಕ್ರಾಂತಿಯ ಹರಿಕಾರರು, ಅಧಿಕ ಇಳುವರಿಯ ರಾಗಿ ತಳಿಗಳ ಪಿತಾಮಹ ಮತ್ತು ತೆನೆಮರೆಯ ಕ್ರಾಂತಿ ಎಂಬ ನಾಮಾಂಕಿತಗಳಿಗೆ ಭಾಜನರಾದವರು ಡಾ. ಸಿ. ಎಚ್. ಲಕ್ಷ್ಮಣಯ್ಯನವರು. ಅವರು ಮೈಸೂರು ತಾಲೂಕಿನ ಹಾರೋಹಳ್ಳಿಯ ಬಡ ಕುಟುಂಬದಲ್ಲಿ ಮೇ 15, 1921 ರಂದು ಜನಿಸಿದರು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 1941ರಲ್ಲಿ ಸಸ್ಯಶಾಸ್ತ್ರ ವಿಷಯದೊಂದಿಗೆ ಬಿಎಸ್ಸಿ ಪದವಿ ಪಡೆದರು. ಕೆಲ ಅಲ್ಪಕಾಲದ ಉದ್ಯೋಗಗಳ ನಂತರ, ಮಂಡ್ಯದ ವಿಸಿ ಫಾರಂನಲ್ಲಿ ಕಿರಿಯ ಸಹಾಯಕ ಸಸ್ಯಶಾಸ್ತ್ರಜ್ಞರಾಗಿ 1949 ರಲ್ಲಿ ನೆಲೆಗೊಂಡರು. ಅಲ್ಲಿಯೇ ಸುಮಾರು 25 ಅಧಿಕ ಇಳುವರಿಯ ರಾಗಿ ತಳಿಗಳನ್ನು ಕಂಡುಹಿಡಿದರು.

ರಾಗಿಯು ಒಂದು ಸ್ವಕೀಯ ಪರಾಗಸ್ಪರ್ಶ ಬೆಳೆ. ವಿಜ್ಞಾನಿಗಳು ರಾಗಿಯಲ್ಲಿ ಸಂಕರಣ ಸಾಧ್ಯವಿಲ್ಲವೆಂದುಬಿಟ್ಟಿದ್ದರು. ಆದರೆ, ಲಕ್ಷ್ಮಣಯ್ಯನವರ ಪ್ರಬುದ್ಧ ಆಲೋಚನೆಗಳು ಫಲಕೊಟ್ಟವು. ರಾಗಿಯಲ್ಲಿ ಪರಾಗಸ್ಪರ್ಶಕ್ಕಾಗಿ ವಿಶೇಷ ಸಂಪರ್ಕ ಪದ್ಧತಿಯನ್ನು ತಮಗೆ ತಾವೇ ಕಂಡುಕೊಂಡರು. ರಾಗಿಯಲ್ಲಿ ಸಂಕರಣ ತಳಿಗಳನ್ನು ಕಂಡುಹಿಡಿದ ಜಗತ್ತಿನ ಮೊಟ್ಟ ಮೊದಲ ವಿಜ್ಞಾನಿಯಾದರು. ಸ್ಥಳೀಯ ರಾಗಿ ತಳಿಗಳು ಒಂದು ಎಕರೆಗೆ ಮೂರ್ನಾಲ್ಕು ಕ್ವಿಂಟಾಲ್ ಇಳುವರಿ ಕೊಡುತ್ತಿದ್ದವು. ಲಕ್ಷ್ಮಣಯ್ಯನವರು 1951 ರಿಂದ 1964 ರವರೆಗೆ ಸ್ಥಳೀಯ ರಾಗಿ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಎಕರೆಗೆ ಆರೇಳು ಕ್ವಿಂಟಾಲ್ ಇಳುವರಿ ಕೊಡುವ ಅನ್ನಪೂರ್ಣ, ಪೂರ್ಣ, ಸಂಪೂರ್ಣ, ಉದಯ, ಅರುಣ, ಶಕ್ತಿ, ಕಾವೇರಿ ರಾಗಿ ತಳಿಗಳನ್ನು ಬಿಡುಗಡೆ ಮಾಡಿದರು. ಕರ್ನಾಟಕ ಸರಕಾರವು 1968 ಮತ್ತು 1982ರಲ್ಲಿ ಇವರಿಗೆ ಎರಡು ಬಾರಿ ರಾಜ್ಯ ಪ್ರಶಸ್ತಿ ಕೊಟ್ಟಿತು. ಕರ್ನಾಟಕ ಕೃಷಿಕ ಸಮಾಜವು 1975ರಲ್ಲಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಂದ ಸನ್ಮಾನ ಮಾಡಿಸಿತು.

ಅಮೆರಿಕದ ರಾಕ್ ಫೆಲ್ಲರ್ ಸಂಸ್ಥೆಯವರು 1964 ರಲ್ಲಿ ಆಫ್ರಿಕಾದ ರಾಗಿ ತಳಿಗಳ ಕಾಳುಗಳನ್ನು ಲಕ್ಷ್ಮಣಯ್ಯನವರಿಗೆ ಒದಗಿಸಿತು. 1964 ರಿಂದ 1984 ರವರೆಗೆ ದೇಸಿ ರಾಗಿ ತಳಿಗಳೊಂದಿಗೆ ಆಫ್ರಿಕಾದ ರಾಗಿ ತಳಿಗಳ ಸಂಕರಣವಾಯಿತು. ಇಂಡಾಫ್ 1 ರಿಂದ ಇಂಡಾಫ್ 15 (ಇಂಡಿಯಾ + ಆಫ್ರಿಕಾ = ಇಂಡಾಫ್) ಬಿಡುಗಡೆಯಾದವು. ಒಂದು ಎಕರೆಗೆ 10 ರಿಂದ 15 ಕ್ವಿಂಟಾಲ್ ರಾಗಿಯ ಇಳುವರಿ ಬರುವಂತಾಯಿತು. ಕೃಷಿವಿಶ್ವವಿದ್ಯಾನಿಲಯಕ್ಕೆ ಅಪಾರ ಕೀರ್ತಿ ದಕ್ಕಿತು. ಕೋಟ್ಯಂತ

ರ ಜನರ ಹಸಿವು ನೀಗಿಸಿದ ಕರ್ನಾಟಕದ ಹಸಿರು ಕ್ರಾಂತಿಯದು. ಇತರ ರಾಜ್ಯಗಳಿಗೆ ಇಂಡಾಫ್ ತಳಿಗಳು ಪಸರಿಸಿದವು. ಆಫ್ರಿಕಾ ಮತ್ತಿತರ ದೇಶಗಳಿಗೆ ಇದೇ ತಳಿಗಳು ಖಂಡಾಂತರಗೊಂಡವು. ರಾಗಿಮುದ್ದೆ, ರಾಗಿ ರೊಟ್ಟಿ, ಅಂಬಲಿ, ಚಕ್ಕುಲಿ, ದೋಸೆ, ಕಡುಬು, ಶಾವಿಗೆ, ಇಡ್ಲಿ, ಹಪ್ಪಳ, ಬಿಸ್ಕತ್ತು, ಪಾಯಸ, ಹಲ್ವ ಹೀಗೆ ಹತ್ತು ಹಲವಾರು ತಿಂಡಿಗಳನ್ನು ರಾಗಿಯಿಂದ ತಯಾರಿಸಲಾಗುತ್ತಿದೆ. ರಾಗಿ ಜಗದ ಆಹಾರವಾಗಿದೆ. ಪಂಚತಾರಾ ಹೋಟೆಲ್‌ಗಳಲ್ಲೂ ರಾಗಿ ತಿನಿಸುಗಳಿಗೆ ಬೇಡಿಕೆಯಿದೆ. ಜಾನುವಾರುಗಳಿಗೆ ಮೇವು ಒದಗಬೇಕೆಂಬ ಕರುಣೆಯ ಕಣ್ಣು ಲಕ್ಷ್ಮಣಯ್ಯನವರಿಗಿತ್ತು. ಅಧಿಕ ರಾಗಿಹುಲ್ಲನ್ನು ಒದಗಿಸುವ ತಳಿಗಳನ್ನೂ ರೂಪಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸೇವೆಯಿಂದ 1984ರಲ್ಲಿ ನಿವೃತ್ತಿಯಾದರು. 1990 ರಿಂದ 1992 ರವರೆಗೆ ಎರಡು ವರ್ಷಗಳ ಕಾಲ ವಿಸಿಟಿಂಗ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದಾಗ ಎಲ್-5 ರಾಗಿ ತಳಿಯನ್ನು ಕೊಟ್ಟರು.

ಅವರಿಗೆ ಬೆಂಗಳೂರು ಕೃಷಿವಿವಿಯಿಂದ 1989ರಲ್ಲಿ ಗೌರವ ಡಾಕ್ಟರೇಟ್ ಪ್ರಾಪ್ತಿಯಾಯಿತು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2010 ರಲ್ಲಿ ಮರಣೋತ್ತರ ಗೌರವ ಡಾಕ್ಟ್ಟರೇಟ್ ಕೊಟ್ಟಿತು. ಅಪಾರ ಸಾಮಾಜಿಕ ಕಾಳಜಿಯ ನೆಲ ಮೂಲದ ವಿಜ್ಞಾನಿ, ಮಾನಸಿಕವಾಗಿ ರಾಗಿಯೊಂದಿಗೆ ನನ್ನ ಮದುವೆಯಾಗಿದೆ ಎನ್ನುತ್ತಿದ್ದ, ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ತನ್ನ ದೇಹದ ಮೇಲೆ ಹಿಡಿ ರಾಗಿ ಹಾಕಿ ಅಷ್ಟೇ ಸಾಕು ಎಂದು ಹಂಬಲಿಸಿದ ಕೃಷಿ ವಿಜ್ಞಾನಿ ಡಾ. ಸಿ. ಎಚ್. ಲಕ್ಷ್ಮಣಯ್ಯನವರು ಮೇ 14, 1993 ರಂದು 72 ವರ್ಷ ವಯಸ್ಸಾಗುತ್ತಿದ್ದಂತೆ ಇಹಲೋಕ ತ್ಯಜಿಸಿದರು.

ಲಕ್ಷ್ಮಣಯ್ಯನವರ ಕೊಡುಗೆ ಅಪಾರ. ಅವರ ಜನ್ಮದಿನವಾದ ಮೇ 15 ರಂದು ಅವರನ್ನು ಸ್ಮರಿಸುತ್ತಾ ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ಮುನ್ನಡೆ ಇಡೋಣ. ಭರಣಿ ಮಳೆ ಸುರಿದಿದೆ. ನೆಲ ಹದಗೊಳ್ಳುತ್ತಿದೆ. ನಿಧಾನವಾಗಿ ನೀಲಗಿರಿ ನಿರ್ಮೂಲನೆಯಾಗುತ್ತಿದೆ. ಅದರಿಂದ ರಾಗಿ ಬೆಳೆವ ಪ್ರದೇಶ ವಿಸ್ತಾರಗೊಳ್ಳಲಿದೆ. ಕೊರೋನ ಸಂಕಷ್ಟದ ಕಾಲದಲ್ಲಿ ರಾಗಿ ಉತ್ಪಾದನೆಯ ಪ್ರಮಾಣ ವನ್ನು ಕಾಯ್ದುಕೊಳ್ಳೋಣ ಮತ್ತು ಹೆಚ್ಚಿಸಿಕೊಳ್ಳೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)