varthabharthi

ಬೆಂಗಳೂರು

ಆಡಳಿತ ಸಮಿತಿಗಳನ್ನು ರಚಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ: ಸಿದ್ದರಾಮಯ್ಯ

ಗ್ರಾ.ಪಂ.ಗಳಿಗೆ ಕೂಡಲೇ ಚುನಾವಣೆ ನಡೆಸಲು ಚು.ಆಯೋಗಕ್ಕೆ ಕಾಂಗ್ರೆಸ್ ಮನವಿ

ವಾರ್ತಾ ಭಾರತಿ : 22 May, 2020

ಬೆಂಗಳೂರು, ಮೇ 22: ಅವಧಿ ಪೂರ್ಣಗೊಳ್ಳುವ ಗ್ರಾಮ ಪಂಚಾಯತ್ ಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡದಂತೆ ಹಾಗೂ ಕೂಡಲೇ ಪಂಚಾಯತ್ ಗಳಿಗೆ ಚುನಾವಣೆ ನಡೆಸಬೇಕು' ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರ ನಿಯೋಗ, ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿತು.

ಶುಕ್ರವಾರ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತು. ಬಳಿಕ ಮಾತನಾಡಿದ ಸಿದ್ದರಾಮಯ್ಯ, 'ಗ್ರಾಮ ಪಂಚಾಯತ್ ಗಳ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದರೂ, ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆಯನ್ನು ಸಂವಿಧಾನದ ಪರಿಚ್ಚೇದ 1950 ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆ 1993ರ ಆಶಯದಂತೆ ಆರಂಭಿಸಿಲ್ಲದಿರುವುದು ಸಂವಿಧಾನ ವಿರೋಧಿ ನಡೆ' ಎಂದು ದೂರಿದರು.

'ಸಂವಿಧಾನದ 243 'ಇ' ವಿಧಿಯಂತೆ ಗ್ರಾಮ ಪಂಚಾಯತ್ ಗೆ ಮೊದಲ ಸಭೆಯ ದಿನದಿಂದ 5 ವರ್ಷ ಅಧಿಕಾರವಿರುತ್ತದೆ. 2015ರಲ್ಲಿ ರಾಜ್ಯದ 6,024 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆದಿತ್ತು. ಬಹುಪಾಲು ಗ್ರಾಮ ಪಂಚಾಯತ್ ಗಳ ಅಧಿಕಾರಾವಧಿ ಜೂನ್-ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತದೆ. ಇಲ್ಲಿಯವರೆಗೆ ಸರಕಾರ ಏನು ಮಾಡುತ್ತಿತ್ತು' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತ್ ಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸದೆ ಇರುವುದರಿಂದ ಗ್ರಾಮಗಳ ವಿಕೇಂದ್ರಿಕೃತ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯನ್ನು ದಮನ ಮಾಡಿದಂತಾಗುತ್ತದೆ. ಇದರಿಂದ ಸಂವಿಧಾನದ 73ನೆ ತಿದ್ದುಪಡಿಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ' ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಚುನಾವಣಾ ಆಯೋಗ ಪಂಚಾಯತ್ ಗಳ ಅಧಿಕಾರಾವಧಿ ಮುಗಿಯುವ ಮೊದಲೇ ಚುನಾವಣಾ ಪ್ರಕ್ರಿಯೆ ಮುಗಿಸಬೇಕಾಗುತ್ತದೆ. ಇದಕ್ಕಾಗಿ ಚುನಾವಣಾ ವೇಳಾಪಟ್ಟಿ ಮತ್ತು ಮೀಸಲಾತಿ ವಿವರಗಳನ್ನು ಚುನಾವಣೆಗಳ ಅಧಿಸೂಚನೆ ಹೊರಡಿಸುವ 45ದಿನ ಮೊದಲೇ ಹೊರಡಿಸಬೇಕಾಗುತ್ತದೆ. ಆ ಪ್ರಕ್ರಿಯೆ ಏಕೆ ಪ್ರಾರಂಭಿಸಿಲ್ಲ ಎಂದು ಸಿದ್ದರಾಮಯ್ಯ ಕೇಳಿದರು.

ಗ್ರಾಮ ಪಂಚಾಯತ್ ಗಳ ಅಧಿಕಾರಾವಧಿ ಮುಗಿದು ಹೋಗುತ್ತಿದ್ದರೂ ಮೀಸಲಾತಿ ನಿಗದಿ, ವೇಳಾಪಟ್ಟಿಗಳ ಪ್ರಕಟ ಮುಂತಾದ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ಏಕೆ ಪ್ರಾರಂಭಿಸಿಲ್ಲ? ಈ ಮೂಲಕ ಚುನಾವಣಾ ಆಯೋಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘನೆ ಮಾಡಿದಂತಾಗಿದೆ' ಎಂದು ಅವರು ಟೀಕಿಸಿದರು.

ಭಾರತದ ಸಂವಿಧಾನದ ಅನುಚ್ಚೇದ 243'ಇ' (3)ರ ಅನ್ವಯ ಯಾವುದೇ ಪಂಚಾಯತ್ ಯ ಐದು ವರ್ಷಗಳ ಅಧಿಕಾರಾವಧಿ ಮುಕ್ತಾಯಗೊಳ್ಳುವ ಮೊದಲೇ ಚುನಾವಣಾ ನಡೆಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ. ಆದ ಕಾರಣ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಕಡ್ಡಾಯ ಕರ್ತವ್ಯವಾಗಿರುತ್ತದೆ' ಎಂದು ಸಿದ್ದರಾಮಯ್ಯ ಹೇಳಿದರು.

ಗ್ರಾಮ ಪಂಚಾಯತ್ ಗಳಿಗೆಸ ಸದಸ್ಯರನ್ನು ಚುನಾಯಿಸುವುದು ಅಸಾಧ್ಯವಾದಾಗ ಅಥವಾ ನಿರಂತರವಾಗಿ ಎರಡು ಚುನಾವಣೆ ನಡೆಸಿದರೂ ಸದಸ್ಯರ ಆಯ್ಕೆಯಾಗದಿದ್ದರೆ ಮಾತ್ರ ಆಡಳಿತ ಸಮಿತಿಯನ್ನು ನೇಮಿಸಬಹುದು. ಇಂತಹ ಯಾವುದೇ ಪರಿಸ್ಥಿತಿ ಈಗ ಉದ್ಭವವಾಗಿಲ್ಲ. ಹಾಗಾಗಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 8ರಂತೆ ಆಡಳಿತ ಸಮಿತಿಗಳನ್ನು ರಚಿಸಲು ಅವಕಾಶವಿಲ್ಲ' ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನ್ಯಾಯಬದ್ಧವಾಗಿ, ಪಕ್ಷಪಾತರಹಿತವಾಗಿ ರಾಷ್ಟ್ರದ ಸಂವಿಧಾನ ಹಾಗೂ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರಂತೆ ನೈಜಸ್ಫೂರ್ತಿಯಿಂದ ವರ್ತಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

ಕೊರೋನ ಸೋಂಕಿನ ನೆಪದಲ್ಲಿ ರಾಜ್ಯ ಸರಕಾರ ಗ್ರಾಮ ಪಂಚಾಯತ್ ಚುನಾವಣೆ ನಡೆಸುವುದಿಲ್ಲ ಎಂದು ಹೇಳಿದೆ. ಆದರೆ, ಗ್ರಾ.ಪಂ.ಚುನಾವಣೆ ಯಾವುದೇ ಗುರುತಿನ(ಚಿಹ್ನೆ) ಮೇಲೆ ನಡೆಯುವುದಿಲ್ಲ ಎಂದರೆ ಚುನಾವಣೆ ನಡೆಸಲು ಸರಕಾರಕ್ಕೇನು ತೊಂದರೆ. ಆಯೋಗದ ಮೇಲೆ ಪ್ರಭಾವ ಬೀರಿ ಸರಕಾರ ಚುನಾವಣೆ ನಡೆಸದಂತೆ ಒತ್ತಡ ಹೇರುತ್ತಿರುವುದು ಸಲ್ಲ. ಆಯೋಗ ಯಾವುದೇ ಒತ್ತಡಕ್ಕೆ ಮಣಿಯದೆ ಪಂಚಾಯತ್ ಚುನಾವಣೆ ನಡೆಸಬೇಕು'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)