ಕೊರೋನ: ರಾಜ್ಯದಲ್ಲಿ ಮತ್ತೆ 196 ಮಂದಿಯಲ್ಲಿ ಸೋಂಕು ದೃಢ, ಒಟ್ಟು ಸಂಖ್ಯೆ 1,939ಕ್ಕೆ ಏರಿಕೆ
4 ತಿಂಗಳ ಮಗು ಸೇರಿದಂತೆ 37 ಮಕ್ಕಳಲ್ಲಿ ಸೋಂಕು ಪತ್ತೆ
ಬೆಂಗಳೂರು, ಮೇ 23: ರಾಜ್ಯದಲ್ಲಿ ಮತ್ತೆ 196 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ 4 ತಿಂಗಳ ಮಗು ಸೇರಿದಂತೆ 37 ಮಕ್ಕಳಿಗೆ ಸೋಂಕು ತಗುಲಿದೆ. ಕಳೆದ 19 ಗಂಟೆಗಳ ಅವಧಿಯಲ್ಲಿ ಸೋಂಕಿತರ ಪ್ರಮಾಣದಲ್ಲಿ ಇಷ್ಟೊಂದು ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಶುಕ್ರವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯೊಳಗೆ 196 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 184 ಪ್ರಕರಣಗಳಿಗೆ ಮುಂಬೈ ಮೂಲವೇ ಕಾರಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲೆಟಿನ್ ತಿಳಿಸಿದೆ.
ಇಂದು ಅತ್ಯಧಿಕ ಅಂದರೆ ಯಾದಗಿರಿಯಲ್ಲಿ 72, ರಾಯಚೂರಿನಲ್ಲಿ 39, ಮಂಡ್ಯದಲ್ಲಿ 28 ಮತ್ತು ಚಿಕ್ಕಬಳ್ಳಾಪುರದಲ್ಲಿ 20 ಪ್ರಕರಣಗಳು ಬೆಳಕಿಗೆ ಬಂದಿದೆ.
ಉಳಿದಂತೆ ಗದಗ 15, ದ.ಕ. ಜಿಲ್ಲೆ 2, ಹಾಸನ4, ಬೆಂಗಳೂರು 4, ಉತ್ತರ ಕನ್ನಡ 2, ಕಲಬುರಗಿಯಲ್ಲಿ 1 ಪ್ರಕರಣಗಳು ಬೆಳಕಿಗೆ ಬಂದಿದೆ.
ಈ ಮಧ್ಯೆ ರಾಜ್ಯದ ಒಟ್ಟು ಸೋಂಕಿತರ ಪೈಕಿ 598 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 42 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಬ್ಬರು ಕೊರೋನ ಸೋಂಕಿತರು ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.