varthabharthiಸಂಪಾದಕೀಯ

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸರಕಾರದ ಬಳಿ ಉತ್ತರಗಳಿವೆಯೇ?

ವಾರ್ತಾ ಭಾರತಿ : 20 May, 2020

ಇಡೀ ಜಗತ್ತು ಕೊರೋನ ಪರೀಕ್ಷೆ ಬರೆಯುತ್ತಿದೆ. ಕೊರೋನ ಪರೀಕ್ಷೆಯಲ್ಲಿ ಭಾರತದ ಕಳಪೆ ಪ್ರದರ್ಶನವೂ ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಭಾರತದಲ್ಲಿ ಕೊರೋನ ಪರೀಕ್ಷೆ ಘೋಷಣೆಯಾಗಿರುವುದು ತೀರಾ ತಡವಾಗಿ. ವಿಶೇಷವೆಂದರೆ ಭಾರತ ಪರೀಕ್ಷೆಗೆ ಕುಳಿತುಕೊಳ್ಳುವ ಹೊತ್ತಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಚೀನಾ, ಇಟಲಿ, ಅಮೆರಿಕ ಎಲ್ಲೆಲ್ಲಿ ವಿಫಲವಾಗಿದೆ ಎನ್ನುವುದನ್ನು ಮಾಗದರ್ಶಿಯಾಗಿಟ್ಟುಕೊಂಡು ಮಾರ್ಚ್ ಮೊದಲ ವಾರವೇ ಕೊರೋನ ಭಾರತದಲ್ಲಿ ಹರಡದಂತೆ ಮುಂಜಾಗೃತೆ ವಹಿಸುವ ಅವಕಾಶ ಭಾರತಕ್ಕಿತ್ತು. ಆದರೆ ಕೊರೋನ ವಿಪತ್ತನ್ನು ಸರಕಾರ ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ಮಧ್ಯಪ್ರದೇಶದಲ್ಲಿ ಒಂದು ಸರಕಾರವನ್ನೇ ಉರುಳಿಸಿ ನೂತನ ಸರಕಾರದ ಪ್ರಮಾಣವಚನವನ್ನು ನಡೆಸಿತು. ಅಧಿವೇಶನವನ್ನು ಮುಂದುವರಿಸಿತು. ‘ನಮಸ್ತೆ ಟ್ರಂಪ್’ ಸಮಾವೇಶವನ್ನು ಹಮ್ಮಿಕೊಂಡಿತು. ದಿಲ್ಲಿಯಲ್ಲಿ ಒಂದು ಕೋಮು ಗಲಭೆಯನ್ನೇ ಪ್ರಾಯೋಜಿಸಿತು. ಕೊರೋನ ವೈರಸ್ ವಿಮಾನ ನಿಲ್ದಾಣಗಳ ದಿಡ್ಡಿ ಬಾಗಿಲನ್ನು ದಾಟಿ ದೇಶದ ಮೂಲೆ ಮೂಲೆಯನ್ನು ತಲುಪಿದ ಬಳಿಕ, ಎಚ್ಚೆತ್ತ ಸರಕಾರ ಲಾಕ್‌ಡೌನ್ ಹೇರಿತು.

ಲಾಕ್‌ಡೌನ್ ಪರೀಕ್ಷೆ ಬರೆಯುವಾಗಲೂ ಸರಕಾರದ ಬಳಿ ಯಾವುದೇ ಪೂರ್ವ ತಯಾರಿ ಇರಲಿಲ್ಲ. ಪರಿಣಾಮವಾಗಿ, ಲಾಕ್‌ಡೌನ್‌ನಿಂದ ಜನರು ತೀವ್ರತರವಾದ ಸಂಕಷ್ಟಕ್ಕೆ ಸಿಲುಕಿದರು. ಆದರೆ ಜನರ ಈ ತ್ಯಾಗ ಬಲಿದಾನಗಳು ವ್ಯರ್ಥವಾದವು. ಇಂದು ವಲಸೆ ಕಾರ್ಮಿಕರ ಸಾವು ನೋವುಗಳು ಕೊರೋನ ಹಾನಿಗಿಂತ ತೀವ್ರವಾಗಿವೆ. ಮಾಧ್ಯಮಗಳಲ್ಲಿ ಘೋಷಣೆಯಾಗುತ್ತಿರುವ ಕಾರ್ಮಿಕರ ಮೃತದೇಹದ ಸಂಖ್ಯೆಗಳನ್ನೇ, ಪರೀಕ್ಷೆಯಲ್ಲಿ ಪಡೆದ ಅಂಕಗಳಾಗಿ ಸರಕಾರ ವಿಶ್ವಕ್ಕೆ ತೋರಿಸಬೇಕಾಗಿದೆ. ಅತ್ತ ಲಾಕ್‌ಡೌನ್ ಈ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಿತೇ ಹೊರತು, ಕೊರೋನವನ್ನು ಗೆಲ್ಲುವುದಕ್ಕೆ ಅದರಿಂದ ಆಗಲಿಲ್ಲ. ಈಗ, ಕೊರೋನ ಸೋಂಕಿತರ ಸಂಖ್ಯೆ ಅತಿ ವೇಗದಲ್ಲಿ ಏರುತ್ತಿರುವಾಗ ಸರಕಾರ ಅನಿವಾರ್ಯವೆಂಬಂತೆ ಲಾಕ್‌ಡೌನ್‌ನ್ನು ಸಡಿಲಗೊಳಿಸಿದೆ. ಈವರೆಗೆ ದೇಶದ ಮೇಲೆ ಹೇರಿದ್ದ ಲಾಕ್‌ಡೌನ್‌ಗೆ ಸ್ಪಷ್ಟೀಕರಣವನ್ನು ನೀಡುವುದಕ್ಕೂ ವಿಫಲವಾಗಿದೆ. ಲಾಕ್‌ಡೌನ್ ವೈಫಲ್ಯ ನೋಟು ನಿಷೇಧ ವೈಫಲ್ಯದ ಎರಡನೆ ಭಾಗವಾಗಿದೆ.

ಹೀಗೆ ತನ್ನ ಮುಂದಿದ್ದ ಬಹುದೊಡ್ಡ ಪರೀಕ್ಷೆಯಲ್ಲಿ ಸೋತ ಸರಕಾರ ಇದೀಗ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಘೋಷಿಸಿದೆ. ದೇಶಾದ್ಯಂತ ಸಿಬಿಎಸ್‌ಇ ಸೇರಿದಂತೆ ವಿವಿಧ ರಾಜ್ಯಗಳ ಎಸೆಸೆಲ್ಸಿ ಪರೀಕ್ಷೆಗಳ ವೇಳಾ ಪಟ್ಟಿ ಹೊರಬಿದ್ದಿವೆ. ರಾಜ್ಯದಲ್ಲಿ ಜೂನ್ 25ರಿಂದ ಜುಲೈ 4ರವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ ಎಂದು ಘೋಷಿಸಲಾಗಿದೆ. ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳು ಪ್ರತಿ ವರ್ಷ ಮಕ್ಕಳನ್ನು ವೈರಸ್ ರೂಪದಲ್ಲಿ ಕಾಡುತ್ತಾ ಬಂದಿವೆ. ಮಕ್ಕಳ ಪಾಲಿಗೆ ಅದೊಂದು ಸೋಂಕು ಪರೀಕ್ಷೆ. ಗೆದ್ದರೆ ಬದುಕೇ ಕೈಗೆ ಸಿಕ್ಕಿದಂತೆ. ಸೋತರೆ, ಬದುಕೇ ಸರ್ವನಾಶವಾದಂತೆ ಎಂದು ಭಾವಿಸಿ ಆ ಪರೀಕ್ಷೆಗೆ ಮಕ್ಕಳು ಮುಖಾಮುಖಿಯಾಗುತ್ತಾ ಬಂದಿದ್ದಾರೆ. ಪ್ರತಿ ವರ್ಷ ಈ ಪರೀಕ್ಷೆಯ ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆಗೈಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇವೆ. ಸಮಾಜದಲ್ಲಿ ಹೆಚ್ಚುತ್ತಿರುವ ಸ್ಪರ್ಧೆ, ಉದ್ಯೋಗಗಳ ಸಂಖ್ಯೆಗಳಲ್ಲಿ ಇಳಿಮುಖ, ಪಾಲಕರ ಪ್ರತಿಷ್ಠೆ, ಖಾಸಗಿ ಶಾಲೆಗಳ ಸ್ವಾರ್ಥ, ಉದ್ಯಮವಾಗುತ್ತಿರುವ ಶಿಕ್ಷಣ ಇವೆಲ್ಲ ಅಂತಿಮವಾಗಿ ಮಕ್ಕಳ ಬದುಕನ್ನು ಬಲಿ ತೆಗೆದುಕೊಳ್ಳುತ್ತಿವೆ. ಮಕ್ಕಳ ಬಾಲ್ಯವನ್ನು ಕೊಂದು, ಅವರೊಳಗಿರುವ ಸೃಜನಶೀಲತೆಯನ್ನೆಲ್ಲ ಹಿಂಡಿ ಹಿಪ್ಪೆ ಮಾಡಿ ಅವರನ್ನು ಯಂತ್ರವನ್ನಾಗಿಸುವ ಪರೀಕ್ಷೆಗಳು ಇದೀಗ ಕೊರೋನ ಸಂದರ್ಭದಲ್ಲಿ ಇನ್ನಷ್ಟು ಭೀಕರ ರೂಪದಲ್ಲಿ ಬಂದು ನಿಂತಿವೆ.

ಸಮಾಜದ ಪಾಲಿಗೆ ಇದು ಪರೀಕ್ಷೆಯೊಳಗಿನ ಪರೀಕ್ಷೆ. ಇದನ್ನು ಗೆಲ್ಲಬೇಕಾಗಿರುವುದು ವಿದ್ಯಾರ್ಥಿಗಳಲ್ಲ, ಬದಲಿಗೆ ಪಾಲಕರು ಮತ್ತು ಸಮಾಜ. ಕೊರೋನ ಸೋಂಕಿನ ಕುರಿತಂತೆ ಹಿರಿಯರಿಗೇ ಗೊಂದಲಗಳಿರುವ ಈ ಹೊತ್ತಿನಲ್ಲಿ, ಕೊರೋನ ವೈರಸ್‌ಗಳ ಕುರಿತಂತೆ ಅಂಜುತ್ತಾ ಮಕ್ಕಳು ಈ ಬಾರಿ ಪರೀಕ್ಷೆ ಬರೆಯಬೇಕಾಗುತ್ತದೆ. ಪರೀಕ್ಷೆ ಎದುರಿಸುವ ಮಕ್ಕಳು ಎರಡೆರಡು ವೈರಸ್‌ಗಳನ್ನು ಏಕಕಾಲದಲ್ಲಿ ಎದುರಿಸುವ ಸಂದರ್ಭವಿದು. ಮೊದಲು ಅವರಲ್ಲಿ ಕೊರೋನ ಕುರಿತಂತೆ ಇರುವ ತಪ್ಪು ಕಲ್ಪನೆ, ಭಯ, ಆತಂಕಗಳನ್ನು ನಿವಾರಿಸುವುದು ನಮ್ಮ ಕರ್ತವ್ಯ. ಕೊರೋನ ಮತ್ತು ಶೈಕ್ಷಣಿಕ ಪರೀಕ್ಷೆ ಇವೆರಡರ ಬಗ್ಗೆಯೂ ಅತಿಯಾದ ಭಯ, ಆತಂಕಗಳು ಬೇಡ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಬೇಕು. ಕೊರೋನ ಆತಂಕ ಪರೀಕ್ಷೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ಪರೀಕ್ಷೆಯ ಆತಂಕವೂ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಎರಡನ್ನೂ ಜೊತೆಜೊತೆಯಾಗಿ ಎದುರಿಸಲು ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸುವುದು ಪಾಲಕರ ಹೊಣೆಯಾಗಿದೆ. ಕಳೆದ ಎರಡು ತಿಂಗಳಿಂದ ವಿದ್ಯಾರ್ಥಿಗಳು ಗೃಹ ಬಂಧನದಲ್ಲಿದ್ದಾರೆ.

ಹೊರಗಿನ ಪ್ರಪಂಚದಿಂದ ಅಕ್ಷರಶಃ ದೂರವಿದ್ದಾರೆ. ಹಲವು ಪಾಲಕರು ಈ ಸಂದರ್ಭವನ್ನು ಮಕ್ಕಳ ಪರೀಕ್ಷೆಯ ಸಿದ್ಧತೆಗಳಿಗೆ ಬಳಸಿದ್ದಾರೆ. ಶಾಲೆಯಿಂದ ದೂರ ಉಳಿದಿರುವ ಹಳ್ಳಿಯ ಮಕ್ಕಳಂತೂ ಕಳೆದ ಎರಡು ತಿಂಗಳಿಂದ ಪುಸ್ತಕಗಳನ್ನು ಬಿಡಿಸಿರುವ ಸಾಧ್ಯತೆಗಳು ಕಡಿಮೆ. ಜೂನ್ 25ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭವಾಗುತ್ತದೆ. ಅಷ್ಟರಲ್ಲಿ ರಾಜ್ಯಾದ್ಯಂತ ಕೊರೋನ ಇನ್ನಷ್ಟು ಭೀಕರವಾಗಲಿದೆ. ಹೀಗಿರುವಾಗ ಪರೀಕ್ಷಾ ಕೇಂದ್ರಗಳು ಕೊರೋನವನ್ನು ಎದುರಿಸಲು ಎಷ್ಟರಮಟ್ಟಿಗೆ ಸುಸಜ್ಜಿ ತಗೊಂಡಿವೆ ಎನ್ನುವುದೂ ಮುಖ್ಯವಾಗುತ್ತವೆ. ಎಲ್ಲ ಪರೀಕ್ಷಾ ಹಾಲ್‌ಗಳಿಗೆ ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಕೊರೋನ ಎದುರಿಸುವ ಸಾಮಗ್ರಿಗಳನ್ನು ರಾಜ್ಯ ಸರಕಾರ ವಿತರಿಸಲು ವಿಫಲವಾದರೆ, ಇನ್ನಷ್ಟು ಅನಾಹುತಗಳಿಗೆ ಸರಕಾರವೇ ಕಾರಣವಾಗಬಹುದು. ನಗರಗಳಲ್ಲಿರುವ ಶಾಲೆಗಳಿಗೆ ಸೌಲಭ್ಯಗಳು ಬೇಗ ತಲುಪಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಸರಕಾರಿ ಶಾಲೆಗಳಿಗೂ ಅಷ್ಟೇ ಕಾಳಜಿಯಿಂದ ಈ ಸಾಮಗ್ರಿಗಳು ತಲುಪುತ್ತವೆ ಎನ್ನುವುದರ ಕುರಿತಂತೆ ಅನುಮಾನಗಳಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಹುತೇಕ ಮಕ್ಕಳನ್ನು ಬಡತನ ಕೊರೋನಕ್ಕಿಂತ ತೀವ್ರವಾಗಿ ಕಾಡುತ್ತಿವೆ. ಈ ಮಕ್ಕಳು ಹಸಿವಿನ ಜೊತೆ ಜೊತೆಗೇ ಪರೀಕ್ಷೆಗಳನ್ನು ಎದುರಿಸಬೇಕಾದ ಸಾಧ್ಯತೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದರ ಬಗ್ಗೆ ಅನುಮಾನಗಳಿವೆ. ಈ ನಿಟ್ಟಿನಲ್ಲಿ, ಪ್ರತಿ ವಿದ್ಯಾರ್ಥಿಗಳ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಅವರ ಹಾಜರಾತಿಗಳ ಕುರಿತಂತೆ ಶಾಲೆಗಳು ಮೊದಲೇ ಖಚಿತ ಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪರೀಕ್ಷೆ ತಮ್ಮನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ, ಮುಂದಿನ ಭವಿಷ್ಯದ ಗತಿಯೇನು? ಎಂಬುದರ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಆತಂಕಗಳಿವೆ. ವಿದ್ಯಾರ್ಥಿಗಳ ಮುಂದಿರುವ ನೂರಾರು ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆ ಪಾಲಕರು, ಶಿಕ್ಷಣ ಸಂಸ್ಥೆ ಮತ್ತು ಸರಕಾರದ ಮುಂದಿದೆ. ಈ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರಿಸಿ ಉತ್ತಮ ಅಂಕಗಳನ್ನು ಪಡೆಯಲಿ ಎಂದು ಹಾರೈಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)