varthabharthi

ಕರಾವಳಿ

ಉಡುಪಿ: ಬೈಂದೂರಿನ ಮೂವರಲ್ಲಿ ಕೊರೋನ ಸೋಂಕು ಪತ್ತೆ

ವಾರ್ತಾ ಭಾರತಿ : 22 May, 2020

ಉಡುಪಿ, ಮೇ 22: ನಿನ್ನೆ ಒಂದೇ ದಿನದಲ್ಲಿ 26 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಬಳಿಕ, ಮಹಾರಾಷ್ಟ್ರದ ಮುಂಬಯಿಯಿಂದ ಆಗಮಿಸಿದ ಬೈಂದೂರಿನ ಮೂವರಲ್ಲಿ ಶುಕ್ರವಾರ ಕೋವಿಡ್-19 ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕಂಡುಬಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ 50ಕ್ಕೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 46ಕ್ಕೇರಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಸೋಂಕು ಪತ್ತೆಯಾದ ಮೂವರು ಮೇ 11ರಂದು ಮುಂಬಯಿಯಿಂದ ಜೊತೆಯಾಗಿ ಬೈಂದೂರಿಗೆ ಆಗಮಿಸಿ ಬೈಂದೂರಿನ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಇವರಲ್ಲಿ ಪತಿ-ಪತ್ನಿ 55 ಮತ್ತು 48 ವರ್ಷ ಪ್ರಾಯದವರಾಗಿದ್ದು, ಮತ್ತೊಬ್ಬರು 31ವರ್ಷದ ಯುವಕ. ಇವರಿಗೆ ಒಟ್ಟು 319 ಪ್ರಾಥಮಿಕ ಸಂಪರ್ಕಿತರು ಹಾಗೂ 179 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ಡಾ.ಸೂಡ ತಿಳಿಸಿದರು.

ಶುಕ್ರವಾರ 1082 ಸ್ಯಾಂಪಲ್ ಪರೀಕ್ಷೆಗೆ: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆ, ಜಿಲ್ಲಾ ಆರೋಗ್ಯ ಇಲಾಖೆ ಕೊರೋನ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ಗಂಟಲು ದ್ರವ ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯುವ ಸಂಖ್ಯೆಯಲ್ಲೂ ಗಮನಾರ್ಹ ಏರಿಕೆಯಾಗುತ್ತಿದೆ.

ಶುಕ್ರವಾರ ಒಂದೇ ದಿನದಲ್ಲಿ ಒಟ್ಟು 1082 ಮಾದರಿಗಳನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1026 ಕೊರೋನ ಹಾಟ್‌ಸ್ಪಾಟ್ ಎನಿಸಿರುವ ಹೊರರಾಜ್ಯಗಳಿಂದ ಬಂದವರ ಮಾದರಿಗಳೇ ಸೇರಿವೆ. ಉಳಿದಂತೆ 22 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರು, 9 ಮಂದಿ ತೀವ್ರ ಉಸಿರಾಟ ತೊಂದರೆಯವರು, 25 ಮಂದಿ ಶೀತಜ್ವರದಿಂದ ಬಳಲುವವರ ಸ್ಯಾಂಪಲ್‌ಗು ಸೇರಿವೆ ಎಂದು ಡಿಎಚ್‌ಓ ತಿಳಿಸಿದರು.

3ಪಾಸಿಟಿವ್, 157 ನೆಗೆಟಿವ್: ನೋವೆಲ್ ಕೊರೋನ ವೈರಸ್ (ಕೋವಿಡ್ -19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಶುಕ್ರವಾರ ಮೂರು ಪಾಸಿಟಿವ್ ಫಲಿತಾಂಶವನ್ನು ನೀಡಿದ್ದರೆ, 157 ವರದಿಗಳು ನೆಗೆಟಿವ್ ಆಗಿವೆ. ಇಂದು ಸಂಜೆಯವರೆಗೆ ಒಟ್ಟು 4847 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 2388 ನೆಗೆಟಿವ್ ಆಗಿವೆ. ಒಟ್ಟಾರೆಯಾಗಿ ಈವರೆಗೆ ಉಡುಪಿಯಲ್ಲಿ 50 ವರದಿಗಳು ಪಾಸಿಟಿವ್ ಆಗಿ ಬಂದಿವೆ. ದಿನದ ಕೊನೆಗೆ ಇನ್ನೂ 2409 ಸ್ಯಾಂಪಲ್‌ಗಳ ವರದಿಯನ್ನು ಕಾಯಲಾಗುತ್ತಿದೆ ಎಂದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 17 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 12 ಮಂದಿ ಪುರುಷ ಹಾಗೂ ಐವರು ಮಹಿಳೆಯರಿದ್ದಾರೆ. ನಾಲ್ವರು ಕೊರೋನ ಶಂಕಿತರು, ಐವರು ತೀವ್ರತರದ ಉಸಿರಾಟ ತೊಂದರೆ ಹಾಗೂ ಎಂಟು ಮಂದಿ ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 16 ಮಂದಿ ಬಿಡುಗಡೆಗೊಂಡಿದ್ದು, 96 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 107 ಮಂದಿ ಇಂದು ಹೊಸದಾಗಿ ನೋಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4807 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 3408(ಇಂದು 17) ಮಂದಿ 28 ದಿನಗಳ ನಿಗಾ ವನ್ನೂ, 4232 (2) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಲೂ 400 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ 8010 ಮಂದಿ ವಿವಿಧ ಸಾಂಸ್ಥಿಕ ಕ್ವಾರಂಟೈನ್ ಹಾಗೂ 79 ಮಂದಿ ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)