varthabharthi

ನಿಮ್ಮ ಅಂಕಣ

ದೇವೇಗೌಡರ ಬದುಕಿನ ನಿಗೂಢ ಕತೆಗಳು

ವಾರ್ತಾ ಭಾರತಿ : 18 May, 2020
ಆರ್.ಟಿ.ವಿಠ್ಠಲಮೂರ್ತಿ

ಇದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಬದುಕಿನಲ್ಲಿ ನಡೆದ ವಿಸ್ಮಯಕಾರಿ ಘಟನೆ. ಒಂದು ಸಲ (2004) ತಮಗೆ ಬಂದ ಕರೆಯ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಆ ಮನೆಗೆ ಹೋಗುತ್ತಾರೆ. ಹೀಗೆ ಹೋದವರು ಅಲ್ಲಿದ್ದವರ ಮಾತಿನಂತೆ ಮನೆಯ ಮೊದಲ ಮಹಡಿಗೆ ಹೋಗುತ್ತಾರೆ. ಈ ರೀತಿ ಹೋದವರಿಗೆ ಅಚ್ಚರಿ ಕಾದಿರುತ್ತದೆ. ಯಾಕೆಂದರೆ ಮನೆಗೆ ಬರುವಂತೆ ಅವರಿಗೆ ಕರೆ ಮಾಡಿದವರು ಮನೆಯ ಗೋಡೆಗೆ ಮುಖ ಮಾಡಿ ಕುಳಿತಿರುತ್ತಾರೆ.

ಸರಿ, ಬಸವರಾಜ ಬೊಮ್ಮಾಯಿಯವರು ಬಂದಿದ್ದನ್ನು ಮನೆಯ ಯಜಮಾನತಿ ಗೋಡೆ ನೋಡುತ್ತಾ ಕುಳಿತಿದ್ದವರಿಗೆ ಹೇಳುತ್ತಾರೆ. ಅಂದ ಹಾಗೆ ಅವತ್ತು ಗೋಡೆಯನ್ನು ತದೇಕಚಿತ್ತದಿಂದ ನೋಡುತ್ತಾ ಕುಳಿತವರ ಹೆಸರೇನು ಗೊತ್ತಾ?

ಎಚ್.ಡಿ.ದೇವೇಗೌಡ.

ಬಸವರಾಜ ಬೊಮ್ಮಾಯಿಯವರು ಬಂದಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದರೂ ತಿರುಗಿ ನೋಡದೆ ಕೈ ಸನ್ನೆ ಮಾಡಿ ಕುಳಿತುಕೊಳ್ಳಿ ಬಸವರಾಜ್‌ ಎನ್ನುತ್ತಾರೆ. ಅವರ ಮಾತಿನಂತೆ ಅಲ್ಲೇ ಇದ್ದ ಖುರ್ಚಿಯ ಮೇಲೆ ಕುಳಿತ ಬಸವರಾಜ ಬೊಮ್ಮಾಯಿ. “ಸಾರ್‌ ಬರಲು ಹೇಳಿದ್ದಿರಿ, ಯಾಕೆ ಅಂತ ಕೇಳಬಹುದಾ?” ಅಂತ ಪ್ರಶ್ನಿಸುತ್ತಾರೆ.

ಗೋಡೆಯನ್ನು ನೋಡುತ್ತಾ ಕುಳಿತಿದ್ದ ದೇವೇಗೌಡರು, “ನಿಮ್ಮಿಂದ ಒಂದು ನೆರವಾಗಬೇಕಲ್ಲ ಬಸವರಾಜ್” ಎನ್ನುತ್ತಾರೆ. ಅಚ್ಚರಿಗೊಂಡ ಬಸವರಾಜ ಬೊಮ್ಮಾಯಿ, “ನನ್ನಿಂದ ನೆರವೇ?, ಏನದು ಹೇಳಿ ಸಾರ್‌” ಎನ್ನುತ್ತಾರೆ.

ಆಗ ದೇವೇಗೌಡರು: ಈ ಸಲ ವಿಧಾನಸಭೆ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಕುಮಾರಸ್ವಾಮಿಯವರು ಪಟ್ಟು ಹಿಡಿದಿದ್ದಾರೆ. ಅವರ ಜತೆ ಮಾತನಾಡಿ, ಯಾವ ಕಾರಣಕ್ಕೂ ಸ್ಪರ್ಧಿಸದಂತೆ ಅವರ ಮನವೊಲಿಸಿ ಎನ್ನುತ್ತಾರೆ.

ಅರೇ, ಕುಮಾರಸ್ವಾಮಿಯವರು ನಿಮ್ಮ ಮಗ. ಅವರು ನಿಮ್ಮ ಮಾತು ಕೇಳದಿರಲು ಸಾಧ್ಯವೇ?, ನೀವೇ ಒಂದು ಮಾತು ಹೇಳಿಬಿಡಿ ಸಾರ್‌ ಅಂತ ಬಸವರಾಜ ಬೊಮ್ಮಾಯಿ ಹೇಳುತ್ತಾರೆ.

ಅದಕ್ಕೆ ಪ್ರತಿಯಾಗಿ ದೇವೇಗೌಡರು, ಮಕ್ಕಳು ಬಹಳ ಸೂಕ್ಷ್ಮ ನೋಡಿ ಬಸವರಾಜ್. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಿರುಗಿ ಬೀಳುತ್ತಾರೆ. ಹೀಗಾಗಿ ನಿಮಗೆ ಹೇಳಿದೆ. ಎಷ್ಟಾದರೂ ಅವರು ನಿಮ್ಮ ಸ್ನೇಹಿತರು ಅನ್ನುತ್ತಾರೆ.

ಈಗ ಬಸವರಾಜ ಬೊಮ್ಮಾಯಿ ಸ್ವಲ್ಪ ಮೈಚಳಿ ಬಿಟ್ಟು: ಸಾರ್‌, ಈಗ ಕುಮಾರಸ್ವಾಮಿಯವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಏನು ತಪ್ಪು? ಸ್ಪರ್ಧಿಸಲಿ ಬಿಡಿ ಎಂದಾಗ ದೇವೇಗೌಡರು ಸಣ್ಣನೆಯ ಧ್ವನಿಯಲ್ಲಿ ವಿವರಿಸುತ್ತಾರೆ.

ಕುಮಾರಸ್ವಾಮಿಯವರು ರಾಮನಗರದಿಂದ ಸ್ಪರ್ಧಿಸಿ ಗೆದ್ದರು ಅಂತಿಟ್ಟುಕೊಳ್ಳಿ. ಆಗ ಅವರ ಹೊಳೆನರಸೀಪುರದಿಂದ ಸ್ಪರ್ಧಿಸಿ ಗೆಲ್ಲಲಿರುವ ಅವರಣ್ಣ ರೇವಣ್ಣ ಅವರ ಮಧ್ಯೆ ಒಡಕಾಗುತ್ತದೆ ಎಂಬುದು ದೇವೇಗೌಡರ ವಾದ.

ಆದರೆ ಬಸವರಾಜ ಬೊಮ್ಮಾಯಿ ಅದನ್ನೊಪ್ಪುವುದಿಲ್ಲ. ಹೀಗಾಗಿ: ಅದು ಹೇಗೆ ಸಾರ್? ರೇವಣ್ಣ ಅವರು ಸ್ಪರ್ಧಿಸುವುದು ಹಾಸನ ಜಿಲ್ಲೆಯಿಂದ, ಕುಮಾರಸ್ವಾಮಿಯವರು ಸ್ಪರ್ಧಿಸುವುದು ರಾಮನಗರ ಜಿಲ್ಲೆಯಿಂದ. ಇಬ್ಬರೂ ಬೇರೆ ಬೇರೆ ಜಿಲ್ಲೆಗಳಿಂದ ಸ್ಪರ್ಧಿಸಿದರೆ ಸಮಸ್ಯೆ ಏನು? ಅಂತ ಪ್ರಶ್ನಿಸುತ್ತಾರೆ.

ದೇವೇಗೌಡರು ಯಥಾ ಪ್ರಕಾರ ಸಣ್ಣನೆಯ ಧ್ವನಿಯಲ್ಲಿ, ರಾಮನಗರದಿಂದ ಸ್ಪರ್ಧಿಸಿ ಕುಮಾರಸ್ವಾಮಿಯವರು ಗೆದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಆಗ ರೇವಣ್ಣ ಅವರಿಗೆ ಉಪಮುಖ್ಯಮಂತ್ರಿಯಾಗುವ ಯೋಗ ತಪ್ಪುತ್ತದೆ ಅಂತ ಹೇಳಿದಾಗ ಬಸವರಾಜ ಬೊಮ್ಮಾಯಿ ಅವರಿಗೆ ಅಚ್ಚರಿ.

ಆದರೂ ಸಾವರಿಸಿಕೊಂಡು ಅವರು: ಇರಲಿ ಬಿಡಿ ಸಾರ್‌, ಉಪಮುಖ್ಯಮಂತ್ರಿ ಹುದ್ದೆಯ ಬದಲಿಗೆ ಮುಖ್ಯಮಂತ್ರಿ ಹುದ್ದೆಯೇ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದಾದರೆ ಅದೇ ಬೆಟರ್‌ ಅಲ್ಲವಾ ? ಎನ್ನುತ್ತಾರೆ.

ಆದರೆ ದೇವೇಗೌಡರು: ಸಮಸ್ಯೆ ಇರುವುದು ಅಷ್ಟೇ ಅಲ್ಲ ಬಸವರಾಜ್. ಒಂದು ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರೇವಣ್ಣ ಅವರಿಗೆ ಡಿಸಿಎಂ ಆಗುವ ಅವಕಾಶ ತಪ್ಪಿದರೆ ದಿಲ್ಲಿ ಮಟ್ಟದಲ್ಲಿ ನನಗೆ ಸಿಗಬಹುದಾದ ಉನ್ನತ ಹುದ್ದೆಯೊಂದು ಕೈ ಜಾರಿ ಹೋಗುತ್ತದೆ ಎಂದು ವಿವರಿಸುತ್ತಾರೆ.

ಅದ್ಹೇಗೆ ಸಾರ್‌ ಎಂದು ಬಸವರಾಜ ಬೊಮ್ಮಾಯಿ ಕೇಳಿದರೆ: ಅದು ಹಾಗೇ ಬಸವರಾಜ್. ಜಾತಕಗಳ ಪ್ರಕಾರ ನನ್ನ ಲಕ್ಕು ರೇವಣ್ಣ ಅವರ ಜತೆ ತಳಕು ಹಾಕಿಕೊಂಡಿದೆ. ಕುಮಾರಸ್ವಾಮಿ ಅವರ ಜತೆಗಲ್ಲ. ರೇವಣ್ಣ ಅವರ ಲಕ್ಕು ಕೂಡಾ ಸಹಜವಾಗಿ ನನ್ನ ಜಾತಕಕ್ಕೆ ಅಂಟಿಕೊಂಡಿದೆ ಎನ್ನುತ್ತಾರೆ.

ಬಸವರಾಜ ಬೊಮ್ಮಾಯಿ ಅರೆ ಕ್ಷಣ ಮೌನವಾಗುತ್ತಾರೆ. ನಂತರ: ಈ ಹಂತದಲ್ಲಿ ಚುನಾವಣೆಗೆ ನಿಲ್ಲಬೇಡಿ ಎಂದು ಕುಮಾರಸ್ವಾಮಿಯವರಿಗೆ ಹೇಳುವುದು ಕಷ್ಟ ಸಾರ್‌, ನೀವೇ ಹೇಳಿಬಿಡಿ ಎಂದವರೇ ಅಲ್ಲಿಂದ ಹೊರಟು ಬಿಡುತ್ತಾರೆ.

ಮುಂದಿನದು ಇತಿಹಾಸ. ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವುದು, ಈ ಬೆಳವಣಿಗೆಯಿಂದ ಕ್ರುದ್ಧರಾದ ಕಮ್ಯೂನಿಸ್ಟರು ದೇಶದ ರಾಷ್ಟ್ರಪತಿ ಹುದ್ದೆಗೆ ದೇವೇಗೌಡರ ಹೆಸರನ್ನು ಪ್ರಪೋಸ್‌ ಮಾಡಲು ಹಿಂಜರಿಯುವುದು. ಹೀಗೆ ಒಂದಕ್ಕಿಂತ ಒಂದು ವಿಸ್ಮಯಕಾರಿ ಘಟನೆಗಳು.

(ಮೇ 18 ದೇವೇಗೌಡರ ಜನ್ಮ ದಿನ.ಅದರ ನೆನಪಿಗಾಗಿ ಈ ಲೇಖನ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)