varthabharthi

ನಿಮ್ಮ ಅಂಕಣ

ಕೊರೋನದಿಂದ ಕಲಿಯುವುದು ಇದೆಯೇ ?

ವಾರ್ತಾ ಭಾರತಿ : 17 May, 2020
ಎಚ್. ಕಾಂತರಾಜ, ಮಾಜಿ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಮಾನ್ಯರೇ,

ನನ್ನ ಗೆಳೆಯನೊಬ್ಬ ಕೊರೋನ ವೈರಸ್ ನಿಂದ ಮನುಷ್ಯ ಕಲಿಯುವುದೇನಾದರು ಇದೆಯಾ ಎಂದು ಪ್ರಶ್ನಿಸಿದ. ಹೌದು ಇದೆ ಎಂದು ಉತ್ತರಿಸಿದೆ. ಏನದು ಎಂದ.
 ಮುಂದುವರಿದ ನಾನು, ಈ ವೈರಸ್ ಬಾವಲಿ (Bat)ಯಿಂದ ಬಂದಿದೆ ಎಂದು ಡಬ್ಲುಎಚ್‌ಒ ವಿಜ್ಞಾನಿಗಳು ಹೇಳುತ್ತಿದ್ದರೂ ಎಲ್ಲಿ, ಹೇಗೆ ಹುಟ್ಟಿತು, ಕೊರೋನ ಅಂತಯಾಕೆ ಹೆಸರಿಡಲಾಯಿತು ಎಂಬುದು ಈವರೆಗೆ ಖಚಿತ ನಿಲುವು ಆ ದಿಕ್ಕಿನಲ್ಲಿ ಇನ್ನೂ ಇಲ್ಲ. ಪರಿಹಾರವೂ ಅಸ್ಪಷ್ಟ. ಆದರೆ, ಪರಿಣಾಮ ಮಾತ್ರ ಸ್ಪಷ್ಟ. ಅದುವೇ ವಿಶ್ವದಲ್ಲಿ ಸರ್ವರಿಗೂ ವಿವರಿಸಲಾಗದಂತಹ ಮಾನಸಿಕ ಒತ್ತಡ, ಸಾವಿನ ಭಯ. ಪಾರಾದರೆ ಮರುಜನ್ಮ ಪ್ರಾಪ್ತವಾದಂತೆಯೇ. ಕಾಡುನಾಶ, ಅಪರಿಮಿತ ಗಣಿಗಾರಿಕೆ, ಕಸದಗೂಡಾಗುತ್ತಿರುವ ನಗರ ಪ್ರದೇಶಗಳು, ವಾಯುಮಾಲಿನ್ಯ ಪ್ರಕೃತಿ ಸಂಪತ್ತನ್ನು ನಾಶಪಡಿಸುತ್ತಿವೆ. ಮಳೆಯ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ದಿನೇ ದಿನೇ ಭೂಮಿಯ ಮೇಲೆ ಉಷ್ಣಾಂಶ ಏರುತ್ತಿದೆ.

ನಿಸರ್ಗದ ಈ ಆಕ್ರಮಣವನ್ನು ನೋಡುತ್ತಿದ್ದರೆ, ಈ ಜಗತ್ತು ಕಂಡ ಅಪರೂಪದ ವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ 2017ರಲ್ಲಿ ‘ಮನುಷ್ಯ ಜೀವಿ ಇನ್ನೂ 100 ವರ್ಷಗಳಲ್ಲಿ ಭೂಮಿಯ ಮೇಲೆ ಬದುಕಲಾಗದೆ ಬೇರೊಂದು ಗ್ರಹವನ್ನು ಹುಡುಕಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದ ಮಾತು ನಿಜ ಆಗುವುದರಲ್ಲಿ ಸಂಶಯವೇ ಕಾಣುತ್ತಿಲ್ಲ. ಮನುಷ್ಯ ತನ್ನ ಇತಿಮಿತಿಗಳನ್ನು ಅರಿಯದೆ ಬದುಕಲು ಆಶಿಸುತ್ತಿದ್ದಾನೆ. ಸಂಪತ್ತಿದ್ದರೂ, ಸಮಾಧಾನ ಬೇಕಲ್ಲ. ಈ ವೈರಸ್‌ಅನ್ನು ‘ನಿಸರ್ಗ ಪ್ರತೀಕಾರದ ಮಾತೃ’ ಎಂದು ಕರೆಯಲಾಗಿದೆ. ಈ ವೈರಸ್ ರಕ್ಷಣೆಗೆ ಮೂರು ಘಟಕಗಳಿಗೆ ಉತ್ಪತ್ತಿಯಾಗುವ ಸರಂಜಾಮು (genetic  material), ಸಾರಜನಕ ಪದಾರ್ಥ(protein capsid) ಹಾಗೂ ಲಿಪಿಡಿಕ್ ಎನ್ವಲೋಪ್ (lipidic envelop). ಈ ಮೂರರಲ್ಲಿ ಬಹಳ ನಿತ್ರಾಣದ ಮುಖವೆಂದರೆ ಲಿಪಿಡಿಕ್ ಎನ್ವಲೋಪ್. ಸದ್ಯದಲ್ಲಿ ಇದರ ನಿಯಂತ್ರಣಕ್ಕೆ ಮದ್ದು ‘ಸಾಬೂನು’ ಒಂದೇ ಎಂದು ವಿಜ್ಞಾನಿಗಳಲ್ಲಿ ಅಭಿಪ್ರಾಯ. ಅದಕ್ಕಾಗಿಯೇ ಪರಿಣತರು, ವೈದ್ಯರು ಹತ್ತಾರುಬಾರಿ ಕೈ, ಮುಖ ಸಾಬೂನಿನಿಂದ ತೊಳೆಯಲು ಸಲಹೆ ನೀಡುತ್ತಿರುವುದು.

ಈ ವೈರಸ್ ಪರಾವಲಂಬಿ. ತನ್ನಷ್ಟಕ್ಕೆ ತಾನು ಬಹಳ ಕಾಲ ಬದುಕದು. ಅಂದರೆ ಬದುಕಲು ಇನ್ನೊಂದು ಜೀವಿಯನ್ನು ಅವಲಂಬಿಸಲೇಬೇಕು. ಅದಕ್ಕಾಗಿ ಅದು ಸಾಯುವ ಮುನ್ನ ಬದುಕಲು ಬೇಕಾದ ಆತಿಥ್ಯ ಕಾರಿಣಿ(host)ಯನ್ನು ಹುಡುಕುತ್ತಾ ಹೊರಡುತ್ತೆ. ಸಿಗದಿದ್ದರೆ ಅದಕ್ಕೆ ಸಾವು. ಸಿಕ್ಕರೆ ಸಿಕ್ಕವರ ಸಾವು. ಈವರೆಗೆ ವಿಶ್ವದಲ್ಲಿ 3,10,430ಕ್ಕೂ ಹೆಚ್ಚು, ಭಾರತದಲ್ಲಿ 2,850 ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡು ಮೊೆಯುತ್ತಿದೆ. ಉಂಡವರ ಮನೆಯಲ್ಲಿ ಎರಡು ಬಗೆಯುವುದೇ ಅದರ ದಂಧೆ. ಆತಿಥ್ಯ ಕಾರಿಣಿಯ ಹುಡುಕಾಟ ಸಮುದ್ರಗಳಲ್ಲಿರಬಹುದು, ಅದರ ಆಚೆ ಇರಬಹುದು, ಎಷ್ಟೇ ದೂರವಿರಬಹುದು, ಒಟ್ಟಿನಲ್ಲಿ ವಿಶ್ವದಾದ್ಯಂತ. ಆ ಆತಿಥ್ಯ ಕಾರಿಣಿಯ ಹುಡುಕಾಟದಲ್ಲಿ ಈ ವೈರಸ್‌ಗೆ ಯಾವ ಧರ್ಮ, ಜಾತಿ, ಲಿಂಗ, ಬಣ್ಣ, ವಯಸ್ಸು, ಹುಟ್ಟಿದ ಜಾಗ, ಭಾಷೆ, ವಾಸದ ಸ್ಥಳ, ಸಿರಿವಂತ-ಬಡವ, ಅಧಿಕಾರಸ್ತ, ಚಕ್ರವರ್ತಿ, ಸರ್ವಾಧಿಕಾರಿ ಎಂಬ ಯಾವುದೇ ಭೇದ-ಭಾವವಿಲ್ಲ. ಭೇದ-ಭಾವವಿಲ್ಲದ ಜೀವನವನ್ನಲ್ಲವೇ ನಮ್ಮ ಗುರು-ಹಿರಿಯರು ಬಯಸುತ್ತಿರುವುದು ? ಆರನೇ ಶತಮಾನದಲ್ಲಿ ಬುದ್ಧ, 12ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದು ಇದೇ ಎನ್ನುವುದಾಗಿತ್ತು.

ನನ್ನ ಮಾತಿನ ಮಧ್ಯೆಯ ಮರು ಪ್ರಶ್ನೆ. ‘ತಾರತಮ್ಯ ರಹಿತ ಬದುಕಿಗಾಗಿಯೇ ವಿಶ್ವದಾದ್ಯಂತ ಚಿಂತನೆ, ಹೋರಾಟ ಇಂದಿಗೂ ಮನುಷ್ಯ ಪ್ರಪಂಚ ಹುಟ್ಟಿದಂದಿನಿಂದಲೂ ನಡೆಯುತ್ತಿದೆ. ಆದರೆ ತಾರತಮ್ಯರಹಿತ ಬದುಕನ್ನು ಸಾಧಿಸಲಾಗಿಲ್ಲ. ಸಾಧಿಸುವುದಿರಲಿ ಆ ಹೋರಾಟ ದ ಪ್ರಯತ್ನದ ಮಧ್ಯೆ ಧರ್ಮ, ಜಾತಿ, ಲಿಂಗ ಇತ್ಯಾದಿಗಳ ಹೆಸರಿನಲ್ಲಿ ಕೊಲೆ ಅವಮಾನಗಳು ನಡೆಯುತ್ತಿರುವುದು ವಾಸ್ತವ.’

ಈ ದುಷ್ಟ ಬುದ್ಧಿಗಳಾವುವು ಇಲ್ಲದಿರುವುದೇ ತಾರತಮ್ಯ ರಹಿತ, ಸಮಾನತೆಯ ಜೀವನದ ಅರ್ಥ. ಈ ಅರ್ಥವನ್ನಂತೂ ಕೊರೋನ ವೈರಸ್ ಇಡೀ ವಿಶ್ವದಾದ್ಯಂತ ನೆನಪಿಸಿದೆ. ಇದು ಮಾರಣಾಂತಕ ಕೊರೋನ ವೈರಸ್‌ನಿಂದ ಸರ್ವರೂ ತಿಳಿಯಬೇಕಾದ ಒಂದು ಒಳ್ಳೆಯ ಲಕ್ಷಣ ಎಂದು ನನ್ನ ಗೆಳೆಯನಿಗೆ ಉತ್ತರಿಸಿದೆ. ಆ ಗೆಳೆಯನಿಂದ ಮರು ಪ್ರಶ್ನೆ ಬರಲಿಲ್ಲ..!
  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)