varthabharthiಅಂತಾರಾಷ್ಟ್ರೀಯ

ಯುವಜೋಡಿಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಕೊರೋನ

2 ತಿಂಗಳಾದರೂ ಮುಗಿಯದ ನವದಂಪತಿಯ ಹನಿಮೂನ್ ಕಥೆ…

ವಾರ್ತಾ ಭಾರತಿ : 25 May, 2020

ದುಬೈ: ಯುವಜೋಡಿಯೊಂದು ದುಬೈನ ತಮ್ಮ ಹೊಸ ಅಪಾರ್ಟ್‍ಮೆಂಟ್‍ ನಲ್ಲಿ ಜೀವನವನ್ನು ನಡೆಸಲು ಎಲ್ಲ ರೀತಿಯಿಂದಲೂ ಸಜ್ಜಾಗಿದ್ದರು. ರಜೆಯವರೆಗೂ ಕಾಯದೇ ಹನಿಮೂನ್ ಮುಗಿಸಿ ಯುನೈಟೆಡ್ ಅರಬ್ ಎಮಿರೇಟ್ಸ್‍ಗೆ ವಾಪಸ್ಸಾಗಿ ದಾಂಪತ್ಯ ಜೀವನ ನಡೆಸಲು ನಿರ್ಧರಿಸಿದ್ದರು.

ಎರಡು ತಿಂಗಳ ಬಳಿಕವೂ ಖಾಲಿದ್ ಮುಖ್ತಾರ್ (36) ಮತ್ತು ಪೆರಿ ಅಬೋಝೀದ್ (35) ಇನ್ನೂ ಆ ದಿನಕ್ಕಾಗಿ ಕಾಯುತ್ತಲೇ ಇದ್ದಾರೆ. ಕಾರಣ ಅವರ ಹನಿಮೂನ್ ಇನ್ನೂ ಮುಗಿದಿಲ್ಲ!

ಈಜಿಪ್ಟ್ ಮೂಲದ ಈ ಇಬ್ಬರು ದುಬೈ ನಗರದ ದೀರ್ಘಾವಧಿ ನಿವಾಸಿಗಳು. ಆದರೆ ಮಾರ್ಚ್ ಮಧ್ಯಭಾಗದಿಂದ ಕೊರೋನ ವೈರಸ್ ತಡೆಯುವ ಕಾರ್ಯತಂತ್ರದ ಅಂಗವಾಗಿ ದುಬೈ ಎಲ್ಲ ವಿಮಾನ ರದ್ದುಪಡಿಸಿ, ವಿದೇಶಿ ಪ್ರವಾಸಕ್ಕೆ ಗಡಿ ಮುಚ್ಚಿರುವುದರಿಂದ ಮಾಲ್ಡೀವ್ಸ್ ರೆಸಾರ್ಟ್‍ ನಲ್ಲೇ ಬಂಧಿಯಾಗಿದ್ದಾರೆ.

ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೇ ನಡೆಯಿತು. ಮಾರ್ಚ್ 6ರಂದು ಕೈರೋದಲ್ಲಿ ವಿವಾಹವಾದ ಬಳಿಕ ಅವರು ಕುಂಕುನ್, ಮೆಕ್ಸಿಕೋಗೆ ಹನಿಮೂನ್‍ಗಾಗಿ ತೆರಳಿದರು. ಮಾರ್ಚ್ 19ರಂದು ಟರ್ಕಿ ವಿಮಾನ ಏರಿದರು. ದುಬೈಗೆ ಹೋಗಲು ಬಹರೈನ್ ವಿಮಾನ ಹಿಡಿಯಬೇಕಿತ್ತು. ದುಬೈಗೆ ದೇಶೀಯ ಪ್ರಜೆಗಳಲ್ಲದೆ ಬೇರಾರು ಪ್ರವೇಶಿಸಲೂ ಅವಕಾಶ ನಿರಾಕರಿಸಲಾಗಿದೆ ಎಂದು ವಿಮಾನದಲ್ಲಿದ್ದಾಗ ಅಬೋಝೀದ್ ಅವರಿಗೆ ಸ್ನೇಹಿತರಿಂದ ಮಾಹಿತಿ ಬಂತು.

ಟರ್ಕಿಯಲ್ಲಿ ಇಳಿದಾಗ ಮುಂದಿನ ವಿಮಾನ ಏರುವಂತಿಲ್ಲ ಎಂದು ಅಧಿಕಾರಿಗಳು ಸೂಚನೆ ನೀಡಿ ಅವರ ಬೋರ್ಡಿಂಗ್ ಪಾಸ್ ಹಾಗೂ ಲಗೇಜ್ ಪಡೆದರು. ಅಗತ್ಯ ವಸ್ತುಗಳ ಖರೀದಿಗೂ ಅವಕಾಶವಾಗದೇ ಹಠಾತ್ತನೇ ಸಿಕ್ಕಿಹಾಕಿಕೊಂಡರು. ಈಜಿಪ್ಟ್‍ನ ವಿಮಾನ ಹಾಗೂ ಗಡಿ ಕೂಡಾ ಮುಚ್ಚಿತ್ತು. ಯುಎಇ ನಿಲುಕದಾಗಿತ್ತು. ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ನಿದ್ದೆ ಮಾಡುವಂತೆಯೂ ಇರಲಿಲ್ಲ.

ಈಜಿಪ್ಟಿಯನ್ನರಿಗೆ ಮುಕ್ತ ವೀಸಾ ಇದ್ದ ಎಲ್ಲಿಗೆ ವಿಮಾನ ಇದೆ?, ಯುವಜೋಡಿಗೆ ಕಂಡದ್ದು ದ್ವೀಪರಾಷ್ಟ್ರ ಮಾಲ್ಡೀವ್ಸ್. ಅಲ್ಲಿನ ಅಧಿಕಾರಿಗಳಿಂದ ಖಾತ್ರಿ ಪಡೆದುಕೊಂಡ ಬಳಿಕ ವಿಮಾನ ಟಿಕೆಟ್ ಬುಕ್ ಮಾಡಿದರು. ಅಲ್ಲಿಗೆ ಈ ಜೋಡಿ ತಲುಪಿದ ತಕ್ಷಣ ಮಾರ್ಚ್ 27ರಂದು ಮಾಲ್ಡೀವ್ಸ್ ಕೂಡಾ ವಿದೇಶಿ ಪ್ರವಾಸಕ್ಕೆ ನಿಷೇಧ ಹೇರಿತು. ಅವರು ತಂಗಿದ್ದ ರೆಸಾರ್ಟ್ ಕೂಡಾ ಮುಚ್ಚಿತು. ಇದೀಗ ಇತರ 60-70 ಮಂದಿಯಂತೆ ಇವರು ಕೂಡಾ ಸರ್ಕಾರ ವ್ಯವಸ್ಥೆಗೊಳಿಸಿದ್ದ ಐಸೊಲೇಶನ್ ಸೆಂಟರ್‍ನಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)