varthabharthi

ಅಂತಾರಾಷ್ಟ್ರೀಯ

ರಾಜೀವ್ ಪುಣ್ಯತಿಥಿ: ತಂದೆಯ ಜೊತೆಗಿದ್ದ ಕಟ್ಟಕಡೆಯ ಫೋಟೋ ಟ್ವೀಟ್ ಮಾಡಿದ ಪ್ರಿಯಾಂಕ

ವಾರ್ತಾ ಭಾರತಿ : 21 May, 2020

ಫೋಟೊ ಕೃಪೆ: twitter.com/priyankagandhi

 ಹೊಸದಿಲ್ಲಿ,ಮೇ 21: ಮಾಜಿ ಪ್ರಧಾನಿ ಹಾಗೂ ತನ್ನ ತಂದೆ ರಾಜೀವ್‌ಗಾಂಧಿಯವರ ಪುಣ್ಯತಿಥಿಯ ದಿನವಾದ ಗುರುವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ ಅವರು ರಾಜೀವ್‌ ಜೊತೆಗೆ ತೆಗೆಸಿಕೊಂಡಿದ್ದ ಕಟ್ಟಕಡೆಯ ಭಾವಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಆಗ 19 ವರ್ಷದವರಾಗಿದ್ದ ಪ್ರಿಯಾಂಕಾರ ಹೆಗಲ ಮೇಲೆ ರಾಜೀವ್ ತನ್ನ ಬಾಹುಗಳನ್ನ್ನು ಚಾಚಿದ ದೃಶ್ಯವಿರುವ ಈ ಫೋಟೋವನ್ನು ಕಾಂಗ್ರೆೆಸ್ ನಾಯಕಿ ಟ್ವೀಟ್ ಮಾಡಿದ್ದಾರೆ. ‘ತಂದೆಯೊಂದಿಗಿನ ಕೊನೆಯ ಫೋಟೋ’ ಎಂಬ ಬರಹವನ್ನು ಕೂಡಾ ಪೋಸ್ಟ್ ಮಾಡಿದ್ದಾರೆ.

 ‘‘ನಿನ್ನ ಬಗ್ಗೆ ದಯೆ ಇಲ್ಲದವರೊಂದಿಗೂ ದಯಾಪರರಾಗಿರಿ. ನಿಮಗೆ ಬದುಕಿನಲ್ಲಿ ಅನ್ಯಾಯವಾಗಿದೆಯೆಂದು ಭಾವಿಸಿಕೊಂಡರೂ, ನಿಜಕ್ಕೂ ಜೀವನ ನ್ಯಾಯಯುತವಾದುದು ಎಂದೇ ತಿಳಿಯಿರಿ. ಆಗಸ ಎಷ್ಟೇ ಕಪ್ಪಗಿರಲಿ ಅಥವಾ ಭಯಾನಕ ಬಿರುಗಾಳಿಯಿರಲಿ ನೀವು ಮುನ್ನಡೆಯುತ್ತಲೇ ಇರಿ. ಹೃದಯದಲ್ಲಿ ಎಷ್ಟೇ ವೇದನೆಯಿರಲಿ ಅದನ್ನು ಪ್ರೀತಿಯಿಂದ ತುಂಬಿರಿ. ಇವು ನಮ್ಮ ತಂದೆಯ ಜೀವನ ನೀಡಿದ ಉಡುಗೊರೆಗಳು’’ ಎಂದು 48 ವರ್ಷ ವಯಸ್ಸಿನ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

  ಪ್ರಿಯಾಂಕಾ ಸೋದರ ರಾಹುಲ್‌ಗಾಂಧಿ ಕೂಡಾ ತನ್ನ ತಂದೆ ರಾಜೀವ್‌ಗಾಂಧಿಗೆ ಶ್ರದ್ದಾಂಜಲಿ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. ‘‘ನೈಜ ದೇಶಭಕ್ತ , ಉದಾರಿ ಹಾಗೂ ದಯಾಳು ತಂದೆಯ ಮಗನಾಗಿರಲು ನನಗೆ ಹೆಮ್ಮೆಯೆನಿಸುತ್ತದೆ. ಪ್ರಧಾನಿಯಾಗಿ ರಾಜೀವ್ ಅವರು ದೇಶವನ್ನು ಪ್ರಗತಿಪಥದೆಡೆಗೆ ಮನ್ನಡೆಸಿದ್ದರು. ಮುನ್ನೋಟದೊಂದಿಗೆ ಅವರು ದೇಶವನ್ನು ಸಬಲೀಕರಣಗೊಳಿಸಲು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದರು. ಅವರ ಪುಣ್ಯತಿಥಿಯ ದಿನವಾದ ಇಂದು ನಾನು ಅವರಿಗೆ ಪ್ರೀತಿ ಹಾಗೂ ಕೃತಜ್ಞತೆಯೊಂದಿಗೆ ವಂದಿಸುತ್ತಿದ್ದೇನೆ’’ ಎಂದು ಕಾಂಗ್ರೆಸ್ ಸಂಸದರೂ ಆಗಿರುವ ರಾಹುಲ್ ಟ್ವೀಟಿಸಿದ್ದಾರೆ.

ರಾಜೀವ್ ಅವರು 1991ರ ಮೇ 21ರಂದು ತಮಿಳುನಾಡಿನ ಚುನಾವಣಾ ಪ್ರಚಾರ ಸಭೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)