ವುಹಾನ್ ನಲ್ಲಿ ಕಾಡು ಪ್ರಾಣಿ ಮಾಂಸ ಮಾರಾಟ, ಸೇವನೆಗೆ ಐದು ವರ್ಷ ನಿಷೇಧ
ವುಹಾನ್: ಮಾರಕ ಕೊರೋನವೈರಸ್ ಮೊದಲು ಕಾಣಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಇದೀಗ ಕಾಡು ಪ್ರಾಣಿಗಳ ಮಾಂಸ ವ್ಯಾಪಾರಕ್ಕೆ ಕಡ್ಡಾಯ ನಿಷೇಧ ಹೇರಲಾಗಿದೆ. ಸ್ಥಳೀಯ ಕಾಡು ಪ್ರಾಣಿಗಳ ಮಾಂಸದ ಮಾರುಕಟ್ಟೆಯಿಂದಲೇ ಈ ಕೊರೋನವೈರಸ್ ಸೋಂಕು ಹರಡಿತ್ತೆಂಬ ಅಭಿಪ್ರಾಯ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ನಿಷೇಧ ಐದು ವರ್ಷಗಳ ತನಕ ಜಾರಿಯಲ್ಲಿರಲಿದೆ ಎಂದು ವುಹಾನ್ನ ಮುನಿಸಿಪಲ್ ಆಡಳಿತದ ಬುಧವಾರದ ಆದೇಶ ತಿಳಿಸಿದೆ. ನಗರದಲ್ಲಿ ಯಾವುದೇ ಕಾಡುಪ್ರಾಣಿಯ ಮಾಂಸ ಭಕ್ಷಣೆ ನಿಷಿದ್ಧವಾಗಿದೆ. ಜತೆಗೆ ಕಾಡು ಪ್ರಾಣಿಗಳ ಮಾರಾಟ ಹಾಗೂ ಅವುಗಳನ್ನು ಮಾಂಸಕ್ಕಾಗಿ ಸಾಕುವುದು ಕೂಡ ನಿಷಿದ್ಧವಾಗಿದೆ. ಮೇಲಾಗಿ ವುಹಾನ್ ನಗರ ವಲಯವನ್ನು ವನ್ಯಜೀವಿ ಧಾಮ ಎಂದು ಗುರುತಿಸಲಾಗಿದೆಯಲ್ಲದೆ ವೈಜ್ಞಾನಿಕ ಸಂಶೋಧನೆಗೆ ಹೊರತುಪಡಿಸಿ ಕಾರಣವಿಲ್ಲದೆ ಪ್ರಾಣಿಗಳಿಗೆ ನೋವುಂಟು ಮಾಡುವುದನ್ನು ನಿಷೇಧಿಸಲಾಗಿದೆ.
ಹುಬೇಯ್ ಸಹಿತ ಚೀನಾದ ಕನಿಷ್ಠ ನಾಲ್ಕು ಪ್ರಾಂತ್ಯಗಳು ಕಾಡು ಪ್ರಾಣಿಗಳನ್ನು ಆಹಾರದ ಉದ್ದೇಶದಿಂದ ಸಾಕುವ ಪ್ರದೇಶಗಳನ್ನು ಖರೀದಿಸಲು ಹಾಗೂ ಈ ಉದ್ಯಮದಿಂದಲೇ ಜೀವನ ಸಾಗಿಸುತ್ತಿದ್ದ ಜನರಿಗೆ ಸಹಾಯ ಮಾಡುವ ಯೋಜನೆಗಳನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಕಾಡು ಪ್ರಾಣಿಗಳ ಮಾಂಸ ಮಾರಾಟ ಮತ್ತು ಸೇವನೆಗೆ ನಿಷೇಧ ವಿಧಿಸಲಾಗಿದೆ.
ಈ ಹಿಂದೆಯೇ ಚೀನಾ ಸರಕಾರ ಕಾಡುಪ್ರಾಣಿ ವ್ಯಾಪಾರ ಮತ್ತು ಕಾಡುಪ್ರಾಣಿ ಮಾಂಸ ಭಕ್ಷಣೆಗೆ ತಾತ್ಕಾಲಿಕ ನಿಷೇಧ ಹೇರಿದ್ದರೂ ಕಳೆದ ತಿಂಗಳು ಮತ್ತೆ ಎಂದಿನಂತೆ ಈ ಉದ್ಯಮ ತಲೆಯೆತ್ತಿಕೊಂಡಿತ್ತು.