varthabharthi

ಬೆಂಗಳೂರು

ಕೇಂದ್ರದಿಂದ ದೇಶವನ್ನು ಮತ್ತೆ ಈಸ್ಟ್ ಇಂಡಿಯಾ ಕಂಪೆನಿಗೆ ಮಾರಾಟ: ಕೋಡಿಹಳ್ಳಿ ಚಂದ್ರಶೇಖರ್

ವಾರ್ತಾ ಭಾರತಿ : 20 May, 2020

ಬೆಂಗಳೂರು, ಮೇ 20: ಸ್ವದೇಶಿ ಬಳಕೆ ಎಂದು ಬಾಯಿ ಮಾತಿನಿಂದ ಹೇಳುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಪ್ರಮುಖ ಕಾಯ್ದೆಗಳನ್ನು ಬದಲಾಯಿಸುವ ಮೂಲಕ ಈಸ್ಟ್ ಇಂಡಿಯಾ ಕಂಪೆನಿಯಂತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ದೇಶವನ್ನು ಮಾರಾಟ ಮಾಡಲು ಮುಂದಾಗುವಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಬುಧವಾರ ಇಲ್ಲಿನ ಗಾಂಧಿನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭವನ್ನು ಬಳಸಿಕೊಂಡಿರುವ ಕೇಂದ್ರ ಸರಕಾರವು ಕೆಲವು ರೈತ ವಿರೋಧಿ ಕಾಯ್ದೆಗಳನ್ನು ತರುವ ಮೂಲಕ ಗ್ರಾಮೀಣ ಜನರಲ್ಲಿ ಭೀತಿಯನ್ನು ಸೃಷ್ಟಿ ಮಾಡಿದೆ ಎಂದು ತಿಳಿಸಿದರು.

ಬೃಹತ್ ಉದ್ದಿಮೆದಾರರಿಗೆ ದೊಡ್ಡ ಪ್ರಮಾಣದ ಸಹಾಯಹಸ್ತವನ್ನು ನೀಡಿರುವ ಕೇಂದ್ರ ಸರಕಾರ, ಭಾರತದ ಕೃಷಿ ಕ್ಷೇತ್ರಕ್ಕೆ 1 ಲಕ್ಷದ 63 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಇದರಲ್ಲಿ ಕೃಷಿಯ ಮೂಲಭೂತ ಸೌಲಭ್ಯಗಳನ್ನು ಹೊಂದಲು ಸುಮಾರು 1 ಲಕ್ಷ ಕೋಟಿ ಮತ್ತು ಜಾನುವಾರಗಳ ರೋಗದ ಲಸಿಕೆಗೆ ಮತ್ತು ಹೈನುಗಾರಿಕೆಯಲ್ಲಿ ಖಾಸಗಿ ಡೈರಿಗಳನ್ನು ಉತ್ತೇಜಿಸಲು ಇನ್ನುಳಿದ ಕಾರ್ಯಕ್ರಮಗಳಿಗೆಂದು ಹೇಳಿದೆ. ಆದರೆ, ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ, ಸಾಲಕ್ಕೆ ಪರಿಹಾರ, ಬಿತ್ತನೆ ಬೀಜ, ರಸಗೊಬ್ಬರ, ಉಪಕರಣಗಳು, ಜೊತೆಗೆ ಹಳ್ಳಿಯಲ್ಲಿ ಸಣ್ಣ ರೈತರು ಕೂಲಿ ಕಾರ್ಮಿಕರು ಜೀವನವೇ ಕಷ್ಟವಾಗಿರುವ ಕಾರಣಕ್ಕೆ ನೇರವಾಗಿ ಹಳ್ಳಿಗರ ಕೈಗೆ ಹಣ ವಿತರಣೆ ಆಗುತ್ತದೆ ಎನ್ನುವ ನಿರೀಕ್ಷೆ ರೈತ ವರ್ಗದಲ್ಲಿತ್ತು. ಇದ್ಯಾವುದಕ್ಕೂ ಅವಕಾಶವಿಲ್ಲದೆ ನೇರವಾಗಿ ಕಾಂಟ್ರ್ಯಾಕ್ಟ್ ಫಾರ್ಮಿಂಗ್ (ಕಂಪೆನಿ ಕೃಷಿ) ಮಾಡಲು ಪ್ಯಾಕೇಜ್ ಘೋಷಿಸಿ ರೈತರನ್ನು ಮರೆತು ಬಿಟ್ಟಿದೆ ಎಂದು ಚಂದ್ರಶೇಖರ್ ನುಡಿದರು.

ಕೇಂದ್ರ ಸರಕಾರವೇ ಮುಂದೆ ನಿಂತು ವಿದೇಶಿ ಹಾಗೂ ದೇಶೀಯ ಕಂಪೆನಿಗಳಿಗೆ ಕೃಷಿ ಭೂಮಿಯನ್ನು ಹೊಂದಲು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಸ್ವಂತ ಮಾರುಕಟ್ಟೆ ಹೊಂದಲು ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ, ಕೃಷಿ, ಹೈನುಗಾರಿಕೆ ಪ್ರವೇಶ ಮಾಡಲು ಮೂಲಭೂತ ಸೌಕರ್ಯದ ಹೆಸರಿನಲ್ಲಿ ಲಕ್ಷಾಂತರ ಕೋಟಿಗಳ ಸಹಾಯಹಸ್ತವನ್ನು ನೀಡಲು ಹೊರಟಿದೆ ಎಂದರು.

ಜಗತ್ತಿನ ಯಾವುದೇ ದೇಶದಲ್ಲಿ ಕೃಷಿಗೆ ಇಲ್ಲದಿರುವ ವಾತಾವರಣ ಭಾರತದಲ್ಲಿ ನೈಸರ್ಗಿಕವಾಗಿದೆ. ಈ ಕೃಷಿ ವಲಯದಲ್ಲಿ ದೇಶದ 90 ಕೋಟಿ ಜನ ಕೃಷಿ ಅವಲಂಬಿತರಾಗಿದ್ದಾರೆ. ಇದು ಕೃಷಿ ಪ್ರಧಾನವಾದ ದೇಶವಾದ ಕಾರಣ ಕೃಷಿಯೇ ಮೂಲ ಕಸುಬು. ಆದರೆ, ಇಡೀ ದೇಶದ ಕೃಷಿ ಮತ್ತು ಕೃಷಿ ಮಾರುಕಟ್ಟೆ ಮತ್ತು ಗ್ರಾಹಕರ ಮಾರುಕಟ್ಟೆಯನ್ನು ಕಂಪೆನಿಗಳಿಗೆ ವರ್ಗಾಯಿಸಿ ದೇಶದ ಗ್ರಾಮೀಣ ಭಾರತದ ಜನರನ್ನು ದಿವಾಳಿ ಮಾಡಲು ಮುಂದಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)