varthabharthi


ಬೆಂಗಳೂರು

ವಾಕ್, ಶ್ರವಣ ದೋಷಿಗಳಿಗಾಗಿ ವಿಶೇಷ 'ಸ್ಮೈಲ್ ಮಾಸ್ಕ್' ತಯಾರಿ

ವಾರ್ತಾ ಭಾರತಿ : 20 May, 2020

ಬೆಂಗಳೂರು, ಮೇ 20: ವಾಕ್ ಹಾಗೂ ಶ್ರವಣ ವಿಶೇಷಚೇತನರ ಕಷ್ಟವನ್ನು ಅರಿತು ಡಿಆರ್‍ಡಿಒ ನ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್‍ಮೆಂಟ್ ವಿಭಾಗದ ಸಹಾಯಕ ವಿಜ್ಞಾನಿ ವಿನೋದ್ ವಿಶೇಷ ಮಾಸ್ಕ್ ಗಳನ್ನು ತಯಾರಿಸಿದ್ದಾರೆ.

ಕೊರೋನ ಹರಡದಂತೆ ಸಾಮಾನ್ಯ ಮನುಷ್ಯರೇನೋ ಮಾಸ್ಕ್ ಹಾಕಿಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಕಚೇರಿಗಳಿಗೂ ತೆರಳುತ್ತಾರೆ. ಮಾಸ್ಕ್ ಧರಿಸಿಯೇ ಪರಸ್ಪರ ಚರ್ಚಿಸುತ್ತಾರೆ, ಮಾತನಾಡುತ್ತಾರೆ. ಸಂವಹನಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಮಾತು ಬರದ, ಕಿವಿ ಕೇಳದ ಮಂದಿ ಎದುರಿಗಿರುವವರ ತುಟಿಗಳ ಚಲನೆಯನ್ನು ನೋಡಿಯೇ ಸೈನ್ ಲ್ಯಾಂಗ್ವೇಜ್‍ನಲ್ಲಿ ಸಂಹವನ ನಡೆಸಬೇಕು. ಅದಕ್ಕಾಗಿ ವಿಶೇಷ ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ.

ವಾಕ್ ಮತ್ತು ಶ್ರವಣ ವಿಕಲಚೇತನರ ಕಷ್ಟವನ್ನು ಅರಿತ ಸಹಾಯಕ ವಿಜ್ಞಾನಿ ವಿನೋದ್ ಕರ್ತವ್ಯ ಅವರು ಇವರಿಗಾಗಿ ಟ್ರಾನ್ಸ್ ಪರೆಂಟ್ ಸೇಫ್ ಶೀಟ್‍ಗಳನ್ನು ಬಳಸಿ ವಿಶೇಷವಾಗಿ ಮಾಸ್ಕ್‍ಗಳನ್ನು ತಯಾರಿಸುತ್ತಿದ್ದಾರೆ. ಕಳೆದ ಎರಡು ವಾರಗಳ ಹಿಂದೆ ಮಾಸ್ಕ್ ತಯಾರಿಸಲು ಆರಂಭಿಸಿದ ವಿನೋದ್, ಈವರೆಗೆ 50 ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸಿದ್ದಾರೆ.

ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ವಾಕ್ ಮತ್ತು ಶ್ರವಣ ವಿಕಲಚೇತನರಿಂದ ವಿಶೇಷ ಮಾಸ್ಕ್ ಗಳಿಗೆ ಬೇಡಿಕೆ ಬಂದಿದೆ. ಅಷ್ಟೇ ಅಲ್ಲ, ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ಹೊರ ರಾಜ್ಯಗಳಿಂದಲೂ ಬೇಡಿಕೆ ಬಂದಿದೆ. ಅವರಿಗೆ ಕೊರಿಯರ್ ಮೂಲಕ ಮಾಸ್ಕ್‍ಗಳನ್ನು ಪಾರ್ಸೆಲ್ ಕಳುಹಿಸಲಾಗುತ್ತಿದೆ ಎಂದು ವಿನೋದ್ ತಿಳಿಸಿದ್ದಾರೆ.

ಡಿಆರ್‍ಡಿಒ ಸಂಸ್ಥೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರು ವಾಕ್ ಮತ್ತು ಶ್ರವಣ ವಿಕಲಚೇತನರು ಕೆಲಸ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದೆವು. ಆದರೆ ವಾಕ್ ಮತ್ತು ಶ್ರವಣ ವಿಕಲಚೇತನರು ಮಾತ್ರ ಬರುತ್ತಿರಲಿಲ್ಲ. ಆಗ ಯಾಕೆಂದು ವಿಚಾರಿಸಿದಾಗ ತಿಳಿಯಿತು. ಕಚೇರಿಯಲ್ಲಿ ಎಲ್ಲರೂ ಮಾಸ್ಕ್ ಧರಿಸಿರುತ್ತೀರಿ. ಆದರೆ ನೀವು ಮಾತನಾಡುವಾಗ ಏನೆಂದು ನಮಗೆ ಅರ್ಥವಾಗುವುದಿಲ್ಲ. ಹೀಗಾಗಿ ಬರುತ್ತಿಲ್ಲ ಎಂಬ ಮಾಹಿತಿ ತಿಳಿಯಿತು.

ಆಗ ಒಂದು ವಾರ ಅದರ ಬಗ್ಗೆ ಅಧ್ಯಯನ ಮಾಡಿದೆ. ಬಳಿಕ ತಾತ್ಕಾಲಿಕವಾಗಿ ನಾನೇ ಮಾಸ್ಕ್ ಸಿದ್ಧಪಡಿಸಿದೆ. ಆದರೆ ಸರಿ ಬರಲಿಲ್ಲ. ಕೊನೆಗೆ ಪೊಲೀಸರು ಧರಿಸುವ ಟ್ರಾನ್ಸಫರೆಂಟ್ ಕವರ್ ಗಳ(ಮಳೆಗೆ ಧರಿಸುವ ನಿಲುವಂಗಿ ಕವರ್ ಮಾದರಿ)ಲ್ಲಿ ಮಾಸ್ಕ್ ಹೊಲಿಯಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಪಕ್ಕದ ಮನೆಯ ಗಾಮೆರ್ಂಟ್ಸ್ ನೌಕರರೊಬ್ಬರು ಹಾಗೂ ನನ್ನ ಸೋದರಿ ಕೂಡ ಖಾಲಿಯಿದ್ದರು. ಅವರಿಂದ ಮಾಸ್ಕ್ ಗಳನ್ನು ಹೊಲಿಸಿದೆ. ಅದನ್ನು ಧರಿಸಿ ವಿಡಿಯೋಕಾಲ್ ಮೂಲಕ ವಾಕ್ ಮತ್ತು ಶ್ರವಣ ವಿಕಲರಿಗೆ ತೋರಿಸಿದೆ. ಅದನ್ನು ನೋಡಿದ ಕೂಡಲೇ ಅವರ ಮುಖದಲ್ಲಿ ನಗು ಹೊಮ್ಮಿತು. ಆಗ ತಕ್ಷಣ 'ಸ್ಮೈಲ್ ಮಾಸ್ಕ್' ಎಂದು ಹೆಸರಿಟ್ಟೆ. ನಾನು ನಕ್ಕಿದ್ದು, ಸಂವಹನ ನಡೆಸಿದ್ದು ಅವರಿಗೆ ಅರ್ಥವಾಯಿತು. ಹೀಗಾಗಿ ಅದರ ಬಗ್ಗೆ ಹೆಚ್ಚು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದೆ. ಸಿಎಂ, ಪಿಎಂಗೂ ಟ್ವಿಟರ್ ಮೂಲಕ ತಿಳಿಸಿದೆ ಎಂದು ಮಾಸ್ಕ್ ತಯಾರಾದ ಬಗ್ಗೆ ವಿನೋದ್ ಮಾಹಿತಿ ಹಂಚಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)