varthabharthi

ವಿಶೇಷ-ವರದಿಗಳು

ದೇಶಕ್ಕೇ ಬುದ್ಧಿ ಹೇಳುವವರ ಬಂಡವಾಳ ವಾಟ್ಸ್ಯಾಪ್ ನಲ್ಲಿ ಬಯಲು

ಕೊರೋನ: ‘ಝೀ ನ್ಯೂಸ್’ ಸಿಬ್ಬಂದಿಗೆ ಸುರಕ್ಷಿತ ಅಂತರವೂ ಇಲ್ಲ, ಸುರಕ್ಷತೆ ಪಾಲನೆಯೂ ಇಲ್ಲ!

ವಾರ್ತಾ ಭಾರತಿ : 23 May, 2020

ಝೀ ನ್ಯೂಸ್ ಕಚೇರಿಯಲ್ಲಿ 28 ಮಂದಿ ಕೊರೋನ ಸೋಂಕು ಹರಡಲು ಸಂಸ್ಥೆಯ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂಬ ವರದಿಗಳ ಬೆನ್ನಿಗೇ ಈ ಕುರಿತ ಇನ್ನಷ್ಟು ಸಾಕ್ಷ್ಯಗಳು ಹೊರಬಂದಿವೆ. ಕೊರೋನಗೆ ಸಂಬಂಧಿಸಿದ ಸರಕಾರದ ಮಾರ್ಗಸೂಚಿಗಳನ್ನು ಹಾಗು ಸುರಕ್ಷತಾ ಕ್ರಮಗಳನ್ನು ಅನುಸರಿಸುವಲ್ಲಿ ‘ಝೀ ನ್ಯೂಸ್’ ತೀವ್ರ ನಿರ್ಲಕ್ಷ್ಯ ತೋರಿದೆ ಎಂದು ವರದಿ ಮಾಡಿರುವ newslaundry ಸುದ್ದಿ ತಾಣ ಈ ಬಗ್ಗೆ ವಿವರವಾದ ಸಾಕ್ಷ್ಯಗಳನ್ನೂ ಬಹಿರಂಗಪಡಿಸಿದೆ.

ಏಪ್ರಿಲ್ ನಲ್ಲೇ ಝೀ ನ್ಯೂಸ್ ನಲ್ಲಿ ಮೊದಲ ಕೊರೋನ ಸೋಂಕು ಪತ್ತೆಯಾಗಿದ್ದರೂ ಅದನ್ನು ಬಹಿರಂಗಪಡಿಸದ ಝೀ ನ್ಯೂಸ್ ತಾನು ಇಡೀ ದೇಶಕ್ಕೆ ಕೊರೋನ ಬಗ್ಗೆ ಭಾಷಣ ಮಾಡುತ್ತಲೇ ಸಿಬ್ಬಂದಿಗಳ ಸುರಕ್ಷತೆ ಕುರಿತ ಎಲ್ಲ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಲೇ ಇತ್ತು ಎಂದು ವರದಿ ಹೇಳಿದೆ. ಸಿಬ್ಬಂದಿಗೆ ಕೊರೋನ ಬಂದಿದ್ದರೂ ಝೀ ನ್ಯೂಸ್ ಕಚೇರಿಯಲ್ಲಿ ಮಾತ್ರ ಪೂರ್ಣ ಪ್ರಮಾಣದ ಸಿಬ್ಬಂದಿ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದ್ದು ಕಚೇರಿಯಲ್ಲಾಗಲಿ, ಕಚೇರಿಗೆ ಬರುವ ವಾಹನದಲ್ಲಾಗಲಿ ಯಾವುದೇ ರೀತಿ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿರಲಿಲ್ಲ ಎಂದು newslaundry ಕಚೇರಿ ಸಿಬ್ಬಂದಿಗಳ ವಾಟ್ಸಾಪ್ ಗ್ರೂಪ್ ನಲ್ಲಿ ನಡೆದ ಸಂಭಾಷಣೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇಡೀ ದೇಶಕ್ಕೆ ಕೊರೋನ ಕಡಿವಾಣ ಹೇಗೆ ಹಾಕಬೇಕು ಎಂದು ಗಂಟೆಗಟ್ಟಲೆ ಹೇಳುತ್ತಿದ್ದ ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ತನ್ನ ಸಿಬ್ಬಂದಿಯನ್ನು ಕೊರೋನ ವಾರಿಯರ್ಸ್ ಎಂದು ಕರೆಯುತ್ತಲೇ ಅವರ ಸುರಕ್ಷತೆ ಬಗ್ಗೆ ಮಾತ್ರ ಯಾವುದೇ ಮಾರ್ಗಸೂಚಿಗಳನ್ನು ಪಾಲಿಸುತ್ತಿರಲಿಲ್ಲ ಎಂದು ಅದು ವರದಿ ಮಾಡಿದೆ. ಈ ಬಗ್ಗೆ ತಕರಾರು ಎತ್ತಿದವರಿಗೆ ಕಠಿಣ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕೊರೋನ ಮಾರ್ಗಸೂಚಿ ಪ್ರಕಾರ ಒಂದು ಕಾರಿನಲ್ಲಿ ಡ್ರೈವರ್ ಹೊರತುಪಡಿಸಿ ಇಬ್ಬರು ಮಾತ್ರ ಪ್ರಯಾಣಿಸಬೇಕು ಎಂದಿದೆ. ಆದರೆ ಝೀ ನ್ಯೂಸ್ ಸಿಬ್ಬಂದಿಯನ್ನು ಕರೆದುಕೊಂಡು ಬರುವ ವಾಹನದಲ್ಲಿ ಡ್ರೈವರ್ ಹೊರತುಪಡಿಸಿ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಸಿಬ್ಬಂದಿ ಸಂಸ್ಥೆಯ ವಾಟ್ಸಾಪ್ ಗ್ರೂಪ್ ನಲ್ಲಿ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಗಳ ಈ ಆಕ್ಷೇಪಕ್ಕೆ ಸಂಸ್ಥೆಯ ಎಚ್ ಆರ್ ವಿಭಾಗ ಸೂಕ್ತ ಪ್ರತಿಕ್ರಿಯೆ ನೀಡದೆ ನಾವು ಪ್ರಯತ್ನಿಸುತ್ತಿದ್ದೇವೆ ಎಂಬ ಧಾಟಿಯಲ್ಲೇ ಉತ್ತರಿಸಿದೆ.

ಲಾಕ್ ಡೌನ್ ಇರುವಾಗಲೂ ಪ್ರತಿಯೊಬ್ಬರೂ ಕಚೇರಿಗೆ ಬರುವುದನ್ನು ಕಡ್ಡಾಯ ಮಾಡಿದ್ದ ‘ಝೀ ನ್ಯೂಸ್’ ನೋಯ್ಡಾದಲ್ಲಿರುವ ಕಟ್ಟಡದಲ್ಲಿರುವ ತನ್ನ ಸಮೂಹದ ವಿವಿಧ ಚಾನಲ್ ಗಳ ಸಿಬ್ಬಂದಿಗಳು ಯಾವುದೇ ಸುರಕ್ಷಿತ ಅಂತರ ಹಾಗು ಇತರ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸಂಸ್ಥೆಯ ಮೊದಲ ಕ್ಯಾಮರಾ ಮ್ಯಾನ್ ಸೋಂಕಿತನಾದಾಗ ಈ ಬಗ್ಗೆ ಆತಂಕಿತ ಸಿಬ್ಬಂದಿಗಳು ಎಚ್ ಆರ್ ವಿಭಾಗದವರಲ್ಲಿ ವಿವರಣೆ ಕೇಳಿದರು. ನಮ್ಮ, ಹಾಗು ನಮ್ಮ ಕುಟುಂಬದ ಸುರಕ್ಷತೆ ಕುರಿತು ನಮಗೆ ಭಯವಿದೆ ಎಂದು ಹೇಳಿದರು. ಆದರೆ ಇದಕ್ಕೆ ಸರಿಯಾದ ಉತ್ತರ ನೀಡದ ಎಚ್ ಆರ್ ವಿಭಾಗ ಕ್ಯಾಮರಾಮನ್ ಕಚೇರಿಗೆ ಬರುತ್ತಿರಲಿಲ್ಲ, ಆತ ಹೊರಗೇ  ಕೆಲಸ ಮಾಡುತ್ತಿದ್ದ ಎಂದು ಹೇಳಿತು. ಆದರೆ ಸುಳ್ಳಾಗಿತ್ತು. ಈ ಬಗ್ಗೆ ಮತ್ತೆ ಪ್ರಶ್ನಿಸಿದಾಗ ಉತ್ತರ ನೀಡದೆ ನುಣುಚಿಕೊಂಡಿತು ಎಚ್ ಆರ್ ವಿಭಾಗ.

ಹಲವು ಕೊರೋನ ಪ್ರಕರಣ ಒಂದೇ ಕಟ್ಟದಲ್ಲಿ ಕಂಡು ಬಂದರೆ ಆ ಕಟ್ಟಡವನ್ನು ಕ್ಲಸ್ಟರ್ ಎಂದು ಹೇಳಲಾಗುತ್ತದೆ ಮತ್ತು ಅದನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗುತ್ತದೆ. ಅದರ ಸುತ್ತಮುತ್ತಲ 500 ಮೀಟರ್ ಪ್ರದೇಶವೂ ಸೀಲ್ ಡೌನ್ ಆಗುತ್ತದೆ. ಅಲ್ಲಿಂದ ಯಾರೂ ಹೊರ ಹೋಗುವಂತಿಲ್ಲ, ಹೊರಗಿನಿಂದ ಯಾರೂ ಒಳಬರುವಂತಿಲ್ಲ. ಆದರೆ ಝೀ ನ್ಯೂಸ್ ಪ್ರಕರಣದಲ್ಲಿ ಇದ್ಯಾವುದೂ ಆಗಲೇ ಇಲ್ಲ. ಆ ಕಟ್ಟಡ ನಾಲ್ಕನೇ ಮಹಡಿಯಲ್ಲಿರುವ ಝೀ ಮೀಡಿಯಾ ಕಚೇರಿ ಮಾತ್ರ ಸೀಲ್ ಡೌನ್ ಆಯಿತು. ಉಳಿದ ಮಹಡಿಗಳಲ್ಲಿ ಝೀ ನ್ಯೂಸ್ ಕೆಲಸ ಸರಾಗವಾಗಿ ನಡೆಯುತ್ತಲೇ ಇದೆ.

ಈ ಬಗ್ಗೆ ಕೇಳಿದರೆ ನೋಯ್ಡಾ ಜಿಲ್ಲಾಡಳಿತದ ಯಾರೂ ಸರಿಯಾದ ಉತ್ತರ ನೀಡಲು ಸಿದ್ಧರಿಲ್ಲ. ಪೊಲೀಸರು ನಮಗೆ ಜಿಲ್ಲಾಡಳಿತ ಸೂಚನೆ ಕೊಟ್ಟ ಹಾಗೆ ನಾವು ಮಾಡುತ್ತೇವೆ ಎಂದು ಮಾತ್ರ ಹೇಳುತ್ತಾರೆ. ಈ ಬಗ್ಗೆ ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ಅವರನ್ನೂ ಕೇಳಲಾಗಿದ್ದು ಅವರಿನ್ನೂ ಉತ್ತರ ಕೊಟ್ಟಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)