varthabharthiಸಂಪಾದಕೀಯ

ಎಪಿಎಂಸಿ ಕಾಯ್ದೆ ತಿದ್ದುಪಡಿ: ಅವಸರವೇಕೆ?

ವಾರ್ತಾ ಭಾರತಿ : 23 May, 2020

ಕರ್ನಾಟಕ ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ರಾಜ್ಯದಲ್ಲಿ ವಿವಾದದ ಅಲೆಯನ್ನೆಬ್ಬಿಸಿದೆ. ಪ್ರತಿಪಕ್ಷಗಳು ಮಾತ್ರವಲ್ಲ ರೈತ ಮತ್ತು ಪ್ರಗತಿಪರ ಸಂಘಟನೆಗಳು ಇದನ್ನು ತೀವ್ರ ವಾಗಿ ವಿರೋಧಿಸುತ್ತಿವೆ. ಮಧ್ಯವರ್ತಿಗಳಿಂದ ರೈತರ ಶೋಷಣೆಯನ್ನು ತಪ್ಪಿಸುವ ಉದ್ದೇಶದಿಂದ ಈ ತಿದ್ದುಪಡಿ ತಂದಿರುವುದಾಗಿ ಸರಕಾರ ಹೇಳುತ್ತಿದ್ದರೂ ಇದು ಬಹುರಾಷ್ಟ್ರೀಯ ಕಂಪೆನಿಗಳಿಗೆ ರೈತರನ್ನು ಸುಲಿಗೆ ಮಾಡಲು ಮುಕ್ತ ಅವಕಾಶ ನೀಡುವ ಅಪಾಯಕಾರಿ ಕ್ರಮ ಎಂದು ಇದನ್ನು ವಿರೋಧಿಸುವ ಜನಪರ ಹೋರಾಟಗಾರ, ರೈತ ನಾಯಕರ ಖಚಿತ ಅಭಿಪ್ರಾಯವಾಗಿದೆ. ವಾಸ್ತವವಾಗಿ ಕೇಂದ್ರದ ಬಿಜೆಪಿ ಸರಕಾರ 2017ರಲ್ಲಿ ಈ ಕುರಿತು ಮಾದರಿ ಕಾಯ್ದೆಯೊಂದನ್ನು ರೂಪಿಸಿ ಎಲ್ಲ ರಾಜ್ಯಗಳಲ್ಲೂ ಇದನ್ನು ಅಳವಡಿಸಲು ಸೂಚನೆ ನೀಡಿತ್ತು. ಆದರೆ ಕೆಲವು ರಾಜ್ಯಗಳು ಇದನ್ನು ಜಾರಿಗೆ ತರಲು ಆಸಕ್ತಿ ತೋರಿಸಲಿಲ್ಲ. ಇತ್ತೀಚೆಗೆ ಮತ್ತೆ ಎಲ್ಲ ರಾಜ್ಯ ಸರಕಾರಗಳಿಗೆ ಪತ್ರ ಬರೆದ ಕೇಂದ್ರ ಕೃಷಿ ಸಚಿವಾಲಯ ಸುಗ್ರೀವಾಜ್ಞೆಯ ಮೂಲಕ ತಕ್ಷಣ ಜಾರಿಗೆ ತಂದು ಕೇಂದ್ರಕ್ಕೆ ತಿಳಿಸಬೇಕೆಂದು ಒತ್ತಡ ತಂದಿತು. ಆದರೆ ಸುಗ್ರೀವಾಜ್ಞೆಯ ಬಗ್ಗೆ ತೋರಿದ ಆತುರ ಸಹಜವಾಗಿ ರೈತ ಸಂಘಟನೆಗಳ ಮುಖಂಡರ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಮಧ್ಯವರ್ತಿಗಳ ಶೋಷಣೆಯನ್ನು ತಪ್ಪಿಸಲು ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕೆಂದಲ್ಲಿ ಮಾರಾಟ ಮಾಡುವ ಸೌಕರ್ಯ ಕಲ್ಪಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ರೈತ ಸಂಘಟನೆಗಳ ನಾಯಕರು ಇದನ್ನು ಒಪ್ಪುತ್ತಿಲ್ಲ. ಈ ತಿದ್ದುಪಡಿ ಮಧ್ಯವರ್ತಿಗಳ ಬದಲಿಗೆ ಬಹುರಾಷ್ಟ್ರೀಯ ಕಂಪೆನಿಗಳು ರೈತರನ್ನು ಶೋಷಣೆ ಮಾಡುವ ಒಳ ಉದ್ದೇಶ ಹೊಂದಿದೆ ಎಂದು ರೈತ ನಾಯಕರು ಹೇಳುತ್ತಾರೆ. ಈ ಮಾತಿನಲ್ಲಿ ಸತ್ಯಾಂಶ ಇಲ್ಲದಿಲ್ಲ. ಮೇಲ್ನೋಟಕ್ಕೆ ಇದು ಮುಕ್ತ ಮಾರುಕಟ್ಟೆ ಮೂಲಕ ಕೃಷಿ ಉತ್ಪನ್ನಗಳಿಗೆ ಹೆಚ್ಚು ಬೆಲೆ ದೊರಕಿಸಿ ಕೊಡುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಾದರೂ ಪರೋಕ್ಷ ವಾಗಿ ರೈತರಿಗೆ ಮಾರಕವಾಗಿದೆ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ.ಎಪಿಎಂಸಿ ಕಾಯ್ದೆಗೆ ಮಧ್ಯವರ್ತಿಗಳ ಶೋಷಣೆಯಿಂದ ರೈತರನ್ನು ತಪ್ಪಿಸಲು ಸಾಧ್ಯವಾಗಿರಲಿಕ್ಕಿಲ್ಲ. ಈ ಲೋಪವನ್ನು ಸರಿಪಡಿಸಿ ರೈತ ಸ್ನೇಹಿ ಮಾರುಕಟ್ಟೆಯನ್ನು ರೂಪಿಸುವ ನಿಟ್ಟಿನಲ್ಲಿ ಯೋಚನೆ ಮಾಡಬಹುದಿತ್ತು. ಆದರೆ ರೈತರ ಜುಟ್ಟನ್ನು ದಗಾಕೋರ ಬಹುರಾಷ್ಟ್ರೀಯ ಕಂಪೆನಿಗಳಿಗೆ ನೀಡುವ ತಿದ್ದುಪಡಿ ತರಬಾರದಿತ್ತು.

ಈಗಿರುವ ಎಪಿಎಂಸಿ ವ್ಯವಸ್ಥೆಯಲ್ಲಿ ಲೋಪ ದೋಷಗಳು ಇಲ್ಲವೆಂದಲ್ಲ.ಆದರೆ ಮಾರುಕಟ್ಟೆ ವ್ಯಾಪಾರಿಗಳು ನಮೂದಿಸಿದ ಟೆಂಡರ್ ದರವನ್ನು ತಿರಸ್ಕರಿಸುವ ಹಕ್ಕು ರೈತನಿಗಿತ್ತು. ತಮ್ಮ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಗದಿದ್ದರೆ ತಾನು ಮಾರಾಟ ಮಾಡುವುದಿಲ್ಲ ಎಂದು ವಾಪಸ್ ಮನೆಗೆ ಒಯ್ಯುವ ಇಲ್ಲವೇ ಗೋದಾಮುಗಳಲ್ಲಿ ಇಡುವ ಅವಕಾಶವಿತ್ತು. ತುರ್ತು ಹಣ ಬೇಕಾದರೆ ಅಡವಿಟ್ಟು ಸಾಲ ಪಡೆಯಲು ಸಾಧ್ಯವಾಗುತ್ತಿತ್ತು. ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರಿಗೆ ವಾಸ್ತವ್ಯ ಮಾಡಲು ರೈತ ಭವನ ಮತ್ತು ಕ್ಯಾಂಟೀನ್ ವ್ಯವಸ್ಥೆ ಇತ್ತು. ಹೊಸ ತಿದ್ದುಪಡಿ ಅನ್ವಯ ಖಾಸಗಿ ಮಾರುಕಟ್ಟೆ ಆರಂಭವಾದರೆ ಈ ಯಾವ ಸೌಕರ್ಯಗಳೂ ರೈತರಿಗೆ ಇರುವುದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೈತರ ಶೋಷಣೆಯನ್ನು ತಪ್ಪಿಸಲು ಆನ್‌ಲೈನ್ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಉತ್ತಮ ವ್ಯವಸ್ಥೆ ಎಂದು ಮುಂಗಡ ಪತ್ರ ಸಮೀಕ್ಷೆಯಲ್ಲಿ ಕೇಂದ್ರ ಸರಕಾರವೇ ಹೇಳಿತ್ತು. ಆದರೆ ಏಕಾಏಕಿ ರಾಜ್ಯಗಳ ಮೇಲೆ ಒತ್ತಡ ಹೇರಿ ದಿಢೀರನೆ ಈ ತಿದ್ದುಪಡಿಯನ್ನು ತಂದಿತು.

ಈ ರೀತಿ ರಾಜ್ಯಗಳ ಮೇಲೆ ಒತ್ತಡ ಹೇರುವುದು ಸಂವಿಧಾನದ ಒಕ್ಕೂಟ ತತ್ವಕ್ಕೆ ವ್ಯತಿರಿಕ್ತವಾಗಿದೆ. ಈ ಮೂಲಕ ರಾಜ್ಯದ ಹಕ್ಕನ್ನೇ ಕೇಂದ್ರ ಸರಕಾರ ಕಿತ್ತುಕೊಂಡಿರುವುದು ಸರಿಯಲ್ಲ. ಈಗಾಗಲೇ ಕೊರೋನದಿಂದ ಕಂಗಾಲಾದ ರೈತರು ಈ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯಿಂದ ದಿಕ್ಕುತಪ್ಪಿ ಕುಳಿತಿದ್ದಾರೆ. ಇಂತಹ ತಿದ್ದುಪಡಿಯನ್ನು ವಿಧಾನಮಂಡಲದಲ್ಲಿ ಪ್ರಸ್ತಾವನೆಯನ್ನು ಮಂಡಿಸಿ ಚರ್ಚೆ ನಡೆದು ಸದನದ ಒಪ್ಪಿಗೆ ಪಡೆದು ಜಾರಿಗೆ ತರಬೇಕಾಗುತ್ತದೆ. ಆದರೆ ಅಧಿವೇಶನ ಇಲ್ಲದಿರುವ ಸಂದರ್ಭವನ್ನು ಬಳಸಿಕೊಂಡು ಹಿತ್ತಲ ಬಾಗಿಲಿನಿಂದ ತರಲು ಹೊರಟಿರುವುದು ಸರಿಯಲ್ಲ. ರೈತರ ಹಿತದ ಪ್ರಶ್ನೆಯಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯದ ಬಿಜೆಪಿ ಸರಕಾರ ಕೇಂದ್ರದ ಒತ್ತಡಕ್ಕೆ ಮಣಿಯಬಾರದು. ಮಹಾರಾಷ್ಟ್ರದಲ್ಲಿ ಹಿಂದೆ ಇವರದೇ ಬಿಜೆಪಿಯ ಮುಖ್ಯಮಂತ್ರಿ ಫಡ್ನವೀಸ್ ನೇತೃತ್ವದ ಸರಕಾರ ಇಂತಹ ತಿದ್ದುಪಡಿ ತರಲು ಹೊರಟಾಗ ರಾಜ್ಯದ ರೈತಪರ, ಜನಪರ ಸಂಘಟನೆಗಳು ಹೋರಾಟ ಮಾಡಿ ಅದಕ್ಕೆ ತಡೆಯೊಡ್ಡಿದ್ದವು. ಕರ್ನಾಟಕದಲ್ಲೂ ಅಂತಹ ಜಾಗೃತಿ ಮೂಡಬೇಕಾಗಿದೆ.

ರಾಜ್ಯ ಸರಕಾರ ಕೇಂದ್ರದ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ಸರಿಯಾಗಿ ವಿಚಾರ ಮಾಡಲಿ. ರೈತ ಸಂಘಟನೆಗಳ ಪ್ರತಿನಿಧಿಗಳು, ಪ್ರತಿಪಕ್ಷ ನಾಯಕರ ಜೊತೆ ಸಮಾಲೋಚನೆ ಮಾಡಲಿ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ವಿಧಾನಮಂಡಲದ ಉಭಯ ಸದನಗಳ ಮುಂದೆ ಈ ತಿದ್ದುಪಡಿ ಪ್ರಸ್ತಾವನೆಯನ್ನು ಇಟ್ಟು ಚರ್ಚಿಸಿ ಒಂದು ಇತ್ಯರ್ಥಕ್ಕೆ ಬರುವುದು ಸೂಕ್ತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)