varthabharthiಕರ್ನಾಟಕ

'ಅಂಫಾನ್' ಪರಿಣಾಮ: ಮುಂಗಾರು ಆಗಮನ ವಿಳಂಬ ಸಾಧ್ಯತೆ- ಹವಾಮಾನ ಇಲಾಖೆ

ವಾರ್ತಾ ಭಾರತಿ : 23 May, 2020

ಬೆಂಗಳೂರು, ಮೇ 23: ಅಂಫಾನ್ ಚಂಡಮಾರುತದ ಪರಿಣಾಮದಿಂದ ಈ ವರ್ಷದ ನೈರುತ್ಯ ಮುಂಗಾರು ಮಳೆ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾಡಿಕೆಯಂತೆ ಮುಂಗಾರು ಜೂನ್ ತಿಂಗಳ ಆರಂಭದಲ್ಲಿ ಕೇರಳ ಕರಾವಳಿ ಮೂಲಕ ಕರ್ನಾಟಕವನ್ನು ಪ್ರವೇಶಿಸಬೇಕು. ಚಂಡ ಮಾರುತದ ಪರಿಣಾಮದಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದ್ದು, ಒಣಹವೆ ಮುಂದುವರಿಯುವ ಲಕ್ಷಣಗಳು ಕಂಡುಬಂದಿದ್ದು, ಇದರಿಂದ ಮುಂಗಾರು ವಿಳಂಬವಾಗಲಿದೆ ಎಂದು ತಿಳಿಸಿದೆ.

ನೈರುತ್ಯ ಮುಂಗಾರು ಮಳೆ ಕೇರಳಕ್ಕೆ ಜೂನ್ ಒಂದರ ವೇಳೆಗೆ ಪ್ರವೇಶಿಸುವುದು ವಾಡಿಕೆ. ಚಂಡಮಾರುತದ ಪರಿಣಾಮ ಈ ಬಾರಿ ಜೂನ್ ಐದರ ವೇಳೆಗೆ ಪ್ರವೇಶ ಮಾಡುವ ನಿರೀಕ್ಷೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೆಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಚಂಡಮಾರುತದ ಪರಿಣಾಮದಿಂದ ಮುಂಗಾರು ಆಗಮನ ನಾಲ್ಕೈದು ದಿನ ವಿಳಂಬವಾಗಬಹದು ಎಂದು ಅಂದಾಜಿಸಲಾಗಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗುವುದು ವಾಡಿಕೆ. ಆದರೆ, ಈ ಬಾರಿ ಕೇರಳ ಪ್ರವೇಶಿಸುವುದೇ ವಿಳಂಬವಾಗುವ ಸಂಭವವಿದೆ. ಕೇರಳ ಪ್ರವೇಶಿಸಿದ ಎರಡು-ಮೂರು ದಿನಗಳಲ್ಲಿ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಇನ್ನೊಂದು ವಾರ ಒಣ ಹವೆ ಮುಂದುವರಿಯಲಿದೆ. ಆದರೂ ಚದುರಿದಂತೆ ಅಲ್ಲಲ್ಲಿ ಮಳೆ ಮುಂದುವರಿಯಲಿದೆ ಎಂದರು. ಮೇ 28ರ ನಂತರ ಮುಂಗಾರು ಪೂರ್ವ ಮಳೆ ಚುರುಕಾಗುವ ಮುನ್ಸೂಚನೆಗಳಿವೆ. ಶುಕ್ರವಾರ ರಾತ್ರಿ ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗಿದೆ. ರಾಜ್ಯದ ಒಳನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹೇಳಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)