varthabharthiರಾಷ್ಟ್ರೀಯ

ಸೈಬರ್ ಭದ್ರತಾ ತಜ್ಞರು, ಗುಪ್ತಚರ ವಿಭಾಗದ ಮಾಜಿ ಅಧಿಕಾರಿಗಳು ಆತಂಕ

''ಆರೋಗ್ಯ ಸೇತು ಆ್ಯಪ್‌ನಿಂದ ದೇಶದ ಭದ್ರತೆಗೆ ಅಪಾಯ''

ವಾರ್ತಾ ಭಾರತಿ : 23 May, 2020

ಹೊಸದಿಲ್ಲಿ, ಮೇ 23: ಆರೋಗ್ಯಸೇತು ಆ್ಯಪ್ ಮೂಲಕ ಲಕ್ಷಾಂತರ ಮಂದಿಯ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು, ವಿರೋಧಿ ಸರ್ಕಾರಗಳಿಂದ ಮತ್ತು ಸರ್ಕಾರೇತರ ಸಂಘಸಂಸ್ಥೆಗಳಿಂದ ಅಪಾಯ ಕಾದಿದೆ. ಜತೆಗೆ ಇದು ದೇಶದ ಭದ್ರತೆಗೆ ಸವಾಲಾಗಿದೆ ಎಂದು ಸೈಬರ್ ಭದ್ರತಾ ತಜ್ಞರು ಹಾಗೂ ಗುಪ್ತಚರ ವಿಭಾಗದ ಮಾಜಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸೈಬರ್ ಭದ್ರತಾ ಕ್ಷೇತ್ರದಲ್ಲಿನ ಭಾರತದ ಸಾಮರ್ಥ್ಯ ಮತ್ತು ಸೈಬರ್ ನೈರ್ಮಲ್ಯ ಕ್ರಮಗಳು ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಾರತೀಯ ಅಧಿಕಾರಿಗಳು ಈ ಆತಂಕವನ್ನು ತಳ್ಳಿಹಾಕಿದ್ದು, ಯಾವುದೇ ನೆಟ್‌ವರ್ಕ್ ಅಥವಾ ಡಾಟಾ ಉಲ್ಲಂಘನೆಯ ವಿರುದ್ಧ ನಮ್ಮ ಎನ್‌ಕ್ರಿಕ್ಷನ್ ಗುಣಮಟ್ಟ ಸಮರ್ಥವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಕೋವಿಡ್-19 ಸೋಂಕಿತರ ಪತ್ತೆಗಾಗಿ ರೂಪಿಸಿರುವ ಈ ಆ್ಯಪ್ ವಿವಾದದ ಕೇಂದ್ರಬಿಂದುವಾಗಿದ್ದು, ಇಂಥ ಅಪಾಯ ಸಾಧ್ಯತೆ ಇಲ್ಲ ಅಥವಾ ಕೆಲ ಸಣ್ಣ ಪುಟ್ಟ ಹೊಂದಾಣಿಕೆ ಮಾಡಿಕೊಳ್ಳಬೇಕಾಗಬಹುದು ಎಂದು ಆ್ಯಪ್‌ನ ಪರವಾಗಿರುವವರು ವಾದಿಸಿದರೆ, ಇದರಲ್ಲಿ ಸಂಗ್ರಹಿಸಲಾದ ಮಾಹಿತಿಗಳು ಸರ್ಕಾರ ಭಾವಿಸಿದ್ದಕ್ಕಿಂತ ಹೆಚ್ಚು ಮೌಲಿಕ ಹಾಗೂ ಅಪಾಯಕಾರಿ ಎನ್ನುವುದು ವಿರೋಧಿಗಳ ವಾದ. ಕೇವಲ ಖಾಸಗೀತನದ ಕಾರಣದಿಂದ ಮಾತ್ರವಲ್ಲದೇ ಭದ್ರತಾ ದೃಷ್ಟಿಯಿಂದಲೂ ಇದು ಅಪಾಯಕಾರಿ ಎಂದು ಪ್ರತಿಪಾದಿಸಲಾಗುತ್ತಿದೆ.

ಒಂದು ವೇಳೆ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕಿಗೆ ಒಳಗಾದರೆ ಅವರ ನಿಕಟ ಸಂಪರ್ಕವನ್ನು ಪತ್ತೆ ಮಾಡುವ ಸಲುವಾಗಿ ಈ ಆ್ಯಪ್ ಬಳಕೆಯಾಗುತ್ತದೆ. 1.10 ಕೋಟಿ ಮಂದಿ ಈಗಾಗಲೇ ಆ್ಯಪ್ ಬಳಸುತ್ತಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಸರ್ಕಾರಿ ಉದ್ಯೋಗಿಗಳು ಮತ್ತು ವಿಮಾನಯಾನಿಗಳಿಗೆ ಇದು ಕಡ್ಡಾಯವಾಗಿರುತ್ತದೆ.

ಸಾಮಾನ್ಯವಾಗಿ ರಾಷ್ಟ್ರಮಟ್ಟಡ ಡಾಟಾಬೇಸ್ ಆತಂಕಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಸೋರಿಕೆ ಡಾರ್ಕ್‌ಮೆಬ್‌ನಲ್ಲೂ ಕಾಣಿಸುವುದಿಲ್ಲ. ವಿರೋಧಿ ದೇಶಗಳ ನಾಗರಿಕರ ಋಣಾತ್ಮಕ ಪ್ರೊಫೈ ಸಿದ್ಧಪಡಿಸಲು ಬೇರೆ ದೇಶಗಳು ಇದನ್ನು ಬಳಸಿಕೊಳ್ಳುವ ಅಪಾಯವಿದೆ ಎಂದು ಸೈಬರ್ ಅಪಾಯ ಗುಪ್ತಚರ ತಜ್ಞ ಪುಖರಾಜ್ ಸಿಂಗ್ ಹೇಳುತ್ತಾರೆ. ಕಳೆದ ವರ್ಷ ಕುಂಡಂಕುಳಂ ಅಣು ವಿದ್ಯುತ್ ಸ್ಥಾವರದ ಮಾಹಿತಿ ಸೋರಿಕೆಯನ್ನು ಇವರು ಪತ್ತೆ ಮಾಡಿದ್ದರು. ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯ ಇಬ್ಬರು ಮಾಜಿ ಅಧಿಕಾರಿಗಳು ಕೂಡಾ ಈ ವಾದವನ್ನು ಬೆಂಬಲಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)