varthabharthiಸಂಪಾದಕೀಯ

ಸೌದಿ ಅನಿವಾಸಿ ಕನ್ನಡಿಗರ ಕುರಿತ ಸರಕಾರದ ಈ ನಿರ್ಲಕ್ಷ್ಯ ನ್ಯಾಯವೆ?

ವಾರ್ತಾ ಭಾರತಿ : 27 May, 2020

‘ಅನಿವಾಸಿ ಭಾರತೀಯರು’ ಒಂದು ಅರ್ಥದಲ್ಲಿ ತಾನುರಿದು ಬೆಳಕಾದವರು. ಊರಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದಾಗ, ಊರು, ದೇಶ ತೊರೆದು ಕೊಲ್ಲಿ ರಾಷ್ಟ್ರಗಳ ಬಿಸಿಲಲ್ಲಿ ಉರಿದು, ಊರಿಗೆ ನೆರಳಾದವರು. ಅನಿವಾಸಿಗಳ ಕೊಡುಗೆಗಳನ್ನು ದೇಶ ಸದಾ ಸ್ಮರಿಸುತ್ತಾ ಬಂದಿದೆ. ಎಲ್ಲ ಪ್ರಧಾನಿಗಳೂ ವಿದೇಶ ಪ್ರವಾಸದ ಸಂದರ್ಭದಲ್ಲಿ ಈ ಅನಿವಾಸಿಗಳ ಜೊತೆಗೆ ವಿಶೇಷ ಸಭೆಗಳನ್ನು ಹಮ್ಮಿಕೊಂಡು, ದೇಶಕ್ಕೆ ಅವರು ನೀಡಿದ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರಧಾನಿ ಮೋದಿಯವರಂತೂ ಅನಿವಾಸಿಗಳ ಬಗ್ಗೆ ವಿಶೇಷ ಆಸ್ಥೆಯಿಂದ, ಹಲವು ಬೃಹತ್ ಸಭೆಗಳನ್ನು ಹಮ್ಮಿಕೊಂಡು, ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಅನಿವಾಸಿಗಳಿಗೆ ಕರೆ ನೀಡುತ್ತಾ ಬಂದಿದ್ದಾರೆ. ವಿದೇಶಿ ವಿನಿಮಯದಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಬಹುದೊಡ್ಡದು. ಕರಾವಳಿ ಇಂದು ಅಭಿವೃದ್ಧಿಯ ಹಾದಿಯಲ್ಲಿದ್ದರೆ ಅದರಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಜನರ ಹಣ, ಬೆವರು, ರಕ್ತವಿದೆ. ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಕರಾವಳಿ ಮುಂಚೂಣಿಯಲ್ಲಿದ್ದರೆ ಅದಕ್ಕೆ ಅನಿವಾಸಿಗಳೇ ಕಾರಣರು. 80ರ ದಶಕದಲ್ಲಿ ಕರಾವಳಿಯ ಒಂದು ಸಮುದಾಯ ಭವಿಷ್ಯವನ್ನು ಹುಡುಕುತ್ತಾ ಮುಂಬೈಗೆ ವಲಸೆ ಹೋದರೆ, ಇನ್ನೊಂದು ಸಮುದಾಯ ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋಯಿತು. ಇಂದು ಆ ಸಮುದಾಯ ತಾನೂ ಉದ್ಧಾರವಾಗಿ, ಊರನ್ನೂ ಉದ್ಧರಿಸಿದೆ. ಆದರೆ ಇದೀಗ ಕೊರೋನ ಎಲ್ಲವನ್ನು ಬದಲಿಸಿ ಬಿಟ್ಟಿದೆ. ಮುಂಬೈ, ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರ ಬದುಕಿನಲ್ಲಿ ಏಕಾಏಕಿ ಬಿರುಗಾಳಿ ಎದ್ದಿದೆ. ತಾಯ್ನೆಲಕ್ಕಾಗಿ ಬಿಸಿಲಲ್ಲಿ ಬೆಂದವರು, ಇದೀಗ ತಾಯ್ನೆಲದ ನೆರಳಿನ ನಿರೀಕ್ಷಿಯಲ್ಲಿದ್ದಾರೆ. ಅವರು ಈ ನೆಲಕ್ಕಾಗಿ ಏನನ್ನು ಕೊಟ್ಟರೋ ಅದರಲ್ಲಿ ಅಲ್ಪವನ್ನು ಅವರಿಗೆ ಮರಳಿಸಿದರೂ ಅವರ ಸಮಸ್ಯೆ ಪರಿಹಾರವಾಗುತ್ತದೆ. ವಿಪರ್ಯಾಸವೆಂದರೆ, ನಿರೀಕ್ಷಿಸಿದ ಪ್ರಮಾಣದಲ್ಲಿ ತಾಯ್ನಿಡು ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಇಂದು ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿಗಳು ಆರ್ಥಿಕ ನೆರವನ್ನೋ ಅಥವಾ ಇತರ ಸೌಲಭ್ಯಗಳನ್ನೋ ಕೇಳುತ್ತಿಲ್ಲ. ತಮ್ಮನ್ನು ಊರಿಗೆ ಕರೆಸಿಕೊಳ್ಳಲು ವಿಮಾನಗಳ ವ್ಯವಸ್ಥೆಯನ್ನಷ್ಟೇ ಮಾಡಿ ಎಂದು ಗೋಗರೆಯುತ್ತಿದ್ದಾರೆ. ಈ ವಿಮಾನಗಳಿಗೆ ಬೇಕಾದ ಸ್ವಲ್ಪ ಹೆಚ್ಚಿನ ದರವನ್ನು ನೀಡುವುದಕ್ಕೂ ಅವರು ಸಿದ್ಧರಿದ್ದಾರೆ. ಆದರೆ ದೇಶ ‘ಬೇಕೋ ಬೇಡವೋ ’ ಎನ್ನುವಂತೆ ಅವರಿಗೆ ಸ್ಪಂದಿಸುತ್ತಿದೆ.

ಸೌದಿಯೂ ಸೇರಿದಂತೆ ಕೊಲ್ಲಿ ರಾಷ್ಟ್ರಗಳು ಭಾರತದ ಮಿತ್ರ ರಾಷ್ಟ್ರಗಳಾಗಿ ಗುರುತಿಸಿಕೊಳ್ಳುತ್ತಿವೆ. ನಮ್ಮ ದೇಶದ ಲಕ್ಷಾಂತರ ಜನರಿಗೆ ಉದ್ಯೋಗದ ರೂಪದಲ್ಲಿ ಆಶ್ರಯ ನೀಡಿ, ನಮ್ಮ ದೇಶದ ಅಭಿವೃದ್ಧಿಗೆ ಪರೋಕ್ಷವಾಗಿ ಕೈ ಜೋಡಿಸುತ್ತಾ ಬಂದಿದೆ. ಇಂದು ಕೊಲ್ಲಿ ರಾಷ್ಟ್ರಗಳಲ್ಲಿ ಕೊರೋನ ವ್ಯಾಪಕವಾಗಿ ಹರಡಿದ್ದರೆ ಅದಕ್ಕೆ ಮುಖ್ಯ ಕಾರಣ ವಿವಿಧ ದೇಶಗಳಿಂದ ಅಲ್ಲಿಗೆ ಆಗಮಿಸಿದ ಜನರೇ ಆಗಿದ್ದಾರೆ. ಇದೀಗ ಕೊರೋನ ವಿರುದ್ಧ ಕೊಲ್ಲಿ ರಾಷ್ಟ್ರಗಳು ಅತ್ಯಂತ ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ದೇಶಗಳಿಂದ ಬಂದ ಕಾರ್ಮಿಕರು ಆ ದೇಶದ ಹೋರಾಟಕ್ಕೆ ತೊಡಕಾಗಿದ್ದಾರೆ. ಆರ್ಥಿಕ ಚಟುವಟಿಕೆಗಳೇ ತಟಸ್ಥವಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಇವರನ್ನು ತಮ್ಮ ದೇಶದಲ್ಲೇ ಇಟ್ಟು ಸಾಕುವಂತಿಲ್ಲ. ಆದುದರಿಂದ, ‘ನಿಮ್ಮ ಜನರನ್ನು ಆದಷ್ಟು ಬೇಗ ಕರೆಸಿಕೊಳ್ಳಿ’ ಎಂದು ಕೊಲ್ಲಿ ರಾಷ್ಟ್ರಗಳು ಇತರ ದೇಶಗಳಿಗೆ ಕರೆ ನೀಡುತ್ತಲೇ ಇವೆ. ಹಲವು ದೇಶಗಳು ತಮ್ಮ ಜನರನ್ನು ಈಗಾಗಲೇ ಕರೆಸಿಕೊಂಡಿವೆ. ಆದರೆ ಸಹಸ್ರಾರು ಭಾರತೀಯರು ಮಾತ್ರ ಇನ್ನೂ ಅತಂತ್ರದಲ್ಲಿದ್ದಾರೆ. ಭಾರತ ಅವರನ್ನು ಕರೆಸಿಕೊಳ್ಳಲು ವಿಶೇಷ ಆಸಕ್ತಿ ವಹಿಸದೇ ಇರುವುದರಿಂದ ‘ಯಾರಿಗೂ ಬೇಡದವರಾಗಿ’ ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಇದು ಈವರೆಗೆ ಭಾರತ ‘ಅನಿವಾಸಿಗಳ ಕುರಿತಂತೆ ತಳೆದುಕೊಂಡು ಬಂದ ಮನಸ್ಥಿತಿ’ಗೆ ತೀರಾ ವಿರುದ್ಧವಾಗಿದೆ. ತನ್ನದೇ ಜನರ ಕುರಿತಂತೆ ಭಾರತ ವಹಿಸುತ್ತಿರುವ ನಿರ್ಲಕ್ಷವನ್ನು ವಿಶ್ವ ಗಮನಿಸುತ್ತಿದೆ ಎನ್ನುವ ಎಚ್ಚರಿಕೆ ನಮ್ಮ ಸರಕಾರಕ್ಕೆ ಇರಬೇಕಾಗಿದೆ.

ತೀವ್ರ ಒತ್ತಡದ ಬಳಿಕ ಕೊಲ್ಲಿ ರಾಷ್ಟ್ರಗಳೂ ಸೇರಿದಂತೆ ಕೆಲವು ದೇಶಗಳಲ್ಲಿರುವ ಅನಿವಾಸಿಗಳನ್ನು ಭಾರತ ಈಗಾಗಲೇ ಕರೆಸಿಕೊಂಡಿದೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿರುವ ಶ್ರೀಮಂತ ಅನಿವಾಸಿಗಳಿಗೆ ತೋರಿಸಿದ ಆಸಕ್ತಿಯನ್ನು , ಕೊಲ್ಲಿ ರಾಷ್ಟ್ರಗಳಲ್ಲಿರುವ ಮಧ್ಯಮ ವರ್ಗದ ಅನಿವಾಸಿಗಳ ಮೇಲೆ ಭಾರತ ತೋರಿಸಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕವೂ ತನ್ನ ತೀವ್ರ ಬೇಜವಾಬ್ದಾರಿಯನ್ನು ಪ್ರದರ್ಶಿಸಿದೆ. ಈಗಾಗಲೇ ದುಬೈಯಲ್ಲಿರುವ ಒಂದಿಷ್ಟು ಅನಿವಾಸಿಗಳನ್ನು ವಿಶೇಷ ವಿಮಾನಗಳ ಮೂಲಕ ಕರ್ನಾಟಕ ಕರೆಸಿಕೊಂಡಿದೆಯಾದರೂ, ಸೌದಿಯಲ್ಲಿರುವ ಅನಿವಾಸಿ ಕನ್ನಡಿಗರ ಕೂಗಿಗೆ ಇನ್ನೂ ಕಿವಿಯಾಗಿಲ್ಲ. ಸೌದಿಯ ಅನಿವಾಸಿಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಉದ್ದೇಶಪೂರ್ವಕವಾಗಿ ಭೇದ ಪ್ರದರ್ಶಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸೌದಿಯಲ್ಲಿರುವ ಅನಿವಾಸಿ ಕನ್ನಡಿಗರು ಸುಮಾರು 3 ಲಕ್ಷ ಜನರು. ಅವರಲ್ಲಿ ಅರ್ಧಕ್ಕೂ ಹೆಚ್ಚು ಅನಿವಾಸಿಗಳು ಕರಾವಳಿಗೆ ಸೇರಿದವರು. ಈ ತಕ್ಷಣ ಊರಿಗೆ ಮರಳುವುದಕ್ಕೆ 10 ಸಾವಿರಕ್ಕೂ ಅಧಿಕ ಮಂದಿ ಕಾಯುತ್ತಿದ್ದಾರೆ. ಆ ಪೈಕಿ 4,000ಕ್ಕೂ ಅಧಿಕ ಮಂದಿ ಊರಿಗೆ ತುರ್ತಾಗಿ ಬರಲೇಬೇಕು ಎನ್ನುವಂತಹ ವಿಷಮ ಸ್ಥಿತಿಯಲ್ಲಿ ನಿಂತಿದ್ದಾರೆ. ಆದರೆ ಸೌದಿಯಲ್ಲಿರುವ ಇವರನ್ನು ಕರೆತರುವುದಕ್ಕೆ ಇನ್ನೂ ವಿಮಾನ ನಿಗದಿಯಾಗದೇ ಇರುವುದು ಈ ಅನಿವಾಸಿಗಳನ್ನು ಹತಾಶೆ, ಆಕ್ರೋಶಕ್ಕೆ ತಳ್ಳಿದೆ.

ತಾಯ್ನಡಿಗೆ ತುರ್ತಾಗಿ ಬರಲೇ ಬೇಕಾದ ಸ್ಥಿತಿಯಲ್ಲಿರುವ ಬಹುತೇಕರು ವಿಸಿಟ್ ವೀಸಾದಲ್ಲಿ ಹೋಗಿರುವ ವೃದ್ಧರು, ಮಹಿಳೆಯರು, ಬೇರೆ ಬೇರೆ ರೋಗಗಳಿಗೆ ಚಿಕಿತ್ಸೆ ಪಡೆಯಬೇಕಾದವರು ಸೇರಿದ್ದಾರೆ. ತಮ್ಮ ಮಕ್ಕಳನ್ನು ಭೇಟಿ ಮಾಡಲೆಂದು ಹೋಗಿದ್ದ ತಂದೆ ತಾಯಂದಿರು, ಕುಟುಂಬಸ್ಥರು ಹಾಗೆಯೇ ವಿಸಿಟ್ ವೀಸಾದಲ್ಲಿ ತೆರಳಿ ಕೆಲಸಕ್ಕಾಗಿ ಅಲೆದಾಡುತ್ತಿದ್ದವರೂ ಕೊರೋನದಿಂದ ಎಲ್ಲೂ ಸಲ್ಲದೆ ಬರಿಗೈಯಲ್ಲಿ ತಾಯ್ನಿಡಿಗೆ ಮರಳಲು ಸಿದ್ಧರಾಗಿ ನಿಂತಿದ್ದಾರೆ. ಹಾಗೆಯೇ ಗರ್ಭಿಣಿಯರು, ಮಕ್ಕಳೂ ಕೂಡ ಊರಿಗೆ ಸೇರಲೇ ಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಅವರನ್ನು ಕರೆಸಿಕೊಳ್ಳುವಲ್ಲಿ ಸರಕಾರ ಅನುಸರಿಸುತ್ತಿರುವ ನಿಧಾನಗತಿಯಿಂದಾಗಿ, ಕೆಲವರು ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ತಡವಾದಷ್ಟು ಅವರ ಸ್ಥಿತಿ ಇನ್ನಷ್ಟು ಹದಗೆಡುತ್ತಾ ಹೋಗುತ್ತದೆ. ಅಷ್ಟೇ ಅಲ್ಲ, ಕೊರೋನ ಸೋಂಕಿಲ್ಲದವರೂ ಸರಕಾರದ ಈ ನೀತಿಯಿಂದಾಗಿ ಕೊರೋನಕ್ಕೆ ಬಲಿಯಾಗಬೇಕಾದಂತಹ ಅಪಾಯದಲ್ಲಿದ್ದಾರೆ.

ಈಗ ಒಬ್ಬೊಬ್ಬ ನಾಯಕರು ಒಂದೊಂದು ಹೇಳಿಕೆಗಳನ್ನು ನೀಡುತ್ತಾ, ಒಬ್ಬರೆಡೆಗೆ ಒಬ್ಬರು ಬೆರಳು ತೋರಿಸುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿಯೂ ತಡವಾಗುತ್ತಿದೆ, ಇದರಲ್ಲಿ ರಾಜಕೀಯ ಕಾರಣಗಳೂ ಇವೆ ಎಂಬ ಆರೋಪಗಳು ಅನಿವಾಸಿಗಳಿಂದ ಕೇಳಿ ಬರುತ್ತಿವೆ. ಇತರ ದೇಶಗಳಲ್ಲಿರುವ ಅನಿವಾಸಿಗಳನ್ನು ಕರೆಸಿಕೊಳ್ಳಲು ತೋರಿಸಿದ ಆಸಕ್ತಿಯನ್ನು ಸೌದಿಯಲ್ಲಿರುವವರನ್ನು ಕರೆಸಿಕೊಳ್ಳುವುದಕ್ಕೂ ಪ್ರದರ್ಶಿಸಬೇಕಾಗಿದೆ. ಮರಳಿ ಬರಲು ಹಣದ ಕೊರತೆ ಎದುರಿಸುತ್ತಿರುವವರ ಸಹಾಯಕ್ಕೆ ಈಗಾಗಲೇ ವಿವಿಧ ಸಂಸ್ಥೆಗಳು, ದಾನಿಗಳು ಮುಂದೆ ಬಂದಿದ್ದಾರೆ. ಹಾಗೆಯೇ ಅವರ ಸೂಕ್ತ ಕ್ವಾರಂಟೈನ್‌ಗೆಅನುಕೂಲ ಮಾಡಿಕೊಡಲು ಇಲ್ಲಿನ ವಿವಿಧ ಸಂಸ್ಥೆಗಳು ಕಟ್ಟಡಗಳನ್ನು ಉಚಿತವಾಗಿ ಒದಗಿಸುವ ಭರವಸೆಯನ್ನೂ ನೀಡಿವೆ. ಹೀಗಿರುವಾಗ, ಸೌದಿಯಲ್ಲಿರುವ ಕನ್ನಡಿಗರನ್ನು ಮರಳಿ ತವರಿಗೆ ಕರೆ ತರಲು ಸರಕಾರಕ್ಕೆ ಇರುವ ತಡೆಗಳೇನು? ಕೇರಳದಂತಹ ರಾಜ್ಯಗಳಿಗೆ ಸಾಧ್ಯವಾದುದು ಕರ್ನಾಟಕ ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಈ ವಿಷಯದಲ್ಲಾದರೂ ಕರ್ನಾಟಕ ಸರಕಾರ ಕೇರಳದ ಮಾದರಿಯನ್ನು ಅಳವಡಿಸಿಕೊಂಡು, ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಕರಾವಳಿಯನ್ನು ಕಟ್ಟಿದ ಶಿಲ್ಪಿಗಳ ಕುರಿತ ಸರಕಾರದ ನಿರ್ಲಕ್ಷ, ಕರ್ನಾಟಕ ತನ್ನ ಆತ್ಮಕ್ಕೆ ಮಾಡಿಕೊಳ್ಳುವ ವಾಸಿ ಮಾಡಲಾಗದ ಗಾಯವಾಗಿ ಬಿಡಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)