varthabharthi

ನಿಮ್ಮ ಅಂಕಣ

ಕೋವಿಡ್ ಬಿಕ್ಕಟ್ಟನ್ನು ಬಳಸಿಕೊಂಡು ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯುತ್ತಿರುವ ಮೋದಿ ಸರ್ಕಾರ

ವಾರ್ತಾ ಭಾರತಿ : 20 May, 2020
- ಶಿವಸುಂದರ್

ಕೋವಿಡ್ ಬಿಕ್ಕಟ್ಟಿನಿಂದ ಹೊರಬರಲು ಮೋದಿ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜಿನ ಬುರುಡೆ ಹಾಗು "ಆತ್ಮನಿರ್ಭರತೆ" ಯ ಆಷಾಢ ಭೂತಿತನದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. 

ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡಲು ಕೆಲಸ ಮಾಡುವ CRISIL, NOMURA, CLSI, HSBC, Earnest and Young ನಂತಹ ರೇಟಿಂಗ್ ಏಜೆನ್ಸಿಗಳು ಹಾಗು ಸರ್ಕಾರದ ಅಧೀನದಲ್ಲಿರುವ SBIನಂಥ ಸಂಸ್ಥೆಗಳು ಸಹ ಈ ಪ್ಯಾಕೇಜಿನಲ್ಲಿ ಸರ್ಕಾರವು ಕೊಟ್ಟಿರುವುದು  ಹೆಚ್ಚೆಂದರೆ 1.25-2 ಲಕ್ಷ ಕೋಟಿ ಮಾತ್ರ ಎಂದು ಅಂದಾಜು ಮಾಡಿವೆ. ಹಾಗು ಇದರಿಂದ ದೇಶದ ತುರ್ತು ಬಿಕ್ಕಟ್ಟಾಗಲಿ ಅಥವಾ ಆರ್ಥಿಕ ಚೇತರಿಕೆಯಾಗಲಿ ಸಾಧ್ಯವಿಲ್ಲ ಎಂದು ಘೋಷಿಸಿವೆ. ಪರಿಣಾಮವಾಗಿಯೇ ಪ್ಯಾಕೇಜು ಘೋಷಣೆಯ ನಂತರ ಶೇರು ಮಾರುಕಟ್ಟೆ ಚೇತರಿಸಿಕೊಳ್ಳುವ ಬದಲು 1,000 ಅಂಶಗಳಷ್ಟು ಕುಸಿಯಿತು!

ವಾಸ್ತವವಾಗಿ ಸರ್ಕಾರದ ಉದ್ದೇಶವು ಕೋವಿಡ್ ಸಂಕಷ್ಟಗಳಿಂದ ಜನರನ್ನು ಬಚಾವು ಮಾಡುವುದಕ್ಕಿಂತ ಸಂವಿಧಾನ ಬದ್ಧವಾಗಿ ಈವರೆಗೆ ಜಾರಿಮಾಡಲಾಗದ ಮಾರುಕಟ್ಟೆ ಪರ ಹಾಗು ಕಾರ್ಮಿಕ ವಿರೋಧಿ, ಜನವಿರೋಧಿ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವುದೇ ಆಗಿತ್ತೆಂಬುದು ಮೇರಿ ನಿರ್ಮಲಾ ಅವರ ಕೊನೆಯ ಮೂರೂ ದಿನಗಳ ಪತ್ರಿಕಾಗೋಷ್ಠಿ ಸಾಬೀತು ಮಾಡಿದೆ.

ಆದರೆ ಆ ದೇಶವಿರೋಧಿ ಪ್ಯಾಕೇಜಿನ ಮೂಲಕ ಮಾಧ್ಯಮಗಳು ಹೆಚ್ಚಾಗಿ ಗಮನಿಸದ ಮತ್ತೊಂದು ದಾಳಿಯು ನಡೆದುಹೋಗಿದೆ. ಅದು ಕೋವಿಡ್ ಬಿಕ್ಕಟ್ಟನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಆರ್ಥಿಕ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದಾಳಿ.

ವಾಸ್ತವವಾಗಿ ಕೋವಿಡ್ ಬಿಕ್ಕಟ್ಟು ಜನಸಾಮಾನ್ಯರ ಬದುಕಿನಲ್ಲಿ ಸೃಷ್ಟಿಸಿರುವ ಉದ್ಯೋಗ, ಆರೋಗ್ಯ, ಆಹಾರ ಮತ್ತು ವಸತಿಯಂತಹ ಎಲ್ಲಾ ವಿಷಯಗಳು ರಾಜ್ಯಗಳ ಪಟ್ಟಿಯಲ್ಲಿರುವ ವಿಷಯಗಳಾಗಿವೆ. ಅದನ್ನು ನಿಭಾಯಿಸುವುದು ಪ್ರಧಾನವಾಗಿ ರಾಜ್ಯ ಸರ್ಕಾರಗಳ ಜವಾಬ್ದಾರಿಯಡಿ ಬರುತ್ತದೆ. ಹೀಗಾಗಿ ಕೋವಿಡ್ ಬಿಕ್ಕಟ್ಟಿನಿಂದ ಜನರುನ್ನು ಪಾರು ಮಾಡಲು ರಾಜ್ಯಗಳು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಅಗತ್ಯವಿರುವ ಹಣಕಾಸು ಸಂಪನ್ಮೂಲ ಹಾಗು ಇತರ ಸಂಪನ್ಮೂಲಗಳನ್ನು ಒದಗಿಸುವ ಕರ್ತ್ಯವ್ಯವನ್ನು ನಿಭಾಯಿಸಬೇಕಿತ್ತು.

ಆದರೆ ಕೇಂದ್ರದಲ್ಲಿರುವ  ಮೋದಿ ಸರ್ಕಾರ ಮಾಡುತ್ತಿರುವುದೇನು?

ಈ ಪರಿಸ್ಥಿತಿಯಲ್ಲೂ ಅದು ಒಂದೆಡೆ ತನ್ನ ಪಕ್ಷದ ಕೋಮು ಧ್ರುವೀಕರಣದ ಅಜೇಂಡಾಗಳನ್ನು ಮುಂದುವರೆಸಿದ್ದರೆ ಮತ್ತೊಂದು ಕಡೆ, ರಾಜ್ಯ ಸರ್ಕಾರಗಳಿಗೆ ಲಾಕ್ದೌನ್ ಅವಧಿಯುದ್ದಕ್ಕೂ ಅಸಹಕಾರ ಹಾಗು ಕಿರುಕುಳ ಕೊಡುತ್ತಾ ಬಂದಿದೆ. ಮೊನ್ನೆ ಘೋಷಿಸಿದ ಪ್ಯಾಕೇಜಿನಲ್ಲಂತೂ ಕೇಂದ್ರದ ನೀತಿಗಳನ್ನು ರಾಜ್ಯಗಳು ಮರುಮಾತಿಲ್ಲದೆ ಅನುಸರಿಸದಿದ್ದರೆ ಅವುಗಳ ಸಾಲ ಮಾಡುವ ಸ್ವಾತಂತ್ರ್ಯವನ್ನೇ ಕಸಿಯುವಂತ ಷರತ್ತುಗಳನ್ನು ವಿಧಿಸಿದೆ.

ಹೇಗೆಂದು ನೋಡೋಣ:

ಇಂದು ರಾಜ್ಯ ಸರ್ಕಾರಗಳು ಕೋವಿಡ್ ವಿರುದ್ಧ ಹೋರಾಡಲು ಬೇಕಾದ ಹಣಕಾಸು ಸಂಪನ್ಮೂಲಗಳಿಲ್ಲದೆ ಕಂಗೆಟ್ಟಿವೆ. ಜಿಎಸಟಿ ಜಾರಿಯಾಗುವ ಮೊದಲು ರಾಜ್ಯ ಸರ್ಕಾರಗಳು ತಮ್ಮ ವಾರ್ಷಿಕ ಆದಾಯದ ಶೇ. 70ಕ್ಕಿಂತ ಹೆಚ್ಚನ್ನು ವಾಣಿಜ್ಯ ತೆರಿಗೆ, ಮಾರಾಟ ತೆರಿಗೆಯಂಥ ಸ್ವಂತ ತೆರಿಗೆ ಮೂಲಗಳಿಂದ ಪಡೆದುಕೊಳ್ಳುತ್ತಿತ್ತು.

ಆದರೆ 'ಒಂದು ದೇಶ ಮತ್ತು ಒಂದು ತೆರಿಗೆ' ಎಂಬ ಜಿಎಸ್ ಟಿ ಪದ್ಧತಿ ಜಾರಿಯಾದ ಮೇಲೆ ರಾಜ್ಯಗಳಿಗಿದ್ದ ಆ ಸ್ವತಂತ್ರ ಮೂಲಗಳೆಲ್ಲಾ ಜಿಎಸ್ ಟಿ ಯಡಿ ಸೇರಿಹೋಗಿವೆ. ಜಿಎಸ್ಟಿ ವ್ಯವಸ್ಥೆಯಡಿ ರಾಜ್ಯಗಳು ತಮ್ಮ ಹಕ್ಕಿನ  ಪಾಲನ್ನು ಪಡೆದುಕೊಳ್ಳಲು ಕೂಡಾ ಕೇಂದ್ರದ ಮರ್ಜಿಯನ್ನು ಕಾಯಬೇಕಾದ ಸಂದರ್ಭ ಉಂಟಾಗಿದೆ.

ನಮ್ಮ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರ್ಕಾರವೇ ಇದ್ದರೂ ಕೇಂದ್ರದಿಂದ ಕರ್ನಾಟಕಕ್ಕೇ ವಿವಿಧ ಜಿಎಸ್ಟಿ ಸಂಬಂಧಿ ಬಾಬತ್ತುಗಳಲ್ಲಿ ಬರಬೇಕಾದ 15,000 ಕೋಟಿಗೂ ಹೆಚ್ಚಿನ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ಕೊಡದೆ ಇನ್ನೂ ಬಾಕಿ ಉಳಿಸಿಕೊಂಡಿದೆ.

ಹೀಗೆ ಕೋವಿಡ್ ಗೆ ಮೊದಲೇ ಕೇಂದ್ರದ ಅಸಹಕಾರ, ವಚನಭಂಗ ಹಾಗು ನಿರ್ಲಕ್ಷ್ಯಗಳ ಪರಿಣಾಮವಾಗಿ ರಾಜ್ಯಗಳ ಹಣಕಾಸು ಪರಿಸ್ಥಿತಿ ಕಂಗೆಟ್ಟಿತ್ತು. ಈಗ 50 ದಿನಗಳ ಲಾಕ್ದೌನಿನ ಪರಿಣಾಮವಾಗಿ ರಾಜ್ಯಗಳ ಹಣಕಾಸು ಪರಿಸ್ಥಿತಿ ಇನ್ನಷ್ಟು ದಿಕ್ಕೆಟ್ಟಿದೆ.

ಜಿಎಸಟಿ ನಂತರ ರಾಜ್ಯಗಳ ಬಳಿ ಉಳಿದಿರುವ ಸ್ವಂತ ಸಂಪನ್ಮೂಲಗಳೆಂದರೆ ಅಬಕಾರಿ (ಮದ್ಯ ) ತೆರಿಗೆ, ವಿದ್ಯುತ್ತಿನ ಮೇಲಿನ ತೆರಿಗೆ, ಸ್ಟಾಂಪ್ ಮತ್ತು ರಿಜಿಸ್ಟ್ರೇಷನ್ ತೆರಿಗೆ ಹಾಗು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ವಿಧಿಸುವ ತೆರಿಗೆಗಳು ಮಾತ್ರ. ಲಾಕ್ ಡೌನಿನ ಸಂದರ್ಭದಲ್ಲಿ  ಈ ವ್ಯವಹಾರಗಳು ಕೂಡಾ ನಡೆಯುತ್ತಿಲ್ಲವಾದ್ದರಿಂದ ಕರ್ನಾಟಕ ಸರ್ಕಾರದ ತೆರಿಗೆ ಆದಾಯ ತಿಂಗಳಿಗೆ 12,000 ಕೋಟಿ ಇದ್ದದ್ದು ಏಪ್ರಿಲ್ ನಲ್ಲಿ 1,200 ಕೋಟಿಗೆ ಕುಸಿದಿತ್ತು.
 
ಇನ್ನು ಉಳಿದ ಏಕೈಕ ದಾರಿ ಮಾರುಕಟ್ಟೆಯಿಂದ ಸಾಲ ಮಾಡುವುದು. ಆದರೆ 1991ರ ನಂತರ ಭಾರತವು ವಿದೇಶಿ ಹಾಗು ಸ್ವದೇಶಿ ದೊಡ್ಡ ಬಂಡವಾಳಿಗ  ಪರ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿದೆಯಷ್ಟೆ. ಅದರ ಭಾಗವಾಗಿ ಸರ್ಕಾರಗಳ ಆದಾಯ ಹಾಗು ವೆಚ್ಚಗಳು ಸಹ ಜನರ ಹಿತಾಸಕ್ತಿಗಿಂತ ಮಾರುಕಟ್ಟೆಯ ಹಿತಾಸಕ್ತಿಯನ್ನು ಕಾಪಾಡಲು ಪೂರಕವಾಗಿರಬೇಕೆಃದು ಕಡ್ಡಾಯಗೊಳಿಸುವ Fiscal Responsibility And Budget Management Act (FRBM)  ಕಾಯಿದೆ 2003ರಲ್ಲಿ ಜಾರಿಯಾಯಿತು. ಇದರ ಪ್ರಕಾರ ಸರ್ಕಾರಗಳ ವೆಚ್ಚಗಳು ಅದರ ಆದಾಯಗಳನ್ನು ಮೀರಿದರೆ ಈವರೆಗೆ ಮಾಡುತ್ತಿದ್ದಂತೆ ಮಾರುಕಟ್ಟೆಯಿಂದ ಬೇಕಿರುವಷ್ಟು ಸಾಲವನ್ನು ಎತ್ತುವಂತಿಲ್ಲ. 

ಏಕೆಂದರೆ ಆ ಸಾಲದ ಮೂಲಗಳು (ಸರ್ಕಾರಿ ಬ್ಯಾಂಕುಗಳು, ವಿಮಾ ಕಂಪನಿಗಳು!!) ಸರ್ಕಾರಕ್ಕೆ ಹೆಚ್ಚಿನ ಸಾಲವನ್ನು ಕೊಟ್ಟುಬಿಟ್ಟಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಅಗ್ಗದ ದರದಲ್ಲಿ  ಸಾಲ ಸಿಗದಂತಾಗುತ್ತದಲ್ಲ, ಅದಕ್ಕೆ.

ಸರ್ಕಾರದ ಆದಾಯ ಮತ್ತು ವೆಚ್ಚಗಳಲ್ಲಿನ ವ್ಯತ್ಯಾಸವನ್ನು ವಿತ್ತೀಯ ಕೊರತೆ (Fiscal Deficit) ಎಂದು ಕರೆಯಲಾಗುತ್ತದೆ. ಹಾಗೂ ಈ ಕೊರತೆಯು  ಜಿಡಿಪಿ ಯ ಶೇ.3ಕ್ಕಿಂತ ಜಾಸ್ತಿಯಾಗಬಾರದು ಎಂಬ ನಿಬಂಧನೆಯನ್ನು ಈ ಕಾಯಿದೆ ವಿಧಿಸುತ್ತದೆ. ಇದನ್ನೇ ವಿತ್ತೀಯ ಶಿಸ್ತು (Fiscal Discipline) ಎಂದು ಕರೆಯಲಾಗುತ್ತದೆ!

ಉದಾಹರಣೆಗೆ 2020-21ರ ಸಾಲಿನಲ್ಲಿ ಕೇಂದ್ರ ಸರ್ಕಾರದ ತೆರಿಗೆ ಹಾಗೂ ತೆರಿಗೇಯೇತರ ಆದಾಯ 24 ಲಕ್ಷ ಕೋಟಿ ರೂ ಆಗಬಹುದೆಂಬ ಅಂದಾಜಿತ್ತು. ಹಾಗೂ  ವೆಚ್ಚ 31ಲಕ್ಷ ಕೋಟಿ ಎಂದು ಅಂದಾಜಿಸಲಾಗಿತ್ತು. ಇದರಿಂದಾಗಿ 7 ಲಕ್ಷ ಕೋಟಿ ಕೊರತೆ ಬೀಳುತ್ತಿತ್ತು. ಅದನ್ನು ಸಾಲದ ಮೂಲಕ ಭರಿಸುವ ಯೋಜನೆಯಿತ್ತು. ನಮ್ಮ ಜಿಡಿಪಿ 203 ಲಕ್ಷ ಕೋಟಿಯಾದ್ದರಿಂದ ಕೊರತೆ ಬಿದ್ದಿರುವ 7 ಲಕ್ಷ ಕೋಟಿಯು ಜಿಡಿಪಿಯ ಶೇ.3ರ ಮಿತಿಯೊಳಗೆ ಇರುವುದರಿಂದ ಸರ್ಕಾರವು ಕಾರ್ಪೊರೇಟ್ ಕಂಪನಿಗಳು ವಿಧಿಸುತ್ತಿದ್ದ ವಿತ್ತೀಯ ಶಿಸ್ತನ್ನು ಕಟಿಬದ್ಧವಾಗಿಯೇ ಪಾಲಿಸಿದಂತಾಗಿತ್ತು.  

ಆದರೆ ಕೋವಿಡ್ ದಾಳಿ ಹಾಗೂ ಲಾಕ್‌ಡೌನಿನಿಂದಾಗಿ ಈಗ ಸರ್ಕಾರದ ತೆರಿಗೆ ಆದಾಯ 20 ಲಕ್ಷ ಕೋಟಿಯಾದರೆ ಹೆಚ್ಚು. ಆದರೆ ಅನಿರೀಕ್ಷಿತ ಕೋವಿಡ್ ವೆಚ್ಚಗಳಿಂದಾಗಿ ಸರ್ಕಾರದ ಖರ್ಚು ಮಾತ್ರ 35ಲಕ್ಷ ಕೋಟಿಗೂ ಹೆಚ್ಚಾಗಬಹುದು ಎಂದಿಟ್ಟುಕೊಳ್ಳೋಣ. ಆಗ ಆದಾಯಕ್ಕಿಂತ 15 ಲಕ್ಷ ಕೋಟಿ ಹೆಚ್ಚು ವೆಚ್ಚ ಮಾಡಬೇಕಿರುತ್ತದೆ. ಅಂದರೆ 15 ಲಕ್ಷ ಕೋಟಿ ಹೆಚ್ಚು ಸಾಲವನ್ನು ಮಾಡಬೇಕಾಗುತ್ತದೆ. 

ಆದರೆ 15ಲಕ್ಷ ಕೋಟಿ ಎಂದರೆ ನಮ್ಮ ಜಿಡಿಪಿಯ ಶೇ.6 ರಷ್ಟು ಅಂದರೆ FRBM ಕಾಯಿದೆ ವಿಧಿಸಿರುವ ವಿತ್ತೀಯ ಶಿಸ್ತಿನ ಮಿತಿಯಾದ ಶೇ.3ಕ್ಕಿಂತ ಎರಡು ಪಟ್ಟು.  ಇದು ಶಿಸ್ತು ಉಲ್ಲಂಘನೆಯಾಗುವುದಿಲ್ಲವೇ? ಕಾರ್ಪೊರೇಟ್ ಕಂಪನಿಗಳು ಕೋಪಿಸಿಕೊಂಡು ದೇಶ ಬಿಟ್ಟು ಹೋಗುವುದಿಲ್ಲವೇ?

ಆದರೆ ಇಂದು ಜಗತ್ತು ಎದುರಿಸುತ್ತಿರುವ ಅಸಾಧಾರಣಾ ಕೋವಿಡ್ ಸಂಕಷ್ಟಗಳ ಸಂದರ್ಭವನ್ನು ಎದುರಿಸಲು ಎಲ್ಲಾ ದೇಶಗಳು ವಿತ್ತೀಯ ಶಿಸ್ತಿನ ಮಿತಿಯನ್ನು ಸಡಿಲಗೊಳಿಸಿವೆ. ಹೀಗಾಗಿಯೇ  RBI ಸಹ ಸಾಲ ಮಾಡಲು ಕೊಟ್ಟಿದ ಸೌಲಭ್ಯವನ್ನು 7ಲಕ್ಷ ಕೋಟಿಯಿಂದ 12 ಲಕ್ಷ ಕೋಟಿಗೆ ಏರಿಸಿದೆ.

ಇದೇ ಪರಿಸ್ಥಿತಿಯನ್ನು ಇಂದು ಎಲ್ಲಾ ರಾಜ್ಯಗಳೂ ಎದುರಿಸುತ್ತಿವೆ. ಆದರೆ ಕೇಂದ್ರಕ್ಕಿರುವ ಇತರ ಬಗೆಯ ಸಂಪನ್ಮೂಲಗಳು ರಾಜ್ಯದ ಬಳಿ ಇಲ್ಲ. ರಾಜ್ಯದ ಜಿಎಸ್‌ಟಿ ಪಾಲು ಹಾಗೂ ಪರಿಹಾರದ ಬಾಕಿಯನ್ನೂ ಕೇಂದ್ರ ಕೊಡುತ್ತಿಲ್ಲ. ಈ ಸಂದರ್ಭದಲ್ಲಿ ರಾಜ್ಯಗಳು ಸಹ ತಮಗೆ ವಿಧಿಸಲಾಗಿರುವ ಶೇ. 3ರ ವಿತ್ತೀಯ ಶಿಸ್ತನ್ನು ಸಡಿಲಿಸಿ ತಮ್ಮ ತಮ್ಮ ರಾಜ್ಯದ ಜಿಡಿಪಿಗಳ ಶೇ.5ರಷ್ಟು ಸಾಲವನ್ನು ಮಾಡಲು ಅಂದರೆ ಹೆಚ್ಚುವರಿಯಾಗಿ ತಮ್ಮ ರಾಜ್ಯಗಳ ಜಿಡಿಪಿಯ ಶೇ.2ರಷ್ಟು ಸಾಲವನ್ನು ಮಾರುಕಟ್ಟೆಯಿಂದ ಎತ್ತಲು ಅವಕಾಶ ಕೊಡಬೇಕೆಂದು ಕೇಂದ್ರಕ್ಕೆ ಸತತವಾಗಿ ಮನವಿ ಸಲ್ಲಿಸುತ್ತಿದ್ದವು.

ವಾಸ್ತವವೆಂದರೆ, ಈ ವಿತ್ತೀಯ ಕೊರತೆ ನೀಗಿಸಿಕೊಳ್ಳಲು ರಾಜ್ಯಗಳು ಮಾಡುವ ಸಾಲ ಮತ್ತು ಅದಕ್ಕೆ ತೆರುವ ಬಡ್ಡಿಗಳಲ್ಲಿ ಕೇಂದ್ರ ಒಂದು ನಯಾಪೈಸೆಯ ಜವಾಬ್ದಾರಿಯನ್ನೂ ಹೊರುವುದಿಲ್ಲ. ರಾಜ್ಯಗಳು ತಾವೇ ಸಾಲ ಮಾಡಿ ತಾವೇ ಅದನ್ನೂ ತೀರಿಸಬೇಕು. ಆದರೂ FRBM ಕಾಯಿದೆ ಪ್ರಕಾರ ರಾಜ್ಯಗಳು ತನ್ನ ಸಾಲ ತಾನು ಮಾಡಿಕೊಳ್ಳಲೂ ಕೂಡಾ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು !!  

ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ಪ್ಯಾಕೇಜಿನ ಘೋಷಣೆಯ ಅಂತಿಮ ಚರಣದಲ್ಲಿ ರಾಜ್ಯಗಳು ಶೇ.2ರಷ್ಟು ಹೆಚ್ಚುವರಿಯಾಗಿ ಸಾಲ ಮಾಡಿಕೊಳ್ಳಲು ಅವಕಾಶ ಕೊಟ್ಟಿದೆ.

ಹೊಳೆ ನೀರಿಗೆ ದೊಣ್ಣೆ ನಾಯಕ ಅಪ್ಪಣೆ 

ಆದರೆ ಆ ಸಾಲಕ್ಕೆ ಅನುಮತಿ ಕೊಡಬೇಕೆಂದರೆ ರಾಜ್ಯ ಸರ್ಕಾರ ಗಳು ಕೇಂದ್ರ ಸರ್ಕಾರದ ನಾಲ್ಕು ಶರತ್ತುಗಳನ್ನು ಪಾಲಿಸಬೇಕೆಂದು ಕೇಂದ್ರ ಸರ್ಕಾರ ಶರತ್ತು ವಿಧಿಸಿದೆ...ಅದರ ಪ್ರಕಾರ ಕೇಂದ್ರವು ಅನುಮತಿಸಿರುವ ಹೆಚ್ಚುವರಿ ಶೇ.2ರಷ್ಟು ಸಾಲದ ಮೊದಲ ಶೇ.0.5ರಷ್ಟು ಭಾಗದ ಸಾಲವನ್ನು ಪಡೆದುಕೊಳ್ಳಲು ಮಾತ್ರ ಯಾವುದೇ ಶರತ್ತಿರುವುದಿಲ್ಲ. ಆದರೆ ಆ ನಂತರ ಕೇಂದ್ರ ವಿಧಿಸಿರುವ ನಾಲ್ಕು ಶರತ್ತುಗಳಲ್ಲಿ ಮೊದಲ ಶರತನ್ನು ಪಾಲಿಸಿದಲ್ಲಿ ಮಾತ್ರ ಮುಂದಿನ ಶೇ.0.25ರಷ್ಟು ಸಾಲಕ್ಕೆ ಅನುಮತಿ ನೀಡಲಾಗುತ್ತದೆ. ಎರಡನೇ ಶರತ್ತನು ಪಾಲಿಸಿದಲ್ಲಿ ತದ ನಂತರದ ಶೇ.0.25ರಷ್ಟು ಸಾಲವನ್ನು ಎತ್ತಲು ಅವಕಾಶ ನೀಡಲಾಗುತ್ತದೆ. ಹಾಗೂ ನಾಲ್ಕು ಶರತ್ತುಗಳಲ್ಲಿ ಮೂರು ಶರತ್ತುಗಳನ್ನು ಒಪ್ಪಿಕೊಂಡಲ್ಲಿ ಮಾತ್ರ ನಂತರದ ಶೇ.0.5ರಷ್ಟು ಸಾಲವನ್ನು ಎತ್ತಲು ರಾಜ್ಯಗಳಿಗೆ ಅವಕಾಶ ಸಿಗುತ್ತದೆ.

ಇದು ಯಾವ ಸೀಮೆ ಫೆಡರಲ್ ಪದ್ದತಿ ?

ರಾಜ್ಯ ಸರ್ಕಾರಗಳೂ ಸಹ ಆಯಾ ರಾಜ್ಯಗಳ ಜನರಿಂದ ಆಯ್ಕೆಯಾದ ಕೇಂದ್ರಕ್ಕೆ ಸರಿಸಮವಾದ ಸ್ಥಾಯಿ ಹಾಗೂ ಅಧಿಕಾರವಿರುವ ಸಾಂವಿಧಾನಿಕ ಸಂಸ್ಥೆಗಳಾಗಿವೆ. ಅವು ಕೇಂದ್ರಕ್ಕೆ ಅಧೀನವಾದ ಘಟಕಗಳಲ್ಲ. ಹಾಗೂ ನಮ್ಮ ಸಂವಿಧಾನದ ಏಳನೇ ಶೆಡ್ಯೂಲಿನಲ್ಲಿ ಭಾರತ ಗಣರಾಜ್ಯದ ಪರಮಾಧಿಕಾರವು ಕೇಂದ್ರ ಹಾಗೂ ರಾಜ್ಯಗಳ ನಡುವೆ (Shared Sovereignty)  ಸಮಹಂಚಿಕೆಯಾಗಿದೆ. ಅದರ ಭಾಗವಾಗಿ ರಾಜ್ಯಗಳಿಗೆ ತನ್ನದೇ ಆದ ತೆರಿಗೆಯನ್ನು ವಿಧಿಸಬಹುದಾದ ಆರ್ಥಿಕ ಪರಮಾಧಿಕಾರವೂ ಕೂಡಾ ಹಂಚಿಕೆಯಾಗಿದೆ.

ಅದರ ಪ್ರಕಾರ ಕೇಂದ್ರದ ಪಟ್ಟಿಯ ವ್ಯಾಪ್ತಿಯಲ್ಲಿ ಬರುವ ಪಟ್ಟಿಗಳಲ್ಲಿ ಕೇಂದ್ರ ಸರ್ಕಾರದ್ದೇ ಪರಮಾಧಿಕಾರವಾಗಿದ್ದರೆ, ಸಮವರ್ತಿ ಪಟ್ಟಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಮಾನ ಜವಾಬ್ದಾರಿ ಹೊಂದಿರುತ್ತವೆ. ಹಾಗೆಯೇ ರಾಜ್ಯಗಳ ಪಟ್ಟಿಯಲ್ಲಿ ಬರುವ ಬಾಬತ್ತುಗಳಲ್ಲಿ ತನ್ನ ರಾಜ್ಯಗಳಿಗೆ ಅಗತ್ಯವಿರುವ ಆರ್ಥಿಕ ನೀತಿಯನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳುವ ಸಾಂವಿಧಾನಿಕ ಅಧಿಕಾರವನ್ನು ರಾಜ್ಯ ಸರ್ಕಾರಗಳು ಪಡೆದುಕೊಂಡಿದೆ. 

ರಾಜ್ಯಗಳ ಪರಮಾಧಿಕಾರಗಳಲ್ಲಿ ಮಧ್ಯಪ್ರವೇಶ ಮಾಡುವ ಅಧಿಕಾರವು ಕೇಂದ್ರಕ್ಕಿಲ್ಲ. ಮೋದಿ ಸರ್ಕಾರ ಇವೆಲ್ಲವನ್ನೂ ಉಲ್ಲಂಘಿಸಿ ರಾಜ್ಯಗಳನ್ನು ಮುನಿಸಿಪಾಲೀಟಿಗಳನ್ನಾಗಿ ಮಾಡುವ ಕಡೆ ಹೊರಟಿದೆ. ಹೆಚ್ಚುವರಿ ಸಾಲ ಎತ್ತಿಕೊಳ್ಳಲು ಕೇಂದ್ರವು ವಿಧಿಸಿರುವ ಶರತ್ತುಗಳನ್ನು ಗಮನಿಸಿದರೆ ಮೋದಿ ಸರ್ಕಾರದ ಸರ್ವಾಧಿಕಾರ ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗುತ್ತದೆ.

ಕೇಂದ್ರ ಹಾಕಿರುವ ನಾಲ್ಕು ಕಾರ್ಪೊರೇಟ್ ಪರ ಶರತ್ತುಗಳು 

1.ಖಾಸಗಿ ಉದ್ಯಮಗಳು ಸಲೀಸಾಗಿ ವ್ಯವಹಾರ ನಡೆಸಿಕೊಳ್ಳುವ ವಾತಾವರಣ ನಿರ್ಮಿಸುವುದು.

2. ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಿಸುವುದು.

3. ಸ್ಥಳೀಯ ಸಂಸ್ಥೆಗಳ ಆದಾಯವನ್ನು ಹೆಚ್ಚಿಸುವ ಕ್ರಮಗಳು.

4. ಹಾಗೂ ಒಂದು ದೇಶ ಒಂದು ರೇಷನ್ ಕಾರ್ಡ್ ವ್ಯವಸ್ಥೆ ತ್ವರಿತವಾಗಿ ಜಾರಿಗೊಳಿಸುವುದು.

ಮೇಲ್ನೋಟಕ್ಕೆ ಕಾಣುವಂತೆ ಈ ಶರತ್ತುಗಳೆಲ್ಲವೂ ರಾಜ್ಯದ ಪರಮಾಧಿಕಾರಕ್ಕೆ ಒಳಪಡುವ ವಿಷಯಗಳು. ಹೀಗಿರುವಾಗ ಆ ವಿಷಯಗಳಲ್ಲಿ  ಕೇಂದ್ರದ  ಬಿಜೆಪಿ ಸರ್ಕಾರವು ಅನುಸರಿಸುತ್ತಿರುವ ನೀತಿಗಳನ್ನೇ ಉಳಿದ ರಾಜ್ಯಗಳು ಅನುಸರಿಸಬೇಕೆಂದು ಕಡ್ಡಾಯ ಮಾಡುವ ಶರತ್ತುಗಳನ್ನು ಹಾಕುವುದು ಸಂವಿಧಾನಕ್ಕೆ ವಿರೋಧಿಯಾದದ್ದು. ಹೀಗಾಗಿ ಕೋವಿಡ್ ಸಂದರ್ಭವನ್ನೂ ಬಿಜೆಪಿ ಸರ್ಕಾರ ತನ್ನ ಸಂವಿಧಾನ ವಿರೋಧಿ ಸರ್ವಾಧಿಕಾರಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದನ್ನು ದೇಶದ ಜನತೆ ಖಂಡತುಂಡವಾಗಿ ವಿರೋಧಿಸಬೇಕಿದೆ.

ಆದರೆ ಪ್ರಾದೇಶಿಕ ಮತ್ತು ವಿರೋಧ ಪಕ್ಷಗಳಿಗೆ ಫೆಡರಲ್ ವ್ಯವಸ್ಥೆ ಬೇಕಿದೆಯೇ?

ಮೋದಿ ಸರ್ಕಾರದ ಈ ಶರತ್ತುಗಳನ್ನು ತೆಲಂಗಾಣದಂಥ ಬಿಜೆಪಿಯೇತರ ರಾಜ್ಯ ಸರ್ಕಾರಗಳೇನೋ ವಿರೋಧಿಸುತ್ತಿವೆ. ಆದರೆ ಅವುಗಳ ವಿರೋಧ ನೈಜ  ಫೆಡರಲ್ ವ್ಯವಸ್ಥೆಯ ತಾತ್ವಿಕತೆಯಿಂದ ಹುಟ್ಟಿದೆಯೇ? ಹಾಗೂ ಕೇಂದ್ರ ಸರ್ಕಾರದ ಶರತ್ತು ಹಾಕುವುದನ್ನು ಮಾತ್ರ ವಿರೋಧಿಸುತ್ತಿರುವ ವಿರೋಧ ಪಕ್ಷಗಳು ಅಥವಾ ಪ್ರಾದೇಶಿಕ ಪಕ್ಷಗಳು ನಿರ್ದಿಷ್ಟವಾಗಿ ಆ ನಾಲ್ಕು ಶರತ್ತುಗಳನ್ನೂ ವಿರೋಧಿಸಬಲ್ಲರೇ?

ಇದು ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಫೆಡರಲ್ ರಾಜಕೀಯ ಮಾಡಬಯಸುವವರು ಕೇಳಲೇಬೇಕಾದ ಪ್ರಶ್ನೆಯಾಗಿದೆ.

ವಾಸ್ತವವಾಗಿ 1990ರ ದಶಕದ ತನಕವೂ ಆಡಳಿತರೂಢ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ವಿರುದ್ಧ ನಡೆಸುತ್ತಿದ್ದ ದಾಳಿಯನ್ನು ದೊಡ್ಡ ರೀತಿಯಲ್ಲಿ ಪ್ರತಿಭಟಿಸುತ್ತಾ ಹಲವಾರು ಪ್ರಾದೇಶಿಕ ಪಕ್ಷಗಳೂ ಹುಟ್ಟಿಕೊಂಡವು. ಹಲವು ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೂ ಬಂದವು.

1990ರ ದಶಕದಲ್ಲಿ ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ಮಾರುಕಟ್ಟೆ ನೀತಿಗಳು ಇಡೀ ದೇಶದ ಆರ್ಥಿಕತೆಯನ್ನು ಬದಲಾಯಿಸುತ್ತಿದ್ದಂತೆ ಇಡೀ ದೇಶವೇ ಒಂದು ಮಾರುಕಟ್ಟೆಯಾಗತೊಡಗಿತು. ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದೊಡ್ಡ ಬಂಡವಾಳಿಗರ ರಾಷ್ಟ್ರೀಯ ಹಾಗೂ ಸ್ಥಳೀಯ ಸಿಇಒ ಗಳಾಗತೊಡಗಿದವು. ಹೀಗಾಗಿ ಆರ್ಥಿಕ ನೀತಿಗಳಿಗೆ ಸಂಬಂಧಪಟ್ಟಂತೆ ರಾಜ್ಯ ಹಾಗೂ ಕೇಂದ್ರಗಳಲ್ಲಿ ಯಾವುದೇ ಬಣ್ಣದ ಪಕ್ಷಗಳಿದ್ದರೂ ಯಾವುದೇ ದೊಡ್ಡ ವ್ಯತ್ಯಾಸಗಳಿಲ್ಲದಂತಾಗತೊಡಗಿತು. 

ಎಲ್ಲಾ ರಾಜಕೀಯ ಪಕ್ಷಗಳೂ ಒಟ್ಟಾಗಿ ಆಯಾ ರಾಜ್ಯಗಳ ಜನರ ಕಲ್ಯಾಣಕ್ಕಿಂತ ಕಾರ್ಪೊರೇಟ್ ಕಲ್ಯಾಣಕ್ಕಾಗಿ  ದುಡಿಯತೊಡಗಿದವು. ಜನಹಿತದ ಸಾರ ಕಳೆದುಕೊಂಡ ಅವುಗಳ ಫೆಡರಲ್ ರಾಜಕೀಯ ಹೆಚ್ಚೆಂದರೆ ಪ್ರಾದೇಶಿಕ ಅವಕಾಶವಾದವಾಯಿತು. ಹಾಗೆ ನೋಡಿದರೆ ಮೋದಿ ಸರ್ಕಾರ ಜಾರಿಗೆ ತಂದ ಜಿಎಸ್‌ಟಿ ವ್ಯವಸ್ಥೆ ಸಾರಾಂಶದಲ್ಲಿ ಆರ್ಥಿಕ ಫೆಡರಲಿಸಂಗೆ ಮಾರಣಾಂತಿಕ ಪೆಟ್ಟುಕೊಟ್ಟ ಅತಿದೊಡ್ಡ ದಾಳಿಯಾಗಿತ್ತು. ಆದರೂ ಎಲ್ಲಾ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳೂ ಜಿಎಸ್‌ಟಿಗೆ ಬಹುಪರಾಕ್ ಹೇಳಿದವು.

ಕಾರಣ? ಸ್ಪಷ್ಟ.

ಜಿಎಸ್‌ಟಿ ವ್ಯವಸ್ಥೆ ರಾಜ್ಯಗಳಿಗೆ ಸಂವಿಧಾನಿಕವಾಗಿ ನೀಡಲಾದ ಸ್ವತಂತ್ರ ತೆರಿಗೆ ನೀತಿ ರೂಪಿಸುವ ಪರಮಾಧಿಕಾರವನ್ನು ಹರಣ ಮಾಡಿದರೂ ಇಡೀ ಆರ್ಥಿಕತೆಯನ್ನು ಕಾರ್ಪೊರೇಟೀಕರಿಸುತ್ತದೆ. ಮತ್ತು ಸಾಮಾನ್ಯ ಜನರು ಕಟ್ಟುವ ಪರೋಕ್ಷ ತೆರಿಗೆಯ ಪಾಲನ್ನು ಹೆಚ್ಚಿಸುತ್ತದೆ. ಮತ್ತು ಶ್ರಿಮಂತರು ಕಟ್ಟುವ ನೇರ ತೆರಿಗೆಯ ಪಾಲನ್ನು ಕಡಿಮೆ ಮಾಡಿ ಕಾರ್ಪೊರೇಟ್ ಹಿತಾಸಕ್ತಿ ರಕ್ಷಿಸುತ್ತದೆ. ಎಲ್ಲಾ ಪಕ್ಷ ಗಳು ಜಿಎಸ್ ಟೀಯನ್ನು ಬೆಂಬಲಿಸಿದ್ದರ ಹಿಂದಿನ ಕಾರಣ ಇದೇ.....ಕಾರ್ಪೊರೇಟ್ ಹಿತಾಸಕ್ತಿ....

ಹಾಗೆಯೇ ಮೋದಿ ಸರ್ಕಾರ ಫೆಡರಲ್ ತತ್ವವನ್ನೇ ಕೊಂದು ಕಾಶ್ಮೀರದ ರಾಜ್ಯ ಸ್ಥಾನವನ್ನು ಕಿತ್ತು ವಿಭಜೀಕರಿಸಿದ ನೀತಿಗೆ ಬಹುಪಾಲು ಪ್ರಾದೇಶಿಕ ಪಕ್ಷಗಳು ಹೃತ್ಪೂರ್ವಕವಾಗಿ ಸಹಕರಿಸಿದ್ದೂ ಕೂಡಾ ವಿಪರ್ಯಾಸವೇನಲ್ಲ. ಈಗಲೂ, ರಾಜ್ಯಗಳು ಹೆಚ್ಚುವರಿ ಸಾಲ ಮಾಡಲು ಕೇಂದ್ರ ಹಾಕಿರುವ ಶರತ್ತುಗಳನ್ನು ವಿರೋಧಿಸುವುದರಲ್ಲಿ ಮುಂಚೂಣಿಯಲ್ಲಿರುವ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು, ವಾಸ್ತವದಲ್ಲಿ ಆ ನಿರ್ದಿಷ್ಟ ಶರತ್ತುಗಳನ್ನೇನೂ ವಿರೋಧಿಸುತ್ತಿಲ್ಲ. ಏಕೆಂದರೆ ಅವರೇ ಹೇಳಿದಂತೆ ಈಗಾಗಲೇ ತೆಲಂಗಾಣದಲ್ಲಿ ಅವೆಲ್ಲವನ್ನೂ ಅವರು ಜಾರಿಗೆ ತಂದು ಆ ಸುಧಾರಣೆಗಳ ಚಾಂಪಿಯನ್ ಆಗಿಬಿಟ್ಟಿದ್ದಾರೆ!

ಅವರು ಮಾತ್ರವಲ್ಲ.  ಯಾವ ಪ್ರಾದೇಶಿಕ ಪಕ್ಷಗಳೂ ಅಥವಾ ರಾಜ್ಯ ಸರ್ಕಾರಗಳೂ ಸಹ ಆ ನಿರ್ದಿಷ್ಟ ಸುಧಾರಣೆಗಳನ್ನು ವಿರೋಧಿಸುವುದಿಲ್ಲ. ಏಕೆಂದರೆ ಕಾರ್ಪೊರೇಟ್ ಆರ್ಥಿಕ ಸರ್ವಾಧಿಕಾರ ಹೆಚ್ಚೂ ಕಡಿಮೆ ಭಾರತದ ರಾಜಕಾರಣದಲ್ಲಿ ಮಾನ್ಯವಾಗಿಬಿಟ್ಟಿದೆ. ಆದರೆ ಅದಕ್ಕೆ ಪೂರಕವಾಗಿ ಬರುವ ಕೇಂದ್ರದ ಕಚ್ಚಾ ಆಡಳಿತಾತ್ಮಕ ಸರ್ವಾಧಿಕಾರಕ್ಕೆ ಮಾತ್ರ ತಾತ್ಕಾಲಿಕ ವಿರೋಧ ವ್ಯಕ್ತವಾಗುತ್ತದೆ. ಹೀಗಾಗಿ ಒಂದು ಪುರೋಗಾಮಿ ಆಶಯಗಳುಳ್ಳ ಫೆಡರಲ್ ರಾಜಕೀಯ ಕೇವಲ ಆಡಳಿತಾತ್ಮಕ ಅರೇಂಜ್‌ಮೆಂಟುಗಳಿಗೆ ಸೀಮಿತವಾದರೆ ಫೆಡರಲ್ ತತ್ವಕ್ಕೆ ಯಾವುದೇ ಪುರೋಗಾಮಿ ಪಾತ್ರವಿರುವುದಿಲ್ಲ. ಅದು ಹೆಚ್ಚೆಂದರೆ ಕಾರ್ಪೊರೇಟ್ ಲೂಟಿಯಲ್ಲಿ ಸಮಪಾಲನ್ನು ಕೇಳುವ ಅವಕಾಶವಾದಿ ರಾಜಕೀಯ ವಾಗುತ್ತದೆ. ಬಹುಪಾಲು ಪ್ರಾದೇಶಿಕ ಪಕ್ಷಗಳು ಇಂದು ಮಾಡುತ್ತಿರುವುದು ಅದನ್ನೇ.

ಫೆಡರಲ್ ರಾಜಕೀಯವು ಕೇಂದ್ರ - ರಾಜ್ಯ ದ ಆಡಳಿತಾತ್ಮಕ ಸಂಬಂಧಗಳ ಪ್ರಶ್ನೆಯನ್ನು ದಾಟಿ ಫೆಡರಲಿಸಂನ ಅಂತರಾಳದ ಪ್ರಶ್ನೆಗಳನ್ನು ಕೇಳಬೇಕು. ಫೆಡರಲ್ ರಾಜಕೀಯವು ಸಂವಿಧಾನದಲ್ಲಿ ಹೇಳಿರುವ ಜನರ ರಾಜಕೀಯ ಹಾಗೂ ಆರ್ಥಿಕ ಪರಮಾಧಿಕಾರದ ಪ್ರಶ್ನೆಯಾಗಿ ರೂಪಾಂತರಗೊಳ್ಳಬೇಕು. ಆ ಮೂಲಕ ಫೆಡರಲ್ ವ್ಯವಸ್ಥೆಯ ಭಾಗವಾಗಿಯೇ ದೇಶವನ್ನೆಲ್ಲಾ ಆವರಿಸಿಕೊಳ್ಳುತ್ತಿರುವ ಕಾರ್ಪೊರೇಟ್-ಬ್ರಾಹ್ಮಣಶಾಹಿ- ಸರ್ವಾಧಿಕಾರವನ್ನೂ ಪ್ರಶ್ನಿಸುವಂತಾದಲ್ಲಿ ಮಾತ್ರ ಫೆಡರಲ್ ರಾಜಕೀಯಕ್ಕೆ ಪುರೋಗಾಮಿ ಪಾತ್ರ ಒದಗುತ್ತದೆ.

ನನಗೆ ತಿಳಿದಿರುವಂತೆ ಕರ್ನಾಟಕದ ಇತೀಚಿನ ಇತಿಹಾಸದಲ್ಲಿ ಕರ್ನಾಟಕ ವಿಮೋಚನಾ ರಂಗವು ಅಂಥ ಗ್ರಹಿಕೆಯನ್ನು ಹೊಂದಿತ್ತು. ಹಾಗೂ ತನ್ನ ಹತ್ತು ಹಲವು ಹೋರಾಟಗಳ ಮೂಲಕ  ಅದನ್ನು ಒಂದು ಪರಿಣಾಮಕಾರಿ ನೆರಟೀವ್ ಆಗಿಯೂ ನಾಡಿನಲ್ಲಿ ಕಟ್ಟಿಕೊಟ್ಟಿತ್ತು. ಆದರೆ ಆ ವಿದ್ಯಮಾನವು ಕೆಲವು ಸಂಘಟನಾತ್ಮಕ ಪ್ರಮಾದಗಳಿಂದಾಗಿ ಗತಿಸಿಹೋಯಿತು. 

ಆದರೆ ಅದರ ರಾಜಕೀಯ ದೃಷ್ಟಿಕೋನ, ಹಾಗೂ ಕಾರ್ಯಕ್ರಮಗಳಲ್ಲಿ ಹಲವು ಸಕಾರಾತ್ಮಕ ಪಾಠಗಳಿವೆ ಎಂದು ನನಗನ್ನಿಸುತ್ತದೆ

- ಶಿವಸುಂದರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)