2 ಸಾವಿರ ವಿದ್ಯಾರ್ಥಿಗಳಿಗೆ ನವೀನ ತಂತ್ರಜ್ಞಾನ ತರಬೇತಿ: ಡಿಸಿಎಂ ಡಾ.ಅಶ್ವಥ್ನಾರಾಯಣ
ಬೆಂಗಳೂರು, ಮೇ 21: ಸರಕಾರಿ ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮೂಲ ತಂತ್ರಜ್ಞಾನ ಹಾಗೂ ಕೌಶಲ ತರಬೇತಿ ನೀಡಲು ಹುವೈ ಸಂಸ್ಥೆ ಮುಂದೆ ಬಂದಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಹುವೈ ಟೆಲಿ ಕಮುನಿಕೇಷನ್ ಎಂಟರ್ ಪ್ರೈಸಸ್ ಮುಖ್ಯಸ್ಥ ಡೆರೆಕ್ ಹು ಮತ್ತು ಉಪಾಧ್ಯಕ್ಷ ಸ್ಟ್ಯಾಂಡಿ ನೇತೃತ್ವದ ನಿಯೋಗದ ಜತೆ ಸಮಾಲೋಚನೆ ಬಳಿಕ ಮಾತನಾಡಿದ ಅವರು, ಸರಕಾರಿ ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂದಿನ ವೃತ್ತಿ ಜೀವನಕ್ಕೆ ಪೂರಕವಾಗಿ ಮೂಲ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಹುವೈ ಸಂಸ್ಥೆ ಉತ್ಸುಕವಾಗಿದೆ. ಈ ಸಂಬಂಧ ಸಂಸ್ಥೆಯ ಮುಖ್ಯಸ್ಥರೊಂದಿಗೆ ಹೆಚ್ಚಿನ ಮಾತುಕತೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಕೃತಕ ಬುದ್ಧಿಮತ್ತೆಯಂತ ಅತ್ಯಾಧುನಿಕ ತಂತ್ರಜ್ಞಾನ ವಿಷಯದ ಕುರಿತು ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೋರ್ಸ್ ನಡೆಸಲು ಸಿದ್ಧ ಎಂದು ಸಂಸ್ಥೆ ತಿಳಿಸಿದೆ. ಕಾಲೇಜುಗಳ ಜತೆ ಕಾರ್ಯನಿರ್ವಹಿಸಲು ಅವರಿಗೆ ಅನುಕೂಲ ಮಾಡಿಕೊಡಲಾಗುವುದು. ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಹುವೈ ಸಂಸ್ಥೆ ಸರಕಾರದೊಂದಿಗೆ ಕೈಜೋಡಿಸಲು ಮುಂದೆ ಬಂದಿರುವುದು ಪ್ರಶಂಸನಾರ್ಹ ಎಂದು ತಿಳಿಸಿದರು.
ಇಂಟರ್ ನೆಟ್ ಸೇವೆ ಪೂರೈಕೆ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದಕ ಸಂಸ್ಥೆ ಹುವೈ ತಂತ್ರಜ್ಞಾನ ಆವಿಷ್ಕಾರದಲ್ಲೂ ಮುಂದಿದೆ. ವೈಟ್ಫೀಲ್ಡ್ ನಲ್ಲಿ ಅವರ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಿದ್ದು, ಸುಮಾರು 4200 ಮಂದಿ ನುರಿತ ಇಂಜಿನಿಯರ್ ಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನದ ಆವಿಷ್ಕಾರಗಳಿಗೆ ರಾಜ್ಯ ಸರಕಾರದ ಪ್ರೋತ್ಸಾಹ ಸದಾ ಇರಲಿದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.