varthabharthi

ರಾಷ್ಟ್ರೀಯ

ದಿಲ್ಲಿ ಹಿಂಸಾಚಾರ ಪ್ರಕರಣ: ಯುಎಪಿಎ ಕಾಯ್ದೆಯಡಿ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ಬಂಧನ

ವಾರ್ತಾ ಭಾರತಿ : 21 May, 2020

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 21: ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಾಮಿಯಾ ಮಿಲ್ಲಿಯಾ ವಿವಿಯ 24 ವರ್ಷದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಆಸಿಫ್‌ರನ್ನು ರವಿವಾರ ಬಂಧಿಸಿ ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸಿದ್ದು, 15 ದಿನದ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ವಿಶೇಷ ಪಡೆಯ ಹೇಳಿಕೆ ತಿಳಿಸಿದೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್‌ನ ಸಕ್ರಿಯ ಕಾರ್ಯಕರ್ತನಾಗಿರುವ ಆಸಿಫ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಚಳವಳಿಯನ್ನು ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಸಿಫ್ ದಿಲ್ಲಿಯಲ್ಲಿ ನಡೆದಿದ್ದ ಪೌರತ್ವ ಕಾಯ್ದೆ ವಿರೋಧಿ ಚಳವಳಿ ಸಂಘಟಿಸುವಲ್ಲಿ ಮತ್ತು ಆ ಬಳಿಕ ನಡೆದಿದ್ದ ಗಲಭೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಮಿರಾನ್ ಹೈದರ್ ಮತ್ತು ಸಫೂರಾ ಝರ್ಗರ್‌ರೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

ಫೆ.23ರಿಂದ 26ರವರೆಗೆ ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ವಿರೋಧಿ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರದಲ್ಲಿ 53 ಜನ ಮೃತಪಟ್ಟಿದ್ದು ನೂರಾರು ಜನ ಗಾಯಗೊಂಡಿದ್ದರು. ಈ ಸಂಬಂಧ ಕಳೆದ ತಿಂಗಳು ಜೆಎನ್‌ಯು ವಿವಿಯ ವಿದ್ಯಾರ್ಥಿ ಖಾಲಿದ್, ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳಾದ ಹೈದರ್ ಮತ್ತು ಝರ್ಗರ್ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ ದೇಶದ್ರೋಹ, ಕೊಲೆ, ಕೊಲೆ ಪ್ರಯತ್ನ, ಧರ್ಮದ ಆಧಾರದಲ್ಲಿ ವಿವಿಧ ಗುಂಪಿನ ಮಧ್ಯೆ ದ್ವೇಷತ್ವಕ್ಕೆ ಉತ್ತೇಜನ ನೀಡಿರುವುದು ಹಾಗೂ ದಂಗೆಗೆ ಪ್ರೋತ್ಸಾಹ ನೀಡಿರುವ ಆರೋಪವನ್ನೂ ಹೊರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 800ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಪೊಲೀಸರು ಬಂಧಿಸುವ ಪ್ರಕ್ರಿಯೆ ಮುಂದುವರಿಸುವಂತೆ ಕೇಂದ್ರ ಗೃಹ ಇಲಾಖೆ ತಿಳಿಸಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)