varthabharthiಕ್ರೀಡೆ

ಅರ್ಜುನ ಪ್ರಶಸ್ತಿಗೆ ಅಂಕಿತಾ ರೈನಾ, ಶರಣ್ ನಾಮನಿರ್ದೇಶನ

ವಾರ್ತಾ ಭಾರತಿ : 18 May, 2020

ಹೊಸದಿಲ್ಲಿ: ಏಶ್ಯನ್ ಗೇಮ್ಸ್ ಪದಕ ವಿಜೇತರುಗಳಾದ ಅಂಕಿತಾ ರೈನಾ ಹಾಗೂ ದಿವಿಜ್ ಶರಣ್ ಅವರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ರಾಷ್ಟ್ರೀಯ ಟೆನಿಸ್ ಒಕ್ಕೂಟ ಸಜ್ಜಾಗಿದೆ. ಮಾಜಿ ಡೇವಿಸ್ ಕಪ್ ಕೋಚ್ ನಂದನ್ ಬಾಲ್ ಹೆಸರನ್ನು ಧ್ಯಾನ್‌ಚಂದ್ ಪ್ರಶಸ್ತಿಗೆ ಕಳುಹಿಸಿಕೊಡಲು ಯೋಜನೆ ಹಾಕಿಕೊಂಡಿದೆ.

27ರ ಹರೆಯದ ಅಂಕಿತಾ 2018ರ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಫೆಡ್‌ಕಪ್‌ನಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಭಾರತ ಮೊದಲ ಬಾರಿ ಫೆಡ್ ಕಪ್‌ನ ವರ್ಲ್ಡ್ ಗ್ರೂಪ್ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಪ್ರಮುಖ ಪಾತ್ರವಹಿಸಿದ್ದರು.

ದಿಲ್ಲಿ ಆಟಗಾರ ಶರಣ್ ಕರ್ನಾಟಕದ ರೋಹನ್ ಬೋಪಣ್ಣ ಜೊತೆಗೂಡಿ ಜಕಾರ್ತದಲ್ಲಿ 2018ರಲ್ಲಿ ನಡೆದಿದ್ದ, ಏಶ್ಯನ್ ಗೇಮ್ಸ್ ಪುರುಷರ ಡಬಲ್ಸ್ ಇವೆಂಟ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 2019ರ ಅಕ್ಟೋಬರ್‌ನಲ್ಲಿ ಭಾರತದ ಅಗ್ರಮಾನ್ಯ ಡಬಲ್ಸ್ ಆಟಗಾರನಾಗಿ ಹೊರಹೊಮ್ಮಿದ್ದರು. 34ರ ಹರೆಯದ ಶರಣ್ 2019ರ ಋತುವಿನಲ್ಲಿ ಎರಡು ಎಟಿಪಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಬೋಪಣ್ಣ ರೊಂದಿಗೆ ಪುಣೆಯಲ್ಲಿ ಟಾಟಾ ಓಪನ್ ಹಾಗೂ ಇಗೊರ್ ಝೆಲೆನಾಯ್‌ರೊಂದಿಗೆ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಎಟಿಪಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.

‘‘ಅಂಕಿತಾ, ಶರಣ್ ಈ ವರ್ಷದ ಅರ್ಜುನ ಗೌರವಕ್ಕೆ ಅತ್ಯಂತ ಅರ್ಹರಿದ್ದಾರೆ. ನಾವು ಈ ಇಬ್ಬರ ಹೆಸರನ್ನು ನಾಮನಿರ್ದೇಶನಕ್ಕೆ ಶಿಫಾರಸು ಮಾಡಿದ್ದೇವೆ’’ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ)ಪ್ರಧಾನ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ಪಿಟಿಐಗೆ ತಿಳಿಸಿದ್ದಾರೆ.

2018ರ ಫೆಡ್ ಕಪ್‌ನಲ್ಲಿ ದಿಟ್ಟ ಪ್ರದರ್ಶನ ನೀಡಿದ ಅಂಕಿತಾ ಬೆಳಕಿಗೆ ಬಂದಿದ್ದರು. ಆಗ ಅವರು ಸಿಂಗಲ್ಸ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದರು. ಆರು ಬಾರಿ ಯುಎಸ್‌ಡಿ 25 ಕೆ ಮಟ್ಟದ ಪ್ರಶಸ್ತಿಗಳನ್ನು ಜಯಿಸಿದ ಅಂಕಿತಾ ಡಬ್ಲುಟಿಎ ಹಾಗೂ ಐಟಿಎಫ್ ವಲಯದಲ್ಲಿ ಭಾರತದ ಶೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 160ನೇ ರ್ಯಾಂಕಿಗೆ ಏರಿದ್ದರು.

ಈ ವರ್ಷದ ಫೆಡ್‌ಕಪ್‌ನಲ್ಲಿ ಅಂಕಿತಾ 5 ದಿನಗಳಲ್ಲಿ 8 ಪಂದ್ಯಗಳನ್ನು ಆಡಿದ್ದಾರೆ, ಎರಡು ಸಿಂಗಲ್ಸ್ ಪಂದ್ಯಗಳನ್ನು ಏಕಾಂಗಿಯಾಗಿ ಗೆದ್ದರೆ, ಮೂರು ನಿರ್ಣಾಯಕ ಡಬಲ್ಸ್ ಪಂದ್ಯಗಳನ್ನು ಹಿರಿಯ ಆಟಗಾರ್ತಿ ಸಾನಿಯಾ ಮಿರ್ಝಾ ಜೊತೆಗೂಡಿ ಗೆದ್ದುಕೊಂಡಿದ್ದರು. ಈ ಮೂಲಕ ಭಾರತ ಮೊದಲ ಬಾರಿ ಫೆಡ್ ಕಪ್‌ನಲ್ಲಿ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ನೆರವಾಗಿದ್ದರು.

ಬೋಪಣ್ಣ 2018ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಕೊನೆಯ ಟೆನಿಸ್ ಆಟಗಾರನಾಗಿದ್ದರು. ನಂದಲ್ ಬಾಲ್ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿ ಅಥವಾ ಧ್ಯಾನ್ ಚಂದ್ ಪ್ರಶಸ್ತಿಗೆ ಕಳುಹಿಸಿಕೊಡುವ ಬಗ್ಗೆ ಎಐಟಿಎ ಈಗಲೂ ಚರ್ಚೆ ಮುಂದುವರಿಸಿದೆ. ಈ ಪ್ರಶಸ್ತಿಯು ಜೀವಮಾನ ಸಾಧನೆಗಾಗಿ ನೀಡುವ ಗೌರವವಾಗಿದೆ.

ಎಐಟಿಎಯ ಬಲ್ಲ ಮೂಲಗಳ ಪ್ರಕಾರ, ಬಾಲ್ ಅವರ ಹೆಸರನ್ನು ಧ್ಯಾನ್‌ಚಂದ್ ಗೌರವಕ್ಕಾಗಿ ಕಳುಹಿಸಿಕೊಡಲಾಗಿದೆ.

60ರ ಹರೆಯದ ನಂದನ್ ಬಾಲ್ 1980ರಿಂದ 83ರ ನಡುವೆ ಡೇವಿಸ್ ಕಪ್‌ನಲ್ಲಿ ಕಾಣಿಸಿಕೊಂಡಿದ್ದರು. ಆಡಿರುವ ಎರಡು ಪಂದ್ಯಗಳಲ್ಲಿ 2-1 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಹಲವು ವರ್ಷಗಳಿಂದ ಭಾರತದ ಡೇವಿಸ್ ಕಪ್ ಕೋಚ್ ಆಗಿ ಗಮನ ಸೆಳೆದಿದ್ದಾರೆ.

ಈ ತನಕ ಕೇವಲ ಮೂವರು ಟೆನಿಸ್ ಆಟಗಾರರಾದ ಝೀಶಾನ್ ಅಲಿ(2014), ಎಸ್.ಪಿ. ಮಿಶ್ರಾ(2015) ಹಾಗೂ ನಿತಿನ್ ಕೀರ್ತನೆ(2019) ಧ್ಯಾನ್‌ಚಂದ್ ಗೌರವ ಪಡೆದಿದ್ದಾರೆ. ಟೆನಿಸ್ ಕೋಚ್‌ಗೆ ಈ ತನಕ ದ್ರೋಣಾಚಾರ್ಯ ಪ್ರಶಸ್ತಿ ಒಲಿದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)