varthabharthi

ಬೆಂಗಳೂರು

ಕೊರೋನ ಸೋಂಕಿಗೆ ಜಾತಿ, ಧರ್ಮವಿಲ್ಲ: ಡಿಸಿಎಂ ಡಾ.ಅಶ್ವಥ್ ನಾರಾಯಣ

ವಾರ್ತಾ ಭಾರತಿ : 20 May, 2020

ಬೆಂಗಳೂರು, ಮೇ 20: ಕೊರೋನ ಸೋಂಕಿಗೆ ಯಾವುದೇ ಜಾತಿ, ಧರ್ಮವಿಲ್ಲ. ಇದು ಎಲ್ಲರನ್ನು ಭಾದಿಸುವ ರೋಗವಾಗಿದ್ದು, ಯಾರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.

ಬುಧವಾರ ಮಸ್ಜಿದ್-ಎ-ತಾಹಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ನೇತೃತ್ವದಲ್ಲಿ ಮಂಡಳಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ಮನವಿ ಸ್ವೀಕರಿಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೊರೋನ ಸೋಂಕಿನ ಹೆಸರಿನಲ್ಲಿ ಯಾವುದೋ ಒಂದು ಸಮುದಾಯವನ್ನು ಗುರಿಯಾಗಿಸುವ ಉದ್ದೇಶ ತಪ್ಪು. ಈ ಸೋಂಕಿನ ವಿರುದ್ಧ ಎಲ್ಲರೂ ಜೊತೆಗೂಡಿ ಹೋರಾಟ ಮಾಡಬೇಕಾಗಿದೆ. ಅಷ್ಟೇ ಅಲ್ಲದೆ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೋಂಕಿನಿಂದ ನಾವು ದೂರ ಸರಿಯಬೇಕು ಎಂದರು.

ಮಂಡಳಿಗೆ ನೆರವು: ನಗರದ ಮತ್ತೀಕೆರೆಯ ಮಸ್ಜಿದ್-ಎ-ತಾಹಾ ಆಡಳಿತ ಮಂಡಳಿಯ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರಕಾರ ಸಂಪೂರ್ಣ ನೆರವು ನೀಡಲಿದೆ. ಈ ಆಡಳಿತ ಮಂಡಳಿ ಅಧ್ಯಕ್ಷತೆಯಲ್ಲಿ ಸಮುದಾಯದ ಹಲವರಿಗೆ ನೆರವು ಒದಗಿಸಲಾಗಿದ್ದು, ಶೈಕ್ಷಣಿಕ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ನೂತನ ಕಟ್ಟಡದ ನಿರ್ಮಾಣ ಹಂತದಲ್ಲಿದ್ದು, ಬಡ ವಿದ್ಯಾರ್ಥಿಗಳಿಗಾಗಿ ವಸತಿ ಗೃಹ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬೇಕಾದ ಅಗತ್ಯ ನೆರವು ನೀಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದ ಅವರು, ಸೌಹಾರ್ದ ವಾತಾವರಣ ನಿರ್ಮಿಸಲು ಮತ್ತು ಅರಿವು ಮೂಡಿಸುವ ಕಾಯಕದಲ್ಲಿ ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ನಿರತವಾಗಿದೆ ಎಂದು ಅವರು ತಿಳಿಸಿದರು.

ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ಇಲ್ಲಿನ ವಡೇರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಸ್ಲಿಂ ಜನಾಂಗದ ಖಬರಸ್ತಾನ್‍ಗಾಗಿ 1.5 ಎಕರೆ ಭೂಮಿ ಅನ್ನು ಮೀಸಲಿಟ್ಟಿದ್ದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಚ್.ವಿಶ್ವನಾಥ್ ಹಾಗೂ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು. ಈ ಕಾರಣಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಸ್ಜಿದ್-ಎ-ತಾಹಾ ಅಧ್ಯಕ್ಷ ಹಾರೂನ್ ರಶೀದ್, ಪ್ರಧಾನ ಕಾರ್ಯದರ್ಶಿ ಷಹಜಹಾನ್, ಹಾಜಿ ನಜೀರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)