varthabharthiಕ್ರೀಡೆ

ಜನರನ್ನು ಮನೆಯಲ್ಲಿರಲು ಮನವೊಲಿಸುತ್ತಿರುವ ಕಬಡ್ಡಿ ಆಟಗಾರ ಅನುಪ್ ಕುಮಾರ್

ವಾರ್ತಾ ಭಾರತಿ : 29 May, 2020

ಹೊಸದಿಲ್ಲಿ, ಮೇ 28: ನಾಲ್ಕು ವರ್ಷಗಳ ಹಿಂದೆ ಕಬಡ್ಡಿ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕರಾಗಿದ್ದ ಅನುಪ್ ಕುಮಾರ್ ಇದೀಗ ಹರ್ಯಾಣದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅನುಪ್ 2016ರ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಅನುಪ್ ಕಬಡ್ಡಿಯ ಸಕ್ರಿಯ ಬೆಂಬಲಿಗರಾಗಿದ್ದಾರೆ ಮತ್ತು ಪ್ರಾರಂಭದಿಂದಲೂ ಪ್ರತಿಷ್ಠಿತ ಪ್ರೊ ಕಬಡ್ಡಿ ಲೀಗ್‌ನ ಭಾಗವಾಗಿದ್ದಾರೆ. ಆಟಗಾರರಾಗಿ ಸೇರಿಕೊಂಡಿದ್ದ ಅವರು ಪುಣೇರಿ ಪಲ್ಟನ್ ಫ್ರಾಂಚೈಸಿಯ ಕೋಚ್ ಆಗಿದ್ದಾರೆ.

ಅನುಪ್ ಆಟಗಾರನಾಗಿ ವಿಸ್ತಾರವಾದ ವೃತ್ತಿಜೀವನವನ್ನು ಹೊಂದಿದ್ದಾರೆ ಮತ್ತು ಈಗ ಕ್ರೀಡೆಗೆ ಉತ್ತಮ ಸಾಧನೆ ಮಾಡಲು ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಿದ್ದಾರೆ.ಅನುಪ್ ಅವರು ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ -19ರ ಕಾರಣದಿಂದಾಗಿ ತಮ್ಮ ಜಿಲ್ಲೆಯ ಜನರು ಮನೆಯಲ್ಲೇ ಇರಬೇಕೆಂದು ಮತ್ತು ದೇಶದ ಪ್ರಜೆಯಾಗಿ ತಮ್ಮ ಪಾತ್ರವನ್ನು ನಿರ್ವಹಿಸುವಂತೆ ಒತ್ತಾಯಿಸಿದ್ದಾರೆ.

ಪ್ರೊ ಕಬಡ್ಡಿಯ ಸಾಪ್ತಾಹಿಕ ಇನ್‌ಸ್ಟಾಗ್ರಾಮ್ ಲೈವ್ ಚಾಟ್ ಸರಣಿ ‘ಬಿಯಾಂಡ್ ದಿ ಮ್ಯಾಟ್’ನಲ್ಲಿ ತಮ್ಮ ಪೊಲೀಸ್ ಕರ್ತವ್ಯದ ಬಗ್ಗೆ ಮಾತನಾಡಿರುವ ಅನುಪ್ ಅವರು ಮನೆಯಲ್ಲಿರಲು ಜನರನ್ನು ಮನವೊಲಿಸುತ್ತಿದ್ದಾರೆ. ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಮನೆಯಲ್ಲಿಯೇ ಇರುವುದರಿಂದ ಕೋವಿಡ್ -19 ಸೋಂಕು ಹರಡುವ ಸಮಸ್ಯೆಯನ್ನು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ಕಬಡ್ಡಿ ವೃತ್ತಿಜೀವನವನ್ನು ಪ್ರಾರಂಭಿಸಿ ಆಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲು ಸಹಾಯ ಮಾಡಿದ್ದಕ್ಕಾಗಿ ಅನುಪ್ ಸಿಆರ್‌ಪಿಎಫ್‌ನ ತನ್ನ ಕೋಚ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನವು ಇತರ ಆಟಗಾರರಿಗೆ ತಮ್ಮ ಆಟವನ್ನು ಸುಧಾರಿಸಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

2016 ರ ವಿಶ್ವಕಪ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಮೊದಲ ಪಂದ್ಯದಲ್ಲಿ 32-34 ಅಂತರದಲ್ಲಿ ಭಾರತವು ಆಶ್ಚರ್ಯಕರವಾಗಿ ಸೋತ ಬಗ್ಗೆ ಮಾತನಾಡುವಾಗ, ಅನುಪ್, ‘‘ಪ್ರತಿ ಸೋಲಿನೊಂದಿಗೆ ನಾವು ಪಾಠ ಕಲಿಯುತ್ತೇವೆ, ವೈಯಕ್ತಿಕವಾಗಿ, ಆಟದ ಸಮಯದಲ್ಲಿ ನಾನು ಒಂದೆರಡು ತಪ್ಪುಗಳನ್ನು ಮಾಡಿದ್ದೇನೆ, ಅದು ನಮಗೆ ಪಂದ್ಯದಲ್ಲಿ ದುಬಾರಿಯಾಗಿ ಪರಿಣಮಿಸಿತು. ಇದು ದುಃಖಕರವಾಗಿದೆ ಆದರೆ ನಮ್ಮ ಕೋಚ್ ಎಂದಿಗೂ ಭರವಸೆಯನ್ನು ಕಳೆದುಕೊಂಡಿಲ್ಲ ಮತ್ತು ನಮ್ಮನ್ನು ಹುರಿದುಂಬಿಸುತ್ತಲೇ ಇದ್ದರು’’ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)