varthabharthiರಾಷ್ಟ್ರೀಯ

Breaking News: ‘ಅಂಫಾನ್’ ಚಂಡಮಾರುತಕ್ಕೆ ಪಶ್ಚಿಮ ಬಂಗಾಳದಲ್ಲಿ 72 ಮಂದಿ ಬಲಿ: ಮಮತಾ ಬ್ಯಾನರ್ಜಿ

ವಾರ್ತಾ ಭಾರತಿ : 21 May, 2020

ಕೋಲ್ಕತಾ,ಮೇ 21: ಪಶ್ಚಿಮಬಂಗಾಳದಲ್ಲಿ ಆಂಫಾನ್ ಚಂಡಮಾರುತದ ಆರ್ಭಟಕ್ಕೆ ಕನಿಷ್ಠ 72 ಮಂದಿ ಮೃತಪಟ್ಟಿದ್ದಾರೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ತಿಳಿಸಿದ್ದಾರೆ. ಕೋಲ್ಕತಾ ಸೇರಿದಂತೆ ಪಶ್ಚಿಮಬಂಗಾಳದ ಕರಾವಳಿಗೆ ಬುಧವಾರ ಅಪ್ಪಳಿಸಿದ್ದ ಚಂಡಮಾರುತ ಭಾರೀ ನಾಶ ನಷ್ಟವುಂಟು ಮಾಡಿದೆ. ಚಂಡಮಾರುತದ ಹಾವಳಿಗೆ ಸಾವಿರಾರು ಮನೆಗಳನ್ನು ನಾಶವಾಗಿದ್ದು, ನೂರಾರು ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

  ರಾಜ್ಯದಲ್ಲಿ ಆಂಫಾನ್ ಚಂಡಮಾರುವು, ಕೊರೋನಾ ವೈರಸ್ ಸೋಂಕಿಗಿಂತಲೂ ಹೆಚ್ಚು ಹಾನಿಯುಂಟು ಮಾಡಿದೆ. ಇಂತಹ ಘೋರ ವಿಪತ್ತನ್ನು ತಾನು ಹಿಂದೆಂದೂ ಕಂಡಿಲ್ಲವೆಂದು ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿದ್ದಾರೆ.

 ಆಂಫಾನ್‌ ಚಂಡಮಾರುತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಅವರು ತಲಾ 2.5 ಲಕ್ಷ ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.

  ಪ.ಬಂಗಾಳದ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅಂದಾಜಿಸುವಂತೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

   ಪಶ್ಚಿಮಬಂಗಾಳದಲ್ಲಿ ಆಂಫಾನ್ ಚಂಡಮಾರುತದಿಂದಾಗಿ 1 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಹಾನಿಯುಂಟಾಗಿದೆಯೆಂದು ಮಮತಾ ತಿಳಿಸಿದರು.

 ‘‘ಆಂಫಾನ್ ಹಾವಳಿಯಿಂದ ಜರ್ಜರಿತವಾದ ಸುಂದರ್‌ಬನ್ಸ್‌ಗೆ ಭೇಟಿ ನೀಡುವಂತೆಯೂ ಮಮತಾ ಪ್ರಧಾನಿಯನ್ನು ಕೋರಿದ್ದಾರೆ. ‘‘ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡೋಣ ’’ಎಂದವರು ಹೇಳಿದರು.

 ಇಡೀ ದೇಶವು ಆಂಫಾನ್‌ನಿಂದ ತತ್ತರಿಸಿರುವ ಪಶ್ಚಿಮಬಂಗಾಳದ ಜನತೆಯ ಜೊತೆಗಿದೆೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

  ಆಂಫಾನ್ ಚಂಡಮಾರುತವು ಬುಧವಾರ ತಾಸಿಗೆ 185 ಕಿ.ಮೀ. ವೇಗದಲ್ಲಿ ಪಶ್ಚಿಮಬಂಗಾಳದ ಕರಾವಳಿಗೆ ಅಪ್ಪಳಿಸಿತ್ತು. ಚಂಡಮಾರುತದೊಂದಿಗ ತಾಸಿಗೆ 125 ಕಿ.ಮೀ. ವೇಗದಲ್ಲಿ ಬೀಸಿದ ಬಿರುಗಾಳಿಯು ಕೋಲ್ಕತಾ ನಗರದಲ್ಲಿ ಹಲವೆಡೆ ಕಾರುಗಳನ್ನು ಬುಡಮೇಲುಗೊಳಿಸಿತ್ತು. ನಗರದ ವಿವಿಧೆಡೆ ವಿದ್ಯುತ್‌ ಕಂಬಗಳು ಹಾಗೂ ಮರಗಳು ಬಿದ್ದು, ವಾಹನಸಂಚಾರ ಅಸ್ತವ್ಯಸ್ತಗೊಂಡಿದೆ. ಶಿಥಿಲಾವಸ್ಥೆಯಲ್ಲಿದ್ದ ಕೆಲವು ಕಟ್ಟಡಗಳ ಭಾಗಗಳು ಕೂಡಾ ಚಂಡಮಾರುತದ ಪ್ರಕೋಪದಿಂದ ಕುಸಿದುಬಿದ್ದಿವೆ. ಕೋಲ್ಕತಾ ವಿಮಾನನಿಲ್ದಾಣ ಜಲಾವೃತ ಗೊಂಡಿದ್ದು, ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ.

  ಭಾರೀ ಮಳೆ ಹಾಗೂ ಗಾಳಿಯೊಂದಿಗೆ ಧಾವಿಸಿದ್ದ ಚಂಡಮಾರುತವು ಉತ್ತರ ಹಾಗೂ ದಕ್ಷಿಣ 24 ಪರಗಣಗಳ ಕರಾವಳಿ ಜಿಲ್ಲೆಗಳಲ್ಲಿಯೂ ಭಾರೀ ಹಾನಿಯನ್ನೆಸಗಿದೆ. ಅಲ್ಲಿ ಹಲವಾರು ಗುಡಿಸಲುಗಳು ನೆಲಸಮವಾಗಿದ್ದು, ಸಾವಿರಾರು ಮರಗಳು, ವಿದ್ಯುತ್‌ಕಂಬಗಳು ಬುಡಮೇಲಾಗಿವೆ ಮತ್ತು ಹಲವಾರು ತಗ್ಗು ಪ್ರದೇಶಗಳಿಗೆ ನೆರೆನೀರು ನುಗ್ಗಿದೆ.

 1999ರ ಬಳಿಕ ಬಂಗಾಳ ಕೊಲ್ಲಿಗೆ ಅಪ್ಪಳಿಸಿದ ಅತ್ಯಂತ ಪ್ರಬಲ ಚಂಡಮಾರುತ ಇದಾಗಿದೆ. 1,999ರಲ್ಲಿ ಒಡಿಶಾದ ಕರಾವಳಿಗೆ ಅಪ್ಪಳಿಸಿದ ಚಂಡಮಾರುತದ ರುದ್ರನರ್ತನಕ್ಕೆ 10 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)