varthabharthiನಿಮ್ಮ ಅಂಕಣ

ಕೊರೋನ: ವಲಸೆ ಕಾರ್ಮಿಕರು ಮತ್ತು ಸವಾಲುಗಳು

ವಾರ್ತಾ ಭಾರತಿ : 21 May, 2020
ಡಾ. ಮುಹಮ್ಮದ್ ಹಬೀಬ್, ಮಾನ್ವಿ

ಕೋವಿಡ್-19ರಿಂದಾಗಿ ಗರಿಷ್ಠ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳುತ್ತಿರುವುದರಿಂದ ಅವರ ಕುಟುಂಬಗಳ ಆದಾಯ ಇಳಿಕೆಯಾಗಿ ಗ್ರಾಮೀಣ ಆರ್ಥಿಕತೆಯಲ್ಲಿ ಬಂಡವಾಳ ಸಂಚಯನದ ಕೊರತೆ ಉಂಟಾಗಲಿದೆ. ಜೊತೆಗೆ ನಗರ - ಗ್ರಾಮೀಣ ಪ್ರದೇಶಗಳ ನಡುವಿನ ಆರ್ಥಿಕ ಅಸಮಾನತೆಯೂ ಹೆಚ್ಚಲಿದೆ. ಅಲ್ಲದೆ ನಗರ ಪ್ರದೇಶಗಳಲ್ಲಿ ಶ್ರಮದ ಕೊರತೆಯಾಗಿ, ಗ್ರಾಮೀಣ ಭಾಗದಲ್ಲಿ ಶ್ರಮದ ಪೂರೈಕೆ ಹೆಚ್ಚಳಗೊಂಡು, ಕಾರ್ಮಿಕರ ಮೀಸಲು ಪಡೆ ಸೃಷ್ಟಿಯಾಗಿ, ಕೂಲಿದರಗಳಲ್ಲಿ ಪರಿಣಾಮಕಾರಿ ಬದಲಾವಣೆಯಾಗಿ ಶ್ರಮದ ಮಾರುಕಟ್ಟೆಯ ಮೇಲೆ ಒತ್ತಡ ಉಂಟಾಗುವುದಲ್ಲದೆ ಕೃಷಿಯಲ್ಲಿ ಮರೆಮಾಚಿದ ನಿರುದ್ಯೋಗವೂ ಹೆಚ್ಚಲಿದೆ.


“Without migrants there would be no Beijing, Shanghai, Shenzhen” ಎಂಬ ಮಾತಿಗೆ ಭಾರತವೂ ಹೊರತಾಗಿಲ್ಲ. ಇಂದಿನ ಮಹಾನಗರಗಳಾದ ಮುಂಬೈ, ಬೆಂಗಳೂರು, ದಿಲ್ಲಿ, ಚೆನೈ, ಹೈದರಾಬಾದ್‌ಗಳು ವಲಸೆ ಕಾರ್ಮಿಕರ ಬೆವರಿನಿಂದ ನಿರ್ಮಿಸಲ್ಪಟ್ಟಿವೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಕೋವಿಡ್-19ನ ಪರಿಣಾಮವಾಗಿ ಹೇರಲಾದ ‘ಲಾಕ್‌ಡೌನ್’ನ ಪ್ರಾರಂಭದ ದಿನಗಳಿಂದ ವಲಸೆ ಕಾರ್ಮಿಕರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಈ ವಲಸೆ ಎಂದರೆ ಏನು? ವಲಸೆ ಕಾರ್ಮಿಕರು ಯಾರು? ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ? ಇದ್ದಕ್ಕಿದ್ದಂತೆ ಇವರೇಕೆ ಇಷ್ಟೊಂದು ಪ್ರಾಮುಖ್ಯತೆ ಪಡೆದುಕೊಳ್ಳಲಾರಂಭಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಕುಳಿತರೆ ನಮಗೆ ಸಿಗುವ ಉತ್ತರ ಮೇಲ್ನೋಟಕ್ಕೆ ಕಾಣುವಷ್ಟು ಸಾಮಾನ್ಯವಾದುದಲ್ಲ. ವಲಸೆ ಎಂಬುದು ಮಾನವನ ಇತಿಹಾಸದಷ್ಟೇ ಹಳೆಯದಾಗಿದೆ ಆದರೆ ಕಾಲಕ್ಕೆ ತಕ್ಕಂತೆ ವಲಸೆಯ ಸ್ವರೂಪ ಮತ್ತು ಮಾದರಿ ಬದಲಾಗುತ್ತಾ ಹೋಗಿದೆ. ಸಾಮಾನ್ಯವಾಗಿ ವಲಸೆಯೆಂದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ನಮ್ಮ ವಾಸ್ತವ್ಯವನ್ನು ಬದಲಾಯಿಸುವುದಾಗಿದೆ. ವಲಸಿಗರೆಂದರೆ ನಮ್ಮ ಸ್ಮತಿಪಟಲಕ್ಕೆ ಮೊದಲು ಹೊಳೆಯುವುದೇ ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಪ.ಬಂಗಾಳ, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಬಡ ಕೂಲಿ ಕಾರ್ಮಿಕರು. ಆದರೆ ಇದು ವಾಸ್ತವವೇ? ಖಂಡಿತ ಅಲ್ಲ, ಏಕೆಂದರೆ ಸೂಕ್ಷ್ಮವಾಗಿ ಪರಿಶೀಲಿಸುತ್ತಾ ಹೋದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜಗತ್ತಿನ ಪ್ರತಿಯೊಬ್ಬರು ವಲಸಿಗರೇ ಆಗಿದ್ದಾರೆ.

ಜನರು ವಿಭಿನ್ನ ಕಾರಣಗಳಿಗಾಗಿ ವಲಸೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು ಅವುಗಳಲ್ಲಿ ಮದುವೆ, ಉದ್ಯೋಗ ಮತ್ತು ಶಿಕ್ಷಣ ಪ್ರಮುಖವಾದವುಗಳಾಗಿವೆ. ಇವುಗಳಲ್ಲಿ ಲಾಕ್‌ಡೌನ್‌ನಿಂದಾಗಿ ಇತ್ತೀಚೆಗೆ ಸುದ್ದಿಯಲ್ಲಿರುವುದು ಉದ್ಯೋಗ ಆಧಾರಿತ ವಲಸೆಯಾಗಿದೆ. ಕೋವಿಡ್-19ರ ‘ಲಾಕ್‌ಡೌನ್’ ಸಂದರ್ಭದಲ್ಲಿ ಉದ್ಯೋಗಾಧಾರಿತ ವಲಸೆ ಕಾರ್ಮಿಕರ ದುಸ್ಥಿತಿಯ ಕುರಿತು ಮಾಧ್ಯಮ ಗಳು ಬೆಳಕು ಚೆಲ್ಲಲು ಪ್ರಾರಂಭಿಸಿದ್ದು ರಾಯಚೂರು ಜಿಲ್ಲೆಯ ಸಿಂಧನೂರಿನ ವಲಸೆ ಕಾರ್ಮಿಕ ಮಹಿಳೆಯ ಸಾವಿನ ಬಳಿಕ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬಂದು, ಬೆಂದು, ಹೈರಾಣಾಗಿದ್ದ ಆ ಮಹಿಳೆಯ ಜೀವವು ವ್ಯವಸ್ಥೆಯ ಕುರುಡುತನಕ್ಕೆ ಬಲಿಯಾಯಿತು. ಈ ಘಟನೆಯ ಬಳಿಕವೂ ಲಕ್ಷಾಂತರ ವಲಸೆ ಕಾರ್ಮಿಕರು ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಮ್ಮ ಕೈಚೀಲಗಳನ್ನು, ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು, ಕಾಲ್ನಡಿಗೆಯಲ್ಲಿ, ದ್ವಿಚಕ್ರ ವಾಹನಗಳಲ್ಲಿ, ತ್ರಿಚಕ್ರವಾಹನಗಳಲ್ಲಿ, ಟ್ರಾಕ್ಟರ್‌ಗಳಲ್ಲಿ, ಲಾರಿಗಳಲ್ಲಿ, ಕೊನೆಗೆ ಕಂಟೇನರ್‌ಗಳಲ್ಲಿಯೂ ಹೊರಟಿದ್ದ ದುಸ್ಥಿತಿಯ ಹಲವಾರು ಮನಕಲಕುವ ಫೋಟೊಗಳನ್ನು, ವೀಡಿಯೊಗಳನ್ನು ಮೀಡಿಯಾ, ಸೋಷಿಯಲ್ ಮೀಡಿಯಾಗಳಲ್ಲಿ ನೋಡಿದ್ದೇವೆ.

ದೇಶದಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ನಮಗೆ ಸಂಬಂಧವೇ ಇಲ್ಲವೇನೋ ಎಂಬಂತಿದ್ದವರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದ್ದು ಔರಂಗಾಬಾದ್‌ನ ಹತ್ತಿರದ ರೈಲು ಹಳಿಗಳ ಮೇಲೆ ನಡೆದ ಅಮಾಯಕ ವಲಸೆ ಕಾರ್ಮಿಕರ ಮಾರಣಹೋಮ. ಆ 16 ಜನರ ಜೀವ ಮತ್ತು ಜೀವನದ ಬೆಲೆ ಅಲ್ಲಿಯ ರೈಲು ಹಳಿಗಳ ಮೇಲೆ ಚೆಲ್ಲಾಪಿಲ್ಲಿಯಾಗಿದ್ದ ರೊಟ್ಟಿಗಳಿಗಿಂತಲೂ ಕಡೆಯಾಗಿದ್ದು ಈ ದೇಶದ ದೌರ್ಭಾಗ್ಯವೇ ಸರಿ. ನಮ್ಮನ್ನಾಳುವ ಸರಕಾರಗಳು ಅದ್ಯಾಕೆ ಇವರನ್ನು ಇಷ್ಟೊಂದು ತುಚ್ಛವಾಗಿ ನಡೆಸಿಕೊಳ್ಳುತ್ತಿವೆ? ಬಡವರೆಂಬ ಕಾರಣಕ್ಕೋ? ಅಥವಾ ಅಸಹಾಯಕರೆಂಬುದಕ್ಕೋ? ಅಥವಾ ಇವರಾರು ಮತದಾರರಲ್ಲವೆಂಬ ಕಾರಣಕ್ಕೋ? ಈ ರೀತಿಯ ಪ್ರಶ್ನೆಗಳು ಹುಟ್ಟಲೂ ಕಾರಣಗಳಿವೆ. ಶ್ರೀಮಂತ ಮನೆತನದಲ್ಲಿ ಹುಟ್ಟಿ, ಓದಲು-ದುಡಿಯಲು ವಿದೇಶಕ್ಕೆ ಹಾರಿದ್ದವರನ್ನು ಅವರಿದ್ದಲ್ಲಿಗೆ ವಿಮಾನಗಳನ್ನು ಕಳುಹಿಸಿ ವಾಪಸಾಗುವವರೆಗೆ ಏರ್‌ಪೋರ್ಟ್ ಗಳನ್ನು ಕಾರ್ಯಾಚರಣೆಯಲ್ಲಿಟ್ಟಿದ್ದು ಒಂದೆಡೆಯಾದರೆ, ಬಡ ವಲಸೆ ಕಾರ್ಮಿಕರು ನಡುರಸ್ತೆಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದರೂ ಕೈಚೆಲ್ಲಿ ಕುಳಿತಿರೋ ನಿದರ್ಶನಗಳು ಮತ್ತೊಂದೆಡೆ. ವಿದೇಶದಿಂದ ನಮ್ಮವರನ್ನು ಕರೆತರಬಾರದಿತ್ತೆಂಬ ವಾದವಲ್ಲ. ಆದರೆ, ಈ ವ್ಯವಸ್ಥೆಯ ‘ಉಳ್ಳವರ ಪರ-ಇಲ್ಲದವರ ವಿರೋಧಿ’ ಮನಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಯತ್ನವಷ್ಟೇ.

ಈ ರೀತಿ ಕನ್ನಡಿ ಹಿಡಿಯುವ ಇಚ್ಛೆ ಸುಮ್ಮನೆ ಹುಟ್ಟಿದ್ದಲ್ಲ, ಇದರ ಹಿಂದೆ ಹಲವಾರು ಅಮಾನವೀಯ ಘಟನೆಗಳ ಪಟ್ಟಿಯೇ ಇದೆ. ಅದು ಸಿಂಧನೂರಿನ ಮಹಿಳೆಯ ಸಾವಿನ ವಿಚಾರವಾಗಿರಬಹುದು, ಮನೆ ಸೇರಲು ನಡೆದು ಹೋಗುತ್ತಿದ್ದವರನ್ನು ತಡೆದು ಬಸ್ಕಿ ಹೊಡೆಸಿದ ಪೊಲೀಸರ ಕ್ರಮವಾಗಿರಬಹುದು, ಉತ್ತರ ಪ್ರದೇಶ ಮತ್ತು ಕೇರಳದ ಹೆದ್ದಾರಿಯಲ್ಲಿ ಮಾನವ ಘನತೆಯನ್ನೂ ಲೆಕ್ಕಿಸದೆ ಅಮಾಯಕ ಕಾರ್ಮಿಕರ ಮೇಲೆ ಕ್ರಮವಾಗಿ ರಾಸಾಯನಿಕ ಮತ್ತು ಸಾಬೂನಿನ ನೀರನ್ನು ಸಿಂಪಡಿಸಿದ ರಾಜ್ಯಗಳ ಅಮಾನವೀಯ ನಡೆಯಾಗಿರಬಹುದು, ಮಹಾರಾಷ್ಟ್ರದ ನಾಸಿಕ್‌ನಿಂದ ಮಧ್ಯಪ್ರದೇಶದ ಸಾತ್ನಾಕ್ಕೆ ಹೊರಡುವಾಗ ರಸ್ತೆಯಲ್ಲೇ ಹೆರಿಗೆಯಾಗಿ ಕೇವಲ 2 ಗಂಟೆಯ ವಿಶ್ರಾಂತಿಯ ಬಳಿಕ ಮಗುವನ್ನು ಹೊತ್ತುಕೊಂಡು 150 ಕಿ.ಮೀ. ಕಾಲ್ನಡಿಗೆಯಲ್ಲಿ ಊರಿಗೆ ತಲುಪಿದ ಆ ಮಹಾತಾಯಿಯ, ಅವಳ ಮಗುವಿನ ದುರದೃಷ್ಟವಾಗಿರಬಹುದು, ರೈಲು ಸಿಗದೇ ಹೈದರಾಬಾದ್‌ನಿಂದ ಮಧ್ಯಪ್ರದೇಶದ ಬಾಲಾಘಾಟ್‌ವರೆಗೆ 650 ಕಿ.ಮೀ. ತನ್ನ ಗರ್ಭಿಣಿ ಹೆಂಡತಿ ಹಾಗೂ ಮಗುವನ್ನು ಚಪ್ಪಟೆಯಾಕಾರದ ಕಟ್ಟಿಗೆಯ ಹಲಗೆಯಿಂದ ಮಾಡಿದ ಚಿಕ್ಕ ಬಂಡಿಯಲ್ಲಿ ಎಳೆದುಕೊಂಡು ಹೋಗುತ್ತಿದ್ದ ಘಟನೆಯಾಗಿರಬಹುದು, ಪಂಜಾಬ್‌ನಿಂದ 800 ಕಿ.ಮೀ. ದೂರದ ಉತ್ತರ ಪ್ರದೇಶದ ಝಾನ್ಸಿಗೆ ತೆರಳುವಾಗ ನಡೆದು ನಡೆದು ಕಾಲು ಸೋತ ಮಗುವನ್ನು ಸೂಟ್‌ಕೇಸ್‌ನ ಮೇಲೆ ಮಲಗಿಸಿ ಎಳೆದುಕೊಂಡು ಹೋಗುತ್ತಿದ್ದ ತಾಯಿಯ ಅಸಹಾಯಕತೆಯಾಗಿರಬಹುದು, ಮಹಾರಾಷ್ಟ್ರದ ನಾಂದೇಡ್‌ನಿಂದ ಮಧ್ಯಪ್ರದೇಶದ ರೇವಾವರೆಗಿನ 800 ಕಿ.ಮೀ. ದೂರವನ್ನು ಕ್ರಮಿಸಲು ಎತ್ತಿನ ಬಂಡಿಯ ಮತ್ತೊಂದು ಮಗ್ಗಲಿಗೆ ತಾನೇ ಹೆಗಲು ಕೊಟ್ಟು ಹೆತ್ತತಾಯಿಯನ್ನು ಹೊತ್ತು ಹೋಗುತ್ತಿದ್ದ ಹಿಂದೂ ಶ್ರವಣಕುಮಾರನ ಘಟನೆಯಾಗಿರಬಹುದು, 11 ವರ್ಷದ ಬಾಲಕನೊಬ್ಬ ವಾರಣಾಸಿಯಿಂದ ಬಿಹಾರದ ಅರಾರಿಯಾ ಎಂಬಲ್ಲಿಗೆ ರಿಕ್ಷಾ ತುಳಿಯುತ್ತಾ ತನ್ನ ತಂದೆ -ತಾಯಿಯನ್ನು ಹೊತ್ತೊಯ್ಯುತ್ತಿದ್ದ ಮುಸ್ಲಿಮ್ ಆಧುನಿಕ ಶ್ರವಣಕುಮಾರನ ಘಟನೆಯಾಗಿರಬಹುದು, ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂಬೈಯ ರೈಲು ನಿಲ್ದಾಣದ ಬಳಿ ಜಮಾಯಿಸಿದ್ದ ವಲಸೆ ಕಾರ್ಮಿಕರ ಮೇಲೆ ಪೊಲೀಸರು ಲಾಠಿ ಬೀಸಿದ ಘಟನೆಯಾಗಿರಬಹುದು, ಮಂಗಳೂರಿನಲ್ಲಿ ವಲಸೆ ಕಾರ್ಮಿಕರಿಗೆ ಕೊಳೆತ, ಹುಳಹಿಡಿದ ಅಕ್ಕಿಯನ್ನು ತಿನ್ನಲು ನೀಡಿದ ಭ್ರಷ್ಟ ಘಟನೆಯಾಗಿರಬಹುದು, ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ದೇಶದ ಒಂದಲ್ಲ ಒಂದು ಭಾಗದಲ್ಲಿ ಅಪಘಾತಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳಾಗಿರಬಹುದು, ಇತ್ತೀಚಿನ ತೀರ್ಪಿನಲ್ಲಿ ವಲಸೆ ಕಾರ್ಮಿಕರನ್ನು ನಡೆದು ಹೋಗದಂತೆ ತಡೆಯಲಾಗದು, ಅದು ರಾಜ್ಯ ಸರಕಾರಗಳಿಗೆ ಬಿಟ್ಟದ್ದು ಎಂದು ಕೈಚೆಲ್ಲಿದ ಸುಪ್ರೀಂಕೋರ್ಟಿನ ಸುಪ್ರೀಂ ನಿಲುವೇ ಆಗಿರಬಹುದು. ಹೀಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಈ ಎಲ್ಲಾ ಘಟನೆಗಳನ್ನು ಮೆಲುಕು ಹಾಕಿದರೆ ಈ ವಲಸೆ ಕಾರ್ಮಿಕರ ಕುರಿತು ನಮಗೆ ನಿಜವಾಗಲೂ ಕಾಳಜಿಯಿದೆಯಾ ಎಂದೆನಿಸದಿರದು. ಇಷ್ಟೆಲ್ಲಾ ದುರ್ಘಟನೆಗಳು ಸಂಭವಿಸುತ್ತಿರಲು ಕಾರಣಗಳೇನು? ಬದುಕನ್ನರಸಿ ನಗರ ಪ್ರದೇಶಗಳಿಗೆ ಹೋಗಿರುವುದಾ? (ಹೌದಾದರೆ ಬೇರೊಂದು ಪ್ರದೇಶಕ್ಕೆ ಉದ್ಯೋಗವನ್ನರಸಿ ಹೋಗುವಂತೆ ಮಾಡಿದ್ದು ಯಾರು?) ಅಥವಾ ತಾವಿದ್ದಲ್ಲೇ ಇರಿ ಎಂಬ ಸರಕಾರದ ಫರ್ಮಾನನ್ನು ಮೀರಿದ್ದಾ? (ಹೌದಾದಲ್ಲಿ ತಾವಿದ್ದಲ್ಲಿಯೇ ಇರಲಿಕ್ಕೆ ಸರಕಾರ ಒದಗಿಸಿದ್ದ ಸೌಕರ್ಯವೇನಾಗಿತ್ತು?) ಇವೆರೆಡೂ ವಿಚಾರಗಳಲ್ಲಿ ಇಂದಿನವರೆಗೂ ನಮ್ಮನ್ನಾಳಿದ ಹಾಗೂ ಆಳುತ್ತಿರುವ ಸರಕಾರಗಳು ತುಂಬಾ ಶೋಚನೀಯವಾದ ರೀತಿಯಲ್ಲಿ ಸೋತಿವೆ ಎಂಬುದಂತೂ ಸ್ಪಷ್ಟ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಿ ಸಮಾನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಹಿಂದಿನ ಸರಕಾರಗಳು ಎಡವಿದ್ದರೆ, ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆ ಸೇರಿಸಿ, ಮುಂದಿನ ಬದುಕು ಕಟ್ಟಿಕೊಡುವಲ್ಲಿ ಇಂದಿನ ಸರಕಾರಗಳು ಎಡವಿರೋದು ಸ್ಪಷ್ಟ. ಕರ್ನಾಟಕದಲ್ಲಿ ಹಿಂದಿನ ಸರಕಾರದಲ್ಲಿದ್ದ ಸಚಿವರೊಬ್ಬರ ‘ವಲಸೆ ಕಾರ್ಮಿಕರು ಶೋಕಿ ಮಾಡೋಕೆ ಬೆಂಗಳೂರು ಹೋಗ್ತಾರ’? ಎಂಬ ಧಾಟಿಯ ಹೇಳಿಕೆ, ಪ್ರಸ್ತುತ ಸರಕಾರದಲ್ಲಿರುವ ಸಚಿವರೊಬ್ಬರ ‘ವಲಸೆ ಕಾರ್ಮಿಕರನ್ನು ಉಚಿತವಾಗಿ ಸಾರಿಗೆ ಬಸ್‌ಗಳಲ್ಲಿ ಊರಿಗೆ ಕಳುಹಿಸುವುದು ಅಸಾಧ್ಯ’ ಎಂಬ ಹೇಳಿಕೆ ಹಾಗೂ ಬಿಲ್ಡರ್‌ಗಳ ಒತ್ತಡಕ್ಕೆ ಮಣಿದು ಟ್ರೈನ್‌ಗಳನ್ನು ಕ್ಯಾನ್ಸಲ್ ಮಾಡಲು ಮುಂದಾಗಿದ್ದ ಸರಕಾರದ ಕ್ರಮವನ್ನು ‘ಬೋಲ್ಡ್‌ಮೂವ್’ ಎಂದಿದ್ದ ಎಂಪಿಯ ಹೇಳಿಕೆಗಳನ್ನು ಗಮನಿಸಿದಾಗ ವಲಸೆ ಕಾರ್ಮಿಕರ ಕುರಿತು ನಮ್ಮನ್ನಾಳುವವರ ಮನಸ್ಥಿತಿ ಹೇಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಈ ತರಹದ ಮನಸ್ಥಿತಿಗಳನ್ನು ನೋಡಿದಾಗ ವಲಸೆ ಕಾರ್ಮಿಕರು ಯಾರಿಗೂ ಬೇಡವಾಗಿದ್ದಾರಾ? ಇವರಿಂದ ಯಾರಿಗೂ ಉಪಯೋಗವಾಗುತ್ತಿಲ್ಲವಾ? ಈ ದೇಶಕ್ಕೆ, ಸಮಾಜಕ್ಕೆ ಇವರ ಕೊಡುಗೆಯೇನೂ ಇಲ್ಲವಾ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ನಿಟ್ಟಿನಲ್ಲಿ ಚಿಂತಿಸುವುದಾದರೆ ಈ ದೇಶಕ್ಕೆ ವಲಸೆ ಕಾರ್ಮಿಕರ ಕೊಡುಗೆ ಅನನ್ಯ. ವಲಸೆ ಕಾರ್ಮಿಕರಿಲ್ಲದಿದ್ದರೆ ಇಂದಿನ ನಗರಗಳು ಭೂಮಿಯುದ್ದಗಲ ಮತ್ತು ಆಕಾಶದೆತ್ತರದಷ್ಟು ಬೆಳೆಯುವುದು ಅಸಾಧ್ಯವಾಗಿತ್ತು. ಇವರ ಪಾತ್ರ ಇದಷ್ಟಕ್ಕೇ ಸೀಮಿತವಾಗಿಲ್ಲ, ನಗರ-ಗ್ರಾಮೀಣ ಪ್ರದೇಶಗಳ ನಡುವಿನ ಸಾಮಾಜಿಕ, ಆರ್ಥಿಕ, ತಾಂತ್ರಿಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಹಾಗೂ ಗ್ರಾಮೀಣ ಕೃಷಿ ವಲಯದ ಮೇಲಿನ ಒತ್ತಡವನ್ನು ಹೋಗಲಾಡಿಸುವಲ್ಲಿ ಮತ್ತು ಇನ್ನಿತರೆ ಹತ್ತು ಹಲವು ವಿಚಾರಗಳಲ್ಲಿ ಸರಕಾರಗಳು ಮಾಡದ ಕೆಲಸವನ್ನು ವಲಸೆ ಕಾರ್ಮಿಕರು ಮಾಡುತ್ತಿದ್ದಾರೆ. ಈ ಮಟ್ಟದ ಮಹತ್ವವನ್ನು ಹೊಂದಿದ್ದರೂ ಕೋವಿಡ್-19ನಿಂದಾಗಿ ಘೋಷಣೆಯಾದ ಲಾಕ್‌ಡೌನ್‌ನಲ್ಲಿ ಸರಕಾರದಿಂದ ದೊರೆಯಬೇಕಿದ್ದ ಕಾಳಜಿ ದೊರೆಯದಿದ್ದದ್ದು ಖೇದಕರ. ಇದಕ್ಕೆ ಅತೀ ದೊಡ್ಡ ಕಾರಣವೆಂದರೆ ಸರಕಾರಗಳಿಗೆ ಆಂತರಿಕ ವಲಸೆ ಕಾರ್ಮಿಕರ ಕುರಿತು ಸಂಪೂರ್ಣ ಹಾಗೂ ಸ್ಪಷ್ಟ ಮಾಹಿತಿ ಇಲ್ಲದಿರುವುದು ಅಥವಾ ಅಲ್ಪಾವಧಿ ವಲಸೆಯನ್ನು ದಾಖಲಿಸದಿರುವುದು. ದಶಕಕ್ಕೊಮ್ಮೆ ನಡೆಯುವ ಜನಗಣತಿಯಲ್ಲಿ ಒಬ್ಬ ವ್ಯಕ್ತಿಯು ಒಂದು ಆಡಳಿತ ವ್ಯಾಪ್ತಿಯಿಂದ ಮತ್ತೊಂದು ಆಡಳಿತ ವ್ಯಾಪ್ತಿಯಲ್ಲಿ 6 ತಿಂಗಳಿಗೂ ಹೆಚ್ಚಿನ ಕಾಲ ನೆಲೆಸಿದರೆ ವಲಸಿಗನೆಂದು ಪರಿಗಣಿಸಲಾಗುತ್ತದೆ.

ಆದರೆ ಆಂತರಿಕ ವಲಸೆ ಕಾರ್ಮಿಕರು ಕೃಷಿ ಚಟುವಟಿಕೆಗಳ ಆಧಾರದಲ್ಲಿ ವಿಭಿನ್ನ ಅವಧಿಗಳಿಗೆ(3 ರಿಂದ 8 ತಿಂಗಳು) ವಲಸೆ ಹೋಗಿ ವಾಪಸಾಗುವುದರಿಂದ ಇವರ ಕುರಿತು ಸರಕಾರದ ಬಳಿ ಸರಿಯಾದ ಮಾಹಿತಿಯಿಲ್ಲ. ಪ್ರೊ. ಶ್ರೀವಾಸ್ತವ ಅವರ 2018ರ ಒಂದು ಸಂಶೋಧನಾ ಅಧ್ಯಯನದ ಪ್ರಕಾರ ಕೇವಲ ಕಟ್ಟಡ ನಿರ್ಮಾಣ ಉದ್ಯಮವೊಂದರಲ್ಲಿಯೇ ಅಂದಾಜು 27.5 ಮಿಲಿಯನ್ ವಲಸೆ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ ಹಾಗೂ ಭಾರತದಲ್ಲಿ ಒಟ್ಟು ವಲಸೆ ಕಾರ್ಮಿಕರ ಸಂಖ್ಯೆ ಸುಮಾರು 55 ರಿಂದ 60 ಮಿಲಿಯನ್ ನಷ್ಟಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಕಂದಾಯ ಇಲಾಖೆ ಅಥವಾ ಕಾರ್ಮಿಕ ಇಲಾಖೆಯು ವಲಸೆ ಹೋಗುವವರ ಮಾಹಿತಿಯನ್ನು ಗ್ರಾಮ ಮಟ್ಟದಲ್ಲೇ ಪ್ರತಿವರ್ಷ ದಾಖಲಿಸುತ್ತಿದ್ದಿದ್ದರೆ ಆಯಾ ಜಿಲ್ಲಾಡಳಿತಗಳೇ ಜಿಲ್ಲೆಗೊಂದರಂತೆ ಸಹಾಯವಾಣಿಗಳನ್ನು ಪ್ರಾರಂಭಿಸಿ ಕನಿಷ್ಠಪಕ್ಷ ರಾಜ್ಯದ ಒಳಗೆ ವಲಸೆ ಹೋಗಿರುವವರನ್ನು ಸುಸೂತ್ರವಾಗಿ ವಾಪಸ್ ಕರೆತಂದು ಇಂದು ಸೃಷ್ಟಿಯಾಗಿರುವ ಮಹಾಮಾನವ ದುರಂತವನ್ನು ತಡೆಯಬಹುದಿತ್ತು.

ವಲಸೆಯ ಮೇಲೆ ಕೋವಿಡ್‌ನ ಪರಿಣಾಮಗಳು:

ಕೋವಿಡ್-19ರಿಂದಾಗಿ ಗರಿಷ್ಠ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳುತ್ತಿರುವುದರಿಂದ ಅವರ ಕುಟುಂಬಗಳ ಆದಾಯ ಇಳಿಕೆಯಾಗಿ ಗ್ರಾಮೀಣ ಆರ್ಥಿಕತೆಯಲ್ಲಿ ಬಂಡವಾಳ ಸಂಚಯನದ ಕೊರತೆ ಉಂಟಾಗಲಿದೆ. ಜೊತೆಗೆ ನಗರ - ಗ್ರಾಮೀಣ ಪ್ರದೇಶಗಳ ನಡುವಿನ ಆರ್ಥಿಕ ಅಸಮಾನತೆಯೂ ಹೆಚ್ಚಲಿದೆ. ಅಲ್ಲದೆ ನಗರ ಪ್ರದೇಶಗಳಲ್ಲಿ ಶ್ರಮದ ಕೊರತೆಯಾಗಿ, ಗ್ರಾಮೀಣ ಭಾಗದಲ್ಲಿ ಶ್ರಮದ ಪೂರೈಕೆ ಹೆಚ್ಚಳಗೊಂಡು, ಕಾರ್ಮಿಕರ ಮೀಸಲು ಪಡೆ ಸೃಷ್ಟಿಯಾಗಿ, ಕೂಲಿದರಗಳಲ್ಲಿ ಪರಿಣಾಮಕಾರಿ ಬದಲಾವಣೆಯಾಗಿ ಶ್ರಮದ ಮಾರುಕಟ್ಟೆಯ ಮೇಲೆ ಒತ್ತಡ ಉಂಟಾಗುವುದಲ್ಲದೆ ಕೃಷಿಯಲ್ಲಿ ಮರೆಮಾಚಿದ ನಿರುದ್ಯೋಗವೂ ಹೆಚ್ಚಲಿದೆ.

ಕೋವಿಡ್19ರ ಪರಿಣಾಮದಿಂದ ವಲಸೆ ಮೂಲದ ಆದಾಯಕ್ಕೆ ಪೂರ್ಣವಿರಾಮ ಬೀಳುವುದರಿಂದ ಈ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ಇವುಗಳ ತಲಾವೆಚ್ಚ, ಅನುಭೋಗ ಪ್ರಮಾಣ ಮತ್ತು ಕ್ಯಾಲೋರಿ ಸೇವನೆಯಲ್ಲಿ ಇಳಿಕೆಯಾಗಿ ಮಾರುಕಟ್ಟೆಯಲ್ಲಿನ ಉತ್ಪಾದಿತ ವಸ್ತುಗಳ ಬೇಡಿಕೆಯಲ್ಲಿ ಕೊರತೆ ಉಂಟಾಗುವುದರಿಂದ ಉತ್ಪಾದನಾ ಪ್ರಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ. ಉದ್ಯೋಗಾವಕಾಶಗಳಿಲ್ಲದೆ, ವಲಸೆ ಕಾರ್ಮಿಕರು ಪುನಃ ಲೇವಾದೇವಿದಾರರ ಸಾಲದ ಸುಳಿಗೆ ಸಿಲುಕುವ ಅಪಾಯ ಹೆಚ್ಚಲಿದೆಯಲ್ಲದೇ ಬದುಕು ಸಾಗಿಸಲು ಸರಕಾರದ ಮೇಲೆ ಜನರ ಅವಲಂಬನೆ ಹೆಚ್ಚುವ ಮೂಲಕ ‘ಆತ್ಮನಿರ್ಭರ’ದ ಕನಸಿಗೆ ಪೆಟ್ಟು ಬೀಳಲಿದೆ. ಆಗಬೇಕಾದ್ದು

1. ಕೋವಿಡ್-19ರಿಂದಾಗಿ ಅಧಿಕಾರವು ಕೇಂದ್ರದಲ್ಲಿಯೇ ಕೇಂದ್ರೀಕೃತವಾಗಿ ರುವುದರಿಂದ ವಲಸೆ ಕಾರ್ಮಿಕರ ಪರಿಸ್ಥಿತಿ ತೀರಾ ಹದಗೆಡಲು ಕಾರಣವಾಗಿದೆ. ಅಧಿಕಾರ ವಿಕೇಂದ್ರೀಕರಣದ ಮೂಲಕ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೆ ವಲಸೆ ಕಾರ್ಮಿಕರ ವಿಚಾರದಲ್ಲಿ ಸಂಪೂರ್ಣ ಸ್ವತಂತ್ರ್ಯ ನೀಡಿದ್ದಲ್ಲಿ ಪ್ರತಿ ಗ್ರಾಮದಿಂದ ಮಾಹಿತಿ ಪಡೆದು ಈಗಲೂ ಸಿಲುಕಿಕೊಂಡು ಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು ತುಂಬಾ ಸುಲಭವಾಗಿ ವಾಪಸ್ ಕರೆಯಿಸಿಕೊಳ್ಳಬಹುದಾಗಿದೆ.

2. ಕೋವಿಡ್-19ಕ್ಕೆ ಲಸಿಕೆ ದೊರೆಯುವವರೆಗೆ ವಲಸೆ ಕಾರ್ಮಿಕರ ಕುಟುಂಬಗಳಿಗೆ ಸರಕಾರವು ತಿಂಗಳಿಗೆ ರೂ. 10,000ದಂತೆ ವರ್ಗಾಯಿಸಬೇಕು.

3. ಕೋವಿಡ್-19ರಿಂದಾಗಿ ಗ್ರಾಮೀಣ ಆರ್ಥಿಕತೆಯ ಮೇಲೆ ಬೀಳುವ ನಿರುದ್ಯೋಗದ ಹೊರೆಯನ್ನು ಎದುರಿಸಲು ದೇಶದಲ್ಲಿ ಕೋವಿಡ್-19 ಸಂಪೂರ್ಣವಾಗಿ ಹತೋಟಿಗೆ ಬರುವವರೆಗೆ MGNREGA ಅಡಿಯಲ್ಲಿ ವರ್ಷದ 365 ದಿನಗಳೂ ಕಾಮಗಾರಿ ಕೈಗೊಂಡು ಕೂಲಿಯನ್ನು ನೀಡಬೇಕು.

4. ದೇಶದಲ್ಲಿ ಅಲ್ಪಾವಧಿ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ನಿಖರವಾದ ಅಂಕಿ ಅಂಶಗಳ ಕೊರತೆಯನ್ನು ನೀಗಿಸಲು ಚೀನಾದ ಹುಕೋ ಪದ್ಧತಿಯಂತೆ ನಮ್ಮಲ್ಲೂ ಗ್ರಾಮ ಮಟ್ಟದಲ್ಲಿಯೇ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತಹ ಮಾಹಿತಿಯನ್ನು ದಾಖಲಿಸುವುದನ್ನು ಪ್ರಾರಂಭಿಸಬೇಕು.

5. ಹೆಚ್ಚಿನ ವಲಸೆ ಕಾರ್ಮಿಕರು ಕೃಷಿ ಚಟುವಟಿಕೆಗಳಿಲ್ಲದ ಸಂದರ್ಭ ಅಲ್ಪಾವಧಿಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವುದರಿಂದ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಸಿರುವುದಿಲ್ಲ, ಇದರಿಂದ ಕಟ್ಟಡ ಮಾಲಕರ ಹಾಗೂ ಸರಕಾರದ ವತಿಯಿಂದ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಇವರು ಗ್ರಾಮದಿಂದ ಹೊರಡುವಾಗಲೇ ಪಂಚಾಯತ್ ವತಿಯಿಂದ ನೋಂದಣಿ ಮಾಡಿಸಿ, ಕಾರ್ಮಿಕ ಹಕ್ಕುಗಳ ಹಾಗೂ ಸರಕಾರಿ ಸಹಾಯವಾಣಿಗಳ ಕುರಿತು ಮಾಹಿತಿ ನೀಡಿ ಕಳುಹಿಸುವುದು.

6. ಮನೆಗಳಿಗೆ ವಾಪಸಾಗದೇ ಹೋದಲ್ಲಿಯೇ ನೆಲೆಸಿ ಕೆಲಸ ನಿರ್ವಹಿಸುತ್ತಿರುವ ವಲಸೆ ಕಾರ್ಮಿಕರು ಒಂದುವೇಳೆ ಕೊವಿಡ್-19ಕ್ಕೆ ಗುರಿಯಾದರೆ ಅವರು ಸಂಪೂರ್ಣವಾಗಿ ಗುಣಮುಖವಾಗುವವರೆಗಿನ ಖರ್ಚನ್ನು ಸಂಬಂಧಪಟ್ಟ ಉದ್ಯೋಗದಾತರು ವಹಿಸಿಕೊಳ್ಳುವಂತೆ ಆದೇಶ ಹೊರಡಿಸುವುದು, ಕಡ್ಡಾಯ ಆರೋಗ್ಯ ವಿಮೆ ಮಾಡಿಸುವುದು ಹಾಗೂ ಕಾಮಗಾರಿಯ ಸ್ಥಳದಲ್ಲಿಯೇ ಸುರಕ್ಷಿತ ಅಂತರದ ಅಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುವುದು. ಆತ್ಮನಿರ್ಭರದ ಹೆಸರಿನಲ್ಲಿ ವಲಸೆ ಕಾರ್ಮಿಕರಿಗೆ ಎರಡು ತಿಂಗಳವರೆಗೆ ಪಡಿತರ ವ್ಯವಸ್ಥೆ ಮಾಡಿರುವುದು- ಮಾಡದೇ ಇರುವುದಕ್ಕೆ ಸಮವಾಗಿದೆ. ಏಕೆಂದರೆ ಹೆಚ್ಚು ಕಡಿಮೆ ವಲಸೆ ಕಾರ್ಮಿಕರ ಕುಟುಂಬಗಳಲ್ಲಿನ ಒಬ್ಬ ಸದಸ್ಯರಾದರೂ ನಿರಂತರವಾಗಿ ಪಡಿತರವನ್ನು ಪಡೆಯುತ್ತಾ ಬಂದಿರುತ್ತಾರೆ, ಹೊಸದಾಗಿ ಕೊಡಲು ನಿರ್ಧರಿಸಿರುವ ಪಡಿತರದ ಮಹತ್ವ ನಗಣ್ಯ. ಅದೇ ರೀತಿಯಾಗಿ ನಗರ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆಯ ಸೌಲಭ್ಯದ ಕುರಿತೂ ಪ್ರಸ್ತಾಪಿಸಲಾಗಿದೆ. ಇದು ಉತ್ತಮವಾದ ಅಂಶವಾದರೂ ಆಂತರಿಕ ವಲಸೆ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೌಶಲ್ಯರಹಿತ ಕಾರ್ಮಿಕರಿರುವುದರಿಂದ ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗುವುದರಿಂದ ಕಾಮಗಾರಿ ಸ್ಥಳದಲ್ಲಿಯೇ ಶೆಡ್‌ಗಳಲ್ಲಿ ಬದುಕುವವರಿಗೆ ಬಾಡಿಗೆ ಮನೆಯ ಸೌಲಭ್ಯ ಎಷ್ಟು ಉಪಯೋಗವಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ!.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)