varthabharthiಕ್ರೀಡೆ

ಅಫ್ರಿದಿ ಎಲ್ಲ ಮಿತಿ ದಾಟಿದ್ದಾರೆ ಇನ್ನು ಅವರು ನನ್ನ ಸ್ನೇಹಿತರಲ್ಲ: ಹರ್ಭಜನ್ ಸಿಂಗ್

ವಾರ್ತಾ ಭಾರತಿ : 17 May, 2020

ಹೊಸದಿಲ್ಲಿ, ಮೇ 17: ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ)ಭೇಟಿ ನೀಡಿದ್ದ ವೇಳೆ ಭಾರತ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯ ಬಗ್ಗೆ ಕೆಟ್ಟದ್ದಾಗಿ ಹೇಳಿಕೆ ನೀಡಿರುವ ಪಾಕ್ ಆಲ್‌ರೌಂಡರ್ ಶಾಹಿದ್ ಅಫ್ರಿದಿ ವಿರುದ್ಧ ಭಾರತದ ಮಾಜಿ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸಿದರು.

ಪಿಒಕೆಗೆ ಭೇಟಿ ನೀಡಿದ್ದ ಅಫ್ರಿದಿ, ನಾನು ಪಿಎಸ್‌ಎಲ್‌ನ ಕೊನೆಯ ಋತುವಿನಲ್ಲಿ ಕಾಶ್ಮೀರ ತಂಡದೊಂದಿಗೆ ಆಡಲು ಬಯಸಿದ್ದೇನೆ ಎಂದರಲ್ಲದೆ, ಭಾರತ ಪ್ರಧಾನಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದು ರವಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘‘ನಮ್ಮ ದೇಶ ಹಾಗೂ ನಮ್ಮ ಪ್ರಧಾನಿಯ ಕುರಿತು ಈ ರೀತಿ ಮಾತನಾಡಿರುವ ಶಾಹಿದ್ ಅಫ್ರಿದಿಯ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ಅವರ ಮಾತನ್ನು ಒಪ್ಪಲಾಗದು’’ಎಂದು ‘ಇಂಡಿಯಾ ಟುಡೆ ಸ್ಪೋರ್ಟ್ಸ್ ತಕ್’ಗೆ ಹರ್ಭಜನ್ ಹೇಳಿದ್ದಾರೆ.

ಹರ್ಭಜನ್ ಹಾಗೂ ಅವರ ಮಾಜಿ ಸಹ ಆಟಗಾರ ಯುವರಾಜ್ ಸಿಂಗ್ ಇತ್ತೀಚೆಗೆ ಕೊರೋನ ವೈರಸ್ ವಿರುದ್ಧ ಹೋರಾಡಲು ಶಾಹಿದ್ ಅಫ್ರಿದಿ ಪ್ರತಿಷ್ಠಾನಕ್ಕೆ ಜನರೆಲ್ಲರೂ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದರು. ಈ ಮನವಿಗಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ತೀವ್ರ ಟೀಕೆಯನ್ನು ಎದುರಿಸಿದ್ದರು.

 ‘‘ನಿಜ ಹೇಳಬೇಕೆಂದರೆ ಅವರು (ಅಫ್ರಿದಿ) ತಮ್ಮ ಚಾರಿಟಿ ಪರ ಮನವಿ ಮಾಡುವಂತೆ ನಮ್ಮನ್ನು ಕೇಳಿಕೊಂಡರು. ಒಳ್ಳೆಯ ನಂಬಿಕೆಯಿಂದ, ಮಾನವೀಯತೆಯ ದೃಷ್ಟಿಯಿಂದ ಹಾಗೂ ಕೊರೋನ ವೈರಸ್‌ನಿಂದ ಬಾಧಿತವಾಗಿರುವ ಜನರಿಗಾಗಿ ಮನವಿ ಮಾಡಿದ್ದೆವು. ಗಡಿ, ಧರ್ಮ ಹಾಗೂ ಜಾತಿಯನ್ನು ಮೀರಿ ಕೊರೋನ ವೈರಸ್ ವಿರುದ್ಧ್ದ ಹೋರಾಡಲು ನೆರವಾಗಿ ಎಂದು ನಮ್ಮ ಪ್ರಧಾನಿಗಳು ಹೇಳಿದ್ದರು. ಆ ಕಾರಣಕ್ಕಾಗಿ ನಾವು ಮನವಿ ಮಾಡಿದ್ದೆವು. ಈಗ ಆ ಮನುಷ್ಯ ನಮ್ಮ ದೇಶದ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ. ಇನ್ನು ಮುಂದೆ ಅಫ್ರಿದಿಯೊಂದಿಗೆ ನನಗೆ ಯಾವುದೇ ಸಂಬಂಧ ಇರುವುದಿಲ್ಲ. ನಮ್ಮ ದೇಶದ ಕುರಿತು ಕೆಟ್ಟದ್ದಾಗಿ ಮಾತನಾಡುವ ಹಕ್ಕು ಅವರಿಗಿಲ್ಲ. ಅವರು ತನ್ನ ದೇಶದಲ್ಲಿ ಹಾಗೂ ಒಂದು ಮಿತಿಯೊಳಗೆ ಇರಲಿ. ನಾನು ಈ ದೇಶದಲ್ಲಿ ಹುಟ್ಟಿರುವೆ. ಈ ದೇಶದಲ್ಲೇ ಸಾಯುವೆ. ನನ್ನ ದೇಶದ ಪರ 20 ವರ್ಷ ಕ್ರಿಕೆಟ್ ಆಡಿದ್ದೇನೆ. ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದಿದ್ದೇನೆ. ಇಂದು ಅಥವಾ ನಾಳೆ ದೇಶಕ್ಕೆ ನನ್ನ ಅಗತ್ಯ ಎದುರಾದರೆ, ಗಡಿಗೆ ಹೋಗಬೇಕಾದರೆ, ನಾನು ನನ್ನ ದೇಶದ ರಕ್ಷಣೆಗಾಗಿ ಮೊದಲಿಗೆ ಬಂದೂಕು ಹಿಡಿಯುವೆ’’ಎಂದು ಹರ್ಭಜನ್ ಹೇಳಿದರು.

 ‘‘ಅವರು (ಅಫ್ರಿದಿ)ನನ್ನ ಸ್ನೇಹಿತ ಎಂದು ನಾನು ಯೋಚಿಸಿದ್ದೆ. ಆದರೆ, ಇದು ಸ್ನೇಹಿತ ವರ್ತಿಸುವ ರೀತಿಯಲ್ಲ. ಅಫ್ರಿದಿ ಇನ್ನು ಮುಂದೆ ನನ್ನ ಸ್ನೇಹಿತನಲ್ಲ. ಬಹುಶಃ ಅವರು ರಾಜಕೀಯ ವೃತ್ತಿಜೀವನದತ್ತ ಕಣ್ಣಿಟ್ಟಿರಬಹುದು. ಒಂದು ವೇಳೆ ಅವರು ರಾಜಕಾರಣಿಯಾಗಲು ಬಯಸಿದ್ದರೆ ಸ್ವಂತ ಶಕ್ತಿಯಿಂದ ಆಗಬೇಕೇ ಹೊರತು ನಮ್ಮ ಪ್ರಧಾನಿ ಹಾಗೂ ನಮ್ಮ ದೇಶವನ್ನು ದೂಷಿಸುವ ಮೂಲಕವಲ್ಲ. ಅವರ ರಾಜಕೀಯ ವೃತ್ತಿಜೀವನ ಹೆಚ್ಚು ದಿನ ಇರುತ್ತದೆ ಎನ್ನುವ ವಿಶ್ವಾಸ ನನಗಿಲ್ಲ’’ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)