varthabharthiಸಂಪಾದಕೀಯ

ಕೇಂದ್ರದ ಲೋಪ, ವ್ಯಾಪಿಸುತ್ತಿರುವ ಕೊರೋನ

ವಾರ್ತಾ ಭಾರತಿ : 19 May, 2020

ದೇಶದಲ್ಲಿ ದಿಗ್ಬಂಧನ ಮುಂದುವರಿದಿದೆ. ಕರ್ನಾಟಕದಲ್ಲಿ ಕೆಲ ನಿರ್ಬಂಧಗಳನ್ನು ಸಡಿಲುಗೊಳಿಸಲಾಗಿದೆ. ಮಂಗಳವಾರದಿಂದ ಬಸ್, ಆಟೊ, ಕ್ಯಾಬ್, ಟ್ಯಾಕ್ಸಿಗಳು ಓಡಾಟ ಆರಂಭಿಸಲಿವೆ. ಸೆಲೂನ್, ದಂತ ವೈದ್ಯಕೀಯ ಸೇವೆ, ಬೀದಿ ಬದಿಯ ಅಂಗಡಿಗಳು ತೆರೆಯಲಿವೆ.ಸಾರ್ವಜನಿಕ ಉದ್ಯಾನಗಳು ವಾಯು ವಿಹಾರಕ್ಕೆ ಮುಕ್ತವಾಗಲಿವೆ.ಆದರೆ ಯಾವ ಉದ್ದೇಶದಿಂದ ಇವುಗಳನ್ನು ನಿರ್ಬಂಧಿಸಲಾಗಿತ್ತೋ ಅದು ಈಡೇರಿಲ್ಲ. ಕೊರೋನ ವೈರಾಣು ಹಬ್ಬುವುದನ್ನು ತಡೆಯಲು ಇವುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಈ ಉದ್ಯೋಗಗಳನ್ನೇ ನಂಬಿ ಬದುಕಿದವರಿಗೆ ತೊಂದರೆಯಾಗಿರುವುದು ನಿಜ. ಆದರೆ ಇದಕ್ಕೆ ಈ ಬಡಪಾಯಿಗಳು ಕಾರಣವಲ್ಲ. ಅದೇನೇ ಇರಲಿ ರಾಜ್ಯದಲ್ಲಿ ಕೊರೋನ ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ. ಸೋಮವಾರದವರೆಗೆ 1,240ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸರಕಾರ ರವಿವಾರ ಬಿಗಿಯಾದ ನಿರ್ಬಂಧ ಹೇರಿ ಉಳಿದ ದಿನ ಸಡಿಲಗೊಳಿಸಿದ್ದರೂ ಪರಿಣಾಮ ಏನಾಗುತ್ತದೆ ಎಂದು ಈಗಲೇ ಊಹಿಸಲು ಆಗುವುದಿಲ್ಲ.

ಕರ್ನಾಟಕದಲ್ಲಿ ಈ ಮಾರಕ ಪಿಡುಗು ಎಪ್ರಿಲ್ ಕೊನೆಯಲ್ಲಿ ಕೊಂಚ ನಿಯಂತ್ರಣಕ್ಕೆ ಬಂದಂತೆ ಕಾಣುತ್ತಿತ್ತು. ಆದರೆ ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳಿಂದ ಹಾಗೂ ಬೇರೆ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಯಾವಾಗ ತವರಿಗೆ ಮರಳಲು ಆರಂಭಿಸಿದರೋ ಆಗ ಕೊರೋನ ಸೋಂಕು ಮತ್ತಷ್ಟು ವ್ಯಾಪಿಸತೊಡಗಿತು. ಅದರಲ್ಲೂ ಮಹಾರಾಷ್ಟ್ರದಿಂದ ವಿಶೇಷವಾಗಿ ಮುಂಬೈ, ಪುಣೆಗಳಿಂದ ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು, ಯಾದಗಿರಿಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಲೇ ಇದ್ದಾರೆ. ಇದು ಕೊರೋನ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದ ಕರ್ನಾಟಕದ ಪಾಲಿಗೆ ಹೊಸ ಸವಾಲಾಗಿದೆ. ಹೀಗೆ ಮುಂಬೈಯಿಂದ ಬಂದವರು ಉತ್ತರ ಕರ್ನಾಟಕ ಮಾತ್ರವಲ್ಲ ಮಂಡ್ಯ, ಹಾಸನಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ವಿದೇಶದಿಂದ ಬಂದವರಿಂದ ಕೊಂಚ ತೊಂದರೆಯಾಗಿದೆ. ಕಲಬುರಗಿಯಲ್ಲಂತೂ ಮಹಾರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಪರದಾಡುತ್ತಿದೆ. ಮಹಾರಾಷ್ಟ್ರ ಮತ್ತು ಗೋವಾದಿಂದ ಬಂದ ಕನ್ನಡ ವಲಸೆ ಕಾರ್ಮಿಕರಿಗೆ ಗ್ರಾಮೀಣ ಪ್ರದೇಶಗಳ ಶಾಲೆ, ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಆದರೆ ಅಲ್ಲಿ ಶೌಚಾಲಯ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅಂತರ್‌ರಾಜ್ಯ ವಲಸೆಗೆ ಕೇಂದ್ರ ಸರಕಾರ ಅನುಮತಿ ನೀಡಿದ ನಂತರ ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಾಯಿಸಿಕೊಂಡ ಸಹಸ್ರಾರು ಜನರು ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಧಾವಿಸಿ ಬರುತ್ತಲೇ ಇದ್ದಾರೆ. ಇವರಿಗೆಲ್ಲ ಕ್ವಾರಂಟೈನ್ ವ್ಯವಸ್ಥೆ ಮಾಡುವುದೇ ತುಂಬ ಪ್ರಯಾಸದಾಯಕ ಕೆಲಸ. ಇದೆಲ್ಲದರ ಪರಿಣಾಮವಾಗಿ ರಾಜ್ಯದಲ್ಲಿ ಕೊರೋನ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಮಹಾರಾಷ್ಟ್ರದಿಂದ ಮಾತ್ರವಲ್ಲ ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಿಂದಲೂ ಜನ ರಾಜ್ಯಕ್ಕೆ ಬರುತ್ತಿದ್ದಾರೆ. ದಿಲ್ಲಿಯಿಂದ ರೈಲು ಮೂಲಕವೂ ಸಾವಿರಾರು ಜನ ಬರುತ್ತಿದ್ದಾರೆ. ಕೊಲ್ಲಿ ರಾಷ್ಟ್ರ ಗಳಿಂದಲೂ ಬರುವವರ ಸಂಖ್ಯೆ ಸಾಕಷ್ಟಿದೆ. ಇವರಲ್ಲಿ ಅನೇಕರು ಕ್ವಾರಂಟೈನ್‌ಗೆ ಒಳಪಡಲು ನಿರಾಕರಿಸಿ ತಕರಾರು ತೆಗೆಯುತ್ತಿದ್ದಾರೆ.ಹಲವರು ಸರಕಾರದ ಕಣ್ಣು ತಪ್ಪಿಸಿ ನುಸುಳುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಬರುತ್ತಿರುವವರ ಪರಿಸ್ಥಿತಿಯಂತೂ ದಾರುಣವಾಗಿದೆ. ಇವರಿಂದ ರಾಜ್ಯದಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕಾಗಿದೆ.

ಬೇರೆ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ನೆಲೆಸಿರುವ, ದುಡಿಯಲು ಹೋಗಿರುವ ಕನ್ನಡಿಗರು ತೊಂದರೆಗೆ ಒಳಗಾದಾಗ ತಾಯಿನಾಡಿಗೆ ಬರುವುದರಲ್ಲಿ ತಪ್ಪಿಲ್ಲ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೋವಿಡ್-19 ನಿಯಂತ್ರಣ ತಪ್ಪಿ ವ್ಯಾಪಿಸುತ್ತಿದೆ. ಇದರಿಂದಾಗಿ ಅಲ್ಲಿ ಹೊಟ್ಟೆಪಾಡಿಗಾಗಿ ಹೋಗಿದ್ದ ಕರ್ನಾಟಕದ ಶ್ರಮಜೀವಿಗಳು ದುಡಿಮೆಯನ್ನು ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತ ತಮ್ಮ ತವರಿಗೆ ಮರಳಿದ್ದಾರೆ. ಅವರನ್ನು ನಮ್ಮ ಸರಕಾರ ಮಾನವೀಯವಾಗಿಯೇ ನೋಡಿಕೊಳ್ಳಬೇಕು ಇದರಲ್ಲಿ ಎರಡು ಮಾತಿಲ್ಲ. ಆದರೆ ಈ ಅಧ್ವಾನಕ್ಕೆ ಯಾರು ಹೊಣೆ? ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಹೊಣೆ ಅಂದರೆ ತಪ್ಪಿಲ್ಲ. ದೇಶದಲ್ಲಿ ಕೊರೋನ ಸೋಂಕು ಮೊದಲು ಕಾಣಿಸಿಕೊಂಡಿದ್ದು ಜನವರಿ ಕೊನೆಯಲ್ಲಿ. ಆಗ ವಿಜ್ಞಾನಿಗಳು, ವೈದ್ಯರು ಮಾತ್ರವಲ್ಲ ಜಾಗತಿಕ ಆರೋಗ್ಯ ಸಂಸ್ಥೆ ಸಾಕಷ್ಟು ಎಚ್ಚರಿಕೆ ನೀಡಿತ್ತು. ಆದರೆ ಕೇಂದ್ರ ಸರಕಾರ ನಿರ್ಲಕ್ಷ ಧೋರಣೆ ತಾಳಿತು. ಈ ಪಿಡುಗು ಹಬ್ಬುತ್ತಿರುವಾಗಲೇ ಗುಜರಾತ್‌ನಲ್ಲಿ ‘ನಮಸ್ತೆ ಟ್ರಂಪ್’ ಜಾತ್ರೆ ನಡೆದು ಲಕ್ಷಾಂತರ ಜನರನ್ನು ಸೇರಿಸಲಾಯಿತು. ಆ ನಂತರವೂ ಸರಕಾರ ಮಂಪರಿನಲ್ಲೇ ಇತ್ತು. ಮಾರ್ಚ್ 24ಕ್ಕೆ ರಾತ್ರಿ 8 ಗಂಟೆಗೆ ಪ್ರಧಾನಿ ಅವರು ದಿಢೀರನೇ ಟಿವಿಯಲ್ಲಿ ಕಾಣಿಸಿಕೊಂಡು ನಾಳೆಯಿಂದ ‘ಲಾಕ್‌ಡೌನ್’ ಎಂದು ಘೋಷಿಸಿಬಿಟ್ಟರು . ಮಾರನೇ ದಿನ ಬಸ್, ರೈಲು, ಹೋಟೆಲ್, ಲಾರಿ ಎಲ್ಲಾ ಬಂದ್ ಆದವು. ಇದರ ಪರಿಣಾಮವಾಗಿ ಮುಂಬೈ ಸೇರಿದಂತೆ ಹೊರನಾಡಿಗೆ ದುಡಿಯಲು ಹೋಗಿದ್ದ ಕಾರ್ಮಿಕರು ಕಂಗಾಲಾದರು. ಇವರಿಗೆ ರಾಜ್ಯಕ್ಕೆ ಮರಳಲು ಒಂದೆರೆಡು ದಿನ ಕಾಲಾವಕಾಶ ನೀಡಿದ್ದರೆ ಈ ಪಡಿಪಾಟಲು ಆಗುತ್ತಿರಲಿಲ್ಲ. ಆಗ ಆ ಜನರ ಕೈಯಲ್ಲಿ ಒಂದಿಷ್ಟು ದುಡಿಮೆಯ ಹಣವಿತ್ತು. ಹೇಗೋ ತಮ್ಮೂರುಗಳಿಗೆ ತಲುಪುತ್ತಿದ್ದರು. ಮುಂಬೈ, ಪುಣೆಯಂತಹ ನಗರಗಳಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿತ್ತು. ಆದರೆ ಯಾವುದೇ ಪೂರ್ವ ತಯಾರಿಯಿಲ್ಲದೆ ಪ್ರಧಾನಿ ಮಾಡಿದ ದಿಢೀರ್ ಘೋಷಣೆಯಿಂದ ನಮ್ಮ ನಾಡಿನ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳ ವಲಸೆ ಕಾರ್ಮಿಕರು, ಇತರ ಜನರು ನಾನಾ ತರದ ಚಿತ್ರಹಿಂಸೆ ಅನುಭವಿಸಬೇಕಾಯಿತು.

ಅದೇನೇ ಇರಲಿ, ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಅಂತರ್‌ರಾಜ್ಯ ಸಂಚಾರಕ್ಕೆ ಅವಕಾಶ ನೀಡಬಾರದು. ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆಸಿಕೊಳ್ಳಲು ಅಂತಿಮ ದಿನ ನಿಗದಿ ಮಾಡಿ ದೇಶದಲ್ಲಿ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ರಾಜ್ಯದ ಗಡಿಗಳನ್ನು ಭದ್ರಪಡಿಸಿಕೊಳ್ಳುವುದು ಸೂಕ್ತ. ಇಲ್ಲವಾದರೆ ಕರ್ನಾಟಕ ಬರಲಿರುವ ದಿನಗಳಲ್ಲಿ ಭಾರೀ ವಿಪತ್ತನ್ನು ಎದುರಿಸಬೇಕಾಗಿ ಬರಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)