varthabharthi

ಬೆಂಗಳೂರು

ಬೆಂಗಳೂರಿನಲ್ಲಿ ಹೊಟೇಲ್ ಕ್ವಾರಂಟೈನ್ ನಲ್ಲೂ ಭ್ರಷ್ಟಾಚಾರ: ಜನರಿಂದ ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳು; ಆರೋಪ

ವಾರ್ತಾ ಭಾರತಿ : 20 May, 2020

ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 20: ಇತ್ತೀಚೆಗೆ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್‍ಗೆ ಒಳಪಟ್ಟಿರುವ ಜನರಿಗೆ ನಿಮಗೆ ಕ್ವಾರಂಟೈನ್‍ನಲ್ಲಿ ಇರುವುದು ಬೇಡವೆಂದರೆ ಹಣ ನೀಡಿ ನಿಮ್ಮ ಮನೆಗಳಿಗೆ ತೆರಳಬಹುದು ಎಂದು ಅಧಿಕಾರಿಗಳು ಆಮಿಷ ಒಡ್ಡುತ್ತಿದ್ದಾರೆ ಎಂದು ಹೊಟೇಲ್‍ನಲ್ಲಿ ಕ್ವಾರಂಟೈನ್‍ಲ್ಲಿರುವವರು ಆರೋಪಿಸಿದ್ದಾರೆ.

ನಗರದ ದಿವ್ಯಾ ರೆಸಿಡೆನ್ಸಿ ಹೊಟೇಲ್‍ನಲ್ಲಿ ಕ್ವಾರಂಟೈನ್‍ನಲ್ಲಿರುವ ಅನೇಕ ಜನರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇಲ್ಲಿರುವ ಜನರು ಕ್ವಾರಂಟೈನ್‍ಗೆ ಒಳಪಟ್ಟು ಮೂರ್ನಾಲ್ಕು ದಿನಗಳಾದರೂ ಕೊರೋನ ಪರೀಕ್ಷೆ ಮಾಡುವುದಿರಲಿ, ಯಾವುದೇ ಬಿಬಿಎಂಪಿ ಅಧಿಕಾರಿಗಳಾಗಲಿ, ವೈದ್ಯಕೀಯ ಸಿಬ್ಬಂದಿಯಾಗಲಿ ಇತ್ತ ಕಡೆ ತಿರುಗಿಯೂ ನೋಡಿಲ್ಲ ಎಂದು ಆರೋಪಿಸಿದ್ದಾರೆ.

ಕ್ವಾರಂಟೈನ್‍ನಲ್ಲಿರುವ ಜನರಿಗೆ ಅಧಿಕಾರಿಯೊಬ್ಬರು ತಲಾ 27 ಸಾವಿರ ರೂ. ಕೇಳುತ್ತಿದ್ದಾರೆ. ಇಷ್ಟು ದುಡ್ಡು ಕೊಟ್ಟರೆ ಯಾವುದೇ ತೊಂದರೆ ಇಲ್ಲದೆ ಮನೆಗೆ ಕಳುಹಿಸಿಕೊಡುತ್ತೇನೆ. 12ನೇ ದಿನದಂದು ಬಂದು ಪರೀಕ್ಷೆಗೆ ಒಳಪಡಬೇಕು ಎಂದು ಆ ಅಧಿಕಾರಿ ಮಾತನಾಡಿದ್ದಾರೆನ್ನಲಾದ ವಾಯ್ಸ್ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಆರೋಪದ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವಿಕುಮಾರ್ ಸುರಪುರ್ ಮಾತನಾಡಿ, ಇದು ಬಹಳ ಗಂಭೀರ ಆರೋಪ. ಆ ಅಧಿಕಾರಿ ಯಾರೆಂದು ಗೊತ್ತಾದರೆ ಸೇವೆಯಿಂದ ಅಮಾನತು ಮಾಡಲಾಗುವುದು. ಜನರನ್ನು ಮನೆಗೆ ವಾಪಸ್ ಕಳುಹಿಸುವ ಅಧಿಕಾರ ಯಾರಿಗೂ ಇಲ್ಲ. ಕ್ವಾರಂಟೈನ್‍ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ದಾಖಲೆಯನ್ನೂ ಇಟ್ಟುಕೊಳ್ಳಲಾಗುತ್ತದೆ. ಅಧಿಕೃತ ಅನುಮೋದನೆ ಇಲ್ಲದೆ ಯಾರನ್ನೂ ವಾಪಸ್ ಕಳುಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)