varthabharthi

ಬೆಂಗಳೂರು

ಬೆಂಗಳೂರಿನಲ್ಲಿ 7 ಕೊರೋನ ಪ್ರಕರಣಗಳು ದೃಢ: ಸೋಂಕಿತರ ಸಂಖ್ಯೆ 262ಕ್ಕೆ ಏರಿಕೆ

ವಾರ್ತಾ ಭಾರತಿ : 21 May, 2020

ಬೆಂಗಳೂರು, ಮೇ 21: ನಗರದಲ್ಲಿ ಗುರುವಾರ ಏಳು ಕೊರೋನ ಪ್ರಕರಣ ಪತ್ತೆಯಾಗಿದ್ದು, ಪಾದರಾಯನಪುರದ ನಾಲ್ವರಿಗೆ ಹಾಗೂ ಹೊರರಾಜ್ಯ ಸಂಪರ್ಕದಿಂದ ಮೂವರಿಗೆ ಕೊರೋನ ಸೋಂಕು ದೃಢಪಟ್ಟಿದೆ.

ತಮಿಳುನಾಡಿನ ಪ್ರಯಾಣ ಮಾಡಿದ್ದ ರೋಗಿ-1208ನ ವ್ಯಕ್ತಿಯಿಂದ ಆತನ ಹೆಂಡತಿ ಮತ್ತು ಮಗನಿಗೂ ಕೊರೋನ ಪತ್ತೆಯಾಗಿದೆ. ಗಾಡಹೂಡಿ ನಿವಾಸಿಯಾಗಿರುವ ಈತ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ತಮಿಳುನಾಡಿನಿಂದ ಪ್ರಯಾಣ ಮಾಡಿದ್ದರಿಂದ ಈತನನ್ನು ಕ್ವಾರಂಟೈನ್ ಮಾಡಲಾಗಿತ್ತು. ನಂತರ ಆತನ ಪ್ರಥಮ ಸಂಪರ್ಕದಲ್ಲಿದ್ದ 40 ವರ್ಷದ ಹೆಂಡತಿ ಹಾಗೂ 11 ವರ್ಷದ ಮಗನಿಗೆ ಕೊರೋನ ಪರೀಕ್ಷೆ ನಡೆಸಿದ್ದಾಗ ಸೋಂಕು ಪತ್ತೆಯಾಗಿದೆ.

ಯಲಹಂಕ ನ್ಯೂಟೌನ್‍ನಲ್ಲಿರುವ ನವಚೇತನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿ-1495 ವ್ಯಕ್ತಿಯನ್ನು ಕೊರೋನ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ. 60 ವರ್ಷದ ಆಂಧ್ರದ ಹಿಂದೂಪುರ ನಿವಾಸಿಯಾಗಿದ್ದು, ಈ ಹಿಂದೆ ಚಿಕಿತ್ಸೆಗಾಗಿ ಕರ್ನೂಲ್‍ಗೆ ಹೋಗಿ ಬಂದಿದ್ದಾನೆ. ಕೊರೋನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನವಚೇತನ ಆಸ್ಪತ್ರೆಯ 10 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಪಾದರಾಯನಪುರದಲ್ಲಿ ನಡೆಸಿದ ರ್ಯಾಂಡಮ್ ಪರೀಕ್ಷೆಯಲ್ಲಿ ರೋಗಿ-738ನ ಸಂಪರ್ಕದಿಂದ 15 ವರ್ಷದ ಹೆಣ್ಣು ಮಗು ಹಾಗೂ 40 ವರ್ಷದ ವ್ಯಕ್ತಿಗೆ ಕೊರೋನ ಪತ್ತೆಯಾಗಿದೆ. ರೋಗಿ- 707ನ ಸಂಪರ್ಕದಿಂದ 17 ವರ್ಷದ ಹೆಣ್ಣು ಹಾಗೂ 14 ವರ್ಷದ ಬಾಲಕನಿಗೆ ಕೊರೋನ ಪತ್ತೆಯಾಗಿದೆ.

262ಕ್ಕೆ ಏರಿಕೆ: ನಗರದಲ್ಲಿ ಇಲ್ಲಿಯವರಿಗೆ 262 ಕೊರೋನ ಪ್ರಕರಣ ಪತ್ತೆಯಾಗಿದ್ದು, 124 ಜನರು ಗುಣಮುಖರಾಗಿದ್ದು, 122 ಜನರಿಗೆ ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನರು ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 9,469 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,368 ಜನರು ಹಾಗೂ ದ್ವೀತಿಯ ಸಂಪರ್ಕದಲ್ಲಿರುವ 5,071 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ರಂಝಾನ್ ನಂತರ ಕೊರೋನ ಪರೀಕ್ಷೆ: ಬೊಮ್ಮನಹಳ್ಳಿ ವ್ಯಾಪ್ತಿಯ ಮಂಗಮ್ಮನಪಾಳ್ಯದಲ್ಲಿ ಕೊರೋನ ಪರೀಕ್ಷೆಯನ್ನು ರಂಝಾನ್ ನಂತರ ಪ್ರಾರಂಭಿಸಲು ಬಿಬಿಎಂಪಿ ನಿರ್ಧರಿಸಿದೆ. ಸಾಮುದಾಯಿಕ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದವರಲ್ಲಿ ಬಹುತೇಕರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದು, ಉಪವಾಸ ಇರುವ ಹಿನ್ನೆಲೆಯಲ್ಲಿ ಕೊರೋನ ಸೋಂಕು ಪರೀಕ್ಷೆಗೆ ಒಳಪಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಇವರಲ್ಲಿ ಯಾರಿಗಾದರೂ ಸೋಂಕು ದೃಢಪಟ್ಟರೆ ಕ್ವಾರಂಟೈನ್ ಆಗಬೇಕಾದ ಕಾರಣದಿಂದಲೂ ಪರೀಕ್ಷೆಗೆ ಮುಂದಾಗುತ್ತಿಲ್ಲ. ಹೀಗಾಗಿ, ರಂಜಾನ್ ಮುಗಿದ ಮೇಲೆ ಸಾಮುದಾಯಿಕ ಕೊರೋನ ಸೋಂಕು ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಈ ಭಾಗದಲ್ಲಿ 9 ಜನರಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, 46 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)