varthabharthi


ವಿಶೇಷ-ವರದಿಗಳು

ನಷ್ಟದ ಭೀತಿಯಿಂದ ಸಾಕಣೆಗೆ ಹಿಂದೇಟು ► ಕೋಳಿ ಲಭ್ಯತೆಯಲ್ಲಿ ಕಡಿಮೆ

ಗಗನಕ್ಕೇರಿದ ಕೋಳಿ ಮಾಂಸ ದರ 300 ರೂ. ಗಡಿದಾಟುವ ಸಾಧ್ಯತೆ!

ವಾರ್ತಾ ಭಾರತಿ : 18 May, 2020
ನಝೀರ್ ಪೂಲ್ಯ

ಉಡುಪಿ: ಲಾಕ್‌ಡೌನ್ ಆರಂಭ ದಲ್ಲಿ ಕೊರೋನ ಹಾಗೂ ಹಕ್ಕಿ ಜ್ವರದ ಭೀತಿಯಿಂದ ತೀವ್ರ ಕುಸಿದಿದ್ದ ಕೋಳಿ ಮಾಂಸದ ದರ, ಇದೀಗ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ಕೆ.ಜಿ.ಗೆ 280ರೂ. ಹೆಚ್ಚಳವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೋಳಿ ಮಾಂಸ ದರ ಕೆ.ಜಿ.ಗೆ 300 ರೂ. ದಾಟುವ ಸಾಧ್ಯತೆ ಇದೆ.

ಮಾರ್ಚ್ ಕೊನೆಯಲ್ಲಿ ವಿಧಿಸಲಾದ ಲಾಕ್‌ಡೌನ್ ಸಂದರ್ಭದಲ್ಲಿ ಕೊರೋನ ಸಂಬಂಧ ಹಬ್ಬಿದ ವದಂತಿ ಮತ್ತು ಹಕ್ಕಿ ಜ್ವರದ ಭೀತಿ ಯಿಂದಾಗಿ ಜನ ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕಿದ ಪರಿಣಾಮ ಕೆ.ಜಿ. ಒಂದಕ್ಕೆ 70-80 ರೂ.ಗೆ ಇಳಿದಿತ್ತು. ಇದರಿಂದ ಕುಕ್ಕುಟೋದ್ಯಮ ಭಾರೀ ನಷ್ಟ ಅನುಭವಿಸಿತ್ತು.

ಜನರಲ್ಲಿ ಆತಂಕ ದೂರವಾದ ನಂತರ ಈ ಉದ್ಯಮ ನಿಧಾನವಾಗಿ ಚೇತರಿಸಿಕೊಂಡಿತು. ಬಳಿಕ ಕೋಳಿ ಮಾಂಸ ದರ 140 ರೂ., ನಂತರ 200 ರೂ.ಗೆ ಏರಿಕೆಯಾಯಿತು. ಮುಂದೆ ದಿನದಿಂದ ದಿನಕ್ಕೆ 5 ರೂ., 10 ರೂ.ನಂತೆ ಹೆಚ್ಚಳವಾಗುತ್ತ ಮುಂದುವರಿಯಿತು. ಕಳೆದ ಮೂರು ನಾಲ್ಕು ದಿನಗಳ ಹಿಂದೆ 240-250 ರೂ. ಇದ್ದ ಕೋಳಿ ಮಾಂಸದ ದರ ಒಮ್ಮೇಲೆ 280ಕ್ಕೆ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ಕೋಳಿ(ಮಾಂಸ ಮಾಡದ ಜೀವಂತ ಕೋಳಿ)ಯ ದರ ಕೆ.ಜಿ.ಗೆ 150 ರೂ. ಇದ್ದರೆ, ಸದ್ಯ ಅದರ ದರ ಕೆ.ಜಿ.ಗೆ 180 ರೂ. ಏರಿಕೆಯಾಗಿದೆ. ಅದೇ ರೀತಿ ಊರಿನ ಕೋಳಿಗೆ ಕೆ.ಜಿ.ಗೆ 350 ರೂ.ನಿಂದ 400 ರೂ. ಬೆಲೆ ಇದೆ. ಕೋಳಿಯ ಬೆಲೆ ಇಷ್ಟು ದುಬಾರಿ ಮೊತ್ತಕ್ಕೆ ಏರಿಕೆಯಾಗಿ ರುವುದು ಇದೇ ಮೊದಲು ಎನ್ನುತ್ತಾರೆ ಕೋಳಿ ಸಾಕಣೆದಾರರು. ಕೋಳಿ ಸಾಕಣೆಯಲ್ಲಿ ಇಳಿಕೆ: ಹಕ್ಕಿಜ್ವರದಿಂದ ಕೋಳಿ ಮಾಂಸದ ದರ ನೆಲಕ್ಕಚ್ಚಿದ ಪರಿಣಾಮ ಬಹುತೇಕ ಮಂದಿ ನಷ್ಟ ಅನುಭವಿಸಿ, ಕೋಳಿ ಸಾಗಣೆಯನ್ನು ಸ್ಥಗಿತಗೊಳಿಸಿದರು. ಇದರಿಂದ ಕೋಳಿ ಲಭ್ಯತೆ ಇಲ್ಲದೆ, ಬೇಡಿಕೆ ಹೆಚ್ಚಳವಾಗಿರುವುದರಿಂದ ದರ ಗನಗಕ್ಕೇರಿದೆ.

ಲಾಕ್‌ಡೌನ್‌ನಿಂದಾಗಿ ಹೊರರಾಜ್ಯ ಹಾಗೂ ಜಿಲ್ಲೆ ಗಳಿಂದ ಕೋಳಿ ಸಾಕಣೆಗೆ ಬಳಸುತ್ತಿದ್ದ ಸೊಯಾಬೀನ್, ಮೆಕ್ಕೆಜೋಳ, ಔಷಧಿಗಳ ಪೂರೈಕೆ ಸಾಧ್ಯ ವಾಗುತ್ತಿರಲಿಲ್ಲ. ಇದರಿಂದ ಪೌಲ್ಟ್ರಿ ಫಾರಂಗಳಲ್ಲಿ ಕೋಳಿ ಸಾಕಣೆಗೆ ಸಮಸ್ಯೆ ಯಾಗುತ್ತಿತ್ತು. ಕೋಳಿಯು ಮೊಟ್ಟೆ ಇಟ್ಟು, ಅದರಿಂದ ಮರಿ ಹೊರಗಡೆ ಬರಲು ಸುಮಾರು 21 ದಿನಗಳ ಕಾಲ ಬೇಕಾಗುತ್ತದೆ. ಅದೇ ರೀತಿ ಮೊಟ್ಟೆಯಿಂದ ಹೊರ ಬರುವ ಕೋಳಿ, ಮಾಂಸಕ್ಕೆ ಬೇಕಾಗುವಷ್ಟು ಅಂದರೆ ಎರಡು ಕೆ.ಜಿ.ಯಷ್ಟು ಬೆಳೆಯಲು ಸುಮಾರು 42 ದಿನಗಳ ಕಾಲಾವ ಕಾಶ ಬೇಕಾಗುತ್ತದೆ. ಹೀಗಾಗಿ ಕೋಳಿಯ ಲಭ್ಯತೆ ಕಡಿಮೆ ಯಾಗಿತ್ತು. ಅದೇ ರೀತಿ ಲಾಕ್‌ಡೌನ್‌ನಿಂದಾಗಿ ಶುಭ ಸಮಾರಂಭಗಳಿಲ್ಲದ ಕಾರಣ, ಪೌಲ್ಟ್ರಿ ಫಾರಂನವರು ಕೋಳಿ ಸಾಕಾಣಿಕೆಗೆ ಹಿಂದೇಟು ಹಾಕಿದ್ದರು. ಅಲ್ಲದೆ ಹೊರ ರಾಜ್ಯಗಳಾದ ತಮಿಳುನಾಡು, ಕೇರಳ ದಿಂದ ಬರುತ್ತಿದ್ದ ಕೋಳಿಗೆ ತಡೆ ನೀಡಲಾಗಿತ್ತು. ಇದರ ಪರಿಣಾಮವಾಗಿ ಮೊದಲು ಫಾರಂನವರಿಗೆ 10 ರೂ.ಗೆ ಮೂರು ಕೋಳಿ ಮರಿ ಸಿಗುತ್ತಿದ್ದರೆ, ಈಗ ಒಂದು ಕೋಳಿ ಮರಿ ಬೆಲೆ 40 ರೂ.ಗೆ ಹೆಚ್ಚಳ ಆಗಿದೆ ಎಂದು ಕೋಳಿ ಫಾರಂನವರು ತಿಳಿಸಿದ್ದಾರೆ.

ಸದ್ಯ ಕೋಳಿಯ ಬೆಲೆ ನಾವು ಈವರೆಗೆ ಕಂಡುಕೇಳರಿಯದಷ್ಟರ ಮಟ್ಟಿಗೆ ಹೆಚ್ಚಳವಾಗಿದೆ. ಇದೀಗ ಕೋಳಿ ಸಾಕಾಣಿಕೆ ಮತ್ತೆ ಆರಂಭಿಸಲಾಗಿದೆ. ಹಾಗಾಗಿ ಸದ್ಯದಲ್ಲೇ ಇದರ ದರ ಇಳಿಕೆಯಾಗುವ ಸಾಧ್ಯತೆ ಇದೆ. ಕೋಳಿ ದರ ಇಳಿಕೆಗೆ ಲಾಕ್‌ಡೌನ್, ಹಕ್ಕಿಜ್ವರ ಭೀತಿ ಕಾರಣವಾದರೆ, ದರ ಇಳಿಕೆಯ ಭೀತಿಯಿಂದ ಕೋಳಿ ಸಾಕಣೆಗೆ ಹಿಂದೇಟು ಮತ್ತು ಕೋಳಿಗೆ ಬೇಕಾದ ಆಹಾರಗಳ ಕೊರತೆಯಿಂದ ಕೋಳಿಯ ಲಭ್ಯತೆ ಕಡಿಮೆಯಾಗಿ ಕೋಳಿ ದರ ಹೆಚ್ಚವಾಗಿದೆ.

 ಕುದಿ ಶ್ರೀನಿವಾಸ ಭಟ್,

ಕೋಳಿ ಸಾಕಣೆದಾರರು

ಇವತ್ತು ಕೋಳಿ ಕುರಿತ ವದಂತಿಗಳು ಕಡಿಮೆಯಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸದ್ಯ ಕೋಳಿ ಮಾಂಸಕ್ಕೆ 280 ರೂ. ಮತ್ತು ಕೋಳಿಗೆ 180 ರೂ. ಆಗಿದೆ. ಮುಂದೆ ಇನ್ನಷ್ಟು ದರ ಏರಿಕೆಯಾಗುವ ಸಾಧ್ಯತೆ ಕೂಡ ಇದೆ. ನಾವು ಸ್ಥಳೀಯವಾಗಿ ಕೋಳಿ ಖರೀದಿಸುತ್ತಿದ್ದು, ಎಲ್ಲಿಯೂ ಕೋಳಿ ಸಿಗುತ್ತಿಲ್ಲ.

  ಕೆ.ಎಸ್.ಅಬ್ಬಾಸ್, ಶಂಸುದ್ದೀನ್ ಚಿಕನ್ ಸ್ಟಾಲ್, ಕಾಪು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)